ಆನ್ಲೈನ್ ಟಿ-ಶರ್ಟ್ ಉದ್ಯಮದಲ್ಲಿ ನಷ್ಟ- ಆನ್ಲೈನ್ ಜ್ಯೋತಿಷಿಗಳ ವೆಬ್ ಪೋರ್ಟಲ್ನಲ್ಲಿ ಲಾಭ..!
ಉಷಾ ಹರೀಶ್
ಇತ್ತೀಚಿನ ದಿನಗಳಲ್ಲಿ ಯಾವ ಟಿವಿ ಚಾನೆಲ್ ನೋಡಿದರು ಜ್ಯೋತಿಷಿಗಳು ಕುಳಿತು ಜ್ಯೋತಿಷ್ಯ ಹೇಳುತ್ತಿರುತ್ತಾರೆ. ಟಿವಿಗಳ ಟಿಆರ್ಪಿಯನ್ನು ಈ ಜ್ಯೋತಿಷಿಗಳು ಹೆಚ್ಚಿಸಿದ್ದಾರೆ ಎಂದರೆ ತಪ್ಪಾಗಲಾರದು. ಈಗಂತೂ ರಸ್ತೆಗೊಬ್ಬರು ಜ್ಯೋತಿಷಿಗಳು ಹುಟ್ಟಿಕೊಂಡಿದ್ದಾರೆ. ಈ ಮೂಲಕ ಅವರ ಆದಾಯವು ಹೆಚ್ಚಾಗಿದೆ, ಟಿವಿಗಳ ಆದಾಯವು ಹೆಚ್ಚಾಗಿದೆ. ಆದರೆ ಇಲ್ಲೊಬ್ಬ ಯುವಕ ಜ್ಯೋತಿಷಿಗಳಿಗೆ ಸಂಬಂಧಪಟ್ಟ ಒಂದು ವೆಬ್ಪೋರ್ಟಲ್ ಆರಂಭ ಮಾಡಿ ದಿನವೊಂದಕ್ಕೆ ಲಕ್ಷ ರೂಪಾಯಿ ಸಂಪಾದಿಸುತ್ತಿದ್ದಾನೆ.
ಹೌದು ಚೆನ್ನೈ ಮೂಲದ ಎಂಜಿನಿಯರಿಂಗ್ ಪಧವಿಧರ ದಿನೂಪ್ ಎಂಬಾತನ ಈ ವೆಬ್ ಪೋರ್ಟ್ ನಿರ್ಮಾತ. ದಿನೂಪ್ ಇವರ ಕುಟುಂಬದಲ್ಲೇ ಪದವಿ ಪಡೆದ ಮೊದಲಿಗ. ಪಾಲಕರು ಮಗನಿಗೆ ಒಳ್ಳೆ ಕೆಲಸ ಸಿಗುತ್ತದೆ ಅಮೇರಿಕಾಗೊ ಅಥವಾ ಲಂಡನ್ಗೋ ಹೋಗಿ ಒಳ್ಳೆಯ ದುಡಿಮೆ ಮಾಡುತ್ತಾನೆ ಎಂಬ ಕನಸನ್ನು ಕಟ್ಟಿಕೊಂಡಿದ್ದರು. ಆದರೆ ದಿನೂಪ್ ದಾರಿ ಬೇರೆಯದೇ ಆಗಿತ್ತು.
ಇ-ಕಾಮರ್ಸ್ ಉದ್ಯಮದಲ್ಲಿ ನಷ್ಟ
ದಿನೂಪ್ಗೆ ಇ- ಕಾಮರ್ಸ್ನಲ್ಲಿ ಶಾಪಿಂಗ್ ಮಾಡುವುದು ಸಾಕಷ್ಟು ಪ್ರೀಯವಾದ ಕೆಲಸವಾಗಿತ್ತು. ಕೊನೆಗೆ ಅದೇ ವ್ಯಾಪಾರ ಮಾಡುವ ಹುಚ್ಚಿನಿಂದ ಒಂದು ಟಿ- ಶರ್ಟ್ ಮಾರುವ ಇ ಕಾಮರ್ಸ್ ಆನ್ ಲೈನ್ ತಾಣ ಪ್ರಾರಂಭ ಮಾಡಿ ಉದ್ಯಮ ಆರಂಭಿಸಿದ. ಆದರೆ ದಿನೂಪ್ನ ದುರಾದೃಷ್ಟವೆಂಬಂತೆ ಅವರು ಪ್ರಾರಂಭ ಮಾಡಿದ ಟಿ ಶರ್ಟ್ ಉದ್ಯಮ ನಷ್ಟವಾಯಿತು. ಕೊನೆಗೆ ಕಚೇರಿ ಬಾಡಿಗೆ ಕಟ್ಟಲು ಹಣವಿಲ್ಲದೇ, ಕಟ್ಟಡ ಮಾಲೀಕರಿಗೆ ನೀಡಿದ್ದ ಮುಂಗಡ ಹಣ ಪಡೆದು ಎಲ್ಲ ಸಾಲ ತೀರಿಸಿ ಬರಿಗೈಲಿ ಮನೆಗೆ ಮರಳಿದ್ದರು.
ಮಗನ ಸ್ಥಿತಿ ಕಂಡ ಪೋಷಕರು ಆತಂಕದಿಂದ ಮನೆಗೆ ಒಬ್ಬ ಜ್ಯೋತಿಷಿಯನ್ನು ಕರೆಸಿ ಕೇಳುತ್ತಿದ್ದರು, ಇದ್ದಕ್ಕಿದ್ದ ಹಾಗೆ ದಿನೂಪ್ ಕಣ್ಣಲ್ಲಿ ನೂರು ವೋಲ್ಟ್ ಬಲ್ಬ್ ಬೆಳಗಿದಂತೆ ಒಂದು ಐಡಿಯಾ ಬಂತು. ಆ ಐಡಿಯಾದ ಪರಿಣಾಮವೇ ’ಮಾಂಕ್ವ್ಯಾಸ್’
ಏನಿದು ಮಾಂಕ್ವ್ಯಾಸ್..?
ಇದೊಂದು ಆನ್ಲೈನ್ ಜ್ಯೋತಿಷ್ಯದ ತಾಣ, ತನ್ನ ನಷ್ಟದ ಬಗ್ಗೆ ಒಬ್ಬ ಜ್ಯೋತಿಷಿಯ ಬಳಿ ಭವಿಷ್ಯ ಕೇಳುತ್ತಿದ್ದ ತನ್ನ ತಂದೆ ತಾಯಿಯನ್ನು ಕಂಡ ದಿನೂಪ್ ಮೊದಲು ಸಾಕಷ್ಟು ಜ್ಯೋತಿಷಿಗಳನ್ನು ಸಂಪರ್ಕ ಮಾಡಿ ತನ್ನ ಯೋಜನೆ ಬಗ್ಗೆ ವಿವರಿಸಿ ಎಲ್ಲ ಜ್ಯೋತಿಷಿಗಳು ಒಮ್ಮೆಲೆ ಲಭ್ಯವಾಗುವಂತೆ ವ್ಯವಸ್ಥೆ ಮಾಡಿದ್ದಾರೆ. ಈ ವೆಬ್ ಪೋರ್ಟ್ನಲ್ಲಿ ಗ್ರಾಹಕರು ನೇರವಾಗಿ ಮಾತನಾಡುವ ವಿಡಿಯೋ ಚಾಟ್ ಮಾಡುವ ವ್ಯವಸ್ಥೆ ಕಲ್ಪಿಸಿದರು ದಿನೂಪ್ ಕಲೇರಿ. ಈ ವೆಬ್ಪೋರ್ಟ್ನಿಂದಾಗಿ ಸಾಕಷ್ಟು ಜನರ ಸಮಸ್ಯೆಗೆ ಪರಿಹಾರವೂ ದೊರೆತಿದೆ. ನಷ್ಟದಲ್ಲಿದ್ದ ದಿನೂಪ್ ಅವರ ಜೇಬು ತುಂಬಿದೆ. ಸೋಲಿನಿಂದ ರೆಕ್ಕೆ ಮುರಿದ ಹಕ್ಕಿಯಂತಾಗಿದ್ದ ದಿನೂಪ್ ಅವರು ಫಿನಿಕ್ಸ್ ಹಕ್ಕಿಯಂತೆ ಚೇತರಿಸಿಕೊಳ್ಳುತ್ತಾರೆ ಎಂದು ಯಾರು ಎಣಿಸಿರಲಿಲ್ಲ. ಆದರೆ ಅದೇ ಸೋಲಿನಿಂದ ಕಲಿತ ಪಾಠವೇ ದಿನೂಪ್ ಅವರನ್ನು ಯಶಸ್ವಿ ಉದ್ಯಮಿಯನ್ನಾಗಿಸಿದೆ.