ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಿರಿಧಾನ್ಯಗಳ ಕಲರವ...
ಟೀಮ್ ವೈ.ಎಸ್.ಕನ್ನಡ
ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೂರು ದಿನಗಳ ಸಾವಯವ ಮತ್ತು ರಾಷ್ಟ್ರೀಯ ಸಿರಿಧಾನ್ಯ ಮೇಳಕ್ಕೆ ಚಾಲನೆ ಸಿಕ್ಕಿದೆ. ಮೇಳದಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್, ರಾಜ್ಯ ಕೃಷಿ ಸಚಿವ ಕೃಷ್ಣಭೈರೇಗೌಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ರು. ಸಿರಿಧಾನ್ಯ ಮೇಳದಲ್ಲಿ ಮಾತನಾಡಿದ ಸಚಿವ ಕೃಷ್ಣಭೈರೇಗೌಡ, ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಸಿರಿಧಾನ್ಯ ಮೇಳವನ್ನು ಹಮ್ಮಿಕೊಂಡಿದೆ. ನಮ್ಮ ಸರ್ಕಾರ ಸಾವಯವ ಭಾಗ್ಯ ತಂದಿದೆ ಎಂದ್ರು. ರಾಜ್ಯದ 14,000 ಸಾವಯವ ರೈತರ ಒಕ್ಕೂಟ ನಿರ್ಮಿಸಿ ಅವರಿಗೆ ತರಬೇತಿ ನೀಡಲಾಗ್ತಿದೆ ಅಂತಾ ತಿಳಿಸಿದ್ರು. ರೈತರು ಮತ್ತು ಗ್ರಾಹಕರ ಮಧ್ಯೆ ನೇರ ಸಂಪರ್ಕ ಬೆಳೆಸುವುದೇ ನಮ್ಮ ಉದ್ದೇಶ ಎಂದ್ರು.
ಈಗಾಗ್ಲೇ ಬೇರೆ ಬೇರೆ ಕಂಪನಿಗಳು ರೈತರೊಂದಿಗೆ ಸಂಪರ್ಕ ಇಟ್ಟುಕೊಂಡು ವಹಿವಾಟು ನಡೆಸುತ್ತಿವೆ. ಸಿರಿಧಾನ್ಯ ಶತಮಾನದಿಂದ ಬಂದಿರುವ ಆಹಾರ. ನಮ್ಮ ಆಹಾರ ಶೈಲಿಯಿಂದ ಸಕ್ಕರೆ ಖಾಯಿಲೆ ಸೇರಿದಂತೆ ಅನೇಕ ರೋಗಗಳು ಆವರಿಸಿಕೊಳ್ಳುತ್ತಿವೆ. ಇದಕ್ಕೆಲ್ಲ ಸಿರಿಧಾನ್ಯವೇ ಮದ್ದು. ಬಡವರ ಆಹಾರವಾಗಿದ್ದ ಸಿರಿಧಾನ್ಯ ಈಗ ಶ್ರೀಮಂತರ ಆಹಾರವಾಗಿಬಿಟ್ಟಿದೆ. ಸಿರಿಧಾನ್ಯ ಭವಿಷ್ಯದ ಆಹಾರ ಅನ್ನೋದಂತೂ ಖಚಿತ ಅಂತಾ ಹೇಳಿದ್ರು. 2004ರಲ್ಲಿ ಎಚ್.ಕೆ.ಪಾಟೀಲರ ನೇತೃತ್ವದಲ್ಲಿ ಸಾವಯವ ನೀತಿ ಜಾರಿಗೆ ತರಲಾಗಿತ್ತು. ಆಗ ಒಂದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಾವಯವ ಕೃಷಿ ಮಾಡಲಾಗುತ್ತಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ ಈ ಪ್ರಮಾಣ 90 ಲಕ್ಷ ಹೆಕ್ಟೇರ್ ಗೆ ವಿಸ್ತರಿಸಿದೆ. ಆದ್ರೆ ತಾವು ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಹಾಗೂ ಬೆಲೆ ರೈತರಿಗೆ ಸಿಗದಿರುವುದು ವಿಪರ್ಯಾಸದ ಸಂಗತಿ ಅಂತಾ ಅಭಿಪ್ರಾಯಪಟ್ರು. ಅಕ್ಕಿ, ಗೋಧಿ ಬಂದ್ಲೇಲೆ ನಾವೆಲ್ಲ ಸಿರಿಧಾನ್ಯವನ್ನೇ ಮರೆತಿದ್ದೇವೆ. ಆದ್ರೆ ಸಿರಿಧಾನ್ಯ ಬೆಳೆಗಾರರನ್ನು ಪ್ರೋತ್ಸಾಹಿಸಲು ಕೇವಲ ಬೆಂಬಲ ಬೆಲೆ ನೀಡಿದ್ರೆ ಸಾಲದು ಅಂತಾ ಕೃಷ್ಣಭೈರೇಗೌಡ ಹೇಳಿದ್ರು.
ಮೇಳದಲ್ಲಿ ಮಾತನಾಡಿದ ಕೇಂದ್ರ ಸಚಿವ ಸದಾನಂದಗೌಡ, ಸಿರಿಧಾನ್ಯ ಕೃಷಿ ಮತ್ತು ಮಾರಾಟಕ್ಕೆ ಪ್ರೋತ್ಸಾಹ ನೀಡುತ್ತಿರುವುದು ರೈತರ ಭವಿಷ್ಯದೆಡೆಗೆ ಇಟ್ಟಿರುವ ದಿಟ್ಟ ಹೆಜ್ಜೆ ಅಂತಾ ಶ್ಲಾಘಿಸಿದ್ರು. ಆದ್ರೆ ರೈತರ ಸಮಸ್ಯೆಗಳಿಗೆ ಸಂಪೂರ್ಣ ಪರಿಹಾರ ಸಿಕ್ಕಿಲ್ಲ, ರೈತರು ಇದನ್ನು ಅನುತ್ಪಾದಕ ವಲಯ ಎಂದುಕೊಂಡಿದ್ದಾರೆ, ಶೇ.60ರಷ್ಟು ರೈತರು ಬೇರೆ ಕೃಷಿಯನ್ನೇ ಅವಲಂಬಿಸಿದ್ದಾರೆ ಅಂತಾ ಹೇಳಿದ್ರು. ಸಿರಿಧಾನ್ಯಗಳಿಗೆ ಉತ್ತಮ ಮಾರುಕಟ್ಟೆಯ ವ್ಯವಸ್ಥೆ ಆಗಬೇಕೆಂದು ಒತ್ತಾಯಿಸಿದ್ರು. ಸಿರಿಧಾನ್ಯಗಳು ಕಡಿಮೆ ನೀರಿನಲ್ಲಿ ಬೆಳೆಯುವ ಅಧಿಕ ಪೌಷ್ಠಿಕ ಆಹಾರ. ಸಾವಯವ ಕೃಷಿಯಿಂದ ಬರಡು ಭೂಮಿಗೂ ಜೀವ ಸಿಗುತ್ತದೆ. ರಾಜ್ಯ ಬರಗಾಲದಿಂದ ಕಂಗೆಟ್ಟಿರುವ ಸಂದರ್ಭದಲ್ಲಿ ಸಿರಿಧಾನ್ಯಗಳ ಸಾವಯವ ಕೃಷಿಗೆ ಕೃಷ್ಣಭೈರೇಗೌಡರು ಒತ್ತು ನೀಡಿರುವುದು ಉತ್ತಮ ನಡೆ ಅಂತಾ ಮೆಚ್ಚಿಕೊಂಡ್ರು. ರೈತರಿಗೆ ಉತ್ಪನ್ನಗಳನ್ನು ಕಾಪಾಡಿಕೊಳ್ಳಲು ಗೋದಾಮುಗಳ ವ್ಯವಸ್ಥೆ ಮಾಡಬೇಕು, ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು. ರೈತರ ಸಂರಕ್ಷಣೆಯೇ ಪ್ರಮುಖ ಆದ್ಯತೆಯಾಗಿದ್ದು, ಕೇಂದ್ರ ಸರ್ಕಾರ ಕೂಡ ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದೆ ಅಂತಾ ಸದಾನಂದಗೌಡ ಭರವಸೆ ನೀಡಿದ್ರು.
ಸಚಿವ ಅನಂತ್ ಕುಮಾರ್ ಕೂಡ ಸಾವಯವ ಸಿಸರಿಧಾನ್ಯಕ್ಕೆ ಸಬ್ಸಿಡಿ ಕೊಟ್ಟಿರುವ ಮೊದಲ ಸರ್ಕಾರ ಮೋದಿ ಸರ್ಕಾರ ಅಂತಾ ನೆನಪಿಸಿದ್ರು. ನನ್ನನ್ನು ರಸಗೊಬ್ಬರ ಸಚಿವ ಅಂತಾ ಪರಿಚಯಿಸಲಾಗ್ತಿದೆ, ಆದ್ರೆ ಕೆಮಿಕಲ್ ಮತ್ತು ಆರ್ಗೆನಿಕ್ ಎರಡನ್ನೂ ಒಳಗೊಂಡಿರುವ ಖಾತೆ ತಮ್ಮದು ಎಂದ್ರು. ಬೆಂಗಳೂರಲ್ಲಿ ಶತಮಾನದ ಹಿಂದೆ ಸಾವಯವ ಕೃಷಿ ಮಾಡಲಾಗುತ್ತಿತ್ತು, ಆದ್ರೆ ಈಗ ಎಲ್ಲರೂ ಆಧುನಿಕ ಕೃಷಿಯತ್ತ ಮುಖಮಾಡಿದ್ದಾರೆ. ಈ ಮೂಲಕ ಭೂಮಿಯ ಫಲವತ್ತತೆಯನ್ನು ಹಾಳು ಮಾಡಿದ್ದಾರೆ. ಸಾವಯವ ಕೃಷಿಯನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸಲು ದುಂಡು ಮೇಜಿನ ಸಭೆಯಲ್ಲಿ ಚರ್ಚಿಸಲಾಗುವುದು ಅಂತಾ ತಿಳಿಸಿದ್ರು. ಕರ್ನಾಟಕ ಸರ್ಕಾರ ಅಕ್ಕಿ ಬದಲು ಪಡಿತರ ಫಲಾನುಭವಿಗಳಿಗೆ ಗೋಧಿ ಮತ್ತು ರಾಗಿ ನೀಡ್ತಿದೆ. ಇದು ಬೇರೆ ರಾಜ್ಯದಲ್ಲೂ ಜಾರಿಯಾಗಬೇಕು ಅಂತಾ ಒತ್ತಾಯಿಸಿದ್ರು.
ಇದೇ ವೇಳೆ ಕೃಷಿ ಇಲಾಖೆ ಹೊರತಂದಿರುವ ಪುಸ್ತಕಗಳನ್ನು ಕೂಡ ಬಿಡುಗಡೆ ಮಾಡಲಾಯ್ತು. 'ಸಾವಯವ ಕೃಷಿ ನೀತಿ 2017' ಎಂಬ ಪುಸ್ತಕವನ್ನು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಬಿಡುಗಡೆ ಮಾಡಿದ್ರು. 'ಸಿರಿಧಾನ್ಯ ಖಾದ್ಯಗಳು' ಎಂಬ ಪುಸ್ತಕವನ್ನು ಅನಂತ್ ಕುಮಾರ್ ಲೋಕಾರ್ಪಣೆಗೊಳಿಸಿದ್ರು. ಒಟ್ನಲ್ಲಿ ರಾಷ್ಟ್ರೀಯ ಸಿರಿಧಾನ್ಯ ಮೇಳಕ್ಕೆ ಇವತ್ತು ಅದ್ಧೂರಿ ಚಾಲನೆ ಸಿಕ್ಕಿದೆ. ಇನ್ನೆರಡು ದಿನಗಳ ಕಾಲ ಮೇಳ ನಡೆಯಲಿದ್ದು, ಜನರಿಂದ ಯಾವ ರೀತಿ ರೆಸ್ಪಾನ್ಸ್ ಸಿಗಲಿದೆ ಅನ್ನೋದನ್ನು ಕಾದು ನೋಡಬೇಕು.
ಇದನ್ನೂ ಓದಿ...
ನಮ್ಮ ಬೆಂಗಳೂರಿನಲ್ಲಿ ಆರೋಗ್ಯದ ಬಗ್ಗೆ ಯಾಕಿಷ್ಟು ಕಾಳಜಿ ಅನ್ನೋದಿಕೆ ಇಲ್ಲಿದೆ ಕಾರಣಗಳು
ವಕೀಲ ವೃತ್ತಿಗೆ ಗುಡ್ ಬೈ ಹೇಳಿದ್ರು- ಸಾವಯವ ಕೃಷಿಕನಾಗಿ ಯಶಸ್ಸಿನ ಹೆಜ್ಜೆ ಇಟ್ರು..!