ಬಸವಣ್ಣನವರ ಕೆಲವು ವಿಚಾರಗಳು ಮತ್ತು ವಚನಗಳು
ಟೀಮ್ ವೈ.ಎಸ್.12ನೇ ಶತಮಾಣದ ವಚನಕಾರರ ಪೈಕಿ ಬಸವಣ್ಣನವರಿಗೆ ದೊಡ್ಡ ಸ್ಥಾನ. ಅಕ್ಕ ಮಹಾದೇವಿ ,ಅಲ್ಲಮ ಪ್ರಭು ದಾರಿಯಲ್ಲೇ ಸಾಗಿದ್ರೂ ಬಸವಣ್ಣನವರ ದೃಷ್ಟಿ ಮಾತ್ರ ವಿಭಿನ್ನವಾಗಿತ್ತು. ಹೀಗಾಗಿ ಬಸವಣ್ಣನವರ ವಚನಗಳು ಬಹಳಷ್ಟು ಪ್ರಸಿದ್ಧಿ ಪಡೆದಿವೆ. ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ನೀತಿಯನ್ನು ತಿಳಿಸುತ್ತವೆ.
ಬಸವಣ್ಣನವರು ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ಗ್ರಾಮದಲ್ಲಿ 1134 ರಲ್ಲಿ ಜನಿಸಿದರು. ಶ್ರೀ ಮಾದರಸ ಮತ್ತು ಮಾದಲಾಂಬಿಕೆ ಬಸವಣ್ಣನರ ಅಪ್ಪ-ಅಮ್ಮ. ಬಸವಣ್ಣನವರು ಲಿಂಗಾಯತ ಸಮುದಾಯದ ಸ್ಥಾಪಕರು. ಬಸವಣ್ಣನವರು ಎಂಟನೇ ವಯಸಿನಲ್ಲಿ ಇದ್ದಾಗ ಅವರಿಗೆ ಜನಿವಾರ ಕಟ್ಟಲು ಹೋದಾಗ ಅವರು ತಮಗಿಂತ ದೊಡ್ಡವಳಾದ ಸಹೋದರಿ ನಾಗಮ್ಮ ನಿಗೆ ಕಟ್ಟಲು ಹೇಳುತ್ತಾರೆ. ಆ ಸಮಯದಲ್ಲಿ ಹಿರಿಯರು ಇದು ಪುರುಷರಿಗೆ ಮಾತ್ರ ಕಟ್ಟಬೇಕು ಮಹಿಳೆಯರಿಗೆ ಕಟ್ಟುವಂತಿಲ್ಲ ಎಂದು ಹೇಳಿದಾಗ ಪುರುಷ ಮತ್ತು ಮಹಿಳೆಯ ಮಧ್ಯ ಸಮಾನತೆ ಇರಬೇಕು ಬೇಧ ಭಾವ ಇರಬಾರದು ಎಂದು ಹೇಳಿ ಮನೆ ಬಿಟ್ಟು ಹೊರಟು ಹೋಗುತ್ತಾರೆ.
ನಂತರ ಬಸವಣ್ಣ ಕೂಡಲ ಸಂಗಮಕ್ಕೆ ತೆರಳುತ್ತಾರೆ. ಸುಮಾರು 12 ವರ್ಷಗಳ ಕಾಲ ಕೂಡಲ ಸಂಗಮದಲ್ಲೇ ಅಧ್ಯಾಯನದಲ್ಲಿ ತೊಡಗಿಸಿಕೊಳ್ಳುತ್ತಾರೆ. ದೇವರು ಬೇರೆ ಎಲ್ಲಿಯೂ ಇಲ್ಲ ಅವನು ನಮ್ಮೊಳಗೆ ಇದ್ದಾನೆ ಎಂದು ಬಸವಣ್ಣ ನಂಬಿದ್ದರು. ಸುಳ್ಳು ಹೇಳುವುದು, ಕೊಲೆ ಸುಲಿಗೆ, ಪ್ರಾಣಿ ಬಲಿ/ ಹಿಂಸೆ ಯಾವುದು ಇಷ್ಟವಾಗುತ್ತಿರಲಿಲ್ಲ. ಇವೆಲ್ಲವನ್ನೂ ಬಸವಣ್ಣ ವಿರೋಧಿಸುತ್ತಿದ್ದರು. ಬಸವಣ್ಣನವರಿಗೆ ಕ್ರಾಂತಿಯೋಗಿ ಬಸವಣ್ಣ, ಮಹಾಮಾನತಾವಾದಿ ಎಂಬ ಹೆಸರುಗಳು ಕೂಡ ಇವೆ. ಸಮಾನತೆ, ಕಾಯಕ, ತತ್ವಗಳನ್ನು ಆಚರಿಸುವ ಮತ್ತು ಪಾಲಿಸುವ ಯಾರು ಬೇಕಾದರೂ ಶಿವಶರಣರಾಗಬಹುದು ಅನ್ನೋದು ಬಸವಣ್ಣನವರ ದೃಷ್ಟಿಕೋನವಾಗಿತ್ತು. ಬಸವಣ್ಣನವರ ವಚನಗಳ ಅಂಕಿತ "ಕೂಡಲಸಂಗಮದೇವ", ಕಾಯಕವೇ ಕೈಲಾಸ , ಅಯ್ಯ ಎಂದರೆ ಸ್ವರ್ಗ ಎಲವೋ ಎಂದರೆ ನರಕ ಹೀಗೆ ಹಲವು ವಚನಗಳನ್ನು ಹೇಳಿದ್ದಾರೆ.
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ವಚನಗಳ ಮೂಲಕ ಅಪೂರ್ವವಾದ ಕೊಡುಗೆ ನೀಡಿದ್ದಾರೆ. ಬಸವಣ್ಣನವರ ಸುಮಾರು 1500 ಕ್ಕೂ ಹೆಚ್ಚು ವಚನಗಳನ್ನು ಸಂಗ್ರಹ ಮಾಡಲಾಗಿದೆ. ಸಮಾನತೆ ಇರಬೇಕು ಎಂದು ಬಯಸಿದ್ದ ಬಸವಣ್ಣ 1196 ರಲ್ಲಿ ಕೂಡಲ ಸಂಗಮದಲ್ಲಿ ನಿಧನ ಹೊಂದಿದ್ದರು.
ಬಸವಣ್ಣನವರ ಕೆಲವು ಜನಪ್ರಿಯ ವಚನಗಳು
1. ಉಳ್ಳವರು ಶಿವಾಲಯ ಕಟ್ಟುವರು
ನಾನೇನು ಮಾಡಲಿ ಬಡವನಯ್ಯ!!
ಎನ್ನ ಕಾಲೇ ಕಂಬ, ದೇಹವೇ ದೇಗುಲ
ಶಿರವೇ ಹೊನ್ನ ಕಳಶವಯ್ಯ!!
ಕೂಡಲಸಂಗಮದೇವ ಕೇಳಯ್ಯ
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ
2. ದಯವಿಲ್ಲದ ಧರ್ಮವಾವುದಯ್ಯಾ ?
ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ
ದಯವೇ ಧರ್ಮದ ಮೂಲವಯ್ಯೂ
ಕೂಡಲ ಸಂಗಯ್ಯನಂತಲ್ಲದೊಲ್ಲನಯ್ಯೂ !!
3. ಆನು ಒಬ್ಬನು; ಸುಡುವರೈವರು.
ಮೇಲೆ ಕಿಚ್ಚು ಘನ, ನಿಲಲು ಬಾರದು.
ಕಾಡುಬಸವನ ಹುಲಿ ಕೊಂಡೊಯ್ದರೆ
ಆರೈಯಲಾಗದೆ ಕೂಡಲಸಂಗಮದೇವ ?
4. ಮನವೇ ಸರ್ಪ, ತನುವೇ ಹೇಳಿಗೆ!
ಹಾವಿನೊಡತಣ ಹುದುವಾಳಿಗೆ!
ಇನ್ನಾವಾಗ ಕೊಂದಹುದೆಂದರಿಯೆ.
ಇನ್ನಾವಾಗ ತಿಂದಹುದೆಂದರಿಯೆ.
ನಿಚ್ಚಕ್ಕೆ ನಿಮ್ಮ ಪೂಜಿಸಬಲ್ಲಡೆ
ಅದೇ ಗಾರುಡ ಕೂಡಲಸಂಗಮದೇವ.
5. ಕಳ್ಳ ನಾಗರ ಕಂಡರೆ ಹಾಲನೆರೆ ಎಂಬುದು
ದಿಟದ ನಾಗರ ಕೊಲ್ಲೆಂಬರಯ್ಯ
ಉಂಬ ಜಂಗಮ ಬಂದರೆ ನಡೆಯೆಂಬುದು
ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರು
ನಮ್ಮ ಕೂಡಲಸಂಗನ ಶರಣರ ಕಂಡು
ಉದಾಸೀನವ ಮಾಡಿದರೆ
ಕಲ್ಲತಾಗಿದ ಮಿಟ್ಟಿಯಂತಪ್ಪರಯ್ಯ
6. ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ!
ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ!
ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ!
ಇದಾವ ಪರಿಯಲ್ಲಿ ಕಾಡಿತ್ತು ಮಾಯೆ
ಈ ಮಾಯೆಯ ಕಳೆವೊಡೆ ಯೆನ್ನಳವಲ್ಲ,
ನೀವೇ ಬಲ್ಲಿರಿ ಕೂಡಲಸಂಗಮದೇವಾ.
7. ಇವನಾರವ ಇವನಾರವ ಇವನಾರವ ನೆಂದಿನಸದಿರಯ್ಯಾ
ಇವ ನಮ್ಮವ ಇವ ನಮ್ಮವ ಇವ ನಮ್ಮವ ನೆಂದಿನಸಯ್ಯಾ
ಕೂಡಲಸಂಗಮದೇವಾ ನಿಮ್ಮ ಮಹಾಮನೆಯ ಮಗನೆಂದೆನಿಸಯ್ಯ.
8. ಅಯ್ಯಾ, ನಿಮ್ಮ ಶರಣನ ಮರ್ತ್ಯಕ್ಕೆ ತಂದೆಯಾಗಿ ನೆನೆನೆನೆದು
ಸುಖಿಯಾಗಿಯಾನು ಬದುಕಿದೆನಯ್ಯಾ. ಅದೇನು ಕಾರಣ
ತಂದೆಯಿಂದರಿದೆನಯ್ಯಾ. ಅರಿದರಿದು ನಿಮ್ಮ ಶರಣನು
ಆಚರಿಸುವಾಚರಣೆಯ ಕಂಡು ಕಣ್ದೆರೆದೆನಯ್ಯಾ ಕೂಡಲಸಂಗಮದೇವಾ.
9. ಸಕ್ಕರೆಯ ಕೊಡನ ತುಂಬಿ
ಹೊರಗ ಸವಿದರೆ ರುಚಿಯುಂಟೆ ?
ತಕ್ಕೈಸಿ ಭುಜತುಂಬಿ,
ಲಿಂಗಸ್ಪರ್ಶನವ ಮಾಡದೆ,
ಅಕ್ಕಟಾ, ಸಂಸಾರ ವೃಥಾ ಹೋಯಿತ್ತಲ್ಲ!
ಅದೇತರ ಭಕ್ತಿ ? ಅದೇತರ ಯುಕ್ತಿ ? ಕೂಡಿಕೊ!
ಕೂಡಲಸಂಗಮದೇವ
10. ಸ್ವಾಮಿ ನೀನು, ಶಾಶ್ವತ ನೀನು.
ಎತ್ತಿದೆ ಬಿರುದ ಜಗವೆಲ್ಲರಿಯಲು.
ಮಹಾದೇವ, ಮಹಾದೇವ!
ಇಲ್ಲಿಂದ ಮೇಲೆ ಶಬ್ದವಿಲ್ಲ!
ಪಶುಪತಿ ಜಗಕ್ಕೆ ಏಕೋದೇವ;
ಸ್ವರ್ಗಮರ್ತ್ಯ ಪಾತಾಳದೊಳಗೊಬ್ಬನೇ ದೇವ;
ಕೂಡಲಸಂಗಮದೇವ