ಪ್ರಯೋಗಕ್ಕೆ ಮುನ್ನುಡಿ ಬರೆದ "ಬೊಂಬೆಯಾಟ"
ಟೀಮ್ ವೈ.ಎಸ್. ಕನ್ನಡ
ಕನ್ನಡ ಸಿನಿಮಾ ಎಂದರೆ ಗಾಂಧಿನಗರ.. ಗಾಂಧಿನಗರ ಎಂದರೆ ಕನ್ನಡ ಸಿನಿಮಾ. ಆದರೆ ಗಾಂಧಿನಗರದ ಸಿನಿಮಾ ಪಂಡಿತರ ಹೊರತಾಗಿ ಸಿನಿಮಾ ಪ್ರೀತಿ ಇರುವವರು ನಮ್ಮ ರಾಜ್ಯದಲ್ಲಿ ಸಾಕಷ್ಟು ಜನ ಸಿಗುತ್ತಾರೆ. ಅವರಲ್ಲಿ ವೈದ್ಯರು, ಎಂಜಿನಿಯರ್ಗಳು ಸೇರಿದಂತೆ ವಿವಿಧ ಸ್ತರಗಳಲ್ಲಿ ಕೆಲಸ ಮಾಡುವವರು ಇದ್ದಾರೆ. ಇಂಥಹ ಕೆಲ ಸಿನಿಮಾಸಕ್ತರು ಸೇರಿಕೊಂಡು ಬೆಂಗಳೂರು ಟಾಕೀಸ್ ಎಂಬ ನಿರ್ಮಾಣ ಸಂಸ್ಥೆಯನ್ನು ಕಟ್ಟಿಕೊಂಡಿದ್ದಾರೆ. ಈ ಸಂಸ್ಥೆಯ ಚೊಚ್ಚಲ ಕಾಣಿಕೆಯಾಗಿ ’ಬೊಂಬೆಯಾಟ’ ಎಂಬ ಮಕ್ಕಳ ಚಿತ್ರ ನಿರ್ಮಾಣಮಾಡಿತ್ತು. ಈ ಬೊಂಬೆಯಾಟ ಈಗ ನಮ್ಮ ದೇಶದಲ್ಲದಷ್ಟೇ ಅಲ್ಲದೇ ವಿದೇಶಗಳಲ್ಲೂ ಪ್ರದರ್ಶನಗೊಂಡು ಎಲ್ಲರ ಮೆಚ್ಚುಗೆ ಗಳಿಸುತ್ತಿದೆ.
ಕೆಲ ದಶಕಗಳಿಂದ ದೂರದರ್ಶನ, ಫೋಟೋಗ್ರಫಿ ಸೇರಿದಂತೆ ಮತ್ತಿತರ ಕ್ಷೇತ್ರಗಳಗಳಲ್ಲಿ ತೊಡಗಿಸಿಕೊಂಡಿದ್ದ ಕೆ.ಎನ್. ಮೋಹನ್ಕುಮಾರ್ ಎಂಬುವವರು ಸಂಭಾಷಣೆ ಚಿತ್ರಕಥೆಯೊಂದಿಗೆ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ನಿರೂಪಕಿಯಾಗಿ, ನಟಿಯಾಗಿ ಹೆಸರು ಗಳಿಸಿರುವ ಡಾ. ವತ್ಸಲಾ ಮೋಹನ್ ಅವರ ‘ಸಜ್ಜಾದನ ಗಣೇಶ’ ಎಂಬ ಕೃತಿಯಧಾರಿತ ಚಿತ್ರವಾದ ಈ ಬೊಂಬೆಯಾಟ ಮಕ್ಕಳ ಮುಗ್ಧ ಮನಸ್ಸಿನಲ್ಲಿರುವ ಮತೀಯ ಭಾವನೆಗಳು, ದೇವರ ಬಗೆಗಿನ ಅವರ ತಿಳುವಳಿಕೆಗಳನ್ನು ಬಿಂಬಿಸುತ್ತದೆ.
ಪ್ರಕೃತಿಯೇ ದೇವರು, ಉಳಿದೆಲ್ಲಾ ದೇವರುಗಳು ಮಾನವ ನಿರ್ಮಿತ. ಸಾಮಾಜಿಕ ಸಂತೋಷದಲ್ಲಿ ಎಲ್ಲರೂ ಒಟ್ಟಾಗಿ ಸಂಭ್ರಮಿಸುವಲ್ಲಿ ಪ್ರಕೃತಿಗೆ ಬೇಧಭಾವವಿಲ್ಲ. ಧರ್ಮ ಬೇಧವನ್ನು ಪ್ರಕೃತಿ ಸಹ ಸಹಿಸುವುದಿಲ್ಲ. ಸಂಭ್ರಮದ ಆಚರಣೆಯಲ್ಲಿ ಜಾತಿ ಧರ್ಮದ ಹಂಗಿಲ್ಲ ಎಂಬುದನ್ನು ಯಾವುದೇ ಕೋಮುಗೆ ಸಂಬಂಧಪಟ್ಟ ಪದವನ್ನು ಬಳಸದೇ ಸೂಕ್ಷ್ಮವಾದ ವಿಷಯನ್ನು ಈ ಚಿತ್ರದಲ್ಲಿ ಬೊಂಬೆಯಾಟದ ಮೂಲಕ ವಿಭಿನ್ನವಾಗಿ ಮತ್ತು ವಿಶಿಷ್ಟವಾಗಿ ಹೇಳಿದ್ದಾರೆ ಮೋಹನ್ಕುಮಾರ್. ದೇಶದಲ್ಲಿ ನಡೆಯುತ್ತಿರುವ ಅಸಹಿಷ್ಣುತೆ ಚರ್ಚೆ ಸಮಯದಲ್ಲಿ ಧರ್ಮ ಸಹಿಷ್ಣುತೆಯನ್ನುಜಗತ್ತಿಗೆ ಸಾರುವ ಸಣ್ಣ ಪ್ರಯತ್ನಕ್ಕೆ ನಿರ್ದೇಶಕರು ಕೈಹಾಕಿ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.
" ಈ ಸಿನಿಮಾದ ಮೂಲಕ ಪ್ರಕೃತಿಯೇ ದೇವರು, ಉಳಿದವೆಲ್ಲಾ ಮಾನವ ನಿರ್ಮಿತ ಎಂಬುದನ್ನು ತೋರಿಸಿದ್ದೇವೆ. ನಮ್ಮ ಚಿತ್ರದಲ್ಲಿ ಮಳೆ ಕೂಡಾ ಒಂದು ಪಾತ್ರವಾಗಿ ಧರ್ಮಗಳ ನಡುವೆ ಇದ್ದ ಕಂದಕವನ್ನು ತೊಡೆದು ಹಾಕುತ್ತದೆ. ಇದು ಮಕ್ಕಳ ಚಿತ್ರವಾದರೂ ಮಕ್ಕಳ ಮೂಲಕ ದೊಡ್ಡವರಿಗೆ ಎಲ್ಲ ಧರ್ಮವೂ ಒಂದೆ ಎಂಬ ಸಂದೇಶ ನೀಡಿದ್ದೇವೆ. ಬಹುಷಃ ಈ ಸಂದೇಶವೇ ನಮ್ಮ ಚಿತ್ರವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿರಬಹುದು."
-ಕೆ. ಎನ್. ಮೋಹನ್ಕುಮಾರ್, ನಿರ್ದೇಶಕ
ಬೊಂಬೆಯಾಟಕ್ಕೆ ಅಂತರಾಷ್ಟ್ರೀಯ ಮನ್ನಣೆ
90 ನಿಮಿಷದ ಈ ಚಿತ್ರ ಈಗಾಗಲೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಕರ್ನಾಟಕದ ಚಿತ್ರಪ್ರೇಮಿಗಳ ಮೆಚ್ಚುಗೆ ಗಳಿಸಿದೆ. ಅಷ್ಟೇ ಅಲ್ಲದೆ ಮೆಕ್ಸಿಕೋದಲ್ಲಿ ನಡೆಯುವ ಕಿಡ್ಸ್ ಫಸ್ಟ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ಕ್ಯಾಲಿಫೋರ್ನಿಯಾದ ಇಂಟರ್ನ್ಯಾಷನಲ್ ಇಂಡಿಪೆಂಡೆಂಟ್ ಫಿಲ್ಮ್ ಅವಾರ್ಡ್ಸ್, ಜರ್ಮನಿಯ ಡ್ಯೂಷ್ಲೆಂಡ್ನ ಫಿನೋವ್ ಫಿಲ್ಮ್ ಫೆಸ್ಟಿವಲ್ ಅಂಡ್ ಸ್ಕ್ರಿಪ್ಟ್ ಕಾಂಟೆಸ್ಟ್ ಮತ್ತು ಅಮೇರಿಕಾದ ನಸ್ಸಾವುನಲ್ಲಿ ನಡೆದ ಡೆಪ್ತ್ ಆಫ್ ಫೀಲ್ಡ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಈ ಪೈಕಿ ಕ್ಯಾಲಿಫೋರ್ನಿಯಾದದಲ್ಲಿ ಅತ್ಯುತ್ತಮ ಕಥಾಚಿತ್ರ-ಪ್ಲಾಟಿನಂ ಅವಾರ್ಡ್ಸ್ 2016, ಫಿನೋವ್ ಫಿಲ್ಮ್ ಫೆಸ್ಟಿವಲ್ ಅಂಡ್ ಸ್ಕ್ರಿಪ್ಟ್ ಕಾಂಟೆಸ್ಟ್, ಜರ್ಮನಿಯಲ್ಲಿ ಅತ್ಯುತ್ತಮ ಮಕ್ಕಳ ಮತ್ತು ಹದಿಹರೆಯದವರ ಕಥಾ ಚಿತ್ರ-೨೦೧೬ ಮತ್ತ್ತು ಅಮೆರಿಕಾದಲ್ಲಿ ಮಹೋನ್ನತ ಶ್ರೇಷ್ಠತಾ ಕಥಾ ಚಿತ್ರ ಎಂಬ ಪ್ರಶಸ್ತಿಗಳನ್ನು ಬೊಂಬೆಯಾಟ ತನ್ನದಾಗಿಸಿಕೊಂಡಿದೆ. ವಿಶೇಷ ಎಂದರೆ ಈ ಚಿತ್ರವನ್ನು ಅಮೇರಿಕಾದ ೫೦ ಕಡೆ ಈ ವರ್ಷ ಪೂರ್ತಿ ಸ್ಕ್ರೀನಿಂಗ್ ಮಾಡಲಾಗುತ್ತಿದೆ.
ಈ ಚಿತ್ರದಲ್ಲಿ ನಟಿಸಿರುವ ಬಾಲಕಲಾವಿದರೆಲ್ಲರೂ ಹೊಸಬರು. ಪ್ರೋಫೆಸರ್ ಎಂ ಎನ್ ಮುರುಳೀಧರ್, ವರ್ಷಾ, ಶ್ರೀನಾಥ್ ವಸಿಷ್ಠ, ಕಿಷನ್ ಪ್ರಭಾಕರ್, ಹರವುದೇವೆಗೌಡ, ಸೂರಜ್ ಬಿ ಆರಾಧ್ಯ, ಪ್ರೀತಮ್, ವಿವೇಕ್ ಸಿಂಗ್ರಿ, ವಿಕ್ರಮಾದಿತ್ಯ ಸೇರಿದಂತೆ ಮಕ್ಕಳ ದಂಡೆ ಚಿತ್ರದಲ್ಲಿದೆ.
ಚಿತ್ರಕ್ಕೆ ಡ್ರೋಣ್ ಕ್ಯಾಮರ ಬಳಕೆ
ಸಾಮಾನ್ಯವಾಗಿ ಕಮರ್ಷಿಯಲ್ ಸಿನಿಮಾಗಳಲ್ಲಿ ಬಳಸುವ ಡ್ರೋಣ್ ಕ್ಯಾಮಾರವನ್ನು ಬೊಂಬೆಯಾಟದಲ್ಲಿ ಸಮರ್ಥವಾಗಿ ಬಳಸಿಕೊಳ್ಳಲಾಗಿದೆ. ಚಿತ್ರ ಚಿತ್ರೀಕರಣ ಶ್ರವಣಬೆಳಗೊಳದ ಸುತ್ತಮುತ್ತ ನಡೆದಿದೆ. ಡ್ರೋಣ್ ಕ್ಯಾಮಾರದಲ್ಲಿ ಗೊಮ್ಮಟಗಿರಿಯ ಬೆಟ್ಟಗಳು ಅದ್ಭುತವಾಗಿ ಚಿತ್ರಿತವಾಗಿವೆ. ಚಿತ್ರತಂಡದ ಶ್ರಮ ಮತ್ತು ಮೋಹನ್ ಕುಮಾರ್ ಅವರ ಹೊಸ ಪ್ರಯೋಗದಿಂದಾಗಿ ಕನ್ನಡದ ಮಕ್ಕಳ ಚಿತ್ರವೊಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಕನ್ನಡದ ಕೀರ್ತಿ ಪತಾಕೆಯನ್ನು ವಿದೇಶಗಳಲ್ಲಿ ಹಾರುತ್ತಿದೆ.
2. ಮನೆ ಕೆಲಸಗಳನ್ನು ಮಾಡಿ ಮುಗಿಸುವ ಮಿತ್ರನ ಬಗ್ಗೆ ನಿಮಗೆಷ್ಟು ಗೊತ್ತು..?
3. ಜೇಬಲ್ಲಿ ದುಡ್ಡಿಲ್ಲ...ಮೊಬೈಲ್ನಲ್ಲಿ ಕರೆನ್ಸಿ ಇಲ್ಲ.. ಡೋಂಟ್ವರಿ ಉಚಿತವಾಗಿ ವೈ-ಫೈ ಬಳಸಿಕೊಳ್ಳಿ