ಗಾಂಧಿಯಿಂದ ಮೋದಿವರೆಗೆ ಖಾದಿಯ ಪಯಣ- ಅಹಿಂಸೆಯ ಪ್ರತೀಕ
ಟೀಮ್ ವೈ.ಎಸ್.
‘ನಮ್ಮಲ್ಲಿ ‘ಖಾದಿ ಸ್ಫೂರ್ತಿ’ ಇದ್ದರೆ ಸಾಕು, ನಮ್ಮ ಸುತ್ತಲೂ, ಜೀವನದ ಪ್ರತಿ ಹೆಜ್ಜೆಯಲ್ಲೂ ಸರಳತೆಯನ್ನು ಮೈಗೂಡಿಸಿಕೊಳ್ಳಬಹುದು’ –ಮಹಾತ್ಮಾ ಗಾಂಧೀಜಿ
‘ನಾವು ಆದಷ್ಟು ಹೆಚ್ಚು ಖಾದಿಯ ಬಳಕೆ ಕುರಿತು ಪ್ರಚಾರ ಮಾಡಬೇಕು. ಕಡಿಮೆ ಅಂದ್ರೂ ಪ್ರತಿಯೊಬ್ಬರೂ ಒಂದು ಖಾದಿ ಬಟ್ಟೆ ಖರೀದಿಸಬೇಕು. ನೀವು ಖಾದಿ ಖರೀದಿಸಿದರೆ, ಒಬ್ಬ ಬಡವನ ಮನೆಯಲ್ಲಿ ಅಭ್ಯುದಯದ ದೀಪ ಹಚ್ಚಿದಂತಾಗುತ್ತೆ’ - ನರೇಂದ್ರ ಮೋದಿ.
ಪ್ರಧಾನಿ ನರೇಂದ್ರ ಮೋದಿಯವರ ಈ ಎರಡನೇ ಹೇಳಿಕೆ ಬಂದಿದ್ದು ಕಳೆದ ವರ್ಷದ ವಿಜಯ ದಶಮಿ ಹಬ್ಬದಂದು, ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್‍ನಲ್ಲಿ. ಮೋದಿ ತಮ್ಮ ಭಾಷಣದಲ್ಲಿ ಖಾದಿ ಕುರಿತ ಸಂದೇಶವನ್ನು ನೀಡಿದ್ದನ್ನು ನೋಡಿದರೆ ಗೊತ್ತಾಗುತ್ತೆ, ಭಾರತದ ಸ್ಫೂರ್ತಿಯ ಪ್ರತೀಕದಂತೆ ಖಾದಿ ಇಂದಿಗೂ ತುಂಬಾ ಪ್ರಾಮುಖ್ಯತೆ ವಹಿಸಿದೆ ಎಂಬುದು.
ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಸಚಿವ ಕಲ್ರಾಜ್ ಮಿಶ್ರಾ ಅವರ ಪ್ರಕಾರ, ಪ್ರಧಾನಿ ನರೇಂದ್ರ ಮೋದಿಯವರ ಈ ಹೇಳಿಕೆಯಿಂದಾಗಿ ಭಾರತದಲ್ಲಿ ಖಾದಿ ಮಾರಾಟ ಹೆಚ್ಚಾಗಿದೆಯಂತೆ. ಈ ಹೇಳಿಕೆಯ ನಂತರ ಮೋದಿ ಸರ್ಕಾರವೂ ಸಹ ಖಾದಿಗೆ ಹೆಚ್ಚು ಪ್ರಚಾರ ನೀಡಲು ಹಲವು ಯೋಜನೆಗಳನ್ನು ಕೈಗೊಂಡಿದೆ. ಇದಕ್ಕೆ ಸಂಬಂಧಿಸಿದ ಮೊದಲ ಹೆಜ್ಜೆ ಎಂಬಂತೆ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಖಾದಿ - ಡೆನಿಮ್ ಬಟ್ಟೆಗಳ ಮಾರಾಟಕ್ಕೆ ಮುಂದಾಗಿವೆ. ಇತ್ತೀಚಿಗಿನ ಸುದ್ದಿ ಅಂದ್ರೆ ಖಾದಿ ಮತ್ತು ಗ್ರಾಮೀಣ ಕೈಗಾರಿಕಾ ಆಯೋಗ ಬಾಲಿವುಡ್‍ನ ದಂತಕಥೆ ಅಮಿತಾಭ್ ಬಚ್ಚನ್ ಅವರನ್ನು ಖಾದಿಯ ರಾಯಭಾರಿಯಾಗಿ ಆಯ್ಕೆ ಮಾಡಿಕೊಂಡಿದೆ. ಖಾದಿಗೆ ಪ್ರಚಾರ ನೀಡಲು ಮುಂದಾಗಿರುವ ಅಮಿತಾಭ್ ಬಚ್ಚನ್ ಅದಕ್ಕಾಗಿ ಒಂದೂ ರೂಪಾಯಿ ಸಂಭಾವನೆ ಪಡೆಯದೇ ಇರೋದು ವಿಶೇಷವೇ ಸರಿ.
ಭಾರತದಲ್ಲಿ ಖಾದಿಗೇಕೆ ಇಷ್ಟೊಂದು ಪ್ರಾಮುಖ್ಯತೆ?
ಈ ಪ್ರಶ್ನೆಗೆ ಉತ್ತರ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ. ಬ್ರಿಟೀಷ್ ವಸಾಹತುಶಾಹಿಗಳ ವಿರುದ್ಧ ಹೋರಾಡಲು ಅವರು ತಮ್ಮ ಅಹಿಂಸಾತ್ಮಕ ಹೋರಾಟಕ್ಕೆ ಇದೇ ಖಾದಿ ಮತ್ತು ಚರಕಗಳನ್ನು ಶಸ್ತ್ರಗಳನ್ನಾಗಿಸಿಕೊಂಡಿದ್ದರು. ಹೀಗಾಗಿಯೇ ಗಾಂಧಿ, ಬ್ರಿಟನ್ ಕಾರ್ಖಾನೆಗಳಲ್ಲಿ ತಯಾರಾದ ಬಟ್ಟೆಗಳಿಂದ ದೂರವಿದ್ದರು. ತಾವೇ ಚರಕದಲ್ಲಿ ತಯಾರಿಸಿದ, ಬಟ್ಟೆಗಳನ್ನಷ್ಟೇ ಧರಿಸುವ ಮೂಲಕ ಸ್ವಾವಲಂಬೀ ಜೀವನ ನಡೆಸುತ್ತಿದ್ದರು. ಹೀಗಾಗಿಯೇ ಖಾದಿ ಭಾರತೀಯರಿಗೆ ಹೆಮ್ಮೆಯ ಪ್ರತೀಕವೂ ಹೌದು. ಸ್ವಾತಂತ್ರ್ಯಾ ನಂತರ ಹಲವು ನಾಯಕರು, ರಾಜಕಾರಣಿಗಳು ತಮ್ಮ ದೇಶಭಕ್ತಿ ಪ್ರದರ್ಶಿಸಲು ಇದೇ ಖಾದಿಯ ಮೊರೆ ಹೋಗಿದ್ದು ಗೊತ್ತೇಯಿದೆ. ಕೆಲ ದಶಕಗಳ ಹಿಂದಿನವರೆಗೂ ಖಾದಿ ಗಾಂಧಿ ಟೋಪಿ ಧರಿಸುವುದು ಪ್ರತಿಯೊಬ್ಬ ರಾಜಕಾರಣಿಗೂ ಪ್ರತಿಷ್ಠೆಯ ಪ್ರತೀಕವಾಗಿತ್ತು. 2011ರಲ್ಲಿ ಭ್ರಷ್ಟಾಚಾರ ವಿರೋಧೀ ಹೋರಾಟದಲ್ಲಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಮತ್ತವರ ಬೆಂಬಲಿಗರು ಖಾದಿ ಟೋಪಿಗಳನ್ನು ಧರಿಸಿದ್ದರು. ಈ ಮೂಲಕ ಈ ಖಾದಿ ಟೋಪಿಗಳಿಗೆ ಈಗ ಮತ್ತೆ ಮರುಜೀವ ಸಿಕ್ಕಂತಾಗಿದೆ. ಹಜಾರೆ ಅವರ ತಂಡದಲ್ಲಿದ್ದ ಅರವಿಂದ್ ಕೇಜ್ರಿವಾಲ್ ಇವತ್ತು ದೆಹಲಿಯ ಮುಖ್ಯಮಂತ್ರಿಯಾಗಿರಬಹುದು. ಆದ್ರೆ ಆಮ್ ಆದ್ಮಿ ಪಾರ್ಟಿ ಆರಂಭಿಸಿದಾಗ ಪಕ್ಷದ ಕಾರ್ಯಕರ್ತರು ಖಾದಿ ಟೋಪಿಗಳನ್ನು ಧರಿಸಲು ಕಡ್ಡಾಯಗೊಳಿಸಿದರು. 2013ರ ದೆಹಲಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಆಪ್ ಕಾರ್ಯಕರ್ತರ ನಡುವಿನ ಗಲಾಟೆಗೆ ಇದೇ ಖಾದಿ ಗಾಂಧಿ ಟೋಪಿಯೇ ಕಾರಣವಾಗಿತ್ತು. ಹಾಗೇ ಲೋಕಸಭಾ ಚುನಾವಣೆ ವೇಳೆ ಮೋದಿಯೇ ಮುಂದಿನ ಪ್ರಧಾನಿ ಎಂಬ ಘೋಷವಾಕ್ಯಗಳೊಂದಿಗೆ ಬಿಜೆಪಿ ಕಾರ್ಯಕರ್ತರೂ ಕೇಸರಿ ಬಣ್ಣದ ಖಾದಿ ಟೋಪಿಗಳನ್ನು ಧರಿಸಲು ಪ್ರಾರಂಭಿಸಿದ್ದರು.
ಕಡಿಮೆ ಸಿನಿಕತನವೆನಿಸಿದರೂ ಫ್ಯಾಷನ್ ಲೋಕ ಅತ್ಯುತ್ತಮ ಸಿಲ್ಕ್ ಮತ್ತು ಕಾಟನ್‍ಗೆ ನೀಡುವಷ್ಟೇ ಪ್ರಾಮುಖ್ಯತೆಯನ್ನೇ ಖಾದಿಗೂ ನೀಡುತ್ತಿದೆ. ಕಾರಣ ಖಾದಿಯ ಅನನ್ಯ ಗುಣಗಳು. ಇದು ಶೇಕಡಾ 100 ಪ್ರತಿಶತಃ ನೈಸರ್ಗಿಕ ಬಟ್ಟೆ ಹಾಗೂ ಚರ್ಮಸ್ನೇಹಿ ಉಡುಗೆ. ಚಳಿಗಾಲದಲ್ಲಿ ಬೆಚ್ಚಗಿಡುತ್ತದೆ, ಬೇಸಗೆಯಲ್ಲಿ ತಣ್ಣಗಿಡುತ್ತದೆ, ಹಾಗೇ ಕಡಿಮೆ ಬೆಲೆಯಲ್ಲಿ ಲಭ್ಯ. ಹೀಗಾಗಿಯೇ ಕಡಿಮೆ ಖರ್ಚಿನಲ್ಲಿ ಸ್ಟೈಲಿಶ್ ಬಟ್ಟೆ ಧರಿಸಲು ಇಷ್ಟಪಡುವವರಿಗೆ ಡಿಸೈನರ್‍ಗಳ ಆಕರ್ಷಕ ಆಯ್ಕೆ ಈ ಖಾದಿ.
ಒಮ್ಮೊಮ್ಮೆಯಂತೂ ಖಾದಿ ಹಾಗೂ ಬೇರೆ ಬಟ್ಟೆಗಳ ನಡುವೆ ಯಾವುದೇ ಬದಲಾವಣೆ ಕಾಣೋದಿಲ್ಲ. ಕಾರಣ ಡಿಸೈನ್ ಮಾಡಲು ಸುಲಭವಾಗಲೆಂದು ಹಾಗೂ ಬಟ್ಟೆಯನ್ನು ಮೃದುವಾಗಿಸಲು, ಡಿಸೈನರ್‍ಗಳು ದಟ್ಟವಾದ ಖಾದಿ ನೂಲುಗಳಿರುವ ಬಟ್ಟೆಯನ್ನೇ ಹೆಚ್ಚಾಗಿ ಬಳಸುತ್ತಾರೆ. ಗುಜರಾತ್ ರಾಜ್ಯ ಖಾದಿ ಮತ್ತು ಗ್ರಾಮೀಣ ಕೈಗಾರಿಕಾ ಮಂಡಳಿ ಹಾಗೂ ಭಾರತೀಯ ಫ್ಯಾಷನ್ ಡಿಸೈನ್ ಕೌನ್ಸಿಲ್ ಇತ್ತೀಚೆಗಷ್ಟೇ ಆಯೋಜಿಸಿದ್ದ ಫ್ಯಾಷನ್ ಶೋನಲ್ಲಿ ಖಾದಿಯ ವಿವಿಧ ರೂಪಗಳು ಅನಾವರಣಗೊಂಡಿದ್ದವು. ಇಲ್ಲಿ ರೋಹಿತ್ ಬಾಲ್, ಅನಾಮಿಕಾ ಖನ್ನಾ ಮತ್ತು ರಾಜೇಶ್ ಪ್ರತಾಪ್ ಸಿಂಗ್‍ರಂತಹ ಘಟಾನುಘಟಿ ಡಿಸೈನರ್‍ಗಳು ಡಿಸೈನ್ ಮಾಡಿದ್ದ ಸೀರೆ, ಲಂಗ ಸೇರಿದಂತೆ ಇತರೆ ಅತ್ಯಾಕರ್ಷಕ ಉಡುಗೆ ತೊಡುಗೆಗಳನ್ನು ಪ್ರದರ್ಶಿಸಲಾಗಿತ್ತು. ಕಾರ್ಯಕ್ರಮದ ಕೇಂದ್ರಬಿಂದುವಾಗಿ ಆಗಮಿಸಿದ್ದ ಬಾಲಿವುಡ್ ನಟಿ, ಫ್ಯಾಷನ್ ಬಿಂಬ ಸೋನಮ್ ಕಪೂರ್, ಐಷಾರಾಮಿ ಕಸೂತಿ ಕೆಲಸ ಮಾಡಲಾದ ಬಿಳಿಯ ಬಣ್ಣದ ಲೆಹೆಂಗಾ ಹಾಗೂ ಕಡುಗಪ್ಪು ಬಣ್ಣದ ಬ್ಲೌಸ್ ಹಾಗೂ ಶಾಲುಗಳನ್ನು ಧರಿಸಿ ಮಿಂಚಿದ್ದರು.
ಫ್ಯಾಷನ್ ಲೋಕದಲ್ಲಿ ಇತ್ತೀಚಿನ ದಿನಗಳಲ್ಲಿ ಖಾದಿ ಬಟ್ಟೆಗಳಲ್ಲೇ ಜನರನ್ನು ಅತಿ ಹೆಚ್ಚು ಸೆಳೆಯುತ್ತಿರುವ ದಿರಿಸು ಅಂದ್ರೆ, ಅದು ಮೋದಿ ಕುರ್ತಾ. ಪಕ್ಕದಮನೆ ಅಂಕಲ್‍ನಿಂದ ಹಿಡಿದು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾವರೆಗೂ ಎಲ್ಲರಿಗೂ ಮೋದಿ ಕುರ್ತಾ ಬೇಕು. ಅರ್ಧ ತೋಳಿನ, ಷರ್ಟ್‍ನಷ್ಟೇ ಉದ್ದದ ಈ ಕುರ್ತಾಗಳಿಗೆ ಈದ್ ಹಬ್ಬದ ಸಮಯದಲ್ಲಿ ಯುವಕರಿಂದಲೂ ಬೇಡಿಕೆ ಹೆಚ್ಚಾಗಿತ್ತು.
ಒಂದಂತೂ ನಿಜ, ಖಾದಿ ನಮ್ಮ ರಾಷ್ಟ್ರೀಯ ಪ್ರತೀಕವಾಗಿ ಹಾಗೂ ಉಡುಗೆಯಾಗಿ ಖಾದಿ ಮುಂದಿನ ವರ್ಷಗಳಲ್ಲೂ ಪ್ರಾಮುಖ್ಯತೆ ವಹಿಸೋದರಲ್ಲಿ ಎರಡು ಮಾತಿಲ್ಲ.