ಅಂದು 150 ರೂಪಾಯಿ ಸಂಬಳ, ಇಂದು 150 ಕೋಟಿ ರೂಪಾಯಿ ವಹಿವಾಟು ನಡೆಸುವ ಚಾಣಕ್ಯ..!
ಟೀಮ್ ವೈ.ಎಸ್.ಕನ್ನಡ
ಕೆಲ ಬಾರಿ ಬಡತನ ಎನ್ನುವುದು ಸಾಕಷ್ಟು ಸಾಧನೆಗೆ ಮುನ್ನಡಿ ಬರೆದುಬಿಡುತ್ತದೆ. ಇಂದು ಬಡವರಾಗಿದ್ದವರು ಮುಂದೆ ಕೋಟ್ಯಾಧಿಪತಿಗಳಾಗಿ ಹೊರಹೊಮ್ಮಿದ್ದಾರೆ. ಆ ಸಾಲಿಗೆ ಈಗ ಹೊಸ ಸೇರ್ಪಡೆ ಎಂದರೆ ಪ್ರೇಮ್ ಗಣಪತಿ ಎಂಬ ಯುವಕ.
ಪ್ರೇಮ್ ಗಣಪತಿ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ತಾನು ಸಂಪಾದನೆ ಮಾಡಿ ತಂದು ಕೊಡದಿದ್ದರೆ ಮನೆ ನಡೆಯುದೇಇಲ್ಲ ಎನ್ನುವ ಪರಿಸ್ಥಿತಿ. ಇದನ್ನು ಅರಿತ ಪ್ರೇಮ್ ಹೆಚ್ಚಿಗೆ ಓದುವ ಹಂಬಲಿವಿದ್ದರೂ ವಿದ್ಯಾಭ್ಯಾಸವನ್ನು ಹದಿನೇಳನೇ ವಯಸ್ಸಿಗೆ ಮೊಟಕುಗೊಳಿಸಿ ಮುಂಬೈ ಎಂಬ ಮಹಾಸಾಗರಕ್ಕೆ ಬಂದು ತಲುಪಿದ್ದ.
ಮುಲತಃ ತಮಿಳುನಾಡಿನ ಪ್ರೇಮ್ಗಣಪತಿಗೆ ಯಾವುದೆ ಕಸುಬು ಗೊತ್ತಿರಲಿಲ್ಲ. ಆದರೆ ದುಡಿಯಬೇಕು ಎನ್ನುವ ಹಂಬಲ ಮಾತ್ರ ಹೆಚ್ಚಾಗಿತ್ತು. ಹಾಗಾಗಿ ಮುಂಬೈನಲ್ಲಿ ಬೇಕರಿಯೊಂದಕ್ಕೆ ಕೆಲಸಕ್ಕೆ ಸೇರಿಕೊಂಡ.
ಆ ಬೇಕರಿಯಲ್ಲಿ ಪ್ರೇಮ್ ಗಣಪತಿ ಮಾಡುತ್ತಿದ್ದುದ್ದು ಪಾತ್ರೆ ತೊಳೆಯುವ ಕೆಲಸ. ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಪ್ರೇಮ್ಗಣಪತಿಗೆ ಅಲ್ಲೇ ಮೂರು ಹೊತ್ತು ಊಟ ಜೊತೆಗೆ ಮಲಗಲು ಜಾಗವನ್ನು ಕೊಟ್ಟಿದ್ದರು. ಬೇಕರಿಯಲ್ಲಿನ ಸಂಬಳ ತಿಂಗಳಿಗೆ ನೂರೈವತ್ತು ರೂಪಾಯಿ.
ಆ ನೂರೈವತ್ತು ರೂಪಾಯಿಯಲ್ಲಿ ಮನೆಗೆ ಕಳುಹಿಸಿದರೆ ಯಾವುದೇ ಹಣ ಪ್ರೇಮ್ಗೆ ಉಳಿಯುತ್ತಿರಲಿಲ್ಲ. ಹಾಗಾಗಿ ಏನಾದರೂ ಸಾಧನೆ ಮಾಡಲೇಬೇಕು ಎಂದು ತಿರ್ಮಾನಿಸಿದ ಪ್ರೇಮ್ ಗಣಪತಿಗೆ ಇಂದು ಮೂವತ್ತೇಳು ವರ್ಷ.
ಬೇಕರಿಯಲ್ಲಿ ಪಾತ್ರೆ ತೊಳೆದುಕೊಂಡು ನೂರೈವತ್ತು ರೂಪಾಯಿಗಳಿಗೆ ತನ್ನ ವೃತ್ತಿ ಜೀವನ ಆರಂಭಿಸಿದ ಪ್ರೇಮ್ಗಣಪತಿ ಇಂದು ೧5೦ ಕೋಟಿ ರೂಪಾಯಿ ವ್ಯವಹಾರ ನಡೆಸುತ್ತಾರೆ ಎಂದರೆ ನೀವು ನಂಬಲೇ ಬೇಕು. ಅದು ಸಾಧ್ಯವಾಗಿದ್ದು ಅವರ ‘ದೋಸಾ ಪ್ಲಾಜ್ಹಾ’ ಕಂಪನಿಯಿಂದ.
ತಿಂಗಳಿಗೆ ನೂರೈವತ್ತು ರೂಪಾಯಿ ಸಂಬಳ ಪಡೆಯುತ್ತಿದ್ದ ಪ್ರೇಮ್ ಗಣಪತಿ ೧50 ಕೋಟಿ ರೂಪಾಯಿ ವಹಿವಾಟು ನಡೆಸುವ ದೋಸಾ ಪ್ಲಾಜಾ ಕಂಪೆನಿಯ ಒಡೆಯರಾಗಿದ್ದು ಸುಲಭದ ಹಾದಿಯಲ್ಲ. ಆ ಹಾದಿಯಲ್ಲಿ ಛಲ ಮತ್ತು ದುಡಿದು ಬದುಕು ಕಟ್ಟಿಕೊಳ್ಳಲೇಬೇಕು ಎನ್ನುವ ಹಂಬಲವಿತ್ತು.
ಗೆಳೆಯರ ಸಾಲದ ನೆರವು
ತಮಿಳುನಾಡಿನ ಪ್ರೇಮ್ ಗಣಪತಿ ಹತ್ತನೇ ತರಗತಿಗೆ ತಮ್ಮ ಓದನ್ನು ನಿಲ್ಲಿಸಿದವರು. ಮುಂಬೈನಲ್ಲಿ ಸಾಕಷ್ಟು ಸಂಕಷ್ಟಗಳನ್ನು ಅನುಭವಿಸಿದವರು. ಸುಮಾರು ಎರಡು ಮೂರು ವರ್ಷ ಬೇಕರಿ ಮತ್ತು ಅವರಿದ್ದ ಹೊಟೇಲ್ಗಳಲ್ಲಿ ಪ್ರತಿ ನಿತ್ಯ ತಟ್ಟೆ ಲೋಟ ತೊಳೆದರು. ನಂತರ ತಾನೇ ಒಂದು ಸಣ್ಣ ಉದ್ಯಮ ಪ್ರಾರಂಭಿಸಬೇಕು ಎನ್ನು ಅಭಿಲಾಷೆಯಿಂದ ಗೆಳೆಯರಿಂದ ಸಾಲ ಪಡೆದು ತಳ್ಳುವ ಗಾಡಿಯಲ್ಲಿ ದೋಸೆ ಮತ್ತು ಇಡ್ಲಿ ಮಾರಾಟ ಮಾಡುವ ವ್ಯಾಪಾರ ಆರಂಭಿಸಿದರು. ಫುಟ್ಫಾತ್ನಲ್ಲಿ ತಳ್ಳುವ ಗಾಡಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದರಿಂದ ಮುಂಬೈ ಪೊಲೀಸರು ಗಾಡಿಯನ್ನು ಆಗಾಗ ವಶಪಡಿಸಿಕೊಳ್ಳುತ್ತಿದ್ದರು.
ಪ್ರತಿ ಸಲವೂ ಪೊಲೀಸರಿಗೆ ಸಲಾಂ ಹೊಡೆದು ಹಣ ನೀಡಿ ಗಾಡಿ ಬಿಡಿಸಿಕೊಂಡು ಬರುತ್ತಿದ್ದರು. ಕಡೆಗೆ ಇನ್ನೊಂದಿಷ್ಟು ಸಾಲ ಮಾಡಿ ಪೊಲೀಸರ ಸಹವಾಸವೇ ಬೇಡ ಎಂದುಕೊಂಡು ಸಣ್ಣದೊಂದು ಕ್ಯಾಂಟೀನ್ ಆರಂಭಿಸಿದರು. ಸಣ್ಣ ಕ್ಯಾಂಟೀನ್ನಲ್ಲಿ ಉತ್ತಮ ರುಚಿ ಶುಚಿಯುಳ್ಳ ದೋಸೆ ಇಡ್ಲಿ ನೀಡುತ್ತಿದ್ದ ಪ್ರೇಮ್ಗಣಪತಿಯವರ ವ್ಯವಹಾರ ವ್ಯಾಪಾರ ದಿನೇದಿನೇ ದ್ವಿಗುಣಗೊಳ್ಳುತ್ತಾ ಬಂದಿತು. ಹೀಗೆ ಹಂತ ಹಂತವಾಗಿ ಮೇಲೆ ಬಂದ ಪ್ರೇಮ್ ಮುಂದೆ ದೊಡ್ಡದಾದ ದೋಸಾ ಪ್ಲಾಜಾ ಪ್ರಾರಂಭಿಸಿದರು. ಒಂದು ಪ್ಲಾಜಾ ಆರಂಭಿಸಿದಾಗ ಅಲ್ಲಿ ಆಗುತ್ತಿದ್ದ ವ್ಯಾಪಾರ ಮನಗಂಡ ಪ್ರೇಮ್ ಮುಂಬೈನ ಹಲವು ಭಾಗಗಳಲ್ಲಿ ಔಟ್ಲೆಟ್ಗಳನ್ನು ತೆರೆದರು. ಅಲ್ಲೂ ಭರ್ಜರಿ ವ್ಯಾಪಾರದಿಂದ ಪ್ರೇಮ್ ಗಣಪತಿ ಸಾಕಷ್ಟು ಹಣ ಗಳಿಸಲು ಆರಂಭಿಸಿದರು.
ವಿದೇಶಗಳಲ್ಲೂ ದೋಸಾಪ್ಲಾಜ್ಹಾ ಕಮಾಲ್
ಮುಂಬೈನಲ್ಲಿ ಆಗುತ್ತಿದ್ದ ವ್ಯಾಪಾರ ಕಂಡ ಪ್ರೇಮ್ಗಣಪತಿ ತಮ್ಮ ವಹಿವಾಟನ್ನು ದೇಶದ ವಿವಿಧ 45ನಗರಗಳಲ್ಲಿ ನಗರಗಳಲ್ಲಿ ಔಟ್ಲೆಟ್ಗಳನ್ನು ತೆರೆದರು. ಅಷ್ಟೇ ಅಲ್ಲದೇ ಒಮನ್, ಯುಎಇ ಮತ್ತು ನ್ಯೂಜಿಲೆಂಡ್ ದೇಶಗಳಲ್ಲೂ ದೋಸಾ ಪ್ಲಾಜಾ ಔಟ್ಲೆಟ್ಗಳನ್ನು ತೆರೆದು ಉತ್ತಮ ಲಾಭ ಗಳಿಸುತ್ತಿದ್ದಾರೆ.
ಒಟ್ಟಿನಲ್ಲಿ ದುಡಿದು ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲ ಇದ್ದರೆ ಏನನ್ನು ಬೇಕಾದರು ಸಾಧಿಸಬಹುದು ಎಂಬುದಕ್ಕೆ ಪ್ರೇಮ್ ಗಣಪತಿಯೇ ಜ್ವಲಂತ ಉದಾಹರಣೆಯಾಗಿ ನಿಲ್ಲುತ್ತಾರೆ.
1. "ಥಟ್ ಅಂತಾ ಹೇಳಿದ್ದಾರೆ" ಆರತಿ ಎಚ್ ಎನ್ ಅವರಿಗೆ ಈ ಬರಹವನ್ನ ಬಹುಮಾನವನ್ನಾಗಿ ನೀಡಲಾಗ್ತಿದೆ..!