Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

ಕಥೆಗಾತಿಯ ಕಥೆ..!

ಟೀಮ್ ವೈ ಎಸ್

ಕಥೆಗಾತಿಯ ಕಥೆ..!

Thursday December 24, 2015 , 4 min Read


ಬಾಲಿವುಡ್ ಎನ್ನುವುದು ಕಲ್ಕಿ ಕೋಚ್ಲಿನ್ ಅವರಿಗೆ ದೊಡ್ಡ ಕನಸಾಗಿತ್ತು. ದೇವ್ ಡಿ ಮೂಲಕ ಚಿತ್ರರಂಗ ಪ್ರವೇಶಿಸಿದ ಕಲ್ಕಿಯವರು ತಮ್ಮ ಚೊಚ್ಚಲ ಚಿತ್ರದಲ್ಲಿಯೇ ಫಿಲಂಫೇರ್ ಪ್ರಶಸ್ತಿ ಗಿಟ್ಟಿಸಿದರು. ಅವರ ಚಿತ್ರ, ಅವರ ನಾಟಕ ಪ್ರೀತಿ, ಕಥೆ ಹೇಳುವುದರ ಬಗ್ಗೆ ಯುವರ್ ಸ್ಟೋರಿ ಕಲ್ಕಿಯವರನ್ನು ಮಾತನಾಡಿಸಿತು.

ವೈಎಸ್: ನಿಮಗೆ ಸಿನಿಮಾ ಮತ್ತು ನಾಟಕಗಳಲ್ಲಿ ಆಸಕ್ತಿ ಹೇಗೆ ಹುಟ್ಟಿತು?

ಕಲ್ಕಿ: ನನ್ನ ಪೋಷಕರು ಯಾರೂ ನಟನೆ ಅಥವಾ ನಾಟಕ, ಸಿನಿಮಾ ವೃತ್ತಿಯಲ್ಲಿ ಇರಲಿಲ್ಲ. ನನ್ನ ಅಪ್ಪ ಇಂಜಿನಿಯರ್. ಅವರು ಅತಿಸಣ್ಣ ವಿಮಾನಗಳನ್ನು ತಯಾರಿಸುತ್ತಿದ್ದರು. ಅಮ್ಮ ಪಾಂಡಿಚೇರಿಯ ಲೈಸೀ ಪ್ರಾಂಚೈಸ್ನಲ್ಲಿ ಫ್ರೆಂಚ್ ಕಲಿಸುತ್ತಿದ್ದರು. ನಾನು ಸಾಕಷ್ಟು ಕಲಾ ಸಿನಿಮಾಗಳನ್ನು ನೋಡುತ್ತಾ ಬೆಳೆದೆ. ಶೇಖರ್ ಕಪೂರ್, ಗುರುದತ್ತ, ಸತ್ಯಜಿತ್ ರೇ, ಸೇರಿದಂತೆ ಜಗತ್ತಿನ ಪ್ರಖ್ಯಾತ ನಿರ್ದೇಶಕರ ಚಿತ್ರಗಳನ್ನು ವೀಕ್ಷಿಸಿದೆ. ನಮ್ಮ ಕುಟುಂಬವು ಹೆಚ್ಚಾಗಿ ಕಲಾಪ್ರದರ್ಶನಗಳನ್ನು ಹೆಚ್ಚಾಗಿ ವೀಕ್ಷಿಸುತ್ತಿತ್ತು. ನಾನು ಆರನೇ ತರಗತಿಯಲ್ಲಿರುವಾಗಲೇ ಶಾಲೆಯ ನಾಟಕ ಕ್ಲಬ್ ಗೆ ಸೇರಿಕೊಂಡು ಪ್ರದರ್ಶನ ಕೊಟ್ಟಿದ್ದೆ.

ವೈಎಸ್: ನಾಟಕವನ್ನು ವೃತ್ತಿಯಾಗಿ ಸ್ವೀಕರಿಸಲು ಯಾವಾಗ ನಿರ್ಧರಿಸಿದಿರಿ?

image


ಕಲ್ಕಿ: ನಾನು ಉನ್ನತ ಶಿಕ್ಷಣಕ್ಕಾಗಿ ಯೂನಿವರ್ಸಿಟಿ ಸೇರಬೇಕೆಂದು ನನ್ನ ಪೋಷಕರು ಬಯಸಿದ್ದರು. ಆದರೆ, ನಾನು ಏನು ಮಾಡಬೇಕು ಎನ್ನುವುದನ್ನು ನಿರ್ಧರಿಸಿರಲಿಲ್ಲ. ನನ್ನ ಇಂಗ್ಲಿಷ್ ಟೀಚರ್ ಅವರು ನಾಟಕ ಶಾಲೆಗೆ ಅರ್ಜಿ ಹಾಕುವಂತೆ ಸೂಚಿಸಿದರು. ನಾನು ಕಥೆ ಬರೆಯುವುದನ್ನು, ನಾಟಕ ಬರೆಯುವುದನ್ನು ಇಷ್ಟಪಡುತ್ತಿದ್ದೆ. ಟೀಚರ್ ನನಗೆ ಬೆಂಬಲ ನೀಡುತ್ತಿದ್ದರು. ನಾನು ನಾಟಕ ಮತ್ತು ರಂಗ ಶಿಕ್ಷಣದಲ್ಲಿ ಬಿಎ ಪದವಿ ಪಡೆಯಲು ಲಂಡನ್ಗೆ ತೆರಳಿದೆ. ನಾನು ಅಭ್ಯಾಸ ಆರಂಭಿಸಿದ ಮೇಲೆಯೇ ನನಗೆ ಜನ ನಾಟಕಗಳಿಗೆ ಎಷ್ಟೊಂದು ಆದ್ಯತೆ ಕೊಡುತ್ತಾರೆ ಎನ್ನುವುದು ತಿಳಿಯಿತು. ನಾನು ಅದರಲ್ಲೇ ಬದುಕಲು ಆರಂಭಿಸಬೇಕಾಯಿತು. ಹೀಗಾಗಿ ನಾನು ನಾಟಕ ಕಂಪನಿ ಸೇರಿಕೊಂಡೆ. ನನ್ನ ಪದವಿ ಬಳಿಕ ಭಾರತಕ್ಕೆ ವಾಪಸ್ ಬಂದು ರಂಗ ಚಟುವಟಿಕೆಗಳಲ್ಲಿ ತೊಡಗಿಕೊಂಡೆ. ನಾನು ನಾಟಕ ಮತ್ತು ಸಿನಿಮಾ ಕಥೆಗಳನ್ನು ಬರೆದೆ.

ವೈಎಸ್: ನಿಮ್ಮ ತಂದೆ ಇಂಜಿನಿಯರ್. ನಿಮ್ಮ ನಿರ್ಧಾರಕ್ಕೆ ಕುಟುಂಬದಲ್ಲಿ ಯಾರೂ ಅಡ್ಡಿ ಬರಲಿಲ್ಲವೇ?

ಕಲ್ಕಿ: ನನ್ನ ಪೋಷಕರು ನನಗೆ ಯಾವುದರಲ್ಲೂ ಒತ್ತಡ ಹೇರಲಿಲ್ಲ. ಅದು ನನ್ನ ಅದೃಷ್ಟ. ನಾನು ಕೂಡಾ ಅವರ ವೃತ್ತಿಯಲ್ಲಿ ತೊಡಗಿಕೊಳ್ಳಬೇಕೆಂದು ತಂದೆ ಇಷ್ಟಪಡುತ್ತಿದ್ದರು. ಆದರೆ ಒತ್ತಡ ಹೇರುತ್ತಿರಲಿಲ್ಲ. ಅವರ ಮನಸ್ಸಿನಲ್ಲಿಯೂ ಅಂತಹ ಯೋಚನೆಗಳಿರಲಿಲ್ಲ. ಅವರು ಕೂಡಾ ಚಿಕ್ಕ ವಯಸ್ಸಿಲ್ಲಿಯೇ ಫ್ರಾನ್ಸ್ ಬಿಟ್ಟು ಭಾರತಕ್ಕೆ ಬಂದಿದ್ದರು. ಕುಟುಂಬ ಬಿಟ್ಟು ಇಷ್ಟು ವರ್ಷ ಇರುವುದೇ ದೊಡ್ಡ ನಿರ್ಧಾರ. ಅವರು ಅವರ ಕನಸನ್ನು ಬೆನ್ನತ್ತಿಯೇ ಬಂದವರು. ಹಾಗಾಗಿ ನನ್ನ ಕನಸುಗಳಿಗೆ ಅಡ್ಡಿಯಾಗಲಿಲ್ಲ. ನಿನ್ನ ಭವಿಷ್ಯದ ಹೊಣೆ ನಿನ್ನದು ಎಂದಷ್ಟೇ ಹೇಳಿ ಕಳುಹಿಸಿದ್ದರು.

ವೈಎಸ್ : ಆರಂಭದ ದಿನಗಳಲ್ಲಿ ನಿಮ್ಮ ಆದಾಯ ಹೇಗೆ ಹೊಂದಿಸಿದಿರಿ?

ನಾನು ಲಂಡನ್ನಲ್ಲಿದ್ದಾಗ ಕಲಿಕಾ ಚೇತನ ಮಕ್ಕಳಿಗೆ ಶಿಕ್ಷಣ ಹೇಳಿಕೊಡುತ್ತಿದ್ದೆ. ಕೆಲದಿನಗಳ ಕಾಲ ವೈಟ್ರೆಸ್ ಆಗಿಯೂ ಕೆಲಸ ಮಾಡಿದೆ. ಭಾರತದಲ್ಲಿ ಮಾಡೆಲಿಂಗ್, ಲೇಖನ ಹೀಗೆ ನಾನಾ ಕೆಲಸಗಳನ್ನು ಮಾಡಿದೆ. ನೀವು ಯಾವುದನ್ನಾದರೂ ಇಷ್ಟಪಡುತ್ತಿದ್ದರೆ, ನಿಮಗೆ ಹಣ ಬಂದೇ ಬರುತ್ತದೆ.

ವೈಎಸ್: ಕಲೆ ಮತ್ತು ಸಂಸ್ಕೃತಿಯ ಪೋಷಣೆ ವಿಚಾರದಲ್ಲಿ ಭಾರತ ಮತ್ತು ಲಂಡನ್ ಹೇಗೆ ಭಿನ್ನ?

ಕಲ್ಕಿ: ನಾನು ಲಂಡನ್ ಗೆ ಹೋದಾಗ 18 ವರ್ಷ. ನಾನು ಅಲ್ಲಿ ವಿಭಿನ್ನ ರೀತಿಯ ರಂಗಗಳನ್ನು ವೀಕ್ಷಿಸಿದೆ. ಲಂಡನ್ ನಾಟಕಗಳ ಕೇಂದ್ರ ಸ್ಥಾನವಾಗಿತ್ತು. ಜಗತ್ತಿನ ನಾನಾ ಕಡೆಗಳಿಂದ ಜನ ಅಲ್ಲಿಗೆ ನಾಟಕ ಕಲಿಯಲು ಮತ್ತು ಕಲಿಸಲು ಬರುತ್ತಿದ್ದರು. ನಾನು ಭಾರತೀಯ ಪ್ರದರ್ಶನಗಳನ್ನೂ ನೋಡಲು ಸಾಧ್ಯವಾಯಿತು. ಅವರಿಗೆ ಭಾರತಕ್ಕಿಂತಲೂ ಹೆಚ್ಚಿನ ಪ್ರೋತ್ಸಾಹ ಲಂಡನ್ನಲ್ಲಿ ಸಿಗುತ್ತಿತ್ತು. ಇದನ್ನೆಲ್ಲಾ ನಾವು ಭಾರತದಲ್ಲಿ ಯಾಕೆ ನೋಡಲು ಸಾಧ್ಯವಿಲ್ಲ ಎಂದು ಪ್ರಶ್ನಿಸುತ್ತಿದ್ದೆ. ನನ್ನ ಕಥೆಗಳೆಲ್ಲಾ ಭಾರತಕ್ಕೆ ಸಂಬಂಧಿಸಿದ್ದಾಗಿದ್ದುದರಿಂದ ನಾನು ಭಾರತಕ್ಕೆ ಹಿಂತಿರುಗಲು ನಿರ್ಧರಿಸಿದೆ.

ವೈಎಸ್: ಕಥೆ ಹೇಳುವ ಕಲೆ ಮತ್ತು ಭಾರತದಲ್ಲಿ ರಂಗದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಭಾರತದಲ್ಲಿ ರಂಗಚಟುವಟಿಕೆಗಳಿಗೆ ಹೇಳುವಂತಹ ಬೆಂಬಲವಿಲ್ಲ. ನಮಗೆ ಹೆಚ್ಚು ಹಣ ಸಿಗುವುದಿಲ್ಲ. ರಂಗಗಳಲ್ಲಿ ತೊಡಗಿಸಿಕೊಂಡವರು, ಬದುಕಿಗಾಗಿ ಬೇರೆ ಏನನ್ನಾದರೂ ಮಾಡುತ್ತಾರೆ. ಥಿಯೇಟರ್ ನಂಬಿಕೊಂಡು ಬದುಕುವುದು ಸಾಧ್ಯವಿಲ್ಲ. ನಾನು ಕೂಡಾ ಕೇವಲ ನಾಟಕಗಳನ್ನು ಮಾಡುತ್ತಿಲ್ಲ. ಭಾರತದಲ್ಲಿ ಹೇಳಬೇಕಾದ ಕಥೆಗಳು ಬೇಕಾದಷ್ಟಿವೆ. ಸಿನಿಮಾ ಆಗಲೀ, ನಾಟಕವಾಗಲೀ ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುತ್ತಿದ್ದೇವೆ. ಹೊಸ ಹಾಗೂ ಸ್ವಂತ ಐಡಿಯಾಗಳು ಕಾಣಸಿಗುವುದು ಕಡಿಮೆ. ಹೊಸ ಕಥೆಗಳನ್ನು ಹೇಳುವ ಗುಂಪಿನಲ್ಲಿ ನಾನೂ ಒಬ್ಬಳಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ.

ವೈಎಸ್: ರಂಗದ ಹೊರತಾಗಿ ನೀವು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದೀರಿ. ಅದರ ಬಗ್ಗೆ ಹೇಳಿ?

ಕಲ್ಕಿ: ನಾನು ಚಿಕ್ಕ ವಯಸ್ಸಿನಿಂದಲೇ ಬರವಣಿಗೆಯಲ್ಲಿ ತೊಡಗಿಕೊಂಡಿದ್ದೆ. ನನಗೆ ಬರೆಯುವುದು ಥೆರಪಿ ಇದ್ದಂತೆ. ನಾನು ತುಂಬಾ ನಾಚಿಕೆ ಸ್ವಭಾವದವಳು. ಬೇರೆಯವರಿಗೆ ಹೇಳಲು ಸಾಧ್ಯವಾಗದ್ದನ್ನು ನಾನು ಬರವಣಿಗೆ ಮೂಲಕ ವ್ಯಕ್ತಪಡಿಸುತ್ತಿದ್ದೆ. ಬಹುತೇಕ ಬರಹಗಾರರು ನನ್ನಂತೆಯೇ ಇರುತ್ತಾರೆ. ನಟನೆ ಆಮೇಲೆ ಆರಂಭಿಸಿದೆ. ಬರೆಯುವುದು ನನ್ನ ಹವ್ಯಾಸವಾಗಿತ್ತು. ಆದರೆ, ಯಾವಾಗ ನನಗೆ ಉದ್ಯೋಗ ತೊಂದರೆ ಕಾಡಿ, ದೀರ್ಘಕಾಲ ನಿರುದ್ಯೋಗಿಯಾದೆನೋ, ಅವತ್ತಿನಿಂದ ಬರೆಯುವುದನ್ನೇ ವೃತ್ತಿಮಾಡಿಕೊಂಡೆ.

ವೈಎಸ್ : ಥಿಯೇಟರ್ ನಿಂದ ಬಾಲಿವುಡ್ ಗೆ, ಇದು ಅವಕಾಶವಾಗಿತ್ತೋ ? ಆಯ್ಕೆಯಾಗಿತ್ತೋ?

ಕಲ್ಕಿ : ಇದು ಅವಕಾಶವಾಗಿತ್ತು. ಅಂದರೆ, ನಾನು ಬಾಲಿವುಡ್ಗೆ ಹೋಗುವ ನಿರೀಕ್ಷೆಯಲ್ಲೇ ಇರಲಿಲ್ಲ. ನಾನು ಬಾಲಿವುಡ್ಗೆ ಹಾರುವ ಪ್ರಯತ್ನವನ್ನೂ ಮಾಡಿರಲಿಲ್ಲ. ಮುಖ್ಯವಾಗಿ ನನ್ನ ಹಿಂದೆಯೇ ಚೆನ್ನಾಗಿರಲಿಲ್ಲ. ನಾನು ಡ್ಯಾನ್ಸರ್ ಕೂಡಾ ಆಗಿರಲಿಲ್ಲ. ಆದರೆ, ನನಗೆ ಹಣ ಮಾಡಬೇಕಿತ್ತು. ನಾನು ಜಾಹೀರಾತು ಮಾಡುತ್ತಿದ್ದೆ, ಆಡಿಷನ್ಗಳಿಗೆ ಹೋಗುತ್ತಿದ್ದೆ. ದೇವ್ ಡಿ ಆಡಿಷನ್ನಲ್ಲೂ ಪಾಲ್ಗೊಂಡಿದ್ದೆ. ನನಗೆ ಪಾತ್ರ ಸಿಕ್ಕಿದಾಗ ತುಂಬಾ ಖುಷಿ ಆಯಿತು. ತುಂಬಾ ಶ್ರಮವಹಿಸಿದೆ. ಎರಡು ತಿಂಗಳು ಹಿಂದಿ ಟ್ಯೂಷನ್ ಸೇರಿಕೊಂಡೆ.ಮ

ವೈಎಸ್ : ಹಿಂದಿ ಚಿತ್ರಗಳಲ್ಲಿ ನಟನೆ ಆರಂಭಿಸಿದಾಗ ನೀವು ಎದುರಿಸಿದ ಸವಾಲುಗಳು ಏನು?

ಕಲ್ಕಿ : ಅವರು ಯಾವ ರೀತಿ ಕಾಣುತ್ತಾರೆ ? ಹೇಗೆ ಮಾತನಾಡುತ್ತಾರೆ? ಎಲ್ಲಿಂದ ಬಂದಿದ್ದಾರೆ ಎನ್ನುವುದರ ಮೇಲೆ ಎಲ್ಲರಿಗೂ ಸವಾಲುಗಳು ಇರುತ್ತವೆ. ನಾನು ವಿದೇಶಿಯಳ ತರಹ ಕಾಣುತ್ತಿದ್ದೆ, ನನ್ನ ಹಿಂದಿ ತುಂಬಾ ವೀಕ್ ಆಗಿತ್ತು. ಒಮ್ಮೆ ನಾನು ಬೇರೆ ರೀತಿ ಇರಬೇಕು ಎಂದು ನಿರ್ಧರಿಸಿದ ಮೇಲೆ, ಎಲ್ಲರಿಗಿಂತ ಭಿನ್ನವಾಗಿ ಕಾಣಲು ಯತ್ನಿಸಿದೆ. ನಾವು ಪ್ರತಿಯೊಬ್ಬರೂ ಭಿನ್ನ, ಎಲ್ಲರೂ ಒಂದೇ ರೀತಿಯಿದ್ದರೆ, ನಾವೆಲ್ಲಾ ರೋಬೋಟ್ಗಳಾಗುತ್ತಿದ್ದೆವು. ನಾವು ಈ ಭಿನ್ನತೆಯನ್ನು ಆಸ್ವಾದಿಸಬೇಕು.

ವೈಎಸ್ : ನಿಮ್ಮ ಭವಿಷ್ಯದ ಯೋಜನೆಗಳೇನು ?

ಕಲ್ಕಿ : ನಾನು ಯಾವಾಗಲೂ ಹೇಳುತ್ತಿರುತ್ತೇನೆ. ನಾನು ಪುಸ್ತಕವೊಂದನ್ನು ಬರೆಯಬೇಕು. ಆದರೆ, ಒಂದೇ ಬಾರಿಗೆ ಹಲವು ಯೋಜನೆಗಳನ್ನು ಹಾಕಿಕೊಳ್ಳಲು ಇಷ್ಟಪಡುವುದಿಲ್ಲ. ಕಾರಣ ಜೀವನ ನಿಮಗೆ ಏನನ್ನು ಕೊಡುತ್ತದೆ ಎನ್ನುವುದನ್ನು ನಿರೀಕ್ಷಿಸಲೂ ಸಾಧ್ಯವಿಲ್ಲ. ಆದರೆ, ಒಂದು ದಿನ ಬರೆದೇ ಬರೆಯುತ್ತೇನೆ. ಇವತ್ತು ಏನು, ಇವತ್ತು ಹೇಗೆ ಬದುಕಬೇಕು, ಅದನ್ನು ಚೆನ್ನಾಗಿ ಬದುಕಬೇಕು ಎಂದು ಆಸೆ ಪಡುವವಳು ನಾನು, ನಾಳೆಯದ್ದು ನಾಳೆಗೆ.

ವೈಎಸ್ : ಯುವ ಜನಾಂಗಕ್ಕೆ ನಿಮ್ಮ ಸಂದೇಶ ಏನು ? ಯಾವ ತಪ್ಪನ್ನು ಅವರು ಮಾಡಬಾರದು ?

ಕಲ್ಕಿ: ನೀವು ತಪ್ಪುಗಳನ್ನು ಮಾಡಬಾರದು ಎಂದು ನಾನು ಬಯಸುವುದಿಲ್ಲ. ಎಲ್ಲಾ ತಪ್ಪುಗಳನ್ನೂ ಮಾಡಿ. ಅದರಿಂದಲೇ ನೀವು ಬದುಕಿನಲ್ಲಿ ಬಹಳಷ್ಟು ಕಲಿಯಬಹುದು. ನಾವು ಧರ್ಮಗುರುಗಳು, ಶಿಕ್ಷಕರು, ಹಿತೈಷಿಗಳು ಹೀಗೆ ಯಾವಾಗಲೂ ಹೊರಗಿನಿಂದ ಸಲಹೆ ಕೇಳುತ್ತೇವೆ. ಆದರೆ, ನಿಜ ಏನೆಂದರೆ, ನಮಗಿಂತ ಹೆಚ್ಚಾಗಿ ನಮ್ಮನ್ನು ಬಲ್ಲವರು ಈ ಜಗತ್ತಿನಲ್ಲಿ ಬೇರೆ ಯಾರೂ ಇಲ್ಲ. ಹೀಗಾಗಿ, ನಿಮಗೆ ನೀವು ಸತ್ಯವಂತರಾಗಿರಿ, ನೀವು ತೆಗೆದುಕೊಳ್ಳಬೇಕು ಎಂದು ಭಾವಿಸುವ ರಿಸ್ಕ್ ಗಳನ್ನು ಧೈರ್ಯವಾಗಿ ತೆಗೆದುಕೊಳ್ಳಿ.

ಲೇಖಕರು - ಆದಿತ್ಯ ಭೂಷಣ್ ದ್ವಿವೇದಿ

ಅನುವಾದಕರು - ಪ್ರೀತಂ