ಮಗುವಿನ ಲಾಲನೆ ಪಾಲನೆಗಾಗಿ `ಬೇಬಿ ಬೆರ್ರಿ' ಮಕ್ಕಳ ಅಗತ್ಯ ಪೂರೈಸಲು ಹೆತ್ತವರಿಗೆ ದಾರಿದೀಪ

ಟೀಮ್​​ ವೈ.ಎಸ್​. ಕನ್ನಡ

17th Dec 2015
  • +0
Share on
close
  • +0
Share on
close
Share on
close


ಪೋಷಕರಿಗೆ ಯಾರ ಸಲಹೆ ಕೇಳಬೇಕು ಅನ್ನೋ ಗೊಂದಲ. ಆನ್‍ಲೈನ್‍ನಲ್ಲಿ ಏನೇನು ಮಾಹಿತಿ ಇದೆ ಅನ್ನೋದನ್ನು ನೋಡುವುದೋ ಅಥವಾ ಹಿರಿಯರು ಹೇಳಿದಂತೆ ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿದ್ದನ್ನೇ ಪಾಲಿಸುವುದೋ ಅನ್ನೋ ಗೊಂದಲದಲ್ಲಿ ಹೆತ್ತವರು ಒದ್ದಾಡ್ತಾರೆ. ರಾತ್ರಿ ಪೂರಾ ಮಕ್ಕಳು ರಚ್ಚೆ ಹಿಡಿದ್ರೆ, ಹಾಲು ಕುಡಿಯಲು ನಿರಾಕರಿಸಿದ್ರೆ, ಅಥವಾ ಜ್ವರ ಇದ್ರೆ ಹೆತ್ತವರಲ್ಲಿ ಆತಂಕ ಹೆಚ್ಚಾಗುತ್ತೆ. ಆ ಸಮಯದಲ್ಲೆಲ್ಲ ಪೋಷಕರು ಒತ್ತಡಕ್ಕೆ ಒಳಗಾಗಬಾರದು, ಅದೆಲ್ಲ ಒಂದು ಹೊಸ ಅನುಭವ ಎಂದುಕೊಳ್ಳಬೇಕು. ಈ ನಿಟ್ಟಿನಲ್ಲಿ `ಬೇಬಿ ಬೆರ್ರಿ' ಹೆತ್ತವರಿಗೆ ನೆರವಾಗುತ್ತಿದೆ.

image


ಏನಿದು `ಬೇಬಿ ಬೆರ್ರಿ'..?

ಮಕ್ಕಳ ಸಂಪೂರ್ಣ ಬೆಳವಣಿಗೆ ಬಗ್ಗೆ ಗಮನಹರಿಸಲು `ಬೇಬಿ ಬೆರ್ರಿ' ಪೋಷಕರಿಗೆ ಸಹಾಯ ಮಾಡುತ್ತಿದೆ. ಮಕ್ಕಳಿಗೆ ಕೊಡಬೇಕಾದ ಲಸಿಕೆಗಳ ಪಟ್ಟಿ, ಬೆಳವಣಿಗೆಯ ಮೈಲಿಗಲ್ಲುಗಳು, ಅಗತ್ಯ ಮಾಹಿತಿ, ವಿವಿಧ ಉಪಕರಣಗಳು ಎಲ್ಲವನ್ನೂ `ಬೇಬಿ ಬೆರ್ರಿ' ಒದಗಿಸುತ್ತದೆ. ಮಕ್ಕಳಿಗಾಗಿ ಯಾವ್ಯಾವ ಉತ್ಪನ್ನಗಳನ್ನು ಖರೀದಿಸಬೇಕು, ಯಾವ ರೀತಿಯ ಸೇವೆಯ ಅಗತ್ಯವಿದೆ ಎಂಬ ಬಗ್ಗೆ ಹೆತ್ತವರಿಗೆ ಮನವರಿಕೆ ಮಾಡಿಕೊಡುತ್ತದೆ. `ಬೇಬಿ ಬೆರ್ರಿ' ಆ್ಯಪ್ ಮಕ್ಕಳ ದೈಹಿಕ, ಭಾವನಾತ್ಮಕ ಬೆಳವಣಿಗೆ ಬಗ್ಗೆ ಗಮನ ಇಡುತ್ತದೆ. ವೈಯಕ್ತಿಕವಾದ ಇನ್‍ಪುಟ್‍ಗಳನ್ನು, ಸಂದರ್ಭಕ್ಕೆ ತಕ್ಕಂತಹ ಮಾಹಿತಿಗಳನ್ನು ಎಮ್‍ಬ್ರ್ಯೋ ಶಿಫಾರಸು ಎಂಜಿನ್ ಮೂಲಕ ಪೋಷಕರಿಗೆ ಕಳುಹಿಸಿಕೊಡುತ್ತದೆ. ಇದು ಮಗುವಿನ ವಯಸ್ಸು, ಲಿಂಗ, ಹವ್ಯಾಸ, ಕೌಶಲ್ಯ ಹಾಗೂ ಹೆತ್ತವರ ಜೀವನ ಶೈಲಿಯನ್ನು ಕೂಡ ಗಮನದಲ್ಲಿಟ್ಟುಕೊಳ್ಳುತ್ತೆ. ಮಕ್ಕಳಿಗೆ ಲಸಿಕೆ ಹಾಕಿಸುವ ಸಮಯ ಹತ್ತಿರ ಬಂದಾಗ ಪೋಷಕರನ್ನು ಈ ಆ್ಯಪ್ ಎಚ್ಚರಿಸುತ್ತದೆ, ಅಷ್ಟೇ ಅಲ್ಲ ಆ ಲಸಿಕೆಯಿಂದಾಗಬಹುದಾದ ಸೈಡ್ ಎಫೆಕ್ಟ್​ಗಳ ಬಗೆಗೂ ಮಾಹಿತಿ ನೀಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಮಾಣದ ಜೊತೆಗೆ ಪೋಷಕರು ತಮ್ಮ ಮಕ್ಕಳ ಬೆಳವಣಿಗೆಯನ್ನು ಹೋಲಿಕೆ ಮಾಡಬಹುದು. ಮಗುವಿನ ಕಾಳಜಿ ಬಗ್ಗೆ ಸಂಪೂರ್ಣ ಟಿಪ್ಸ್ ಪಡೆಯಬಹುದು.

ಇದುವರೆಗಿನ ಕಥೆ...

`ಕೇರ್‍ಬ್ರಹ್ಮ', `ಬೇಬಿ ಬೆರ್ರಿ'ಯ ಮಾತೃ ಸಂಸ್ಥೆ. ಬಾಬಾ ವೆಂಕಟಾಚಲಮ್ ಹಾಗೂ ಸುಭಾಷಿಣಿ ಸುಬ್ರಮಣ್ಯಂ ಜೊತೆಯಾಗಿ ಈ ಸಂಸ್ಥೆಯನ್ನು ಕಟ್ಟಿದ್ದಾರೆ. ತಾವೊಬ್ಬ ಸೂಪರ್ ಅಮ್ಮ ಅನ್ನೋ ಭಾವನೆ ಸುಭಾಷಿಣಿ ಅವರಲ್ಲಿತ್ತು. ಮಗುವಿನ ಆರೋಗ್ಯ, ಬೆಳವಣಿಗೆ ಎಲ್ಲದರ ಬಗ್ಗೆಯೂ ತಾನು ಸಂಪೂರ್ಣ ಕಾಳಜಿ ತೆಗೆದುಕೊಂಡಿದ್ದೇನೆ ಅಂತಾ ಅವರು ಅಂದುಕೊಂಡಿದ್ರು. ಆದ್ರೆ ಒಮ್ಮೆ ಇದ್ದಕ್ಕಿದ್ದಂತೆ ಮಗಳಿಗೆ ಸಿಡುಬು ಕಾಣಿಸಿಕೊಂಡಿತ್ತು. ಚಿಕನ್ ಫಾಕ್ಸ್ ಲಸಿಕೆಯನ್ನು ಸುಭಾಷಿಣಿ ಮಗಳಿಗೆ ಹಾಕಿಸದೇ ಇದ್ದಿದ್ದೇ ಇದಕ್ಕೆ ಕಾರಣ ಅನ್ನೋದನ್ನು ವೈದ್ಯರು ಸ್ಪಷ್ಟಪಡಿಸಿದ್ರು. ಯಾಕಂದ್ರೆ ಸರ್ಕಾರ ಮಕ್ಕಳಿಗೆ ಹಾಕಿಸಲೇಬೇಕಾದ ಲಸಿಕೆಗಳ ಪಟ್ಟಿ ತಯಾರಿಸಿದ್ದು, ಅದರಲ್ಲಿ ಸಿಡುಬಿನ ಲಸಿಕೆ ಕೂಡ ಒಂದು. ಶಾಲೆಯಲ್ಲಿ ಯಾರಿಗೋ ತಗುಲಿದ್ದ ಸಿಡುಬು ಸುಭಾಷಿಣಿ ಪುತ್ರಿಗೂ ಬಂದಿತ್ತು.

ಪೋಷಕರಿಗೆ ಈ ಬಗ್ಗೆ ಮಾಹಿತಿಯ ಕೊರತೆಯಿದೆ. ಅವರಲ್ಲಿ ಲಸಿಕೆಗಳ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಲಸಿಕೆ ಹಾಕಿಸುವ ಸಮಯ ಬಂದಾಗ ಅವರನ್ನು ಎಚ್ಚರಿಸುವ ಕೆಲಸ ಆಗಬೇಕಿದೆ ಅನ್ನೋದು ಸುಭಾಷಿಣಿ ಅವರಿಗೆ ಅರಿವಾಗಿತ್ತು. ವಾಸ್ತವ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಅವರು ಶಿಶು ತಜ್ಞರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ರು. ನಮ್ಮ ಊಹೆಯನ್ನು ವೈದ್ಯರು ಕೂಡ ದೃಢಪಡಿಸಿದ್ರು ಎನ್ನುತ್ತಾರೆ `ಬೇಬಿ ಬೆರ್ರಿ'ಯ ಸಿಎಂಓ ದೇವ್ ವಿಗ್. ಇಂತಹ ಮಾಹಿತಿಗಳನ್ನು ಪಡೆದುಕೊಳ್ಳಲು ಹೆತ್ತವರು ವೈದ್ಯರನ್ನು ಭೇಟಿಯಾಗುವುದು ಕೂಡ ಅಪರೂಪ. ಕೆಲವೊಮ್ಮೆ ಮಹತ್ವದ ಚೆಕ್‍ಅಪ್‍ಗಳನ್ನೇ ತಪ್ಪಿಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಪೋಷಕರಿಗೆ ವೈಯಕ್ತಿಕವಾದ, ನಿಖರ ಮಾಹಿತಿಯನ್ನು ಒದಗಿಸುವ ಅಗತ್ಯವನ್ನು ಸುಭಾಷಿಣಿ ಹಾಗೂ ಬಾಬಾ ವೆಂಕಟಾಚಲಮ್ ಮನಗಂಡರು.

2014ರ ಅಕ್ಟೋಬರ್‍ನಲ್ಲಿ `ಬೇಬಿ ಬೆರ್ರಿ' ಆ್ಯಪ್ ಕಾರ್ಯಾರಂಭ ಮಾಡಿದೆ. ತಮ್ಮ ಉತ್ಪನ್ನ, ಪರವಾದ ಸಕ್ರಿಯ ವಾಹಿನಿಯಾಗಬೇಕೇ ಹೊರತು ಪ್ರತಿಕ್ರಿಯಾತ್ಮಕ ವಾಹಿನಿಯಾಗಬಾರದೆಂದು ಬಯಸಿದ್ದ ಸುಭಾಷಿಣಿ, ಇದಕ್ಕೆ ಅಪ್ಲಿಕೇಷನ್ ಬೆಸ್ಟ್ ಆಯ್ಕೆಯೆಂದು ತೀರ್ಮಾನಿಸಿದ್ರು. ತಂತ್ರಜ್ಞಾನ ಹಿನ್ನೆಲೆಯುಳ್ಳ 6 ಸದಸ್ಯರು ಇಲ್ಲಿ ಕೆಲಸ ಮಾಡ್ತಿದ್ದಾರೆ, ಇನ್ನಿಬ್ಬರು ಲಾಜಿಸ್ಟಿಕ್ಸ್ ವಿಭಾಗವನ್ನು ನಿಭಾಯಿಸ್ತಾರೆ. ಸಂಸ್ಥೆಯ ಸಿಇಓ ಬಾಲಾ ಅವರಿಗೆ ಪ್ರಾಡಕ್ಟ್ ಎಂಜಿನಿಯರಿಂಗ್ ವಿಭಾಗದಲ್ಲಿ 20 ವರ್ಷ ಕೆಲಸ ಮಾಡಿದ ಅನುಭವವಿದೆ. ಸಿಓಓ ಸುಭಾಷಿಣಿ ಕೂಡ ಆರೋಗ್ಯ ಹಾಗೂ ಇ-ಕಾಮರ್ಸ್ ಉತ್ಪನ್ನ ಕ್ಷೇತ್ರಗಳಲ್ಲಿ 17 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದಾರೆ. ಇನ್ನು ದೇವ್ ವಿಗ್ ಅವರು ಮೊಬೈಲ್ ವಲಯದ ಸೇಲ್ಸ್ ಹಾಗೂ ಮಾರ್ಕೆಟಿಂಗ್ ವಿಭಾಗದಲ್ಲಿ ನಿಪುಣರು, ರಾಷ್ಟ್ರೀಯ-ಅಂತರಾಷ್ಟ್ರೀಯ ಮಟ್ಟದಲ್ಲಿ 11 ವರ್ಷ ಸೇವೆ ಸಲ್ಲಿಸಿದ್ದಾರೆ.

ಭಾರತದ ಮೆಟ್ರೋ ಪಾಲಿಟಿನ್ ಸಿಟಿಗಳು, ಸಣ್ಣ ಸಣ್ಣ ನಗರಗಳು ಹಾಗೂ ಪಟ್ಟಣಗಳಲ್ಲಿರುವ ಹೊಸ ಪೋಷಕರನ್ನು ಸೆಳೆಯುವುದು `ಬೇಬಿ ಬೆರ್ರಿ'ಯ ಉದ್ದೇಶ. ಆನ್‍ಲೈನ್ ಮತ್ತು ಆಫ್‍ಲೈನ್ ಎರಡೂ ವಿಭಾಗಗಳಲ್ಲೂ ಮಾರ್ಕೆಟಿಂಗ್ ಮಾಡುವ ಮೂಲಕ ಅವರು ಬಳಕೆದಾರರ ಪ್ರತಿಕ್ರಿಯೆಯನ್ನು ಪಡೆದಿದ್ದಾರೆ.

`ಬೇಬಿ ಬೆರ್ರಿ'ಹೇಗೆ ಕಾರ್ಯನಿರ್ವಹಿಸುತ್ತೆ?

ಪೋಷಕರು `ಬೇಬಿ ಬೆರ್ರಿ' ಆ್ಯಪ್‍ನಲ್ಲಿ ಲಾಗ್ ಇನ್ ಆಗಬೇಕು. ತಮ್ಮ ಮಗುವಿನ ಹುಟ್ಟಿದ ದಿನಾಂಕ, ಜನ್ಮ ಸಮಯದಲ್ಲಿದ್ದ ತೂಕ, ಎತ್ತರ, ಲಿಂಗ, ರಕ್ತದ ಗುಂಪು ಇವೆಲ್ಲವನ್ನೂ ಭರ್ತಿ ಮಾಡಬೇಕು. ಇದನ್ನು ಆಧರಿಸಿ `ಬೇಬಿ ಬೆರ್ರಿ', ಮಕ್ಕಳಿಗೆ ಸಂಬಂಧಿಸಿದ ಉತ್ಪನ್ನ ಮತ್ತು ಸೇವೆ ಪೂರೈಕೆದಾರರನ್ನು ಪೋಷಕರ ಜೊತೆ ಸಂಪರ್ಕಿಸುತ್ತದೆ. ಅಷ್ಟೇ ಅಲ್ಲ ವೈದ್ಯರು, ಪೌಷ್ಠಿಕಾಂಶ ತಜ್ಞರು ಮತ್ತು ಉಳಿದ ಎಕ್ಸ್​ಪರ್ಟ್​ಗಳ ಅಗತ್ಯವಿದ್ದಲ್ಲಿ ಪೋಷಕರಿಗೆ ಅವರನ್ನು ಸಂಪರ್ಕಿಸಲು ಆ್ಯಪ್ ಸಹಾಯ ಮಾಡಲಿದೆ.

ಬೇಬಿ ಬೆರ್ರಿ ಅನೇಕ ಆದಾಯ ವಾಹಿನಿಗಳನ್ನು ಹೊಂದಿದೆ. `ಬೆರ್ರಿ ಕಾರ್ಟ್' ಹೆಸರಿನ ಇ-ಕಾಮರ್ಸ್ ಮಳಿಗೆ, ಮಕ್ಕಳಿಗೆ ಬೇಕಾದ ಅಗತ್ಯ ವಸ್ತುಗಳು ಮತ್ತು ಆಟಿಕೆಗಳನ್ನು ಮಾರಾಟ ಮಾಡುತ್ತಿದೆ. ತಮ್ಮ ಏರಿಯಾದಲ್ಲಿರುವ ವೈದ್ಯರು ಅಥವಾ ಕ್ಲಿನಿಕ್‍ಗಳನ್ನು ಕೂಡ ಪೋಷಕರು ಪತ್ತೆ ಮಾಡಬಹುದು. ಬೇಬಿ ಕೇರ್ ಬ್ರಾಂಡ್ಸ್, ದೊಡ್ಡ ಡಾಟಾ ಸೇವೆಗಳು ಮತ್ತು ಆರೋಗ್ಯ ಸಂಬಂಧಿತ ಸೇವೆಗಳನ್ನು ನೀಡುತ್ತಿರುವವರೊಂದಿದೆ `ಬಿ2ಬಿ' ಒಪ್ಪಂದ ಮಾಡಿಕೊಂಡು `ಬೇಬಿ ಬೆರ್ರಿ' ತಾಯಂದಿರು ಹಾಗೂ ಮಕ್ಕಳಿಗೆ ವ್ಯಾಲ್ಯೂ ಆ್ಯಡೆಡ್ ಸೇವೆಗಳನ್ನು ನೀಡ್ತಾ ಇದೆ.

ವಲಯ ಅವಲೋಕನ ಮತ್ತು ಭವಿಷ್ಯದ ಯೋಜನೆ

ದೇವ್ ಅವರ ಅಂದಾಜಿನ ಪ್ರಕಾರ ಬೇಬಿ ಕೇರ್ ಮತ್ತು ಅದಕ್ಕೆ ಸಂಭಂದಿಸಿದ ಸೇವೆಗಳ ಬಳಕೆದಾರರ ಸಂಖ್ಯೆ 50 ಮಿಲಿಯನ್‍ನಷ್ಟಿದೆ. ಸದ್ಯ ಭಾರತದಲ್ಲಿ 18 ಬಿಲಿಯನ್ ಡಾಲರ್ ವಹಿವಾಟು ನಡೆಯುತ್ತಿದೆ. ವಿಭಕ್ತ ಕುಟುಂಬಗಳು, ವೃತ್ತಿ ನಿರತ ಪೋಷಕರು ಇಂತಹ ಪರಿಹಾರಗಳ ಮೊರೆಹೋಗುತ್ತಿದ್ದಾರೆ. 5 ವರ್ಷಗಳ ಹಿಂದೆ ಈ ಉದ್ಯಮಕ್ಕೆ ಕೈಹಾಕುವವರ ಸಂಖ್ಯೆ ಕಡಿಮೆಯಿತ್ತು. ಆದ್ರೀಗ `ಫಸ್ಟ್​ಕ್ರೈ ಡಾಟ್ ಕಾಮ್', ಮಹಿಂದ್ರಾ ಅವರ `ಬೇಬಿ ಓಯ್', `ಬೇಬಿ ಚಕ್ರ', `ಮೈ ಸಿಟಿ 4 ಕಿಡ್ಸ್' ನಂತಹ ಸಂಸ್ಥೆಗಳು ಅತ್ಯಂತ ಜನಪ್ರಿಯವಾಗಿವೆ.


ಲೇಖಕರು: ಹರ್ಶಿತ್​ ಮಲ್ಯ

ಅನುವಾದಕರು: ಭಾರತಿ ಭಟ್​

  • +0
Share on
close
  • +0
Share on
close
Share on
close
Report an issue
Authors

Related Tags

Our Partner Events

Hustle across India