ಕರ್ನಾಟಕದತ್ತ ಬಂಡವಾಳ ಹೂಡಿಕೆದಾರರ ಚಿತ್ತ: ಫೆಬ್ರವರಿ 3ರಿಂದ ಮೂರು ದಿನಗಳ ‘ಇನ್ವೆಸ್ಟ್ ಕರ್ನಾಟಕ-2016’
ಆಗಸ್ತ್ಯ
ವಿಶ್ವದ ಬಂಡವಾಳ ಹೂಡಿಕೆದಾರರು ಮತ್ತೊಮ್ಮೆ ಕರ್ನಾಟಕದತ್ತ ನೋಡುತ್ತಿದ್ದಾರೆ. ಈಗಾಗಲೆ ಎರಡು ಬಾರಿ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿದ್ದ ಕರ್ನಾಟಕ ಸರ್ಕಾರ ಇದೀಗ 3ನೇ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಸಜ್ಜಾಗಿದೆ. ಫೆಬ್ರವರಿ 3ರಿಂದ 5ರವರೆಗೆ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ಮತ್ತು ಕರ್ನಾಟಕದ ದಿಕ್ಕನ್ನು ಬದಲಿಸಬಹುದಾದಂತಹ ಸಮಾವೇಶ ನಡೆಯಲಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರದ ಮೊದಲ ಬಂಡವಾಳ ಹೂಡಿಕೆದಾರರ ಸಮಾವೇಶ ಇದಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ 2010 ಮತ್ತು 2012ರಲ್ಲಿ ಸಮಾವೇಶ ಆಯೋಜಿಸಲಾಗಿತ್ತು. ಆಗ ಅಭೂತಪೂರ್ವ ಯಶಸ್ಸು ಕೂಡ ದೊರಕಿತ್ತು. ಅದಾದ ನಂತರ ರಾಜ್ಯದಲ್ಲಿ ಬರ, ರೈತರ ಸಾವಿನ ಸರಣಿಯಿಂದಾಗಿ ಹೂಡಿಕೆದಾರರ ಸಮಾವೇಶವನ್ನು ಕೈಬಿಟ್ಟಿತ್ತು. ಇದೀಗ ಮತ್ತೊಮ್ಮೆ ವಿದೇಶಿ ಬಂಡವಾಳದಾರರನ್ನು ಸ್ವಾಗತಿಸಲು ರಾಜ್ಯ ಸರ್ಕಾರ ಸಜ್ಜಾಗಿದೆ. ಅವರ ಹೂಡಿಕೆಗೆ ಪೂರಕ ವಾತಾವರಣವನ್ನು ನಿರ್ಮಿಸಲಾಗುತ್ತಿದೆ. ರಾಜ್ಯ, ದೇಶ ಸೇರಿದಂತೆ ವಿದೇಶದ ನಾನಾ ಭಾಗಗಳಲ್ಲಿ ಈಗಾಗಲೆ ರೋಡ್ ಶೋ ಮಾಡುವ ಮೂಲಕ ಇನ್ವೆಸ್ಟ್ ಕರ್ನಾಟಕ 2016ಕ್ಕೆ ಹೂಡಿಕೆದಾರರನ್ನು ಸೆಳೆಯುವ ಪ್ರಯತ್ನವನ್ನು ಮಾಡಲಾಗಿದೆ.
ಮೂರು ದಿನ ಹೂಡಿಕೆ ಸಮಾವೇಶ:
ಅರಮನೆ ಮೈದಾನದಲ್ಲಿ ನಡೆಯುವ ಮೂರು ದಿನಗಳ ಸಮಾವೇಶದಲ್ಲಿ ಮೊದಲ ದಿನ ಉದ್ಘಾಟನೆ, ಏರೋಸ್ಪೇಸ್, ಕೃಷಿ ಮತ್ತು ಆಹಾರೋತ್ಪಾದನೆ, ಬಯೋ ಟೆಕ್ನಾಲಜಿ, ಇಂಧನ ವಿಭಾಗದ ಹೂಡಿಕೆಯ ಒಪ್ಪಂದಗಳು ನಡೆಯಲಿವೆ. ಎರಡನೇ ದಿನ ಆಟೋ ಮೆಷಿನ್ ಟೂಲ್ಸ್, ನಗಾಭಿವೃದ್ಧಿ, ಐಟಿ ಹಾಗೂ ಪ್ರವಾಸೋದ್ಯಮ, ಎಲೆಕ್ಟ್ರಾನಿಕ್ಸ್ ಉತ್ಪಾದನೆ, ಫಾರ್ಮ, ಜವಳಿ ಉದ್ಯಮ, ಮೂಲಸೌಕರ್ಯ ಕ್ಷೇತ್ರಗಳಲ್ಲಿ ಹೂಡಿಕೆಗೆ ಹಾಗೂ ಕೊನೆಯ ದಿನ ಫೆಬ್ರವರಿ 5ರಂದು ರಾಜ್ಯದ ಪ್ರಮುಖ ಕೈಗಾರಿಕಾ ಪ್ರದೇಶ ಮತ್ತು ಪ್ರವಾಸಿ ತಾಣಗಳಿಗೆ ಅತಿಥಿಗಳನ್ನು ಕರೆದೊಯ್ಯುವ ಮೂಲಕ ಸಮಾವೇಶವನ್ನು ಅಂತ್ಯಗೊಳಿಸಲಾಗುತ್ತದೆ.
ಬಂಡವಾಳ ಹೂಡಿಕೆಗೆ ಕರ್ನಾಟಕವೇ ಏಕೆ?
ಕೈಗಾರಿಕಾ ಚಟುವಟಿಕೆಗೆ 50 ಸಾವಿರ ಎಕರೆ ಭೂಮಿ:
ಪ್ರಮುಖವಾಗಿ ಕೈಗಾರಿಕಾ ಚಟುವಟಿಕೆ ಆರಂಭಿಸಲು ಬೇಕಾಗುವ ಎಲ್ಲಾ ವ್ಯವಸ್ಥೆಗಳನ್ನು ಬಂಡವಾಳ ಹೂಡಿಕೆದಾರರಿಗೆ ಮಾಡಿಕೊಡುತ್ತಿದೆ. ಪ್ರಮುಖವಾಗಿ ಬಂಡವಾಳ ಹೂಡಿಕೆದಾರರಿಗಾಗಿಯೇ 50 ಸಾವಿರ ಎಕರೆ ಭೂಮಿಯನ್ನು ಗುರುತಿಸಿದೆ. ಅದರಲ್ಲಿ ಈಗಾಗಲೆ 30 ಸಾವಿರ ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದ್ದು ಉಳಿದ 20 ಸಾವಿರ ಎಕರೆ ಭೂಮಿಯನ್ನು ಗುರುತಿಸಿದ್ದು, ಸ್ವಾಧೀನ ಪಡಿಸಿಕೊಳ್ಳುವುದಷ್ಟೇ ಬಾಕಿ ಉಳಿದಿದೆ. ಅದರೊಂದಿಗೆ 2014-19ನೇ ಸಾಲಿಗೆ ನೂತನ ಕೈಗಾರಿಕಾ ನೀತಿಯನ್ನು ಕೂಡ ಜಾರಿಗೆ ತರಲಾಗುತ್ತಿದೆ.
7 ಲಕ್ಷ ಕೋಟಿ ಬಂಡವಾಳ ಹೂಡಿಕೆ ನಿರೀಕ್ಷೆ:
2010ರಲ್ಲಿ ನಡೆದ ಮೊದಲ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 3.92 ಲಕ್ಷ ಕೋಟಿ ರೂಪಾಯಿ ಹಾಗೂ 2012ರಲ್ಲಿ ನಡೆದ ಎರಡನೇ ಸಮಾವೇಶದಲ್ಲಿ 6.77 ಲಕ್ಷ ಕೋಟಿ ರೂಪಾಯಿ ಬಂಡವಾಳ ರಾಜ್ಯದತ್ತ ಹರಿದುಬಂದಿತ್ತು. ಹಾಗೆಯೇ 2010ರಲ್ಲಿ 389 ಒಪ್ಪಂದಗಳು, 2012ರಲ್ಲಿ 751 ಒಪ್ಪಂದಗಳು ಬಂಡವಾಳ ಹೂಡಿಕೆಗೆ ಸಂಬಂಧಿಸಿದಂತೆ ದೇಶ ಮತ್ತು ವಿದೇಶಿ ಸಂಸ್ಥೆಗಳೊಂದಿಗೆ ಮಾಡಿಕೊಳ್ಳಲಾಗಿತ್ತು. ಈ ಬಾರಿ ಅದಕ್ಕಿಂತ ಹೆಚ್ಚಿನ ಹೂಡಿಕೆಯನ್ನು ರಾಜ್ಯ ಸರ್ಕಾರ ನಿರೀಕ್ಷಿಸುತ್ತಿದೆ. ಅದರಂತೆ ಈ ಬಾರಿ 7 ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಬಂಡವಾಳ ರಾಜ್ಯದಲ್ಲಿ ಹೂಡಿಕೆಯಾಗುವ ನಿರೀಕ್ಷೆ ಹೊಂದಲಾಗಿದೆ.
ಪ್ರಮುಖ ಕ್ಷೇತ್ರಗಳಲ್ಲಿ ಹೂಡಿಕೆ:
ರಾಜ್ಯದ ರಾಜಧಾನಿ ಬೆಂಗಳೂರು ಐಟಿ-ಬಿಟಿಗೆ ಹೆಸರುವಾಸಿಯಾಗಿದೆ. ಆ ಕ್ಷೇತ್ರದಲ್ಲೂ ಈ ಬಾರಿ ಹೆಚ್ಚಿನ ಹೂಡಕೆಯ ನಿರೀಕ್ಷೆಯಿದೆ. ಅದರೊಂದಿಗೆ ಆಟೋಮೊಬೈಲ್ಸ್, ಏರೋಸ್ಪೇಸ್, ಯಂತ್ರೋಪಕರಣ, ರಕ್ಷಣಾ, ಬೃಹತ್ ಇಂಜಿನಿಯರಿಂಗ್, ಕೃಷಿ ಮತ್ತು ಆಹಾರೋತ್ಪಾದನೆ, ಪ್ರವಾಸ, ಔಷದ ತಯಾರಿಕೆ, ಸ್ಮಾರ್ಟ್ ಟೌನ್‍ಶಿಪ್ ನಿರ್ಮಾಣದಲ್ಲಿ ವಿದೇಶಿ ಕಂಪೆನಿಗಳು ಹೆಚ್ಚಿನ ಬಂಡವಾಳ ಹೂಡಬಹುದೆಂದು ಅಂದಾಜಿಸಲಾಗಿದೆ. ಅದಕ್ಕಾಗಿಯೇ ಅಂತಹ ಸಂಸ್ಥೆಗಳಿಗೆ ಏನೆಲ್ಲಾ ವ್ಯವಸ್ಥೆ ಮಾಡಬೇಕು ಎಂಬುದನ್ನು ಮೊದಲೇ ಅರಿತು ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ರಾಜ್ಯದ ಸದ್ಯದ ಆರ್ಥಿಕ ಸ್ಥಿತಿ:
ದೇಶದ ಸಿಲಿಕಾನ್ ವ್ಯಾಲಿ ಎಂದು ಕರೆಸಿಕೊಳ್ಳುವ ಕರ್ನಾಟಕ ಅತಿ ವೇಗವಾಗಿ ಬೆಳೆಯುತ್ತಿರುವ ರಾಜ್ಯಗಳಲ್ಲಿ ಮುಂಚೂಣಿಯಲಿದೆ. ದೇಶದ ಜಿಡಿಪಿಯಲ್ಲಿ ರಾಜ್ಯ ಶೇ. 6ರಷ್ಟು ಹಾಗೂ ರಫ್ತು ಕ್ಷೇತ್ರಕ್ಕೆ ಶೇ. 13ರಷ್ಟು ಕೊಡುಗೆಯನ್ನು ಕರ್ನಾಟಕ ನೀಡುತ್ತಿದೆ. ದೇಶದ ಸಾಫ್ಟ್‍ವೇರ್ ರಫ್ತಿನಲ್ಲಿ ರಾಜ್ಯದ ಕೊಡುಗೆ ಶೇ.40ರಷ್ಟಿದೆ. ಬೆಂಗಳೂರು, ಮೈಸೂರು, ಮಂಗಳೂರು, ಕಲಬುರಗಿ, ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ, ಕೋಲಾರ, ತುಮಕೂರು, ಕಾರವಾರಗಳಲ್ಲಿ ಹೂಡಿಕೆ ಮಾಡಬಹುದಾದ ಎಲ್ಲಾ ಅನುಕೂಲತೆಗಳಿವೆ. ಫಿಕ್ಕಿ, ಅಸ್ಸೋಕಾಂ, ವಲ್ರ್ಡ್ ಬ್ಯಾಂಕ್‍ನಂತಹ ಸಂಸ್ಥೆಗಳು ದೇಶದಲ್ಲಿ ವ್ಯಾಪಾರ ಮತ್ತು ಹೂಡಿಕೆಗೆ ಕರ್ನಾಟಕ ಪ್ರಶಸ್ತ ರಾಜ್ಯ ಎಂದು ಅಭಿಪ್ರಾಯಪಟ್ಟಿವೆ. ಅಲ್ಲದೆ ರಾಜ್ಯದಲ್ಲಿ ನ್ಯಾನೋ ಟೆಕ್ನಾಲಜಿ, ಬಯೋ ಟೆಕ್ನಾಲಜಿ, ಆಟೋಮೊಬೈಲ್ಸ್, ಏರೋ ಸ್ಪೇಸ್, ಆಯಿಲ್ ರಿಫೈನಿಂಗ್, ಪ್ರವಾಸೋದ್ಯಮ ಸೇರಿದಂತೆ 20ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ 700ಕ್ಕೂ ಹೆಚ್ಚಿನ ವಿದೇಶಿ ಸಂಸ್ಥೆಗಳು ಬಂಡವಾಳ ಹೋಡಿಕೆ ಮಾಡಿ ತಮ್ಮ ಉದ್ಯಮ ಆರಂಭಿಸಿವೆ.