ನೌಕರಿ ಸಿಗದಿದ್ದಾಗ ಮಾಡಿದ ಆವಿಷ್ಕಾರ..410 ಕಿ.ಮೀ. ಮೈಲೇಜ್​ ಕೊಡುವ ಬೈಕ್​..!

ಉಷಾ ಹರೀಶ್

ನೌಕರಿ ಸಿಗದಿದ್ದಾಗ ಮಾಡಿದ ಆವಿಷ್ಕಾರ..410 ಕಿ.ಮೀ. ಮೈಲೇಜ್​ ಕೊಡುವ ಬೈಕ್​..!

Saturday January 23, 2016,

2 min Read

ನಾವೆಲ್ಲಾ ಓಡಿಸೋ ಬೈಕ್ ಪ್ರತಿ ಲೀಟರ್​ಗೆ ಗರಿಷ್ಠ ಅಂದ್ರೆ 70ರಿಂದ 80 ಕಿಲೀಮೀಟರ್​ ಮೈಲೇಜ್ ಕೊಡುತ್ತದೆ. ಆದರೆ ಬಾಗಲಕೋಟೆಯ ವಿದ್ಯಾರ್ಥಿಯೊಬ್ಬ ತಯಾರಿಸಿದ ಬೈಕ್​, ಒಂದು ಲೀಟರ್​ ಪೆಟ್ರೋಲ್​​ಗೆ ಬರೋಬ್ಬರಿ 360 ಕಿಲೋಮೀಟರ್ ಮೈಲೇಜ್ ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಆದರೆ ಇದನ್ನು ಮೀರಿಸುವಂತೆ ಮತ್ತೊಬ್ಬ ಇಂಜಿನಿಯರಿಂಗ್ ವಿದ್ಯಾರ್ಥಿ ತಯಾರಿಸಿರುವ ಬೈಕ್ 410 ಕಿಲೋಮೀಟರ್​ ಮೈಲೇಜ್​ ನೀಡುತ್ತದೆ ಅಂತೆ..!

ಈ ವಿಷಯವನ್ನು ಯಾರೇ ಕೇಳಿದರೂ ಹುಬ್ಬೇರಿಸುತ್ತಾರೆ. ಆದರೆ ಇದು ಸತ್ಯ. ಈ ಸಾಧನೆ ಮಾಡಿ ಎಲ್ಲರ ಗಮನ ಸೆಳೆಯುತ್ತಿರುವ ಈ ಯುವಕ ಮುಧೋಳ ತಾಲೂಕು ಮಾಲಾಪುರ ಗ್ರಾಮದ ಕೃಷಿಕ ಮಲ್ಲಿಕಾರ್ಜುನ ಗಣಿ ಅವರ ಪುತ್ರ ಉಮೇಶ. ಈತ ದಾವಣಗೆರೆಯ ಜಿಎಂಐಟಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ.ಗಣೇಶ ಡಿ.ಬಿ. ಅವರ ಮಾರ್ಗದರ್ಶನದಲ್ಲಿ ಬೈಕ್​ಗಳಿಗಾಗಿ ‘ಮೆಕೆಟ್ರಾನಿಕ್ಸ್’ ಎಂಬ ತಂತ್ರಜ್ಞಾನ ಕಂಡುಹಿಡಿದಿದ್ದಾನೆ.

image


ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಬೈಕ್​ಗೆ ವಿದೇಶಗಳಲ್ಲಿ ಮೆಚ್ಚುಗೆಯು ದೊರಕಿದೆ. ಅಂದಹಾಗೆ, ಈತ ಹೊಸ ತಂತ್ರಜ್ಞಾನ ಅಳವಡಿಸಿದ ಬೈಕ್ ವಿದೇಶಗಳಲ್ಲೂ ಮೆಚ್ಚುಗೆ ಪಡೆದಿದೆ.

ಛಲ ಬಿಡದ ಉಮೇಶ..!

ಮೂರು ವರ್ಷಗಳ ಕಾಲ ಮೆಕಾನಿಕಲ್ ಎಂಜಿನಿಯರಿಂಗ್ ಕೋರ್ಸ್ ಮುಗಿಸಿದ ತಕ್ಷಣ ಕೆಲಸಕ್ಕಾಗಿ ಎಲ್ಲಡೆಯು ತಿರುಗಿ ಕೆಲಸ ಸಿಗುತ್ತದೆ ಎಂಬ ಭರವಸೆ ಮೇಲೆ ಉಮೇಶ್ ಕಾದು ಕಾದು ಸುಸ್ತಾಗಿದ್ದ. ಸಕ್ಕರೆ ಕಾರ್ಖಾನೆಯೊಂದರಲ್ಲಿ ಕೆಲಸಕ್ಕಾಗಿ ಅರ್ಜಿ ಹಾಕಿದ. ಸಂದರ್ಶನಕ್ಕೆ ಹಾಜರಾದ್ರೂ ಕೆಲಸ ಸಿಗಲಿಲ್ಲ. ಇದರ ಜೊತೆಗೆ ಸರಕಾರಿ ಹಾಗೂ ಖಾಸಗಿ ನೌಕರಿಗಾಗಿ ಕಾದು ಸುಸ್ತಾದ. ಬಳಿಕ ತಾನೇ ಏನಾದರೂ ಸಾಧನೆ ಮಾಡಬೇಕೆಂದು ಹಠ ತೊಟ್ಟ ಉಮೇಶ್ ಕೇವಲ 24 ದಿನಗಳಲ್ಲಿ ಮೆಕೆಟ್ರಾನಿಕ್ಸ್ ಅನ್ನು ಕಂಡುಹಿಡಿದು ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾನೆ.

ಇದಕ್ಕೆ ತಗುಲಿದ ವೆಚ್ಚವೆಷ್ಟು..?

ಉಮೇಶ್ ಈ ಮೆಕೆಟ್ರಾನಿಕ್ಸ್ ತಂತ್ರಜ್ಞಾನವನ್ನು ಐ.ಸಿ. ಎಂಜಿನ್, ಎರಡು ಬ್ಯಾಟರಿ ಅಲ್ಟ್ರಾಸಿಟ್, ಗೀಯರ್ ಬಾಕ್ಸ್ ಡಿ.ಸಿ. ಮೋಟರ್ ಬಳಸಿಕೊಂಡು ಕಂಡುಹಿಡಿದಿದ್ದಾರೆ. ಇದಕ್ಕೆ ಅವರು ಖರ್ಚು ಮಾಡಿದ್ದು 40 ಸಾವಿರ ರೂಪಾಯಿಗಳು. ಈ ವೆಚ್ಚದಲ್ಲಿ ಇಂತಹ ಬೈಕ್ ತಯಾರಿಸಬಹುದು. ಇದನ್ನು ನಾವು 25 ಕಿ.ಮೀ ವೇಗದಲ್ಲಿ ಚಾಲನೆ ಮಾಡಬಹುದು. ಅಷ್ಟೇ ಅಲ್ಲದೇ ಈ ಬೈಕ್ ಪರಿಸರ ಸ್ನೇಹಿ ಸಹ ಆಗಿದೆ. ಇದರಿಂದ ಹೆಚ್ಚಿನ ಪ್ರಮಾಣದ ಹೊಗೆಯು ಬರುವುದಿಲ್ಲ.

ಕ್ಲಚ್ ಇಲ್ಲದೇ ಸ್ಟಾರ್ಟ್..!

ಈ ತಂತ್ರಜ್ಞಾನವನ್ನು ಬಳಸಿ ತಯಾರಿಸುವ ಬೈಕ್​ನ್ನು ಕ್ಲಚ್ ಇಲ್ಲದೇ ಸ್ಟಾರ್ಟ್ ಮಾಡಬಹುದು. ಈ ವಾಹನದ ತೂಕ ಬರೋಬ್ಬರಿ 110 ಕೆಜಿ. 80ರಿಂದ 90 ಕೆಜಿ ತೂಕವಿರುವ ವ್ಯಕ್ತಿಯೂ ಏರಿಳಿತದ ರಸ್ತೆಯಲ್ಲಿ ಆರಾಮಾಗಿ ಇದನ್ನು ಓಡಿಸಬಹುದು. ಈ ಬೈಕ್ ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗಲಿದೆ.

ದುಬೈ ಮೂಲದ ಕಂಪನಿಯಿಂದ ಆಹ್ವಾನ

ಉಮೇಶ್ ಅವರ ವಿನೂತನ ತಂತ್ರಜ್ಞಾನದ ಮೆಕೆಟ್ರಾನಿಕ್ಸ್ ಬೈಕ್ ಬಗ್ಗೆ ವಿಶ್ವವಿದ್ಯಾಲಯದ ಮೂಲಕ ದುಬೈ ಮೂಲದ ಕಂಪನಿಯೊಂದು ಮಾಹಿತಿ ತಿಳಿದುಕೊಂಡಿದೆ, ನಂತರ ಉಮೇಶ್ ಅವರ ವಿಳಾಸ ಪಡೆದು ಅವರನ್ನು ಅಲ್ಲಿಗೆ ಬರುವಂತೆ ಆಹ್ವಾನ ನೀಡಿದೆ.

ಒಟ್ಟಿನಲ್ಲಿ ವಾಯುಮಾಲಿನ್ಯ ತಡೆಯಲು ನಮ್ಮ ಸರ್ಕಾರಗಳು ಒದ್ದಾಡುತ್ತಿರುವಾಗ ಇಂತಹ ಉತ್ತಮ ಕೆಲಸ ಮಾಡಿರುವ ಉಮೇಶ್ ಅವರ ಸಾಧನೆಯನ್ನು ಮೆಚ್ಚಬೇಕಾದಂತದ್ದು. ಅವರಿಗೆ ಸ್ವದೇಶದ ಕಂಪನಿಗಳ ಪ್ರೋತ್ಸಾಹ ಅಗತ್ಯ.

ಪರಿಸರ ಸ್ನೇಹಿ ಹಾಗೂ ಆರ್ಥಿಕ ಹೊರೆಯಿಂದ ದೂರು ಉಳಿದು ಬೈಕ್ ಓಡಾಡಿಸಬಹುದು. ಇದು ಉತ್ತಮ ಪ್ರಯತ್ನ, ಯುವಕರಿಗೆ ಉಮೇಶ ಸ್ಫೂರ್ತಿಯಾಗಿದ್ದಾರೆ.

- ಡಾ.ಗಣೇಶ ಡಿ.ಬಿ. ಉಪ ಪ್ರಾಚಾರ್ಯರು, ಮೆಕಾನಿಕಲ್ ವಿಭಾಗ, ಜಿಎಂಐ ಟೆಕ್ನಾಲಜಿ, ದಾವಣಗೆರೆ.

ಸಮಾಜಕ್ಕೆ ಏನಾದರೂ ಹೊಸ ಕೊಡುಗೆ ಮತ್ತು ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ಈ ಬೈಕ್​ನ್ನು ಕಂಡು ಹಿಡಿದಿದ್ದೇನೆ.

- ಉಮೇಶ ಗಣಿ, ಮೆಕಾನಿಕಲ್ ಎಂಜಿನಿಯರ್.