ಬಂಡವಾಳ ಹೂಡಿಕೆಗೆ ಕರ್ನಾಟಕ ಸೂಕ್ತ ಏಕೆಂದರೆ?
ಅಗಸ್ತ್ಯ
ಪ್ರವಾಸೋದ್ಯಮ, ಸಂಪ್ರದಾಯ, ಸಂಸ್ಕೃತಿ, ವಾಸ್ತುಶಿಲ್ಪ, ಕೈಗಾರಿಕಾ ಕ್ಷೇತ್ರ ಹೀಗೆ ಎಲ್ಲದರಲ್ಲೂ ವಿಭಿನ್ನತೆ ಹೊಂದಿರುವ ರಾಜ್ಯ ಕರ್ನಾಟಕ. ಒಂದು ರಾಜ್ಯ ಹಲವು ಜಗತ್ತು ಎನ್ನುವಂತಿರುವ ಕರ್ನಾಟಕದಲ್ಲೀಗ ಬಂಡವಾಳಗಾರರ ಸದ್ದು ಜೋರಾಗಿ ಕೇಳುತ್ತಿದೆ. ಅವರಿಗೆ ರಾಜ್ಯದೊಳಗೆ ಬಂಡವಾಳ ಹೂಡಿಕೆ ಮಾಡುವಂತಹ ಅನೇಕ ಪೂರಕ ವಾತಾವರಣವಿದೆ. ವಿಮಾನಯಾನ, ರೈಲ್ವೆ, ಜಲ ಹಾಗೂ ರಸ್ತೆ ಸಾರಿಗೆ ಹೀಗೆ ಎಲ್ಲಾ ಸಾರಿಗೆ ವ್ಯವಸ್ಥೆಯನ್ನು ಸುಸಜ್ಜಿತವಾಗಿ ಹೊಂದಿರುವ ರಾಜ್ಯದಲ್ಲಿ ದೇಶ-ವಿದೇಶಗಳ ಉದ್ಯಮಿಗಳು ನಿರಾಯಾಸವಾಗಿ ಹೂಡಿಕೆ ಮಾಡಬಹುದು. ಅದಕ್ಕೆ ಬೇಕಾಗುವ ಎಲ್ಲಾ ವ್ಯವಸ್ಥೆಗಳನ್ನು ರಾಜ್ಯ ಸರ್ಕಾರ ಮಾಡಿಕೊಡುತ್ತಿದೆ.
ಯಾವುದೇ ಉದ್ಯಮವನ್ನಾದರೂ ಆರಂಭಿಸಲು ಕರ್ನಾಟಕ ಸೂಕ್ತ ಎಂಬ ಮಾತು ಎಲ್ಲೆಡೆ ಇದೆ. ಆ ಮಾತುಗಳಿಗೆ ಪೂರಕವಾದಂತಹ ವಾತಾವರಣ ರಾಜ್ಯದಲ್ಲಿದ್ದು, ಮೂಲಸೌಕರ್ಯಗಳು, ಉದ್ಯಮ ಕೌಶಲ ತರಬೇತಿ ಪಡೆದ ಕಾರ್ಮಿಕರು, ಇಂಜಿನಿಯರ್‍ಗಳು ಸೇರಿದಂತೆ ಉತ್ತಮ ಮಾನವಸಂಪನ್ಮೂಲ ಇಲ್ಲಿದೆ. ಅದೇ ರೀತಿ ವಿದ್ಯುತ್ ಪೂರೈಕೆ, ರಸ್ತೆ, ನೀರು ಸೇರಿ ಕೆಲವು ಮೂಲಸೌಲಭ್ಯಗಳನ್ನು ಜಿಲ್ಲೆಗಳಲ್ಲಿ ಸುಸಜ್ಜಿತವಾಗಿ ಕಲ್ಪಿಸುವತ್ತ ಸರ್ಕಾರ ಮುಂದಾಗಿದೆ ಅದರೊಂದಿಗೆ ರಾಜ್ಯದಲ್ಲಿ ಕೈಗಾರಿಕಾ ವಲಯದ ವಿಸ್ತರಣೆ ಯೋಜನೆ ರೂಪಿಸುತ್ತಿದೆ.
ಕೈಗಾರಿಕಾ ಪ್ರದೇಶಗಳ ವಿಂಗಡಣೆ
ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಯ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿರುವ ಕರ್ನಾಟಕ ಪ್ರದೇಶ ಕೈಗಾರಿಕಾಭಿವೃದ್ಧಿ ಮಂಡಳಿ ರಾಜ್ಯಾದ್ಯಂತ 141 ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸುವ ಯೋಜನೆ ರೂಪಿಸಿದೆ. ಆ ಕೈಗಾರಿಕಾ ಆಪ್ರದೇಶಗಳನ್ನು 8 ಕ್ಲಸ್ಟರ್‍ಗಳಾಗಿ ವಿಂಗಡಿಸಿ ಅವುಗಳಿಗೆ ಮೂಲಸೌಕರ್ಯ ಒದಗಿಸಲಾಗುತ್ತದೆ. ಆಮೂಲಕ ವ್ಯವಸ್ಥೆಯನ್ನು ವಿಕೇಂದ್ರೀಕರಣಗೊಳಿಸಲಾಗುತ್ತಿದೆ. ಅದರೊಂದಿಗೆ ರಾಜ್ಯದ ಹಲವೆಡೆ 135 ಸ್ಟಾರ್ಟಪ್ ಉದ್ಯಮಗಳಿಗೆ ಭೂಮಿ, ನೀರು, ವಿದ್ಯುತ್ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲು ನಿರ್ಧರಿಸಲಾಗಿದೆ. ಮೂಲಸೌಕರ್ಯ ಅಭಿವೃದ್ಧಿ, ಕಾರ್ಮಿಕರ ಕೌಶಲ ಅಭಿವೃದ್ಧಿಗೆ ತರಬೇತಿ ಹಾಗೂ ಉದ್ಯೋಗಾವಕಾಶ ಸೃಷ್ಟಿಗೆ ಆದ್ಯತೆ ನೀಡುವುದು ಸರ್ಕಾರದ ಪ್ರಮುಖ ಗುರಿಯಾಗಿದೆ.
ಸಾರಿಗೆ ವ್ಯವಸ್ಥೆ:
ಕರ್ನಾಟಕ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಉತ್ತಮ ಸಾರಿಗೆ ಸಂಪರ್ಕ ವ್ಯವಸ್ಥೆ ಹೊಂದಿದೆ. ರಾಜ್ಯದ ಮೂಲಕ 15 ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುತ್ತವೆ. ಸದ್ಯ ರಾಜ್ಯದಲ್ಲಿ 4,490 ಕಿ.ಮೀ. ರಾಷ್ಟ್ರೀಯ ಹೆದ್ದಾರಿ, 20,770 ಕಿ.ಮೀ. ರಾಜ್ಯ ಹೆದ್ದಾರಿ, 49,959 ಕಿ.ಮೀ ಜಿಲ್ಲಾ ರಸ್ತೆಗಳು, 8,366 ಕಿ.ಮೀ. ನಗರ ಪ್ರದೇಶದ ರಸ್ತೆಗಳು ಹಾಗೂ 1.48 ಲಕ್ಷ ಕಿ.ಮೀ. ಗ್ರಾಮೀಣ ಸಂಪರ್ಕ ರಸ್ತೆಗಳಿವೆ.
ಅದೇ ರೀತಿ ನೈರುತ್ಯ ರೈಲ್ವೆ ವಿಭಾಗದ ಕೇಂದ್ರ ಕಚೇರಿಯು ರಾಜ್ಯದಲ್ಲಿದೆ. 3,250 ಕಿ.ಮೀ. ರೈಲ್ವೆ ಹಳಿಯನ್ನು ಹೊಂದಿದ್ದು, ದೆಹಲಿ, ಮುಂಬೈ ಸೇರಿದಂತೆ ಅನೇಕ ಪ್ರಮುಖ ನಗರಗಳಿಗೆ ಸಂಪರ್ಕಿಸಲಿದೆ.
ಇನ್ನು ದೇಶದ ಮೂರನೇ ಅತ್ಯುತ್ತಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿರುವ ಹೆಗ್ಗಳಿಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿದೆ. ಈ ನಿಲ್ದಾಣದಲ್ಲಿ ದಿನವೊಂದಕ್ಕೆ ಸರಾಸರಿ 350 ವಿಮಾನಗಳು ಹಾರಾಟ ನಡೆಸುತ್ತಿದ್ದು, ವಾರ್ಷಿಕ ಸರಾಸರಿ 25 ಲಕ್ಷ ಅಂತಾರಾಷ್ಟ್ರೀಯ, 50 ಲಕ್ಷಕ್ಕೂ ಹೆಚ್ಚು ದೇಶಿಯ ಪ್ರಯಾಣಿಕರು ಪ್ರಯಾಣಿಸುತ್ತಾರೆ.
ಹಾಗೆಯೇ, ರಾಜ್ಯ 11 ಬಂದರುಗಳನ್ನು ಹೊಂದಿದೆ. ಅದರಲ್ಲಿ ಮಂಗಳೂರಿನ ಬಂದರು ದೇಶದ 9ನೇ ಬಂದರಾಗಿದೆ. ಕಾರವಾರ, ಬೇಲೇಕೇರಿ, ಮಲ್ಪೆ, ತದಡಿ ಮತ್ತು ಹಳೆ ಮಂಗಳೂರು ಬಂದರುಗಳು ದೊಡ್ಡವಾಗಿದ್ದು, ಭಟ್ಕಳ, ಕುಂದಾಪುರ, ಹಂಗಾರಕಟ್ಟೆ ಹಾಗೂ ಪಡುಬಿದ್ರಿ ವ್ಯಾಪ್ತಿಯಲ್ಲಿನ ಸಣ್ಣ ಬಂದರುಗಳಾಗಿವೆ.
ಶಿಕ್ಷಣದಲ್ಲೂ ಮುಂದು:
ರಾಜ್ಯದಲ್ಲಿ 43 ವಿಶ್ವವಿದ್ಯಾಲಯಗಳು, 4,676 ಪಿಯು ಕಾಲೇಜುಗಳು, 210 ಇಂಜಿನಿಯರಿಂಗ್, 46 ವೈದ್ಯಕೀಯ, 297 ಪಾಲಿಟೆಕ್ನಿಕ್, 553 ಜೆಒಸಿ, 38 ಡೆಂಟಲ್, 71 ಆಯುಷ್ ಹಾಗೂ 1 ಸಾವಿರ ಪದವಿ ಕಾಲೇಜುಗಳಿವೆ. ಸಾಕ್ಷರತಾ ಪ್ರಮಾಣ ಸರಾಸರಿ 75.4 ರಷ್ಟಿದೆ. ಇದರಿಂದ ಸುಶಿಕ್ಷಿತ ಮಾನವ ಸಂಪನ್ಮೂಲ ಪೂರೈಕೆಯಾಗಲಿದೆ.
ಹಲವು ಪ್ರವಾಸಿ ತಾಣಗಳು:
ಸಾಂಸ್ಕೃತಿಕ, ಪ್ರವಾಸೋದ್ಯಮದಲ್ಲೂ ಕರ್ನಾಟಕ ಹಲವು ವೈವಿಧ್ಯವನ್ನು ಹೊಂದಿದೆ. ವಿಶ್ವವಿಖ್ಯಾತಿ ಪಡೆದಿರುವ ಮೈಸೂರು, ಹಂಪಿ, ಗೋಕರ್ಣ, ಕೊಡಗು, ಜೋಗ ಜಲಪಾತ, ಗೋಲಗುಂಬಜ್ ಸೇರಿದಂತೆ ಅನೇಕ ತಾಣಗಳನ್ನು ದೇಶಿ ಮತ್ತು ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತಿವೆ.