ಆವೃತ್ತಿಗಳು
Kannada

ಬಹು ದೊಡ್ಡ ಹೂಡಿಕೆಯ ನಿರೀಕ್ಷೆಯಲ್ಲಿದೆ "ಕರ್ನಾಟಕದ ಮ್ಯಾಂಚೆಸ್ಟರ್"

ಟೀಮ್​ ವೈ.ಎಸ್​. ಕನ್ನಡ

YourStory Kannada
1st Feb 2016
Add to
Shares
0
Comments
Share This
Add to
Shares
0
Comments
Share

ದಾವಣಗೆರೆ ಜಿಲ್ಲೆಯ ಅವಲೋಕನ

ಮಧ್ಯ ಕರ್ನಾಟಕದ ಪ್ರಮುಖ ಜಿಲ್ಲೆ ದಾವಣಗೆರೆ. ಇದು ಜವಳಿ ಉದ್ಯಮಕ್ಕೆ ತುಂಬಾ ಹೆಸರುವಾಸಿ. ದಾವಣಗೆರೆಯ ಕಾಟನ್ ಮಿಲ್ಸ್ ಬಹಳ ಜನಪ್ರಿಯ. ಈಗ ಈ ಊರು ಶರವೇಗದಿಂದ ಬೆಳೆಯುತ್ತಿದೆ. ಕೇಂದ್ರ ಸರ್ಕಾರದ ಸ್ಮಾಟ್ ಸಿಟಿ ಯೋಜನೆಯ ಮೊದಲ ಹಂತದ ಪಟ್ಟಿಯಲ್ಲಿ ದಾವಣಗೆರೆ ಸ್ಥಾನ ಸಿಕ್ಕಿರುವುದು ಜಿಲ್ಲೆಯ ಜನಪ್ರಿಯತೆಗೆ ಸಾಕ್ಷಿ. ದಾವಣಗೆರೆ ಮಧ್ಯ ಕರ್ನಾಟಕದ ಪ್ರಮುಖ ವ್ಯಾಪಾರ ಸ್ಥಳವೂ ಹೌದು. ಇದು ಇತ್ತೀಚೆಗೆ ವಿದ್ಯಾಕೇಂದ್ರವಾಗಿಯೂ ಪ್ರಗತಿ ಸಾಧಿಸುತ್ತಿದೆ. ಎಂಜಿನಿಯರಿಂಗ್. ಚಿತ್ರಕಲೆ, ಕಲೆ, ವಾಣಿಜ್ಯ, ವಿಜ್ಞಾನ ವಿಭಾಗಗಳಲ್ಲೂ ಅನೇಕ ಮಹಾವಿದ್ಯಾನಿಲಯಗಳಿವೆ. ಹೋಟೆಲ್ ಉದ್ಯಮದಲ್ಲೂ ಜಿಲ್ಲೆ ಹೆಸರು ಮಾಡಿದೆ. ದಾವಣಗೆರೆ ಬೆಣ್ಣೆ ದೋಸೆ ಯಾರಿಗೆ ಗೊತ್ತಿಲ್ಲ ಹೇಳಿ..ಹೀಗೆ ದಾವಣಗೆರೆ ಉತ್ತರ ಮತ್ತು ದಕ್ಷಿಣ ಕರ್ನಾಟಕದ ಆಹಾರ ವೈಶಿಷ್ಟ್ಯಗಳ ಸಂಗಮ.

image


ಆರ್ಥಿಕ ಸ್ಥಿತಿಗತಿ ಹೇಗಿದೆ..?

ರಾಜ್ಯದ ಜಿಎಸ್‍ಡಿಪಿಗೆ ದಾವಣಗೆರೆಯ ಜಿಡಿಪಿ ಪಾಲು ಶೇಕಡಾ 2.33ರಷ್ಟು. ಇದಕ್ಕೆ ಕೃಷಿ ಮತ್ತು ಇಲ್ಲಿನ ಕೈಗಾರಿಕೆಗಳ ಪಾಲು ನಿರ್ಣಾಯಕವಾಗಿದೆ. ಹೀಗಾಗಿ ಜಿಡಿಡಿಪಿ ಬಹಳ ವರ್ಷಗಳಿಂದ ಶೇಕಡಾ 3.7ರ ಸ್ಥಿರತೆ ಕಾಯ್ದುಕೊಂಡಿದೆ.

ದಾವಣಗೆರೆ ಅಭಿವೃದ್ಧಿಗೆ ಕೃಷಿಯದ್ದೇ ಸಿಂಹಪಾಲು

ಜಿಲ್ಲೆಯ ಆರ್ಥಿಕ ಪ್ರಗತಿಯಲ್ಲಿ ಕೃಷಿ ಕ್ಷೇತ್ರದ್ದೇ ಬಹು ದೊಡ್ಡ ಪಾಲು. ಜಿಲ್ಲೆಯ ಶೇಕಡಾ ರೈತರು ಕೃಷಿ ಭೂಮಿ ಹೊಂದಿದ್ದಾರೆ. ಇಲ್ಲಿ ಹತ್ತಿ, ಮೆಕ್ಕೆಜೋಳ, ಕಬ್ಬು, ಕಡಲೆ, ಸೂರ್ಯಕಾಂತಿ, ಅಕ್ಕಿ-ಭತ್ತ ಮತ್ತು ಇತರ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಾರೆ. ಇಷ್ಟೇ ಅಲ್ಲ ಮಾವು, ಸಪೋಟಾ, ಬಾಳೆ, ಪಪ್ಪಾಯ, ದಾಳಿಂಬೆ ಕೃಷಿಯನ್ನೂ ಮಾಡಿ ಇಲ್ಲಿನ ರೈತರು ಸೈ ಅನ್ನಿಸಿಕೊಂಡಿದ್ದಾರೆ. ಟೊಮೆಟೊ, ಈರುಳ್ಳಿ, ಮೆಣಸಿನಕಾಯಿ ಶುಂಠಿ, ಹುಣಸೆಹಣ್ಣು ರೈತರ ಕೈ ಹಿಡಿದಿದೆ.

ಉದ್ಯಮದ ಮೇಲೆ ಒಂದು ನೋಟ..!

ಕೃಷಿ ಆಧಾರಿತ ಆಹಾರ ಸಂಸ್ಕರಣಾ ಉದ್ಯಮ ದಾವಣಗೆರೆಯಲ್ಲಿ ಪ್ರಸಿದ್ಧ. ಜಿಲ್ಲೆಯಲ್ಲಿ ಇದು ಅಸಂಖ್ಯ ಉದ್ಯೋಗಗಳನ್ನು ಸೃಷ್ಟಿಸಿದೆ. ಚೆಂಡು ಹೂವು ಸಂಸ್ಕರಣೆ, ಸೌತೆಕಾಯಿ ಸಂಸ್ಕರಣಾ ಘಟಕ ಮತ್ತು ನೆಲಕಡಲೆ ಸಂಸ್ಕರಣಾ ಘಟಕಗಳು ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿವೆ. ಪಶುಸಂಗೋಪನೆಯೂ ಇಲ್ಲಿನ ಜನರ ಹೆಚ್ಚುವರಿ ಆದಾಯದ ಮೂಲ. ವಾರ್ಷಿಕವಾಗಿ ಜಿಲ್ಲೆಯಲ್ಲಿ 1.44 ಲಕ್ಷಟನ್ ಹಾಲು, 105 ಮಿಲಿಯನ್ ಮೊಟ್ಟೆ ಮತ್ತು 2,635 ಟನ್ ಮಾಂಸ ಉತ್ಪಾದನೆಯಾಗುತ್ತದೆ. ಶುದ್ಧ ನೀರಿನ ಕೆರೆ ಇರುವುದು ದಾವಣಗೆರೆ ಜಿಲ್ಲೆಯಲ್ಲೇ. ಶಾಂತಿ ಸಾಗರ ಏಷ್ಯಾದಲ್ಲೇ ಶುದ್ಧ ನೀರಿನ 2ನೇ ಅತೀ ದೊಡ್ಡ ಕೆರೆ. ತುಂಗಭದ್ರಾ ನದಿ ಮತ್ತು 421 ಕೆರೆಗಳು ಮೀನುಗಾರಿಕೆಗೆ ಅಗಾಧ ಅವಕಾಶ ಕಲ್ಪಿಸಿವೆ. 6 ಬೃಹತ್ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಿವೆ. ಇದು ಜಿಲ್ಲೆಯಲ್ಲಿ ಇನ್ನಷ್ಟು ಹೂಡಿಕೆಗೆ ಬಾಗಿಲನ್ನು ತೆರೆದಿವೆ. 3 ಸಕ್ಕರೆ ಕಾರ್ಖಾನೆಗಳು ಮತ್ತು ಅಕ್ಕಿ ಗಿರಣಿಗಳು ಜಿಲ್ಲೆಯಲ್ಲಿವೆ. ಹರಿಹರದಲ್ಲಿ ಆದಿತ್ಯ ಬಿರ್ಲಾ ಗ್ರೂಪ್‍ನ ಗ್ರಾಸಿಮ್ ಇಂಡಸ್ಟ್ರೀಸ್ ಯಶಸ್ವಿಯಾಗಿ ನಡೆಯುತ್ತಿದೆ. ಜಿಲ್ಲೆಯ ಕೈಗಾರಿಕೋದ್ಯಮವನ್ನು ಇನ್ಷಷ್ಟು ಎತ್ತರಕ್ಕೆ ಬೆಳೆಸಲು ಸರ್ಕಾರ ಯೋಜನೆಯನ್ನು ರೂಪಿಸಿದೆ.

ರಾಜ್ಯ ಸರ್ಕಾರದ ಪ್ರಸ್ತಾವಿತ ಯೋಜನೆಗಳು

1. 700 ಎಂಡಬ್ಲ್ಯೂ ಗ್ಯಾಸ್ ಆಧಾರಿತ ಯೋಜನೆ

2. ಐಟಿ ಪಾರ್ಕ್ ಮತ್ತು ನೆಟ್‍ವರ್ಕ್ ಆಪರೇಷನ್ ಕೇಂದ್ರದ ಸ್ಥಾಪನೆ

3. ಪವನ ಶಕ್ತಿ ಘಟಕ ಸ್ಥಾಪನೆ

ದಾವಣಗೆರೆ ವಿದ್ಯಾಕೇಂದ್ರವೂ ಹೌದು

ದಾವಣಗೆರೆಯಲ್ಲಿ ದೊಡ್ಡ ಶೈಕ್ಷಣಿಕ ಕ್ರಾಂತಿಯೇ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದೆ. ಜಿಲ್ಲೆಯಲ್ಲಿ 58 ಡಿಗ್ರಿ ಕಾಲೇಜು, ಎಂಜಿನಿಯರಿಂಗ್ ಕಾಲೇಜು, 5 ಎಂಬಿಎ ಕಾಲೇಜು, 4 ಪಾಲಿಟೆಕ್ನಿಕ್, 1 ಆಯುರ್ವೇದ ಕಾಲೇಜು ಇದೆ. ಹೀಗಾಗಿ ಈ ಪ್ರದೇಶದಲ್ಲಿ ಮಾನವ ಸಂಪನ್ಮೂಲದ ಅಭಿವೃದ್ಧಿಯಾಗುತ್ತಿದೆ. ಹೆಚ್ಚೆಚ್ಚು ಕೌಶಲ್ಯ ಹೊಂದಿದ ಯುವಕ - ಯುವತಿಯರು ಹೊರಬರುತ್ತಿದ್ದಾರೆ.

ಕರ್ನಾಟಕದ ಮ್ಯಾಂಚೆಸ್ಟರ್‍ಗೆ ಸಂಪರ್ಕ ಹೇಗೆ..?

2 ರಾಷ್ಟ್ರೀಯ ಹೆದ್ದಾರಿಗಳು ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುತ್ತಿವೆ. ರೈಲು ಮಾರ್ಗವೂ ಬೆಂಗಳೂರು, ಮುಂಬೈ, ಗೋವಾ ಹೀಗೆ ಉತ್ತರ ಭಾರತಕ್ಕೆ ಸಂಪರ್ಕ ಕಲ್ಪಿಸುತ್ತದೆ. ಹುಬ್ಬಳ್ಳಿ, ಮಂಗಳೂರು, ಬೆಂಗಳೂರು ವಿಮಾನ ನಿಲ್ದಾಣಗಳೂ ಅಷ್ಟೇನು ದೂರವಿಲ್ಲ. ಕಾರವಾರ, ಮಂಗಳೂರು ಮತ್ತು ಗೋವಾ ಬಂದರುಗಳೂ ದಾವಣಗೆರೆಗೆ ಸಂಪರ್ಕ ಕೊಂಡಿಯಾಗಿವೆ.

ಪ್ರಸ್ತಾವಿತ ಯೋಜನೆಗಳು ಯಾವುವು..?

1. ಪಶು ಆಹಾರದ ಉತ್ಪಾದನಾ ಘಟಕ ಸ್ಥಾಪನೆ

2. ಶಿವಮೊಗ್ಗ, ಹೊನ್ನಾಳಿ ಹರಿಹರಕ್ಕೆ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣ

3. ಗದಗ್‍ನಿಂದ ಹೊನ್ನಾಳಿಗೆ ರಸ್ತೆ ನಿರ್ಮಾಣ

4. ಬೆಸ್ಕಾಂ ವಿದ್ಯುತ್ ಕಂಬಗಳನ್ನು ಬಳಸಿಕೊಂಡು ಬ್ರಾಡ್ ಬ್ಯಾಂಡ್ ಮತ್ತು ಟಿವಿ ಕೇಬಲ್ ಆಪರೇಟರ್‍ಗಳಿಗೆ ಸಿಗ್ನಲ್ ಕಳುಹಿಸುವ ವ್ಯವಸ್ಥೆ ( ಆಪ್ಟಿಕಲ್ ಫೈಬರ್ ಬಳಸಿಕೊಂಡು)

5. ಕೈಗಾರಿಕಾ ಕಾರಿಡಾರ್ ಸ್ಥಾಪನೆ

ಕೊನೆಯ ಮಾತು...

ದಾವಣಗೆರೆ ಜಿಲ್ಲೆಯಲ್ಲಿ ಕೃಷಿ ಕ್ಷೇತ್ರಕ್ಕೆ ಪೂರಕವಾದಂತಹ ಉದ್ಯೋಗ ಸೃಷ್ಟಿ. ಕೈಗಾರಿಕೆಗಳಿಗೆ ಅನುಕೂಲವಾಗುವಂತಹ ವಾತಾವರಣ ಇರುವುದರಿಂದ ಈ ಕ್ಷೇತ್ರಕ್ಕೆ ಆದ್ಯತೆ ಅತ್ಯಗತ್ಯ. ಹೀಗಾಗಿ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಹೂಡಿಕೆದಾರರು ಈ ಕ್ಷೇತ್ರಗಳ ಮೇಲೆ ಗಮನ ಹರಿಸಿದರೆ ಜಿಲ್ಲೆ "ಕರ್ನಾಟಕದ ಮ್ಯಾಂಚೆಸ್ಟರ್" ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.


Add to
Shares
0
Comments
Share This
Add to
Shares
0
Comments
Share
Report an issue
Authors

Related Tags