ಓಮಿತ್ರ ಹುಟ್ಟಿಗೆ ಕಾರಣ ಆ 30 ಗಂಟೆಗಳು !
ಟೀಮ್ ವೈ.ಎಸ್.
ಸಂಪರ್ಕ ಇವತ್ತಿನ ಬಹುಮುಖ್ಯ ಸಾಧನ. ಜನರನ್ನು ಸಂಪರ್ಕಿಸಲು ಮಾರುಕಟ್ಟೆಯಲ್ಲಿ ಇಂದು ನೂರಾರು ಆ್ಯಪ್ಗಳಿವೆ. ಒಂದೇ ಏರಿಯಾದ ಜನರನ್ನು ಸಂಪರ್ಕಿಸಲು ಸಾಮಾಜಿಕ ಸಂಪರ್ಕ ಆ್ಯಪ್ಗಳು ಅಥವಾ ಪ್ರಯಾಣ ಜೊತೆಗಾರ ಆ್ಯಪ್ಗಳು ಹೀಗೆ ನಾನಾ ಬಗೆಯ ಆ್ಯಪ್ಗಳಿವೆ. ಇಂತಹದ್ದೇ ಒಂದು ಆ್ಯಪ್ -ಓಮಿತ್ರ. ಒಂದು ಅಪರೂಪದ ಭಾರತೀಯ ರೈಲ್ವೇ ಸಾಮಾಜಿಕ ಆ್ಯಪ್ ಇದು. ರೈಲು ಪ್ರಯಾಣಿಕರು ಸಹಜವಾಗಿಯೇ ಎದುರಿಸುವ ಸಮಸ್ಯೆಗಳನ್ನು ನಿವಾರಿಸಲೆಂದೇ ಈ ಆ್ಯಪ್ ಅಭಿವೃದ್ಧಿ ಪಡಿಸಲಾಗಿದೆ.
ರೈಲ್ವೆ ಪ್ರಯಾಣಿಕರಿಗಾಗಿ ಆ್ಯಪ್ ಅಭಿವೃದ್ಧಿಪಡಿಸಿದವರು ವಿಕಾಸ್ ಜಗತೇಯ. ಅದಕ್ಕೆ ಕಾರಣವಾಗಿದ್ದು, ಭಯಾನಕವಾದ ಒಂದು ರೈಲು ಪ್ರಯಾಣ ! ಅವರು ರಾಜಸ್ಥಾನದಿಂದ ಹೈದ್ರಾಬಾದ್ಗೆ ಒಬ್ಬಂಟಿಯಾಗಿ ಪ್ರಯಾಣಿಸುತ್ತಿದ್ದರು. ಸುದೀರ್ಘ 30 ಗಂಟೆಗಳ ಪ್ರಯಾಣವದು. ಈ ಪ್ರಯಾಣದಲ್ಲೇ ಅವರಿಗೆ ರೈಲು ಪ್ರಯಾಣದ ಸಂಕಷ್ಟ ಅರಿವಿಗೆ ಬಂದದ್ದು. ಬಹುತೇಕ ಪ್ರಯಾಣಿಕರದ್ದು ಏಕರೀತಿಯ ಸಮಸ್ಯೆಯಾಗಿತ್ತು. ಯಾರಿಗೋ ಕುಟುಂಬದ ಸದಸ್ಯರಿಗೆ ಬೇರೆ ಬೇರೆ ಕಂಪಾರ್ಟ್ಮೆಂಟ್ಗಳಲ್ಲಿ ಸೀಟ್ ಸಿಕ್ಕಿತ್ತು, ಇನ್ನೂ ಕೆಲವರಿಗ ಸರಿಯಾದ ಆಹಾರ ಸಿಕ್ಕಿರಲಿಲ್ಲ... ಇನ್ನೂ ಕೆಲವರಿಗೆ ಯಾವ ಸ್ಟೇಷನ್ನಲ್ಲಿ ಇಳಿಯಬೇಕು ಎನ್ನುವುದು ಚಿಂತೆಯ ವಿಷಯವಾಗಿತ್ತು... ಹಾಗೇ ಪ್ರಯಾಣದ ಕುರಿತೂ ಸರಿಯಾದ ಮಾಹಿತಿ ಇರುತ್ತಿರಲಿಲ್ಲ...
"ನನಗೆ ಆಗಲೇ ಈ ಐಡಿಯಾ ಹುಟ್ಟಿಕೊಂಡಿದ್ದು. ಸಹ-ಪ್ರಯಾಣಿಕರನ್ನು ಸಂಪರ್ಕಿಸುವ ಮೂಲಕ ರೈಲು ಪ್ರಯಾಣವನ್ನು ಮತಷ್ಟು ಸುಲಭ ಮಾಡುವ ಚಿಂತನೆ ಹುಟ್ಟಿಕೊಂಡಿತ್ತು." ಎನ್ನುತ್ತಾರೆ ವಿಕಾಸ್. ಒಮ್ಮೆ ಐಆರ್ಸಿಟಿಸಿ ಮೂಲಕ ಟಿಕೆಟ್ ಬುಕ್ ಮಾಡಿ ಎಸ್ಎಂಎಸ್ ಸಂದೇಶ ರವಾನೆಯಾದರೆ ಸಾಕು, ಈ ಆ್ಯಪ್ ಆ ಎಸ್ಎಂಎಸ್ ಅನ್ನು ಸಂಗ್ರಹಿಸುತ್ತದೆ. ಆ ಪ್ರಯಾಣಿಕನಿಗೆ ಸಂಬಂಧಿಸಿದ ಎಲ್ಲಾ ಪ್ರಯಾಣ ಮಾಹಿತಿಗಳನ್ನೂ ಅದು ಒದಗಿಸುತ್ತದೆ. ಟ್ರೈನ್ ಟ್ರ್ಯಾಕಿಂಗ್, ಸಹ ಪ್ರಯಾಣಿಕರ ಹುಡುಕಾಟ, ಪ್ರಯಾಣಕ್ಕೂ ಮುನ್ನ ಜ್ಞಾಪಿಸುವುದು, ವೈಟಿಂಗ್ ಲಿಸ್ಟ್ನಿಂದ ಟಿಕೆಟ್ ಕನ್ಫರ್ಮೆ ಷನ್ ಸೇರಿದಂತೆ ರಿಯಲ್ ಟೈಮ್ ಟ್ರ್ಯಾಕಿಂಗ್, ರೈಲಿನ ಆಗಮನ, ನಿರ್ಗಮನ, ನಿಲುಗಡೆ ಇತ್ಯಾದಿ ಮಾಹಿತಿಗಳನ್ನು ಒದಗಿಸುತ್ತದೆ.
ಈ ಆ್ಯಪ್ ಹೆಚ್ಚುವರಿಯಾಗಿ ಸಹ ಪ್ರಯಾಣಿಕರನ್ನು ಸಂಪರ್ಕಿಸಲು ನೆರವು ನೀಡುತ್ತದೆ. ಪ್ರಯಾಣದ ವೇಳೆ ಗೆಳೆತನ ಬೆಳೆಸಲು, ಬರ್ತ್ಗಳನ್ನು ಬದಲಾಯಿಸಿಕೊಳ್ಳಲು ಪ್ರಮುಖ ಸಂಪರ್ಕ ಸಾಧನವಾಗಿ ಈ ಆ್ಯಪ್ ಬಳಕೆಯಾಗುತ್ತಿದೆ. ಇದರಲ್ಲಿ ಮತ್ತೊಂದು ಮುಖ್ಯವಾದ ಅಂಶವೇನೆಂದರೆ ಅದು ಎಸ್ಒಎಸ್ ಎನ್ನುವ ಸೆಕ್ಯುರಿಟಿ ಬಟನ್, ಕೇವಲ ಐದೇ ನಿಮಿಷದಲ್ಲಿ ಪ್ರತಿಕ್ರಿಯೆ ಲಭ್ಯವಾಗುತ್ತದೆ.
ಸವಾಲುಗಳು
ಈ ಐಡಿಯಾ ಕುರಿತು ಆಸಕ್ತಿ ಉಳ್ಳ ಮತ್ತು ಕೆಲಸ ಮಾಡಬಲ್ಲ ಸರಿಯಾದ ಜನರ ತಂಡ ಕಟ್ಟುವುದು ದೊಡ್ಡ ಸವಾಲಾಗಿತ್ತು ಎನ್ನುತ್ತಾರೆ ವಿಕಾಸ್. ಸಾಮಾಜಿಕವಾಗಿ ಯಾರೇ ಅಪರಿಚಿತರೊಂದಿಗೆ ಮಾತನಾಡಬಾರದು ಎನ್ನುವಂತಹ ವಾತಾವರಣವಿದ್ದಾಗ, ಅದಕ್ಕೆ ವಿರುದ್ಧವಾಗಿ ಹೊಸ ಉತ್ಪನ್ನವೊಂದನ್ನು ತಯಾರಿಸಲು ನಾವು ಹೊರಟಿದ್ದೆವು. ಈ ಆ್ಯಪ್ ಅಂತಹದ್ದೊಂದು ಅಂತರವನ್ನು, ಹಿಂಜರಿತವನ್ನು ತೊಡೆದುಹಾಕಿ, ಪ್ರತಿಯೊಬ್ಬರ ಮಧ್ಯೆ ಒಂದು ಆರೋಗ್ಯಕಾರಿ ಸಂವಹನ ಏರ್ಪಡಿಸಲು ಉದ್ದೇಶಿಸಿತ್ತು. ಓಮಿತ್ರವನ್ನು ವಿಕಾಸ್ ಅವರು ಏಕಾಂಗಿಯಾಗಿ ಸ್ಥಾಪಿಸಿದರೂ, ಅವರ ತಂಡದಲ್ಲಿ 3 ಮಂದಿ ಪೂರ್ಣ ಕಾಲಿಕ ಡೆವಲಪರ್ಸ್ಗಳು ಮತ್ತು ಇಂಟರ್ನಿಗಳನ್ನು ಒಳಗೊಂಡಿದೆ.
ಈ ತಂಡವು ಆ್ಯಪ್ ಮೂಲಕ ಜಾಹೀರಾತು ಆದಾಯ ನಿರೀಕ್ಷಿಸುತ್ತಿದೆ. ಜೊತೆಗೆ ಆಹಾರ ಮತ್ತು ಇತರೆ ಪ್ರಯಾಣದ ಉತ್ಪನ್ನಗಳನ್ನು ಆ್ಯಪ್ನಲ್ಲಿ ಅಳವಡಿಸಲು ತೀರ್ಮಾನಿಸಿದೆ. "ಸಧ್ಯಕ್ಕೆ ನಾವು ಪ್ರಯಾಣವನ್ನು ಸುಲಭಗೊಳಿಸುವತ್ತ ಗಮನಹರಿಸಿದ್ದೇವೆ. ರೈಲು-ಪ್ರಯಾಣದ ಉತ್ಪನ್ನಗಳನ್ನು ಸುಲಭವಾಗಿ ದೊರಕಿಸಿಕೊಡುವುದು ನಮ್ಮ ಉದ್ದೇಶವಾಗಿದೆ." ಎನ್ನುತ್ತಾರೆ, ವಿಕಾಸ್. ಸಧ್ಯಕ್ಕೆ, ಈ ಆ್ಯಪ್ ಸುಮಾರು ನಾಲ್ಕು ಸಾವಿರ ಮಂದಿ ಡೌನ್ಲೋಡ್ ಮಾಡಿಕೊಂಡಿದ್ದು, ಪ್ರತಿವಾರ 10% ಅಭಿವೃದ್ಧಿ ಕಾಣುತ್ತಿದೆ.
ಮಾರುಕಟ್ಟೆ ಮತ್ತು ಬೆಳವಣಿಗೆ
ಭಾರತದ ರೈಲು ಪ್ರಯಾಣ ವಲಯದಲ್ಲಿ ಆ್ಯಪ್ ಪ್ರಪಂಚ ನಿಧಾನಕ್ಕೆ ಕಾಲಿಡುತ್ತಿದೆ. 2013-14ರಲ್ಲಿ ಸುಮಾರು 8,420 ದಶಲಕ್ಷ ಪ್ರಯಾಣಿಕರು ಭಾರತೀಯ ರೈಲಿನಲ್ಲಿ ಪ್ರಯಾಣಿಸಿದ್ದಾರೆ. ಆದಾಗ್ಯೂ, ಸಾರ್ವಜನಿಕ ಪ್ರಯಾಣಿಕರ ಬೇಡಿಕೆ ಮತ್ತು ನಿರೀಕ್ಷೆಗಳನ್ನು ಈಡೇರಿಸುವುದು ಅತಿ ದೊಡ್ಡ ಸವಾಲಾಗಿ ಉಳಿದಿದೆ ಎಂದು ರೈಲ್ವೇ ಇಲಾಖೆಯ ವರದಿಯೊಂದು ಹೇಳುತ್ತದೆ.
ಈ ತಂಡವು ರಿಸ್ತಾ ಎನ್ನುವ ಮತ್ತೊದು ಸುರಕ್ಷಾ ಆ್ಯಪ್ಅನ್ನು ಅಭಿವೃದ್ಧಿಪಡಿಸಿದೆ. ಸ್ಥಳೀಯ ಎಂಎಂಟಿಸಿ ರೈಲು ಪ್ರಯಾಣಿಕರಿಗೆ ಕೇವಲ ಐದೇ ನಿಮಿಷದಲ್ಲಿ ಸುರಕ್ಷತೆಯನ್ನು ಇದು ಖಾತರಿಪಡಿಸುತ್ತದೆ. ಸಧ್ಯಕ್ಕೆ ರಿಸ್ತಾ ಆ್ಯಪ್ ಹೈದ್ರಾಬಾದ್ನ ಎಂಎಂಟಿಎಸ್ ಪ್ರಯಾಣಿಕರ ಬಳಕೆಗೆ ಲಭ್ಯವಿದೆ.
ರೈಲ್ವೇ ಸುರಕ್ಷಾ ದಳದ ಜೊತೆ ಮಾತುಕತೆ ನಡೆಸುತ್ತಿರುವ ಈ ತಂಡ ಈ ಆ್ಯಪ್ಗೆ ಶೀಘ್ರದಲ್ಲೇ ಪೇಟೆಂಟ್ ಪಡೆಯುವ ನಿರೀಕ್ಷೆಯಲ್ಲಿದೆ. ಆ್ಯಪ್ ಅಭಿವೃದ್ಧಿ ಸಂಬಂಧ ಸೌತ್ ಸೆಂಟ್ರಲ್ ರೈಲ್ವೇ ಮತ್ತು ಆರ್ಪಿಎಫ್ ಜೊತೆ ಈ ಸಂಸ್ಥೆ ನಿರಂತರ ಸಂಪರ್ಕದಲ್ಲಿದೆ.
ಹೆಚ್ಚು ಹೆಚ್ಚು ಜನರು ಡಿಜಿಟಲ್ ಪ್ರಪಂಚಕ್ಕೆ ಪ್ರವೇಶಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರೈಲ್ವೇ ಪ್ರಯಾಣಕ್ಕೆ ಇಂಟಲಿಜೆಂಟ್ ಸಿಸ್ಟಮ್ನ ಅಗತ್ಯವಿದೆ. ಹೀಗಾಗಿ, ರೈಲು ಪ್ರಯಾಣದ ಆ್ಯಪ್ಗಳ ಸಂಖ್ಯೆಯಲ್ಲೂ ಸಾಕಷ್ಟು ಏರಿಕೆಯಾಗಿದೆ. ಈ ಆ್ಯಪ್ಗಳು ಪ್ರಯಾಣಿಕರಿಗೆ ಬೇಕಾದ ಎಲ್ಲಾ ಮಾಹಿತಿಗಳನ್ನು ಒದಗಿಸುತ್ತವೆ. ರೈಲ್ಯಾತ್ರಿ, ಟ್ರೈನ್ನ್ ಮ್ಯಾನ್ ಮತ್ತು ಕನ್ಫರ್ಮ್ಟಿಕೆಟ್ ಪ್ರಮುಖ ಆ್ಯಪ್ ಗಳಾಗಿವೆ.