ಸಾಧನೆಯ ಹಿಂದಿದೆ ಬೆಟ್ಟದಂತಹ ಪರಿಶ್ರಮ- ಸಾಲ್ಸಾದಲ್ಲಿ ಗಿನ್ನೆಸ್ ದಾಖಲೆ ಬರೆದ ಸೂರ್ಯಕಾಂತ
ಟೀಮ್ ವೈ.ಎಸ್. ಕನ್ನಡ
ಇತ್ತೀಚಿನ ದಿನಗಳಲ್ಲಿ ನೃತ್ಯದ ಬಗ್ಗೆ ಯುವ ಜನತೆ ಆಸಕ್ತಿ ಹೆಚ್ಚಾಗುತ್ತಿದೆ. ಆರೋಗ್ಯದ ಜೊತೆಗೆ ದೇಹದ ಸೌಂದರ್ಯ ಗುಟ್ಟು ಕೂಡ ನೃತ್ಯದ ವಿವಿಧ ಫಾರ್ಮೆಟ್ಗಳಲ್ಲಿ ಅಡಗಿದೆ ಅನ್ನುವುದು ಅರ್ಥವಾಗುತ್ತಿದೆ. ಭರತನಾಟ್ಯ, ಕಥಕ್ ಕಳಿ ಯಂತಹ ಹಳೆಯ ನೃತ್ಯದ ವಿಧಗಳಿಗೆ ಸಾಕಷ್ಟು ಜನಪ್ರಿಯತೆ ಸಿಗುತ್ತಿದೆ. ಇದರ ಜೊತೆಗೆ ಕ್ಲಾಸಿಕಲ್ ಹಾಗೂ ವೆಸ್ಟರ್ನ್ ಡ್ಯಾನ್ಸ್ಗಳ ಬಗ್ಗೆಯೂ ಆಸಕ್ತಿ ಹೆಚ್ಚುತ್ತಿದೆ. ಆದ್ರೆ ಬೆಳಗಾವಿಯ ಯುವಕನೊಬ್ಬ ಸಾಲ್ಸಾ ನೃತ್ಯದಲ್ಲಿ ಗಿನ್ನೆಸ್ ದಾಖಲೆ ಬರೆದಿದ್ದಾನೆ.
ಡ್ಯಾನ್ಸ್ಗಳ ವಿವಿಧ ವಿಧಾನಗಳಲ್ಲಿ ಸಾಲ್ಸಾ ಕೂಡ ಒಂದು. ಸಾಲ್ಸಾದಲ್ಲಿ ಗಿನ್ನಿಸ್ ದಾಖಲೆ ಬರೆದಿದ್ದಾರೆ ಬೆಳಗಾವಿಯ ರವಿ ಸೂರ್ಯಕಾಂತ್ ಎಂಬ ಯುವಕ. ಬದುಕಿನಲ್ಲಿ ಸಾಕಷ್ಟು ಕಷ್ಟಗಳಿದ್ದರೂ ರವಿ ಸೂರ್ಯಕಾಂತ್ ಇಂತಹ ಸಾಧನೆ ಮಾಡಿರುವುದು ಕಿರುತೆರೆಯ ವಾಹಿನಿಯೊಂದರಲ್ಲಿ.
ಬದುಕಿನ ಕಷ್ಟಗಳನ್ನು ಬದಿಗೊತ್ತಿ ಸಾಧನೆಯ ಬೆನ್ನತ್ತಿದ ಬೆಳಗಾವಿಯ ಯುವಕ ರವಿ , ಡಾನ್ಸ್ನಲ್ಲಿ ಗಿನ್ನಿಸ್ ದಾಖಲೆ ಬರೆದು ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ. ಈಗಾಗಲೇ ಇವರು ನೃತ್ಯ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ರವಿ ಬಿಬಿಎ ಓದುತ್ತಿರುವಾಗಲೇ ತಂದೆಯನ್ನು ಕಳೆದುಕೊಂಡು ಕಷ್ಟದ ದಿನಗಳನ್ನು ಎದುರಿಸಿದವರು.ಹೀಗಾಗಿ 18ರ ವಯಸ್ಸಿನಲ್ಲೇ ಕುಟುಂಬ ನಿರ್ವಹಣೆಗಾಗಿ ಕಾಲೇಜು ದಿನಗಳಲ್ಲೇ ಬಟ್ಟೆ ಅಂಗಡಿ ತೆರೆದು ವ್ಯಾಪಾರ ಆರಂಭಿಸಿದರು. ಈ ಸಂದರ್ಭದಲ್ಲೆ ಅವರಿಗೆ ಡ್ಯಾನ್ಸ್ನಲ್ಲಿ ಆಸಕ್ತಿ ಹುಟ್ಟಿತು. ಬಟ್ಟೆ ವ್ಯಾಪಾರ ಕೈಹಿಡಿಯದ ಕಾರಣ ಕೆಲಸಕ್ಕಾಗಿ ಖಾಸಗಿ ಕಂಪನಿ ಸೇರಿದರು. ಈ ವೇಳೆ ಇಲ್ಯೂಷನ್ ಡಾನ್ಸ್ಗಾಗಿ ಚೆನ್ನೈನ ಕಿರುತೆರೆ ವಾಹಿನಿಯ ಕರೆ ರವಿಯ ಬದುಕನ್ನು ಬದಲಾಯಿಸಿತು.
"ನಾನು ಕಷ್ಟದಿಂದ ಈ ಮಟ್ಟಕ್ಕೆ ಬಂದಿದ್ದು, ಡ್ಯಾನ್ಸ್ ತರಬೇತಿ ಪಡೆಯಲು ಹಣದ ತೊಂದರೆ ಇರುವವರಿಗೆ ಉಚಿತವಾಗಿ ಟ್ರೈನಿಂಗ್ ನೀಡುತ್ತೇನೆ. ಅಲ್ಲದೇ ಮುಂದಿನ ದಿನಗಳಲ್ಲಿ ಕನ್ನಡ ಸೇರಿದಂತೆ ಇತರೆ ಭಾಷೆಗಳ ಚಿತ್ರಗಳಲ್ಲಿ ನೃತ್ಯ ನಿರ್ದೇಶನ ಮಾಡಲು ಆಸಕ್ತಿ ಇದೆ."
- ಸೂರ್ಯಕಾಂತ್ , ಗಿನ್ನೆಸ್ ದಾಖಲೆ ವೀರ
ಗಿನ್ನೆಸ್ ದಾಖಲೆ
ಸಾಲ್ಸಾವನ್ನು ಡ್ಯಾನ್ಸ್ ಪ್ರಕಾರದಲ್ಲೇ ವಿಶೇಷ ಎನ್ನಲಾಗುತ್ತಿದೆ. ಈಗ ರವಿ ದಾಖಲೆ ಮಾಡಿರುವುದು ಸಾಲ್ಸಾ ಮತ್ತು ವೆಸ್ಟರ್ನ್ ಮಿಶ್ರಿತವಾಗಿರುವ ಇಲ್ಯೂಷನ್‍ನಲ್ಲಿ. ಈ ಡ್ಯಾನ್ಸ್ ಸ್ಪರ್ಧೆಯಲ್ಲಿ ಸಹಕಲಾವಿದೆ ರಮಾ ಜತೆಗೂಡಿ ರವಿ ಅವರು 2015ರ ಏಪ್ರಿಲ್‍ನಲ್ಲಿ ಪ್ರದರ್ಶಿಸಿದ ಡಾನ್ಸ್ ಗಿನ್ನೆಸ್ ದಾಖಲೆ ಬರೆದಿದೆ. ಈ ಮೊದಲು ವಿದೇಶಿ ವ್ಯಕ್ತಿಯ ಹೆಸರಿನಲ್ಲಿದ್ದ ದಾಖಲೆ ಈಗ ನಮ್ಮ ರಾಜ್ಯದ ಪಾಲಾಗಿದೆ. ಬೆಳಗಾವಿಯ ಮರಾಠಾ ಮಂಡಳಿ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮದಲ್ಲಿ 9,500 ಕಲಾವಿದರಿಗೆ ತರಬೇತಿ ನೀಡಿ ಐದು ದೇಶಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕಿಸಿರುವುದೂ ಗಿನ್ನೆಸ್ ದಾಖಲೆಗೆ ಸೇರಿದೆ.
ಇದನ್ನು ಓದಿ: ನಿಮ್ಮಭಾಷೆಯಲ್ಲೇ ನಿಮ್ಮ ಸ್ಮಾರ್ಟ್ಫೋನ್- "ಇಂಡಸ್ ಆಪರೇಟಿಂಗ್ ಸಿಸ್ಟಮ್"ನಿಂದ “ಭಾರತ್” ಕ್ರಾಂತಿ
ಇದಲ್ಲದೇ ತಮಿಳು ರಿಯಾಲಿಟಿ ಶೋವೊಂದರಲ್ಲಿ ಟಾಪ್ 5 ಸ್ಥಾನ ಪಡೆದ ರವಿ , ಕೆನಡಾದಲ್ಲಿ ನಡೆದ ಗ್ರಾಂಡ್ ಫಿನಾಲೆಯಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡು 10 ಲಕ್ಷ ರೂ. ಬಹುಮಾನ ಪಡೆದುಕೊಂಡಿದ್ದರು. ಗಿನ್ನೆಸ್ ದಾಖಲೆಯ ಡಾನ್ಸ್ ಮತ್ತು ರಿಯಾಲಿಟಿ ಶೋ ಬಳಿಕ ರವಿ ಅವರಿಗೆ ಹಲವು ಅವಕಾಶಗಳ ಬಾಗಿಲು ತೆರೆದಿವೆ.
ಸಿನಿಮಾದಲ್ಲಿಯೂ ನಟನೆ
2016-17ನೇ ಸಾಲಿನ `ಮಲಯಾಳಂ ಫಿಲಂಫೇರ್ ಅವಾರ್ಡ್ ಶೋ'ದಲ್ಲಿ ಸಹಾಯಕ ಕೊರಿಯೋಗ್ರಾಫರ್ ಆಗಿ ಸಿಕ್ಕಿದ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡ ರವಿ, ತಮಿಳು ಮತ್ತು ಮಲಯಾಳಂ ಚಿತ್ರರಂಗದ ನಾಯಕರ ಜತೆಗೆ ಹೆಜ್ಜೆ ಹಾಕಿದ್ದಾರೆ. ಭಾರತೀಯ ಚಿತ್ರರಂಗದ ದಿಗ್ಗಜರಾದ ಮಣಿರತ್ನಂಅವರ ಬಹುಭಾಷೆಯ `ಕಾಟ್ರುಮ್ ವೆಳ್ಳಿಯಾಡು' ಚಲನಚಿತ್ರದಲ್ಲೂ ರವಿಕಾಂತ್ ನಟಿಸಿ ತಮ್ಮ ಪ್ರತಿಭೆ ತೋರಿದ್ದಾರೆ.
ನೃತ್ಯ ತರಬೇತಿ
ರವಿಯವರಿಗೆ ನೃತ್ಯದಲ್ಲಿದ್ದ ಜ್ಞಾನ, ಪ್ರತಿಭೆ ಮತ್ತು ಶ್ರಮವನ್ನು ಗುರುತಿಸಿದವರಲ್ಲಿ ತಮಿಳುನಾಡಿನ ನೃತ್ಯ ನಿರ್ದೇಶಕಿ ಕಲಾ ಮಾಸ್ಟರ್ ಮೊದಲಿಗರು. ಡಾನ್ಸ್ ಸಂದರ್ಭದಲ್ಲಿ ಕೈ ಮುರಿದುಕೊಂಡಾಗ ಭಾವ ರಾಘವೇಂದ್ರ ರಾಯ್ಕರ್ ಬೆನ್ನಿಗೆ ನಿಂತದ್ದನ್ನು ಬಿಟ್ಟರೆ ಸ್ವಂತ ಬಲದ ಮೂಲಕವೇ ರವಿ ಈ ಸಾಧನೆ ಮಾಡಿದ್ದಾರೆ. ಪ್ರತಿಷ್ಠಿತ ಸ್ಪರ್ಧೆಗಳಿಂದ ಬರುವ ನಗದು ಬಹುಮಾನವನ್ನು ಯುವ ಕಲಾವಿದರ ತರಬೇತಿಗಾಗಿ ಬಳಕೆ ಮಾಡುತ್ತಿದ್ದು `ಫಿನಿಕ್ಸ್ ಡಿ ಪ್ಲಾನೇಟ್' ಡಾನ್ಸ್ ತರಬೇತಿ ಸಂಸ್ಥೆ ಹುಟ್ಟುಹಾಕಿದ್ದಾರೆ. 300ಕ್ಕೂ ಹೆಚ್ಚು ಯುವಕರಿಗೆ ತರಬೇತಿ ನೀಡಿ 80ಕ್ಕೂ ಹೆಚ್ಚು ಕಲಾವಿದರನ್ನು ಕಿರುತೆರೆಯ ಡಾನ್ಸ್ ಸ್ಪರ್ಧೆಗಳಿಗೆ ಕಳುಹಿಸಿಕೊಟ್ಟಿದ್ದಾರೆ. ತರಬೇತಿ ಪಡೆಯಲು ಹಣವಿಲ್ಲದ ಪ್ರತಿಭೆಗಳಿಗೆ ಉಚಿತ ತರಬೇತಿ ನೀಡಿ ಪ್ರೇರೇಪಿಸುತ್ತಿದ್ದಾರೆ. ರವಿ ಸಾಧನೆ ಇತರರಿಗೆ ಮಾದರಿ ಆಗಿದ್ದರೆ, ಅವರ ಕಾರ್ಯ ಮೆಚ್ಚುಗೆಗೆ ಪಾತ್ರವಾಗುವಂತಹದ್ದು.
1. ಬುರ್ಜ್ ಖಲೀಪಾದ ಎತ್ತರಕ್ಕೆ ಚಾಲೆಂಜ್- ಮುಂಬೈನಲ್ಲಿ ತಯಾರಾಗಿದೆ ಸೂಪರ್ ಪ್ಲಾನಿಂಗ್
2. ಟ್ರೆಂಡಿಯಾಗಿದೆ, ಸಖತ್ ಟೇಸ್ಟೀಯಾಗಿದೆ- ಸಮ್ಮರ್ನಲ್ಲಿ ನೈಟ್ರೋಜನ್ ಐಸ್ಕ್ರೀಮ್ನದ್ದೇ ಮಾತು...!
3. ಕ್ಯಾನ್ಸರ್ ಪತ್ತೆ ಹಚ್ಚಲು ಹೊಸ ಉಪಕರಣ- ಮಹಾಮಾರಿಯನ್ನು ಓಡಿಸಲು ವೈದ್ಯಲೋಕದ ಪಣ