ಕೇವಲ ಟ್ಯಾಕ್ಸಿಯಲ್ಲಿ ಮಾತ್ರ ಅಲ್ಲ… ಬೈಕ್ನಲ್ಲೂ ನಿಮ್ಮನ್ನು ಪಿಕ್ಅಪ್ ಮಾಡ್ತಾರೆ..!
ಟೀಮ್ ವೈ.ಎಸ್.ಕನ್ನಡ
ಇದು ಡಿಜಿಟಲ್ ಯುಗ. ಇನ್ನೊಂದು ಸ್ವಲ್ಪ ಸಮಯ ಕಳೆದ್ರೆ, ಹುಟ್ಟು ಮತ್ತು ಸಾವುಗಳು ಕೂಡ ಡಿಜಿಟಲ್ ಆದ್ರೂ ಅದ್ರಲ್ಲಿ ಅಚ್ಚರಿ ಇಲ್ಲ. ಮನುಷ್ಯನ ಜ್ಞಾನ ಬೆಳೆದಂತೆ ಇವತ್ತು ತಂತ್ರಜ್ಞಾನ ಕೂಡ ಅಭಿವೃದ್ಧಿ ಆಗ್ತಿದೆ. ಜಗತ್ತು ಎಷ್ಟು ಫಾಸ್ಟ್ ಇದೆ ಅಂದ್ರೆ, ಅದ್ರ ಮುಂದೆ ನಾವು ಆಮೆಯಷ್ಟು ನಿಧಾನವಾಗಿ ಕಾಣುತ್ತಿವೆ. ಈಗಂತೂ ಸ್ಮಾರ್ಟ್ಫೋನ್ಗಳ ಕಾಲ. ಆ್ಯಪ್ಗಳು ಸ್ಮಾರ್ಟ್ ಜನರ ಜೀವಾಳ. ಸ್ಮಾರ್ಟ್ಫೋನ್ ಮತ್ತು ಆ್ಯಪ್ಗಳು ಇದ್ರೆ ಸಾಕು, ಜಗತ್ತನ್ನೇ ಬೆರಳಲ್ಲಿ ಆಡಿಸುವಷ್ಟು ತಾಕತ್ತು ಬಂದುಬಿಡುತ್ತದೆ.
ಹಿಂದೆಲ್ಲಾ ರಸ್ತೆಯಲ್ಲಿ ನಿಂತು ಆಟೋ, ಟ್ಯಾಕ್ಸಿ ಅಂತ ಕೂಗಿದ್ರೆ ಸಾಲು ಸಾಲಾಗಿ ಆಟೋಗಳು ಮತ್ತು ಕಾರುಗಳು ಬಂದು ನಿಲ್ತಾ ಇದ್ದವು. ಆದ್ರೆ ಈಗ ಕಾಲ ಬದಲಾಗಿದೆ. ಜಸ್ಟ್ ಒಂದು ಆ್ಯಪ್ ಇದ್ರೆ ಸಾಕು, ನೀವಿದ್ದಲ್ಲಿಗೇ ಬಂದು ನಿಮ್ಮನ್ನು ಪಿಕ್ಅಪ್ ಮಾಡಿಕೊಂಡು ಹೋಗುವ ಸೇವೆಗಳು ಲಭ್ಯವಿದೆ. ಅಷ್ಟೇ ಅಲ್ಲ ನಿಮ್ಮನ್ನು ಕರೆದೊಯ್ಯುವ ಡ್ರೈವರ್, ಗಾಡಿ ನಂಬರ್ನಿಂದ ಹಿಡಿದು, ಗಾಡಿಯ ಡ್ರೈವರ್ ಮತ್ತು ಓಡಾಡುವ ರೂಟ್ಗಳ ಮ್ಯಾಪ್ ಸಮೇತ ವಿವರಗಳು ನಿಮಗೆ ಅಥವಾ ನಿಮ್ಮ ಆಪ್ತರಿಗೆ ತಲುಪುತ್ತವೆ. ಆದ್ರೆ ಈಗ ಇಂತಹ ಸೇವೆಗೆ ಮತ್ತೊಂದು ಸೇರ್ಪಡೆ ಆಗಿದೆ.
ಇದನ್ನು ಓದಿ: ಪೂಜೆ ಮಾಡೋದು ಮಾತ್ರ ನಿಮ್ಮ ಕೆಲಸ- ವಸ್ತು ತಂದುಕೊಡುವುದು ನಮ್ಮ ಕೆಲಸ..!
ಟ್ಯಾಕ್ಸಿ ಬುಕ್ ಮಾಡುವ ಹಾಗೇ, ಈಗ ಬೆಂಗಳೂರಿನಲ್ಲಿ ಬೈಕ್ ಬುಕ್ ಮಾಡಿ ಪಿಕ್ಅಪ್ ಪಡೆದುಕೊಳ್ಳುವ ವ್ಯವಸ್ಥೆಯೂ ಇದೆ. ಆ್ಯಪ್ನಲ್ಲಿ ನೀವೊಮ್ಮೆ ಬುಕ್ ಮಾಡಿದ್ರೆ ಸಾಕು, ಕ್ಷಣಮಾತ್ರದಲ್ಲಿ ಬೈಕ್ಗಳೂ ನಿಮ್ಮೆದುರು ಸಾಲುಗಟ್ಟಿ ನಿಲ್ಲುತ್ತಿವೆ. ಹೌದು, ಬೆಂಗಳೂರಿಗೆ ಈಗ ಬೈಕ್ ಟ್ಯಾಕ್ಸಿಗಳೂ ಪದಾರ್ಪಣೆ ಮಾಡಿವೆ. ಗುಂಡಿ ಒತ್ತಿದ ತಕ್ಷಣ ಬಂದು ನಿಲ್ಲುವ ಓಲಾ, ಉಬರ್ ಬಾಡಿಗೆ ಕಾರುಗಳಂತೆಯೇ ನಗರದಲ್ಲಿ ಈಗ ಬಾಡಿಗೆಗೆ ಬೈಕ್ಗಳು ಕೂಡ ಮನೆ ಬಾಗಿಲಿಗೆ ಬರುತ್ತಿವೆ. ಅಗ್ಗದ ಬಾಡಿಗೆ ಕಾರುಗಳ ಮಾದರಿಯಲ್ಲೇ ಆ್ಯಪ್ ಆಧಾರಿತ ಬೈಕ್ ಟ್ಯಾಕ್ಸಿ ಸೇವೆಗಳು ರಾಜಧಾನಿಗೆ ಬಂದಿವೆ. ನೂತನ ವ್ಯವಸ್ಥೆಯಲ್ಲಿ ಆ್ಯಪ್ ಮತ್ತು ಸ್ಮಾರ್ಟ್ಫೋನ್ ಇರುವ ಗ್ರಾಹಕರು ಕಾರುಗಳನ್ನು ಬುಕ್ ಮಾಡುವಂತೆಯೇ ಬೈಕ್ಗಳನ್ನು ಕೂಡ ಬುಕ್ ಮಾಡಬಹುದು.
ಈಗಾಗಲೇ ಸಿಲಿಕಾನ್ ಸಿಟಿಗೆ ರ್ಯಾಪಿಡೋ ಟ್ಯಾಕ್ಸಿ ಎಂಬ ಬೈಕ್ ಟ್ಯಾಕ್ಸಿಗಳು ಪ್ರಯಾಣಿಕರ ಮನೆ ಬಾಗಿಲಿಗೆ ಬಂದಿವೆ. ಕಡಿಮೆ ದರದಲ್ಲಿ ಬೇಕಾದಲ್ಲಿ ಕರೆದೊಯ್ಯುತ್ತಿವೆ. ಮುಂಬೈನಲ್ಲಿ ಕಳೆದ ಜೂನ್ನಲ್ಲಿ ಬೈಕ್ ಟ್ಯಾಕ್ಸಿ ಸೇವೆ ಆರಂಭಗೊಂಡ ಬೆನ್ನಲೇ, ಈಗ ಹೇ ಟ್ಯಾಕ್ಸಿ ಈಗ ಬೆಂಗಳೂರಿಗೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ಹೇ ಟ್ಯಾಕ್ಸಿ ಮತ್ತು ರ್ಯಾಪಿಡೋ ತಂತ್ರಜ್ಞಾನ ಆಧಾರಿತ ಪ್ರತ್ಯೇಕ ಬೈಕ್ ಟ್ಯಾಕ್ಸಿ ಸೇವೆಗಳಾಗಿವೆ. ಬೈಕ್ ಟ್ಯಾಕ್ಸಿಗಳನ್ನೂ ಆಯಾ ಮೊಬೈಲ್ ಆಪ್ಲಿಕೇಷನ್ ಅಥವಾ ಆ್ಯಪ್ಗಳ ಮೂಲಕ ಬುಕ್ ಮಾಡಬಹುದು. ಸೇವೆ ಒದಗಿಸಿದ ನಂತರ ಬೈಕ್ ರೈಡರ್ ನಿಮ್ಮನ್ನು ಡ್ರಾಪ್ ಮಾಡಿ ನಿಗದಿತ ಪ್ರಯಾಣ ದರ ಪಡೆದುಕೊಳ್ಳುತ್ತಾನೆ.
“ ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿಯಲ್ಲಿ ಸರಿಯಾದ ಸಮಯಕ್ಕೆ ಗುರಿ ತಲುಪುವುದು ಕಷ್ಟದ ಮಾತು. ತರಾತುರಿಯಲ್ಲಿ ಕಾರು, ಬಸ್ಗಳಲ್ಲಿ ಪ್ರಯಾಣ ಸಾಧ್ಯವೇ ಇಲ್ಲ. ಈ ಸಮಸ್ಯೆಗೆ ಪರಿಹಾರ ಎಂಬಂತೆ ಈಗ ಬೈಕ್ ಟ್ಯಾಕ್ಸಿಗಳು ಬೆಂಗಳೂರಿನ ರಸ್ತೆಗೆ ಇಳಿದಿವೆ. ಇದ್ರಿಂದಾಗಿ ಆರಾಮಾಗಿ ಬೈಕ್ ಟ್ಯಾಕ್ಸಿ ಬಳಕೆ ಮಾಡಬಹುದು.”
- ನವೀನ್, ಪ್ರಯಾಣಿಕ
ಹೇ ಟ್ಯಾಕ್ಸಿ ಒಂದು ಮೊಬೈಲ್ ಆಪ್ಲಿಕೇಶನ್. ಇದನ್ನು ಡೌನ್ಲೋಡ್ ಮಾಡಿಕೊಂಡು ಸವಾರಿ ಬುಕ್ ಮಾಡಬಹುದು. ಮೊದಲ 2 ಕಿಲೋ ಮೀಟರ್ಗೆ 20 ರೂಪಾಯಿಯಷ್ಟೇ. ನಂತ್ರ ಪ್ರತಿ ಕಿಲೋ ಮೀಟರ್ಗೆ 7 ರೂಪಾಯಿ ದರ ವಿಧಿಸಲಾಗುತ್ತೆ. ಮೊದಲ ಎರಡು ಬಾರಿ 5 ಕಿಲೋಮೀಟರ್ವರೆಗೆ ಉಚಿತ ಪ್ರಯಾಣ ಮಾಡಬಹುದು. ಈಗಾಗಲೆ ಈ ವ್ಯವಸ್ಥೆ ಮುಂಬೈ ಮತ್ತು ಹೈದರಾಬಾದ್ನಲ್ಲಿ ಚಾಲ್ತಿಯಲ್ಲಿದೆ. ಹೇ ಟ್ಯಾಕ್ಸಿಯಲ್ಲಿ ಕೇವಲ ಪಿಕ್ ಅಪ್ ಡ್ರಾಪ್ ಮಾತ್ರವಲ್ಲದೇ, ಪಾರ್ಸೆಲ್ ಡೆಲಿವರಿಯನ್ನೂ ಮಾಡುತ್ತದೆ. ಈಗಾಗಲೇ ಹಲವು ಬೈಕ್ ಸವಾರರು ಹೇ ಟ್ಯಾಕ್ಸಿಗೆ ನೋಂದಣಿ ಮಾಡಿಕೊಂಡಿದ್ದಾರೆ. ಇನ್ನು ಸದ್ಯದ ಮಟ್ಟಿಗೆ ಬೆಳಗ್ಗೆ 8 ಗಂಟೆಯಿಂದ ರಾತ್ರಿ 9 ಗಂಟೆವರೆಗ ಸೇವೆ ಲಭ್ಯ. ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಇದು ಎಲ್ಲರಿಗೂ ಉಪಕಾರಿ.
1. ಮನೆ ಕೆಲಸಗಳ ತಲೆನೋವಿಗೆ "ಐಡೋ" ರೋಬೋದ ಪರಿಹಾರ..!
2. ಸರಕು ಸಾಗಣಿಕೆಯ ಚಿಂತೆ ನಿಮಗೇಕೆ- ಪೋರ್ಟರ್ ಆ್ಯಪ್ನಲ್ಲಿ ಸಿಗುತ್ತೆ ಉತ್ತರ
3. ನೆಟ್ವರ್ಕ್ ಸಮಸ್ಯೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ- 5ಬಾರ್ಜ್ ಟ್ರೈ ಮಾಡಿ...