ಬಿಸಿಬಿಸಿ ಅಡಿಕೆ ಟೀ ರೆಡಿ...!

ಆರಾಧ್ಯ

ಬಿಸಿಬಿಸಿ ಅಡಿಕೆ ಟೀ ರೆಡಿ...!

Saturday January 23, 2016,

2 min Read

ಅಡಿಕೆ ಅಂದ್ರೆ ಬರೀ ತಾಂಬೂಲಕ್ಕೆ ಮಾತ್ರ ಸೀಮಿತ ಅಂತ ಇತ್ತು. ಕಾಲಕ್ರಮೇಣ ಅದು ತಿನ್ನುವ ವಸ್ತುವಷ್ಟೇ ಅಲ್ಲದೇ, ಹುಡುಗಿಯರ ಅಚ್ಚುಮೆಚ್ಚಿನ ಆಭರಣಗಳ ತಯಾರಿಗೂ ಬಳಕೆಯಾಯ್ತು ಕಿವಿಯೋಲೆ, ಬಳೆ, ಬ್ರೇಸ್ಲೆಟ್ ಹೀಗೆ ಅಡಿಕೆಯ ಮೇಲೆ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇವೆ. ಅಂಥದ್ದೊಂದು ವಿನೂತನ ಪ್ರಯೋಗಕ್ಕೊಂದು ಸೇರ್ಪಡೆ ಅಡಿಕೆ ಚಹಾ.

image


ಹೌದು ಚಾಕೊಲೇಟ್ ಆಯ್ತು ಈಗ ಅಡಿಕೆ ಚಹಾ ಸರದಿ. ಶಿವಮೊಗ್ಗದ ಮಂಡಗದ್ದೆ ಗ್ರಾಮದ ನಿವೇದನ್ ಅಡಿಕೆಯನ್ನು ತಿನ್ನುವ ಬದಲು ಕುಡಿಯುವ ವಸ್ತುವನ್ನಾಗಿ ಮಾಡಿದ್ದಾರೆ. ಅಡಿಕೆಯಲ್ಲಿ ಟ್ಯಾನಿಸ್ ಅಂಶ ಇದೆ ಎಂಬ ಮಾಹಿತಿಯೇ ನಿವೇದನ್ ಅವರಿಗೆ ಚಹಾ ತಯಾರಿಗೆ ಪ್ರೇರಣೆ ನೀಡಿದೆ. ಶಾಲಾ ದಿನದಿಂದಲು ಹೊಸ ಹೊಸ ಪ್ರಯೋಗಗಳನ್ನ ಮಾಡುತ್ತಿದೆ ನಿವೇದನ್ ಇನ್ನೊಂದು ಹೊಸ ಪ್ರಯೋಗಕ್ಕೆ ಕೈಹಾಕಿ ಯಶಸ್ವಿಯಾಗಿದ್ದಾರೆ.

ಕೃಷಿ ಕುಟುಂಬದ ನಿವೇದನ್ ಎನ್ ಇ ಎಸ್ ಫಾರ್ಮಸಿ ಕಾಲೇಜಿನಲ್ಲಿ ಪದವಿ ಪಡೆದು, ಆಸ್ಟ್ರೇಲಿಯಕ್ಕೆ ತೆರಳಿ ಮೆಲ್ಬೋರ್ನ್ ವಿವಿಯಲ್ಲಿ ಉತ್ಪಾದನೆ ಹಾಗೂ ಮಾರುಕಟ್ಟೆ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಅಲ್ಲಿಯೇ ಕಂಪನಿಯೊಂದರಲ್ಲಿ ಎರಡು ವರ್ಷ ಕೆಲಸ ಮಾಡಿದ್ದಾರೆ. ಕೆಳದ 11 ತಿಂಗಳಿಂದ ನಿವೇದನ್ ನಡೆಸಿದ ಸಂಶೋಧನೆಗೆ ಮೊದಲ ಹಂತದ ಗೆಲುವು ಸಿಕ್ಕಿದೆ. ನಿವೇದನ್ ಸಿದ್ಧಪಡಿಸಿದ ಚಹಾ ಪೌಡರ್ ಗೆ ಬೆಟ್ಟೆ ಅಡಕೆಯನ್ನು ಬಳಸಿದ್ದಾರೆ.. ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಗ್ರೀನ್ ಟೀ ಮಾದರಿಯಲ್ಲಿಯೇ ಈ ಚಹಾ ಪುಡಿಯನ್ನೂ ಸಿದ್ಧ ಮಾಡಲಾಗಿದೆ.. ಇದಕ್ಕೆ ಶೇ.80 ಅಡಕೆ ಮತ್ತು ಸುವಾಸನೆಗಾಗಿ ಶೇ.20 ಶುದ್ಧ ಗಿಡಮೂಲಿಕೆ ಉಪಯೋಗಿಸಿದ್ದಾರೆ..

ಇದೇ ತಿಂಗಳ 22ರಂದು ಲೋಕಾರ್ಪಣೆ ಗೊಂಡ ಈ ಚಹಾ ಪುಡಿ ಕರ್ನಾಟಕದಲ್ಲಿ ಮಾತ್ರ ಲಭ್ಯವಿರಲ್ಲಿದೆ.. ಮುಂದಿನ ಒಂದುವರೆ ತಿಂಗಳಲ್ಲಿ ದೇಶಾದ್ಯಂತ ಮಾರುಕಟ್ಟೆಗೆ ವಿಸ್ತರಿಸಲಾಗುವುದು.. ಇನ್ನು ವಿಷಯ ತಿಳಿದ ರೈತರು ನಮ್ಮ ಅಡಿಕೆಗೆ ಈ ಚಹಾದ ಬಳಕೆಯಿಂದ ಹೆಚ್ಚು ಬೆಲೆ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.. ಒಂದು ಕೆಜಿ ಅಡಿಕೆಯಲ್ಲಿ ಸುಮಾರು ಒಂದು ಸಾವಿರ ಕಪ್ ಚಹಾ ತಯಾರಿಸಬಹುದಾಗಿದ್ದು, ಪ್ರತಿ ಕಪ್ ಗೆ ಐದು ರೂಪಾಯಿ ವೆಚ್ಚ ಬೀಳಲಿದೆ..

image


ಈಗಾಗಲೇ ಅಡಿಕೆ ಬಳಕೆಯಿಂದ ಉಂಟಾಗಬಹುದಾದ ಆರೋಗ್ಯದ ಮೇಲಿನ ಪರಿಣಾಮಗಳನ್ನು ಅಧ್ಯಯನ ಮಾಡಿದ್ದಾರೆ. ಅಡಿಕೆ ಆಹಾರದ ಪಟ್ಟಿಯಲ್ಲಿ ಸೇರಿಲ್ಲ ಎಂಬುದನ್ನು ಮನಗಂಡಿರುವ ಅವರು ಆರೋಗ್ಯದ ಮೇಲೆ ಅಡಿಕೆ ಚಹಾ ಬೀರಬಹುದಾದ ಪರಿಣಾಮಗಳ ಕುರಿತು ಸಂಶೋಧನೆಗೆ ಹೆಚ್ಚು ಒತ್ತು ನೀಡಿದ್ದಾರೆ. ಗ್ರಾಹಕರ ಮನಸ್ಸಿಗೆ ಒಪ್ಪುವ, ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರದ ಉತ್ತಮ ಸ್ವಾದದ ಚಹಾ ಸಿದ್ಧಗೊಂಡಿದೆ.

ಇದು ನಮ್ಮದೇ ಚಹಾ ಎನ್ನುವ ಹೆಮ್ಮೆಯಿಂದ ಜನರು ಈ ಚಹಾವನ್ನು ಸ್ವೀಕರಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಆತ್ಮ ವಿಶ್ವಾಸದಿಂದ ಹೇಳುತ್ತಾರೆ ನಿವೇದನ್.