ಬೆಂಗಳೂರಿನಲ್ಲೊಬ್ಬ ವಿಂಟೇಜ್ ಕ್ಲಾಸಿಕ್ ಬೈಕ್ಗಳ ಸಂಗ್ರಾಹಕ-ಸೂಪರ್ ಬೈಕರ್ ಅರ್ಜುನ್ ಪ್ರಭಾಕರ್
ವಿಶ್ವಾಸ್ ಭಾರಾಧ್ವಾಜ್
26 ವರ್ಷದ ಅರ್ಜುನ್ ಪ್ರಭಾಕರ್ ಅವರ ಸಂಹಗ್ರಹದಲ್ಲಿ ಸುಮಾರು 12 ವಿಂಟೇಜ್ ಸೂಪರ್ ಕ್ಲಾಸಿಕ್ ಬೈಕ್ಗಳಿವೆ. ಅವರಿಗೆ ಕ್ಲಾಸಿಕ್ ಬೈಕ್ಗಳ ಸಂಗ್ರಹದ ಮೇಲಿದ್ದ ಆಸಕ್ತಿಯನ್ನು ಗಮನಿಸಿದ್ದ ಅವರ ತಂದೆ ಪ್ರತೀ ವರ್ಷ ಅವರ ಶೈಕ್ಷಣಿಕ ಸಾಧನೆಗೆ ಉಡುಗೊರೆಯೆಂಬಂತೆ ಒಂದುಂದು ವಿವಿಧ ಶೈಲಿಯ ಸೂಪರ್ ಬೈಕ್ಗಳನ್ನು ನೀಡುತ್ತಿದ್ದರಂತೆ. ಪ್ರತೀ ಬಾರಿಯೂ ಹೊಸ ಹೊಸ ಮಾದರಿಯ ಕ್ಲಾಸಿಕ್ ಬೈಕ್ಗಳು ಉಡುಗೊರೆಯಾಗಿ ಬಂದಾಗಲೂ ಅರ್ಜುನ್ ಮತ್ತಷ್ಟು ಶ್ರಮವಹಿಸಿ ಓದುತ್ತಿದರಂತೆ. ಈ ವಿಷಯವನ್ನು ಸ್ವತಃ ಅರ್ಜುನ್ ಹೌದೆನ್ನುತ್ತಾರೆ.
ಅರ್ಜುನ್ ಪ್ರಭಾಕರ್ ತನ್ನನ್ನು ತಾನು ಪರಿಪೂರ್ಣ ಬೈಕ್ ಎಂದು ಪರಿಚಯಿಸಿಕೊಳ್ಳಲು ಇಚ್ಛಿಸುತ್ತಾರೆ. ಅವರು ತಮ್ಮ ಬೈಕ್ನಲ್ಲಿ ಎರಡು ಬಾರಿ ಲಡಾಕ್ಗೆ ಲಾಂಗ್ ರೈಡಿಂಗ್ ನಡೆಸಿದ್ದರೆ. ರಾಜಸ್ತಾನದಲ್ಲಿ ನಡೆದ ಹಲವು ಬೈಕ್ ರೇಸ್ಗಳಲ್ಲಿ ಅವರು ಜಯಸಾಧಿಸಿದ್ದಾರೆ. ಅರ್ಜುನ್ ಈ ವರೆಗೆ ಜಯಿಸಿರುವ ಬೈಕ್ ರೇಸ್ಗಳ ಸಂಖ್ಯೆ ಬರೋಬ್ಬರಿ 30. ಅವರ ಈ ಬೈಕಿಂಗ್ ಯಾತ್ರೆಗಳಿಗೆ ಬ್ರೇಕ್ ಹಾಕಿದ್ದು ಅವರಿಗಾದ ಒಂದು ಅಪಘಾತ. ಅರ್ಜುನ್ಗೆ ಬೈಕ್ಗಳ ಮೇಲೆ ಅದೆಷ್ಟು ಮೋಹವಿದೆಯೆಂದರೇ ತಮ್ಮ ಬೆಡ್ರೂಂನಲ್ಲಿಯೂ 3 ಬೈಕ್ಗಳನ್ನು ನಿಲ್ಲಿಸಿಕೊಂಡಿದ್ದಾರೆ. ಅದರಲ್ಲಿ ಅವರ ಮೆಚ್ಚಿನ ಯಮಹಾ ಆರ್ಡಿ 350 ಬೈಕ್ ಅನ್ನು, ಅವರು ಪ್ರತಿನಿತ್ಯ ಕಣ್ಣು ಬಿಡುತ್ತಿದ್ದಂತೆ ನಿಚ್ಚಳವಾಗಿ ಕಾಣಿಸುವಂತೆ ಮುಂದಿಟ್ಟುಕೊಂಡಿದ್ದಾರೆ. ಅವರ ಈ ವಿಂಟೇಜ್ ಬೈಕ್ಗಳ ಸಂಗ್ರಹದ ಆಸಕ್ತಿಗೆ ನೀರೆರೆದು ಪೋಷಿಸುತ್ತಿದ್ದಾರೆ ಅವರ ಪೋಷಕರು..
ಅರ್ಜುನ್ ತಮ್ಮ ಬೆಡ್ರೂಂನಲ್ಲಿಟ್ಟುಕೊಂಡಿರುವ ಯಮಹಾ ಆರ್ಡಿ 350 ಬೈಕ್, ಅವರ ಮೊತ್ತ ಮೊದ ಬೈಕ್. 2ಸ್ಟ್ರೋಕ್ ಇಂಜಿನ್ ಹೊಂದಿರುವ ಇದಕ್ಕೆ ಅವಳಿ ಸಿಲಿಂಡರ್ಗಳನ್ನು ಅಳವಡಿಸಲಾಗಿದೆ. ಅವರು ಈ ಬೈಕ್ನಲ್ಲಿ ಮಹಾರಾಷ್ಟ್ರದ ವರೆಗೆ ಸುಮಾರು 2000 ಕಿಮೀ ದೂರದ ಲಾಂಗ್ ಡ್ರೈವ್ ಹೋಗಿದ್ದರು. ಅವರ ಎರಡನೆಯ ಸೂಪರ್ ಬೈಕ್ 250 ಸಿಸಿಯ ಯೆಜ್ಹ್ಡಿ ರೋಡ್ಕಿಂಗ್. ದ್ವಿಚಕ್ರ ವಾಹನದಲ್ಲೇ ಅಪರೂಪದ ಗುಣಗಳನ್ನು ಹೊಂದಿರುವ ಯೆಜ್ಹ್ಡಿ ಅರ್ಜುನ್ರ ಮೆಚ್ಚುಗೆಗೆ ಕಾರಣವಾಗಿತ್ತು. ಇದನ್ನು ತಮ್ಮ ಸ್ನೇಹಿತನೊಬ್ಬನಿಂದ ಒತ್ತಾಯಪೂರ್ವಕವಾಗಿ ಖರೀದಿಸಿದ್ದರು ಅರ್ಜುನ್. 1942ರ ಮಾಡೆಲ್ನ ಮ್ಯಾಚ್ಲೆಸ್ ಜಿ3, ಅರ್ಜುನ್ ಸಂಗ್ರಹದ್ಲಿರುವ ಅತ್ಯಂತ ಹಳೆಯ ದ್ವಿಚಕ್ರವಾಹನ.. ಅದರ ಮೂಲ ಗುಣಮಟ್ಟಕಾಪಾಡಿಕೊಳ್ಳುವ ಉದ್ದೇಶದಿಂದ ಈವರೆಗೂ ಬೈಕ್ಗೆ ಒಂದೇ ಬಾರಿಯೂ ಪೇಯಿಂಟ್ ಸಹ ಮಾಡಿಸಲಾಗಿಲ್ಲ. ಅರ್ಜುನ್ಗೆ ಈ ಸೂಪರ್ ಬೈಕ್ ಮೇಲೆ ಅತೀವ ನಂಬಿಕೆ ಇದೆ. ಏಕೆಂದರೆ ಅವರು ಅತ್ಯಂತ ದುರ್ಗಮ ಪ್ರದೇಶಗಳಲ್ಲಿ ಇದನ್ನು ಚಲಾಯಿಸಿದ್ದಾರಂತೆ, ಆದರೆ ಇಲ್ಲಿಯವರೆಗೆ ಒಂದೇ ಒಂದು ಬಾರಿಯೂ ಇದು ಕೈ ಕೊಟ್ಟಿಲ್ಲವಂತೆ..
ಅರ್ಜುನ್ ತಮ್ಮ ಮೊದಲ ಸಂಬಳದಿಂದ ಸುಜುಕಿ ಶೋಗನ್ ಬೈಕ್ ಖರೀದಿಸಿದ್ದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಈ ಬೈಕ್ ಆಲ್ಟರ್ ಮಾಡಿಸಿಕೊಳ್ಳಲು ದೇಶದ ಬೇರೆ ಬೇರೆ ಭಾಗಗಳಿಂದ ಸ್ಪೇರ್ ಪಾರ್ಟ್ಸ್ ತರಿಸಿಕೊಂಡಿದ್ದನ್ನು ಅವರು ತಮ್ಮ ಕಷ್ಟದ ಯತ್ನ ಸಹಿತ ವಿವರಿಸುತ್ತಾರೆ. ಅವರ ಈ ಸುಜುಕಿ ಶೋಗನ್ ಬೈಕ್ ರಿಪೇರಿ ಮಾಡಿ ರನ್ನಿಂಗ್ ಕಂಡೀಷನ್ಗೆ ತಂದ ಭಗೀರಥ ಪ್ರಯತ್ನವನ್ನು ಅರ್ಜುನ್ ತೃಪ್ತಿಯಿಂದ ಹೇಳಿಕೊಳ್ಳುತ್ತಾರೆ. ಇದರ ಜೊತೆ ಸಿಂಗಲ್ ಸಿಲಿಂಡ್ ಏರ್ ಕೂಲ್ಡ್ ಮೋಟಾರ್ ಸೈಕಲ್ 98 ಸಿಸಿಯ 2 ಸ್ಟ್ರೋಕ್ ಯಮಹಾ ಆರ್ಎಕ್ಸ್ -100 ಸಹ ಅವರ ಮೆಚ್ಚಿನ ಕ್ಲಾಸಿಕ್ ಬೈಕ್ಗಳಲ್ಲೊಂದು. ಕಂದು ಬಣ್ಣದ ಈ ಬೈಕ್, ಅರ್ಜುನ್ರವರ ಸಂಗ್ರಹಾಲಯ ಸೇರಲು ಅದರ ಅಪರೂಪದ ನೊಂದಣಿ ಸಂಖ್ಯೆಯೂ ಕಾರಣವಂತೆ.
1971ರಲ್ಲಿ ಅರ್ಜುನ್ ಪ್ರಭಾಕರ್ರ ತಂದೆ ತಮ್ಮ ಉಪಯೋಗಕ್ಕಾಗಿ ಕೊಂಡು ತಂದ ಪಿಸ್ತಾ ಹಸಿರು ಬಣ್ಣದ ವೆಸ್ಪಾ ಸ್ಕೂಟರ್, ಈಗಲೂ ಅವರ ಮನೆಯಲ್ಲಿ ಉತ್ತಮ ನಿರ್ವಹಣೆಯಲ್ಲಿದೆ. 20 ವರ್ಷಗಳ ಕಾಲ ಆ ಸ್ಕೂಟರ್ ಬಳಸಿದ ಅರ್ಜುನ್ ತಂದೆಗೆ ಆ ಸ್ಕೂಟರ್ ಮೇಲೆ ಅತೀವ ಪ್ರೀತಿ ಹಾಗೂ ಬಾಂದವ್ಯ ಬೆಳೆದಿದೆ. ಹೀಗಾಗಿ ಉಳಿದ ಸೂಪರ್ ಬೈಕ್ಗಳಂತೆ ಈ ವೆಸ್ಪಾಗೂ ಇಲ್ಲಿ ರಾಜಾಶ್ರಯ ನೀಡಲಾಗಿದೆ. ಅರ್ಜುನ್ರಂತೆ ಅವರ ತಂದೆಗೂ ಬೈಕ್ಗಳನ್ನು ಉತ್ತಮವಾಗಿ ನಿರ್ವಹಿಸುವುದರತ್ತ ಆಸಕ್ತಿಯಿದೆ. ಇನ್ನೊಂದರ್ಥದಲ್ಲಿ ತಂದೆಯ ಈ ಸ್ವಭಾವವೇ ಅರ್ಜುನ್ರಲ್ಲೂ ಮೈವೆತ್ತಿದೆ. ಸದ್ಯ ಅವರ ಬಳಿ ರಾಯಲ್ ಎನ್ಫೀಲ್ಡ್, ಯಮಹಾ ಎಫ್ಝೆಡ್, ಕವಾಸಕಿ ನಿಂಜಾ ಮುಂತಾದ ಸೂಪರ್ ಬೈಕ್ಗಳಿವೆ.
ಅರ್ಜುನ್ ತಮ್ಮ ಬೈಕ್ಗಳನ್ನು ಎಲ್ಲಂದರಲ್ಲಿ ಗ್ಯಾರೇಜ್ಗಳಿಗೆ ರಿಪೇರಿಗೆ ಕೊಡುವುದಿಲ್ಲ. ಇಲ್ಲಿಯವರೆಗೂ ಅವರ ಎಲ್ಲಾ 12 ಬೈಕ್ಗಳಿಗೆ ಏನೇ ತೊಂದರೆಯಾದರೂ ಅವರು ಮೊದಲು ಕರೆ ಮಾಡುವುದು ನಂಬಿಕೆಯ ಮೆಕ್ಯಾನಿಕ್ ಶಂಕರ್ಗೆ . ಶಂಕರ್ಗೆ ಅರ್ಜುನ್ ಬೈಕ್ ಮೇಲಿಟ್ಟಿರುವ ಮಮತೆ ತಿಳಿದಿದೆ. ಹಾಗಾಗಿ ಸಾಕಷ್ಟು ಎಚ್ಚರಿಕೆಯಿಂದ ಹಾಗೂ ಶ್ರದ್ಧೆಯಿಂದ ತೊಂದರೆಯನ್ನು ಸರಿಪಡಿಸಿಕೊಡುತ್ತಾರೆ. ಅರ್ಜುನ್ ತಮ್ಮ ಸೂಪರ್ ಬೈಕ್ಗಳನ್ನು ತಮ್ಮ ಸ್ನೇಹಿತರಿಗೂ ಚಲಾಯಿಸಲು ಕೊಡುತ್ತಾರೆ. ಆದರೆ ಯಾವುದೇ ತೊಂದರೆ ಮಾಡಿಕೊಳ್ಳದೆ ಎಚ್ಚರಿಕೆಯಿಂದ ಚಲಾಯಿಸಿ ಸುಸ್ಥಿತಿಯಲ್ಲಿ ವಾಪಾಸು ಮಾಡಬೇಕು ಅನ್ನುವುದಷ್ಟೇ ಅವರ ಷರತ್ತು.
ತಮ್ಮ ಜೀವನದಲ್ಲಿ ಇಂತಹ ಇನ್ನೂ ಅನೇಕ ವಿಂಟೇಜ್ ಕ್ಲಾಸಿಕ್ ಬೈಕ್ಗಳನ್ನು ಸಂಗ್ರಹಿಸಬೇಕು. ಅತ್ಯುತ್ತಮವಾಗಿ ನಿರ್ವಹಿಸಿಟ್ಟುಕೊಳ್ಳಬೇಕು ಅನ್ನುವುದು ಅರ್ಜುನ್ ಬಯಕೆ. ಒಂದು ವೇಳೆ ಅವರ ಕೈನಲ್ಲಿ ಇನ್ನು ನಿರ್ವಹಣೆ ಸಾಧ್ಯವಿಲ್ಲ ಅನ್ನುವುದಾದರೇ, ಯಾರಾದರೂ ವಿಂಟೇಜ್ ಕ್ರೇಝ್ ಇರುವ ಆಸಕ್ತರಿಗೆ ಮಾತ್ರ ಈ ಸಂಗ್ರಹವನ್ನು ನೀಡುವುದಾಗಿ ಅರ್ಜುನ್ ಹೇಳುತ್ತಾರೆ.. ಅವರ ಪಾಲಿಗೆ ಇವು ಕೇವಲ ಬೈಕ್ಗಳು ಮಾತ್ರವಲ್ಲ. ಇವು ಅವರ ಜೀವನದ ಅವಿಭಾಜ್ಯ ಅಂಗಗಳಾಗಿ ಹೋಗಿವೆ.