ಒಂದೇ ಶಿಲ್ಪದಲ್ಲಿ ಹಲವು ಕಲೆಗಳ ಗುಟ್ಟು..!
ಉಷಾ ಹರೀಶ್
ಬೇಲೂರು ಹಳೇಬಿಡಿನಲ್ಲಿರುವ ವಿವಿಧ ಶಿಲ್ಪಕಲೆಗಳು ಪ್ರತಿಯೊಬ್ಬ ಶಿಲ್ಪಿಗೂ ಸ್ಪೂರ್ತಿಯಿದ್ದಂತೆ. ಅವುಗಳನ್ನು ನೋಡಿದ ಪ್ರತಿಯೊಬ್ಬರೂ ಕೂಡ ಅದರ ಕಡೆ ಸೂಜಿಗಲ್ಲಿನಂತೆ ಆಕರ್ಷಿತರಾಗುತ್ತಾರೆ. ಅಂತಹ ಶಕ್ತಿ ಆ ಶಿಲ್ಪಕಲೆಗಳಿಗಿದೆ. ಅದೇ ರೀತಿ ಮೈಸೂರಿನ ನಿವಾಸಿ ಕಿರಣ್ ಸುಬ್ಬಯ್ಯ ಎಂಬುವವರು ಬೇಲೂರು ಮತ್ತು ಹಳೇಬಿಡಿನ ಶಿಲ್ಪಗಳನ್ನು ನೋಡಿ ಉತ್ತೇಜಿತರಾಗಿ ಶಿಲ್ಪಕಲೆಗಳನ್ನು ಕಲಿತು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಒಂದು ಶಿಲ್ಪಕಲಾನಿಕೇತನ ಎಂಬ ಸಂಸ್ಥೆಯಲ್ಲಿ ಸಾಕಷ್ಟು ಶಿಲ್ಪಗಳಿಗೆ ರೂಪ ಕೊಟ್ಟಿದ್ದಾರೆ.
ನಾವು ವ್ಯರ್ಥವೆಂದು ಬಿಸಾಡುವ ಎಷ್ಟೋ ಕಲ್ಲುಗಳು ಕಿರಣ್ ಸುಬ್ಬಯ್ಯ ಅವರ ಕೈಯಲ್ಲಿ ಅದ್ಭುತವಾದ ಶಿಲ್ಪಗಳಾಗಿವೆ. ಸುಮಾರು ಮೂರು ದಶಕಗಳಿಂದ ಯಾವುದ ಪ್ರಚಾರ ಬಯಸದೇ ತಮ್ಮ ಪಾಡಿಗೆ ತಾವು ಶಿಲ್ಪಕಲೆಯಲ್ಲಿ ತೊಡಗಿಸಿಕೊಂಡಿರುವವರ ಹೆಸರು, ಅಪ್ಪನವರೆಂಡ ಕಿರಣ್. ಕಿರಣ್ ಮೂಲತಃ ಕೊಡಗಿನವರು. ಎಂತಹ ಕಲ್ಲುಗಳಿಗೂ ಜೀವ ತುಂಬುತ್ತಾ ಕಲೆಯನ್ನು ತಮ್ಮ ಉಸಿರಾಗಿಸಿಕೊಂಡಿರುವ ಇವರು ಇದರಿಂದಲೇ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ.
ಇವರ ಶಿಲ್ಪಕಲಾನಿಕೇತನದಲ್ಲಿ ಟಿವಿ ಸ್ಟ್ಯಾಂಡ್ ಮೇಲೆ ಇಡುವ ಸಣ್ಣ ಶಿಲ್ಪಗಳಿಂದ ಹಿಡಿದು, 135 ಹೆಡೆಯುಳ್ಳ 5 ಅಡಿಯ ಆದಿಶೇಷನ ಕಲ್ಲಿನ ಶಿಲ್ಪಗಳು ಇಲ್ಲಿ ಲಭ್ಯ.
ಬೇಲೂರು ಹಳೇಬೀಡೆ ಸ್ಪೂರ್ತಿ
ಕಿರಣ್ ಅವರು ಮೈಸೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಓದುತ್ತಿದ್ದಾಗ, ಪ್ರವಾಸಕ್ಕೆಂದು ಬೇಲೂರಿಗೆ ಹೋದಾಗ ಅಲ್ಲಿನ ಶಿಲ್ಪಕಲೆಗಳನ್ನು ನೋಡಿ, ಕಿರಣ್ಗೆ ನಾನ್ಯಾಕೆ ಶಿಲ್ಪಿಯಾಗಬಾರದು ಎಂಬ ಆಲೋಚನೆ ಹುಟ್ಟಿಕೊಂಡಿತು. ಮೈಸೂರಿಗೆ ಹಿಂತಿರುಗಿದವರೇ ಚಾಮರಾಜ ಟೆಕ್ನಿಕಲ್ ಇನ್ಸ್ಟಿಟ್ಯೂಟ್ನಲ್ಲಿ ತರಬೇತಿ ಪಡೆಯಲಾರಂಭಿಸಿದರು. ಆದರೆ ತರಬೇತಿಯನ್ನು ಅರ್ಧಕ್ಕೆ ಮೊಟಕುಗೊಳಿಸಿದ ಕಿರಣ್, ಮನೆಯಲ್ಲಿ ಬಳಪದ ಕಲ್ಲಿನಲ್ಲಿ ಕೆತ್ತನೆ ಮಾಡಲು ಪ್ರಾರಂಭ ಮಾಡಿದರು. ಮೊದ ಮೊದಲು ಕಷ್ಟವೆನಿಸಿದ ಈ ಕೆಲಸ ಸ್ವಲ್ಪದಿನವಾಗುತ್ತಿದ್ದಂತೆ ಇವರ ಕೈಚಳಕದ ಮೋಡಿಗೆ ಒಗ್ಗಿಕೊಂಡವು. ನೋಡ ನೋಡುತ್ತಿದ್ದಂತೆಯೇ ಸುಂದರವಾದ ಶಿಲ್ಪಗಳು ಅರಳತೊಡಗಿದವು. ಆವತ್ತು ಆರಂಭಿಸಿದ ಶಿಲ್ಪಗಳ ರಚನೆಯೇ ಮುಂದೇ ಶಿಲ್ಪಕಲಾನಿಕೇತನದ ಉಗಮಕ್ಕೆ ದಾರಿಯಾಯಿತು.
ಗಿನ್ನಿಸ್ ದಾಖಲೆಗೆ ಕಿರಣ್..!
ಕಲಾವಿದ ಕಿರಣ್ ಸುಬ್ಬಯ್ಯ ಅವರು ಐದು ಅಡಿ ಎತ್ತರದ 135 ಹೆಡೆಯುಳ್ಳ ಆದಿಶೇಷನ ವಿಗ್ರಹವನ್ನು ಕೆತ್ತಿ ಗಿನ್ನಿಸ್ ದಾಖಲೆ ಮಾಡಲು ತಯಾರಿ ನಡೆಸಿದ್ದಾರೆ. ಇದಕ್ಕಾಗಿ ಎಚ್ಡಿ ಕೋಟೆ ಬಳಿಯ ಕೃಷ್ಣಶಿಲೆಗಳನ್ನು ಬಳಸುತ್ತಿದ್ದಾರೆ. ಈ ಆದಿಶೇಷನ ಹಿಂದೆ ಗಾಯಿಂತ್ರಿ ಮಂತ್ರ, ಓಂ ಮಂತ್ರ, ಶ್ರೀಮಂತ್ರವನ್ನು ಕೆತ್ತಲಾಗಿದೆ. ಈ ಮೊದಲು ನೇಪಾಳದಲ್ಲಿ 107 ಹೆಡೆಯುಳ್ಳ 2 ಅಡಿ ಎತ್ತರದ ಆದಿಶೇಷನೇ ಇದುವರೆಗಿನ ದಾಖಲೆಯ ಶಿಲ್ಪವಾಗಿದೆ. ಕಿರಣ್ ಅವರ ಮೂರ್ತಿ ಇನ್ನು ದೊಡ್ಡದಾಗಿರುವುದರಿಂದ ಇದು ಗಿನ್ನಿಸ್ ದಾಖಲೆಗೆ ಅರ್ಹವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಒಂದೇ ಶಿಲ್ಪ ವಿವಿಧ ರೀತಿಯಲ್ಲಿ ಗೋಚರ
ಕಿರಣ್ ಅವರ ಕೆತ್ತನೆಯ ವಿಶೇಷತೆಯೆಂದರೆ ಅವರ ಶಿಲ್ಪಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಒಂದೇ ಶಿಲ್ಪ ಬಹುರೂಪದಲ್ಲಿ ನಿಮ್ಮನ್ನು ಆಕರ್ಷಿಸುತ್ತದೆ. ವಿಶ್ವದಲ್ಲೇ ಈ ರೀತಿಯ ಯಾವುದೇ ಶಿಲ್ಪಕಲೆಗಳು ಇಲ್ಲ. ಇವರ ಸಂಗ್ರಹದಲ್ಲಿರುವ ಸುಮಾರು ನೂರಕ್ಕೂ ಹೆಚ್ಚು ಶಿಲ್ಪಗಳು ದ್ವಿಬಹುರೂಪಿ, ತ್ರಿ ಬಹುರೂಪಿ, ಹಾಗೂ ಚತುರ್ ಬಹುರೂಪಿ, ಪಂಚರೂಪಿ ಶಿಲ್ಪಗಳು ಇವೆ. ಒಂದು ಕಲ್ಲಿನಲ್ಲಿ ಒಂದೇ ಶಿಲ್ಪವನ್ನು ಕೆತ್ತನೆ ಮಾಡುವುದು ಕಷ್ಟದ ಕೆಲಸ. ಆದರೆ ಕಿರಣ್ ಅವರು ಮಾತ್ರ ಒಂದೇ ಶಿಲ್ಪಕ್ಕೆ ಮೂರ್ನಾಲ್ಕು ರೂಪಗಳನ್ನು ಕೊಟ್ಟು ತಮ್ಮಲ್ಲಿರುವ ಕಲೆಯನ್ನು ಪ್ರದರ್ಶಿಸಿದ್ದಾರೆ. ಇವರ ಈ ಕಲೆಯ ಬಗ್ಗೆ ಸಿಂಗಾಪುರ, ಜರ್ಮನಿ ಮತ್ತಿತರ ದೇಶದ ಕಲಾರಸಿಕರು ಅಭಿನಂದನೆ ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ದಶಕಗಳಿಂದ ನೂರಾರು ಶಿಲ್ಪಗಳನ್ನು ಕೆತ್ತಿರುವ ಕಿರಣ್ ಅವರು ತಮ್ಮ ಪ್ರತಿಯೊಂದು ಶಿಲ್ಪಗಳಲ್ಲಿಯೂ, ವಿಶೇಷತೆ ಮೆರೆದಿದ್ದಾರೆ. ಇವರ ಶಿಲ್ಪಗಳಲ್ಲಿ ಮನುಷ್ಯನ ಸ್ವಾರ್ಥ, ಭ್ರಷ್ಟತೆ, ಶೃಂಗಾರ, ಗಂಡು ಹೆಣ್ಣಿನ ಸಮಾಗಮ, ತಾಯಿ ಮಗುವಿನ ಸಂಬಂಧ, ಸ್ವಾಮಿ ಭಕ್ತಿ, ಶಿಲಾಬಾಲಿಕೆಯರು ಹೀಗೆ ಹತ್ತು ಹಲವು ಸಂಬಂಧಗಳನ್ನು ಹೇಳುವ ಶಿಲ್ಪಗಳನ್ನು ಕಿರಣ್ ರಚಿಸಿದ್ದಾರೆ. ತಮ್ಮ ಇವತ್ತಿನ ಸಾಧನೆಗೆ ತಂದೆ ತಾಯಿ, ಹೆಂಡತಿ, ಮಕ್ಕಳ ಪ್ರೋತ್ಸಾಹವೇ ಕಾರಣ ಎನ್ನುತ್ತಾ ಮಾತು ಮುಗಿಸುತ್ತಾರೆ ಕಿರಣ್ ಸುಬ್ಬಯ್ಯ.