ಕಟ್ಟಡ ಕಟ್ಟಲು ಇಟ್ಟಿಗೆ ನೀಡ್ತಿದ್ದ ಕಾರ್ಮಿಕ ಈಗ 20 ಕಂಪನಿಗಳ ಮಾಲೀಕ
ಟೀಮ್ ವೈ.ಎಸ್. ಕನ್ನಡ
ಬಾಲ್ಯದಲ್ಲಿ ಈ ಬಾಲಕನಿಗೆ ಅಪ್ಪ-ಅಮ್ಮನ ಪ್ರೀತಿ ಸಿಗಲಿಲ್ಲ. ಆತನ ಪ್ರಶ್ನೆಗಳಿಗೆ ಉತ್ತರ ಹೇಳುವವರಿರಲಿಲ್ಲ. ತಂದೆ-ತಾಯಿ ಪ್ರತಿದಿನ 18 ಗಂಟೆ ಕೆಲಸ ಮಾಡ್ತಾ ಇದ್ದರು. ಆದ್ರೂ ಸರಿಯಾಗಿ ಹೊಟ್ಟೆ ತುಂಬುತ್ತಿರಲಿಲ್ಲ. ಒಂದು ದಿನ ಕೆಲಸಕ್ಕೆ ಹೋಗಲಿಲ್ಲವೆಂದ್ರೆ ಆ ದಿನ ಹೊಟ್ಟಗೆ ತಣ್ಣಿರು ಬಟ್ಟೆಯೇ ಗತಿಯಾಗಿತ್ತು. ಮನೆಯಲ್ಲಿ 10 ಮಂದಿ ಇದ್ದರು. ತಂದೆ ತಾಯಿ ಹಾಗೂ 8 ಮಕ್ಕಳು. ಅದ್ರಲ್ಲಿ ಈತ ಐದನೇಯವನು. ಈತನೂ ಸೇರಿ ಮಕ್ಕಳೆಲ್ಲ ಹರಿದ ಬಟ್ಟೆ ಹಾಕಿಕೊಂಡು ಬರಿಗಾಲಿನಲ್ಲಿ ತಿರುಗಾಡ್ತಾ ಇದ್ದರು. ಮಕ್ಕಳು ಕನಸುಗಳನ್ನು ಕಾಣ್ತಾ ಇದ್ದರು. ಕಾರು,ಬಂಗಲೆ,ಶಾಪಿಂಗ್ ಕನಸಲ್ಲ. ಹೊಟ್ಟೆ ತುಂಬಾ ಊಟದ ಕನಸು. ಮುಳ್ಳು ಚುಚ್ಚದಿರಲೆಂದು ಚಪ್ಪಲಿ ಹಾಕುವ ಕನಸು. ಆದ್ರೆ ಇದ್ಯಾವುದೂ ಪೂರ್ತಿಯಾಗ್ತಿರಲಿಲ್ಲ.
ಬಾಲಕನ ಪಾಲಕರು 10 ಮಂದಿ ಮಕ್ಕಳ ಜೊತೆ ಸಣ್ಣ ಗುಡಿಸಿಲಿನಲ್ಲಿ ವಾಸವಾಗಿದ್ದರು. ಆ ಹಳ್ಳಿಯ ಸಾಕಷ್ಟು ಮಂದಿ ದೊಡ್ಡ ದೊಡ್ಡ ಮನೆಯಲ್ಲಿ ವಾಸವಾಗಿದ್ದರು. ಅವರೆಲ್ಲ ದೊಡ್ಡ ಮನೆಯಲ್ಲಿ ವಾಸವಾಗಿದ್ದಾರೆ. ನಾವ್ಯಾಕೆ ಈ ಗುಡಿಸಲಿನಲ್ಲಿ ವಾಸವಾಗಿದ್ದೇವೆ ಎಂಬುದು ಬಾಲಕನ ಗೊಂದಲಕ್ಕೆ ಕಾರಣವಾಗಿತ್ತು. ಅಪ್ಪ-ಅಮ್ಮ ಏನು ಕೆಲಸ ಮಾಡ್ತಾರೆ ಎಂಬುದು ಕೂಡ ಆತನಿಗೆ ತಿಳಿಯುತ್ತಿರಲಿಲ್ಲ.ಬೆಳಿಗ್ಗೆ ಕಣ್ಣು ಬಿಡುವ ಮುನ್ನ ಅವರು ಮನೆ ಖಾಲಿ ಮಾಡಿರುತ್ತಿದ್ದರು. ರಾತ್ರಿ ಈತ ಮಲಗಿದ ಮೇಲೆ ಬರ್ತಾ ಇದ್ದರು. ಹಾಗಾಗಿ ಪಾಲಕರ ಜೊತೆ ಸಮಯ ಕಳೆಯಲೂ ಈತನಿಗೆ ಆಗ್ತಾ ಇರಲಿಲ್ಲ. ಬಾಲಕ ಬೆಳೆದಂತೆ ಎಲ್ಲ ಅರ್ಥವಾಯ್ತು. ಅವರ ಅಪ್ಪ ಭೂಮಾಲೀಕರೊಬ್ಬರ ಕೈನಲ್ಲಿ ಬಂಧಿಯಾಗಿದ್ದರು. ಜೀತದಾಳುವಾಗಿ ದುಡಿಯುತ್ತಿದ್ದರು. ತಾಯಿ ತಂಬಾಕು ಕಾರ್ಖಾನೆಗೆ ಹೋಗ್ತಾ ಇದ್ದರು. ಅಲ್ಲಿ ಅವರಿಗೆ ಸಂಬಳ ಸಿಗ್ತಾ ಇತ್ತು. ದುಡಿಮೆ ಹಣ ಹೊಟ್ಟೆಗೆ ಸಾಕಾಗುತ್ತಿರಲಿಲ್ಲ. ಹಾಗಾಗಿ ದೊಡ್ಡ ಮಗಳನ್ನೂ ಕೆಲಸಕ್ಕೆ ಕಳುಹಿಸುವ ಅನಿವಾರ್ಯತೆ ಎದುರಾಗಿತ್ತು.
ಬಾಲಕ ಶಾಲೆಗೆ ಹೋಗಲು ಶುರುಮಾಡಿದ ಮೇಲೆ ಒಂದೊಂದೆ ವಿಷಯಗಳು ಅರ್ಥವಾಗತೊಡಗಿದವು. ಬಾಲಕನ ಕುಟುಂಬ ಹಿಂದುಳಿದ ಜಾತಿಗೆ ಸೇರಿತ್ತು. ಊರಿನಲ್ಲಿ ಅಸ್ಪೃಶ್ಯತೆ ತಾಂಡವವಾಡ್ತಾ ಇತ್ತು. ಇವರನ್ನು ಯಾರೂ ಮುಟ್ಟಿಸಿಕೊಳ್ಳುತ್ತಿರಲಿಲ್ಲ. ಅವರಿಗೆ ಯಾವುದೇ ಸ್ವಾತಂತ್ರ್ಯವಿರಲಿಲ್ಲ. ಹಿಂದುಳಿದ ಜಾತಿಯಾಗಿದ್ದರಿಂದ ಇವರ ಮುಖ ನೋಡುವುದು ಅಪಶಕುನ ಎಂದು ಕೆಲವರು ಭಾವಿಸಿದ್ದರು. ಬಾಲಕ ಹಾಗೂ ಈತನ ಒಬ್ಬ ಸಹೋದರ ಬಿಟ್ಟರೆ ಮತ್ಯಾರೂ ಶಾಲೆಗೆ ಹೋಗ್ತಾ ಇರಲಿಲ್ಲ. .
ಶಾಲೆಗೆ ಹೋಗುತ್ತಿದ್ದ ಬಾಲಕನಿಗೆ ಮನೆಯ ಸ್ಥಿತಿ ಸಂಪೂರ್ಣ ಅರ್ಥವಾಗಿತ್ತು. ಓದಿ ಕೆಲಸಕ್ಕೆ ಸೇರಿ ಮನೆಯ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಬೇಕೆನ್ನುವ ನಿರ್ಧಾರಕ್ಕೆ ಬಂದ ಬಾಲಕ, ವಿದ್ಯಾಭ್ಯಾಸಕ್ಕೆ ಹೆಚ್ಚಿನ ಗಮನ ನೀಡಿದ. ಶಿಕ್ಷಕರು ಹೇಳಿದ್ದನ್ನೆಲ್ಲ ಸರಿಯಾಗಿ ಮಾಡ್ತಾ ಇದ್ದ ಬಾಲಕ ಹತ್ತನೇ ತರಗತಿ ಪೂರ್ಣಗೊಳಿಸಿದ. ಪಿಯುಸಿ ಪಾಸ್ ಮಾಡಿದ. ಎಂಟ್ರೆನ್ಸ್ ಪರೀಕ್ಷೆ ಬರೆದು ಡಿಪ್ಲೋಮಾ ಸೇರಿದ. ಡಿಪ್ಲೋಮಾ ಕೋರ್ಸ್ ಕೂಡ ಪೂರ್ತಿಗೊಳಿಸಿದ. ಆದ್ರೆ ಕೆಲಸ ಮಾತ್ರ ಸಿಗಲಿಲ್ಲ. ಕೂಲಿ ಕೆಲಸ, ವಾಚ್ ಮೆನ್ ಕೆಲಸ ಹೀಗೆ ಅನೇಕ ಕೆಲಸಗಳನ್ನು ಮಾಡ್ತಾ ಇದ್ರು. ಇದರಿಂದ ಬಂದ ಹಣ ಹೊಟ್ಟೆಗೆ ಸಾಕಾಗುತ್ತಿರಲಿಲ್ಲ. ಜೊಎತೆಗ ಈ ಕೆಲಸ ಈತನಿಗೆ ತೃಪ್ತಿ ನೀಡುತ್ತಿರಲಿಲ್ಲ. ಹಾಗಾಗಿ ಒಂದು ದಿನ ಯುವಕ ದೊಡ್ಡ ನಿರ್ಧಾರ ತೆಗೆದುಕೊಂಡ. ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟು,ದೊಡ್ಡ ಉದ್ಯಮಿಯಾಗುವ ಕನಸು ಕಂಡ. ಅದಕ್ಕಾಗಿ ಹಗಲು ರಾತ್ರಿ ಎನ್ನದೆ ದುಡಿದ. ಕಷ್ಟಗಳನ್ನು ಮೆಟ್ಟಿನಿಂತ. ಸವಾಲುಗಳನ್ನು ಧೈರ್ಯವಾಗಿ ಎದುರಿಸಿದ. ದಲಿತ ಕುಟುಂಬವೊಂದರಲ್ಲಿ ಹುಟ್ಟಿದ ಬಾಲಕ ಈಗ 20 ಕಂಪನಿಗಳ ಮಾಲೀಕ. ಸಾವಿರಾರು ಕಾರ್ಮಿಕರಿಗೆ ಕೆಲಸ ನೀಡಿದ. ದೇಶದ ಅನನ್ಯ ಹಾಗೂ ಯಶಸ್ವಿ ಉದ್ದಿಮೆದಾರರಲ್ಲಿ ಈಗ ಇವರ ಹೆಸರಿದೆ. ಈವರೆಗೆ ನಾವು ಹೇಳಿದ ವ್ಯಕ್ತಿ ಬೇರಾರೂ ಅಲ್ಲ ಮನ್ನಮ್ ಮಧುಸೂದನ್ ರಾವ್. ಎಂಎಂಆರ್ ಗ್ರೂಫ್ ಆಫ್ ಕಂಪನಿಯ ಸಂಸ್ಥಾಪಕ ಹಾಗೂ ನಿರ್ದೇಶಕರಾಗಿದ್ದಾರೆ. ಟೆಲಿಕಾಂ, ಐಟಿ, ಇಲೆಕ್ಟ್ರಿಕಲ್,ಮೆಕ್ಯಾನಿಕಲ್,ಆಹಾರ ಸಂಸ್ಕರಣೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಕಂಪನಿ ತೆರೆದಿದ್ದಾರೆ. ಈ ಕಂಪನಿಗಳು ಉತ್ತಮ ಕೆಲಸದ ಜೊತೆಗೆ ಲಾಭ ಪಡೆಯುತ್ತಿವೆ.
ಯುವರ್ ಸ್ಟೋರಿ ಜೊತೆ ಮಧುಸೂದನ್ ರಾವ್ ಮನಬಿಚ್ಚಿ ಮಾತನಾಡಿದರು. ಜೀವನ ಹೋರಾಟ, ಎದುರಾದ ಸೋಲು,ಗೆಲವು,ಅವಮಾನದ ಕಥೆಯನ್ನು ಬಿಚ್ಚಿಟ್ಟರು. ಮಧುಸೂದನ್ ರಾವ್ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಪಲಕುರು ಗ್ರಾಮದಲ್ಲಿ ಜನಿಸಿದ್ರು. ತಂದೆ ಪೆರ್ಯಾ ಹಾಗೂ ತಾಯಿ ರಾಮುಲಮ್ಮ. ಸಾಕಷ್ಟು ಕಷ್ಟ,ಅವಮಾನ,ನೋವುಗಳನ್ನು ಎದುರಿಸಿ ಈ ಹಂತಕ್ಕೆ ಬಂದ ಮಧುಸೂದನ್ ರಾವ್ ತಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುತ್ತಾರೆ.
"ಬಾಲ್ಯದಲ್ಲಿ ನನಗೆ ಅಪ್ಪ ಅಮ್ಮನ ಪ್ರೀತಿ ಸಿಗಲಿಲ್ಲ. ನಾನು ಏಳುವ ಮೊದಲೇ ಅವರು ಕೆಲಸಕ್ಕೆ ಹೋಗ್ತಾ ಇದ್ದರು. ರಾತ್ರಿ ನಾನು ಮಲಗಿದ ಮೇಲೆ ಬರ್ತಾ ಇದ್ದರು. ತಂದೆ ಜಮೀನ್ದಾರರ ಮನೆಯಲ್ಲಿ ಜೀತದಾಳುವಾಗಿ ದುಡಿಯುತ್ತಿದ್ದರು. ನನ್ನ ಅಜ್ಜ,ಮುತ್ತಜ್ಜ ಕೂಡ ಅಲ್ಲಿಯೇ ಕೆಲಸ ಮಾಡಿದ್ದರಂತೆ. 18 ಗಂಟೆ ಅವರ ಮನೆ ಕೆಲಸ,ಜಮೀನಿನ ಕೆಲಸ ಮಾಡಬೇಕಾಗಿತ್ತು. ಕೆಲಸಕ್ಕೆ ಹೋದಲ್ಲಿ ಮಾತ್ರ ಹಣ ಸಿಗುತ್ತಿತ್ತು.ಆದ್ರೂ ನಮಗೆ ಸರಿಯಾಗಿ ಊಟ ಸಿಗ್ತಾ ಇರಲಿಲ್ಲ. ಅಮ್ಮ ಹಾಗೂ ದೊಡ್ಡ ಅಕ್ಕ ಕೂಡ ಕೆಲಸಕ್ಕೆ ಹೋಗ್ತಾ ಇದ್ದರು. ಪ್ರತಿದಿನ 12 ಕಿಲೋಮೀಟರ್ ನಡೆಯಬೇಕಾಗಿತ್ತು.’’
ಸರಿಯಾದ ಆಹಾರವಿಲ್ಲದ ಕಾರಣ ಹಾಗೂ ಪೌಷ್ಠಿಕಾಂಶ ಸಿಗದ ಕಾರಣ ಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ತಾ ಇತ್ತಂತೆ. ಶಾಲೆಗೆ ಹೋದ ನಂತ್ರ ಅವರ ಪರಿಸ್ಥಿತಿ ಸ್ವಲ್ಪ ಬದಲಾಯ್ತಂತೆ. ಇದ್ದ 8 ಮಕ್ಕಳಲ್ಲಿ ಇಬ್ಬರನ್ನು ಓದಿಸಬೇಕೆಂದು ಪಾಲಕರು ನಿರ್ಧರಿಸಿದ್ದರಂತೆ. ಅದರಲ್ಲಿ ಇವರ ದೊಡ್ಡ ಅಣ್ಣ ಮಾಧವ್ ಮೊದಲು ಶಾಲೆಗೆ ಹೋಗಲು ಶುರುಮಾಡಿದರಂತೆ. ನಂತ್ರ ಮಧುಸೂದನ್ ರಾವ್ ರನ್ನು ಆಯ್ಕೆ ಮಾಡಿದರಂತೆ. ಇಬ್ಬರೂ ಸರ್ಕಾರಿ ಶಾಲೆಗೆ ಹೋಗುತ್ತಿದ್ದರಂತೆ. ಓದುವುದರಲ್ಲಿ ಚುರುಕಿದ್ದ ಮಧುಸೂದನ್ ದಿನಕಳೆದಂತೆ ಸಾಕಷ್ಟು ವಿಚಾರಗಳನ್ನು ಕಲಿತರಂತೆ.
ಗ್ರಾಮದ ಬಳಿಯಲ್ಲಿಯೇ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ಲೊಂದು ಶುರುವಾಗಿತ್ತಂತೆ.ಅದ್ರ ವಾರ್ಡನ್ ಲಕ್ಷ್ಮೀ ನರ್ಸಯ್ಯ ಮಧುಸೂದನ್ ಅವರನ್ನು ಹಾಸ್ಟೆಲ್ ಗೆ ಸೇರಿಸುವಂತೆ ತಂದೆಗೆ ಹೇಳಿದ್ದರಂತೆ. ಅಲ್ಲಿ ಊಟ,ವಸತಿ ಉಚಿತವಾಗಿರುವುದರಿಂದ ತಂದೆ ಅದಕ್ಕೆ ಒಪ್ಪಿದ್ದರಂತೆ.
"ಹಾಸ್ಟೆಲ್ ನನಗೆ ಉತ್ತಮವಾಗಿತ್ತು. ಮೂರು ಹೊತ್ತು ಆಹಾರ ಸಿಗ್ತಾ ಇತ್ತು. ಊಟದ ರುಚಿ ಚೆನ್ನಾಗಿಲ್ಲದಿದ್ದರೂ ನಾನು ಊಟ ಮಾಡ್ತಾ ಇದ್ದೆ. ವಾರ್ಡನ್ ಲಕ್ಷ್ಮಿ ಹಾಗೂ ಶಿಕ್ಷಕ ಜೆ.ಕೆ ನನಗೆ ಸಾಕಷ್ಟು ಸಹಾಯ ಮಾಡಿದ್ರು. ಹೆಚ್ಚಿನ ಅಂಕ ಪಡೆಯುವಂತೆ ಪ್ರೋತ್ಸಾಹಿಸಿದ್ರು.ಅವರಿಗೆ ನಾನು ಎಂದೂ ನಿರಾಸೆ ಮಾಡಲಿಲ್ಲ. ಸ್ಕೂಲಿನಲ್ಲಿ ಟಾಪ್ 5ನಲ್ಲಿ ಒಬ್ಬನಾಗಿರುತ್ತಿದ್ದೆ.’’
ಸಮಾಜ ಕಲ್ಯಾಣ ಹಾಸ್ಟೆಲ್ ನಲ್ಲಿಯೇ 12ನೇ ತರಗತಿ ಮುಗಿಸಿದ್ರು ಮಧುಸೂದನ್. ಅವರ ಸಹೋದರ ಬಿಟೆಕ್ ಆಯ್ದುಕೊಂಡಿದ್ದರು. ಮಧುಸೂದನ್ ಕೂಡ ಬಿಟೆಕ್ ನಲ್ಲಿ ಆಸಕ್ತಿ ಹೊಂದಿದ್ದರು. ಆದ್ರೆ ಸಹೋದರ ಹಾಗೂ ಕೆಲವರ ಸಲಹೆ ಮೇರೆಗೆ ಪಾಲಿಟೆಕ್ನಿಕ್ ಆಯ್ದುಕೊಂಡರು. ಯಾವ ಶಿಕ್ಷಣಕ್ಕೆ ಕೆಲಸ ಸಿಗದೆ ಹೋದ್ರೂ ಪಾಲಿಟೆಕ್ನಿಕ್ ನಲ್ಲಿ ಕೆಲಸ ಸಿಗುತ್ತೆ ಎಂಬ ನಂಬಿಕೆ ಆಗ ಬಲವಾಗಿತ್ತು. ಪ್ರವೇಶ ಪರೀಕ್ಷೆ ಪಾಸ್ ಮಾಡಿದ ಮಧುಸೂದನ್ ತಿರುಪತಿ ವೆಂಕಟೇಶ್ವರ ವಿವಿಯಲ್ಲಿ ಎರಡು ವರ್ಷ ಹಾಗೂ ಒಂಗೊಲ್ ನಲ್ಲಿ ಒಂದು ವರ್ಷ ಪಾಲಿಟೆಕ್ನಿಕ್ ಡಿಪ್ಲೋಮಾ ಮುಗಿಸಿದ್ರು.
ಮಧುಸೂದನ್ ಕೈಗೆ ಡಿಪ್ಲೋಮಾ ಸರ್ಟಿಫಿಕೆಟ್ ಬಂತು.ಅವರ ಹಾಗೂ ಮನೆಯವರ ಕನಸು ಚಿಗುರಿತು. ಮಧುಸೂದನ್ ಗೆ ಆದಷ್ಟು ಬೇಗ ನೌಕರಿ ಸಿಗುತ್ತದೆ,ಮನೆ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಬಲವಾಗಿ ನಂಬಿದ್ದರು ಪಾಲಕರು. ಆದಷ್ಟು ಬೇಗ ನೌಕರಿ ಪಡೆಯುವ ಆತುರದಲ್ಲಿದ್ದರು ಮಧುಸೂದನ್. ಅನೇಕ ಕಡೆ ಅರ್ಜಿ ಹಾಕಿದ್ದರು. ಕೆಲವು ಕಡೆ ಹೋಗಿ ಬಂದ್ರು. ಎಲ್ಲಿಯೂ ನೌಕರಿ ಮಾತ್ರ ಸಿಗಲಿಲ್ಲ. ಕೆಲವೆಡೆ ರೆಫರೆನ್ಸ್ ಕೇಳಿದ್ರೆ ಮತ್ತೆ ಕೆಲವು ಕಡೆ ಮನೆಯಲ್ಲಿರುವವರು ಅನಕ್ಷರಸ್ಥರು ಎನ್ನುವ ಕಾರಣಕ್ಕೆ ಇವರಿಗೆ ನೌಕರಿ ನೀಡಲಿಲ್ಲ.
ಪಾಲಕರು,ಸಹೋದರ,ಸಹೋದರಿಯರು ಮಧುಸೂದನ್ ಗಾಗಿ ಸಾಕಷ್ಟು ತ್ಯಾಗ ಮಾಡಿದ್ದರು. ಅವರ ಕಷ್ಟದ ದಿನಗಳನ್ನು ದೂರ ಮಾಡುವ ಅನಿವಾರ್ಯತೆ ಇತ್ತು. ಹಾಗಾಗಿ ಮಧುಸೂದನ್ ಕೆಲಸ ಮಾಡಲು ನಿರ್ಧರಿಸಿದ್ದರು. ಹೈದ್ರಾಬಾದ್ ನಲ್ಲಿ ಅವರ ಅಣ್ಣ ಮೇಸ್ತ್ರಿ ಕೆಲಸ ಮಾಡುತ್ತಿದ್ದರು. ಮಧುಸೂದನ್ ಅಲ್ಲಿಕೆ ಹೋಗಿ ಕೂಲಿ ಕೆಲಸ ಮಾಡಲು ಶುರುಮಾಡಿದರು. ಬಂಗಲೆ ಹಾಗೂ ಭವನಕ್ಕಾಗಿ ಕಲ್ಲು ಒಡೆಯುವುದು, ಸಿಮೆಂಟ್, ಮರಳನ್ನು ತಂದು ಕೊಡುವುದು, ಕಟ್ಟಡಕ್ಕೆ ನೀರು ಹಾಕುವುದು ಹೀಗೆ ಅನೇಕ ಕೆಲಸಗಳನ್ನು ಮಾಡಿದ್ರು. ಅವರಿಗೆ ಈ ಕೆಲಸ ಮಾಡಿದ್ರೆ ದಿನವೊಂದಕ್ಕೆ 50 ರೂಪಾಯಿ ಸಿಗ್ತಾ ಇತ್ತು. ರಾತ್ರಿ ಕೆಲಸ ಮಾಡಿದ್ರೆ ನೂರು ರೂಪಾಯಿ ಸಿಗ್ತಾ ಇತ್ತು. ಹಾಗಾಗಿ ರಾತ್ರಿ ಕೂಡ ಕೆಲಸ ಮಾಡಲು ಶುರುಮಾಡಿದರು. ವಾಚ್ ಮೆನ್ ಆಗಿಯೂ ಮಧುಸೂದನ್ ಕೆಲಸ ಮಾಡಿದ್ರು.
ಅವರ ಪ್ರಾಮಾಣಿಕತೆ ಹಾಗೂ ಕೆಲಸದ ಮೇಲಿನ ನಿಷ್ಠಯೇ ಅವರಿಗೆ ಹೊಸ ಮಾರ್ಗ ತೋರಿಸಿತ್ತು. ಒಂದು ದಿನ ಟೆಲಿಫೋನ್ ಕಂಬಕ್ಕಾಗಿ ಹೊಂಡ ತೆಗೆಯುತ್ತಿದ್ದ ವೇಳೆ ಎಂಜಿನಿಯರೊಬ್ಬರು ಅಲ್ಲಿಗೆ ಬಂದ್ರು. ನೀನು ಓದಿದ್ದೀಯಾ ಎಂದು ಕೇಳಿದ್ರು. ಹೌದು ಪಾಲಿಟೆಕ್ನಿಕ್ ಡಿಪ್ಲೋಮಾ ಮುಗಿಸಿದ್ದೇನೆ ಎಂದಿದ್ದಾರೆ ಮಧುಸೂದನ್. ನಿನ್ನ ಕೆಲಸ ನೋಡಿಯೇ ನಾನು ನೀನು ವಿದ್ಯಾವಂತ ಎಂಬುದನ್ನು ಅರಿತೆ ಎಂದು ಎಂಜಿನಿಯರ್ ನೌಕರಿ ಮಾಡ್ತೀಯಾ ಎಂದು ಕೇಳಿದ್ದಾರೆ.
ಇದರಿಂದ ಖುಷಿಗೊಂಡ ಮಧುಸೂದನ್ ತಮಗೆ ಕೆಲಸದ ಅವಶ್ಯಕತೆ ಎಷ್ಟಿದೆ ಎಂಬುದನ್ನು ಹೇಳಿದ್ದಾರೆ. ಒಂದು ಕಡೆ ಇವರ ಸಂದರ್ಶನ ನಡೆಯುತ್ತಿದ್ದರೆ ಮತ್ತೊಂದು ಕಡೆ ಗುತ್ತಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯ ಗುತ್ತಿಗೆದಾರ ಹಾಗೂ ಉಪಗುತ್ತಿಗೆದಾರನ ನಡುವೆ ಗಲಾಟೆ ಶುರುವಾಗಿದೆ. ಈ ವೇಳೆ ಮುಖ್ಯ ಗುತ್ತಿಗೆದಾರನ ಮನವೊಲಿಸಿ ಗುತ್ತಿಗೆ ಪಡೆದಿದ್ದಾರೆ ಮಧುಸೂದನ್.
ಇದನ್ನು ಓದಿ: ಪ್ರಾಣಿಗಳ ಧ್ವನಿ ಕೇಳಿಸುವ ಗೂಗಲ್..!
ಗುತ್ತಿಗೆ ಏನೋ ಪಡೆದ್ರು. ಆದ್ರೆ ಕೆಲಸಗಾರರನ್ನು ನೇಮಿಸಿಕೊಂಡು ಅವರಿಗೆ ನೀಡಲು ಇವರ ಬಳಿ 5 ಸಾವಿರ ರೂಪಾಯಿ ಕೂಡ ಇರಲಿಲ್ಲ. ಹಾಗಾಗಿ ಅವರು ಸಹೋದರ-ಸಹೋದರಿಯರ ಸಹಾಯ ಕೇಳಿದ್ದರು. ಒಬ್ಬ ಸಹೋದರಿ 900 ರೂಪಾಯಿ ನೀಡಿದ್ರು. ಅದನ್ನು ತೆಗೆದುಕೊಂಡು ಕಾರ್ಮಿಕರ ಬಳಿ ಹೋಗಿ ಕೆಲಸಕ್ಕೆ ಅವರ ಮನವೊಲಿಸಿದ್ರು. ನಂತ್ರ ಮಧುಸೂದನ್ ಕೆಲಸ ಶುರುಮಾಡಿದ್ರು. ಒಂದೇ ದಿನದಲ್ಲಿ ಮಧುಸೂದನ್ ಗೆ 20 ಸಾವಿರ ರೂಪಾಯಿ ಲಾಭ ಸಿಕ್ಕಿದೆ. ಅಲ್ಲಿಂದ ಇವರ ಭವಿಷ್ಯ ಬದಲಾಯ್ತು.
ಈ ಘಟನೆ ನಂತ್ರ ಮಧುಸೂದನ್ ಹಿಂದೆ ತಿರುಗಿ ನೋಡಲೇ ಇಲ್ಲ. ಮಧುಸೂದನ್ ಕೆಲಸ ನೋಡಿ ಖುಷಿಗೊಂಡ ಮುಖ್ಯ ಗುತ್ತಿಗೆದಾರ 1 ಲಕ್ಷ ರೂಪಾಯಿ ಅಡ್ವಾನ್ಸ್ ನೀಡಿದ್ರು. ಒಂದು ಲಕ್ಷ ರೂಪಾಯಿ ಕೈಗೆ ಬಂದ ನಂತ್ರ ಮಧುಸೂದನ್ ಮೊದಲು ಊರಿಗೆ ಹೋಗಿ ಅಪ್ಪ-ಅಮ್ಮನ ಮುಖ ನೋಡಿದ್ರು.
" ಕೆಲಸವಿಲ್ಲದ ಕಾರಣ ಎರಡು ವರ್ಷಗಳ ಕಾಲ ನಾನು ಊರಿಗೆ ಹೋಗಿರಲಿಲ್ಲ. ಹಣ ಹಾಗೂ ಕೆಲಸ ಎಡರೂ ಸಿಕ್ಕ ನಂತ್ರ ಊರಿಗೆ ವಾಪಸ್ಸಾದೆ.ಅಪ್ಪ-ಅಮ್ಮನಿಗೆ ಒಂದು ಲಕ್ಷ ರೂಪಾಯಿ ನೀಡಿದೆ.ಈವರೆಗೆ ನಾನಾಗಲಿ,ನನ್ನ ಕುಟುಂಬದವರಾಗಲಿ ಒಂದು ಲಕ್ಷ ರೂಪಾಯಿ ನೋಡಿರಲಿಲ್ಲ. ನಾನು ನೀಡಿದ ಹಣ ನೋಡಿ ಅವರು ಕಂಗಾಲಾಗಿದ್ದಾರೆ. ಏನು ಕೆಲಸ ಮಾಡ್ತಿದ್ದೀಯಾ? ಇಷ್ಟೊಂದು ಹಣ ಎಲ್ಲಿಂದ ಬಂತು ಎಂದು ಕೇಳಿದ್ದಾರೆ.’’
ಈ ಹಣ ಮಧುಸೂದನ್ ಕುಟುಂಬಕ್ಕೆ ಬಹಳ ನೆರವಾಯ್ತು. ಅವರ ಸಹೋದರಿಯ ಮದುವೆಯಾಯ್ತು. ಮದುವೆ ನಂತ್ರ ಮಧುಸೂದನ್ ಹೈದ್ರಾಬಾದ್ ಗೆ ವಾಪಸ್ ಬಂದ್ರು. ಗುತ್ತಿಗೆ ಸಿಗುತ್ತ ಹೋಯ್ತು. ಲಾಭ ಬರ್ತಾ ಹೋಯ್ತು. ದಿನಕಳೆದಂತೆ ಅವರ ಪರಿಸ್ಥಿತಿ ಸುಧಾರಿಸ್ತು. ಬಡತನ ದೂರವಾಯ್ತು. ಈ ನಡುವೆಯೇ ಮಧುಸೂದನ್ ರನ್ನು ಬೆಚ್ಚಿಬೀಳಿಸುವ ಘಟನೆಯೊಂದು ನಡೆಯಿತು. ಇವರ ಕೈ ಖಾಲಿಯಾಗುವಂತೆ ಮಾಡ್ತು.
ಮಧುಸೂದನ್ ಕೆಲವರ ಜೊತೆ ಸೇರಿ ಕಂಪನಿಯೊಂದನ್ನು ಆರಂಭಿಸಿದ್ದರಂತೆ.ಮಧುಸೂದನ್ ಯಾರನ್ನು ನಂಬಿ ಕಂಪನಿ ತೆರೆದಿದ್ದರೋ ಅವರು ಮೋಸ ಮಾಡಿದ್ರಂತೆ.ಇದರಿಂದಾಗಿ ಈವರೆಗೆ ಸಂಗ್ರಹಿಸಿದ್ದ ಹಣವೆಲ್ಲ ಖಾಲಿಯಾಗಿತ್ತಂತೆ. ಈ ಘಟನೆಯಿಂದ ಸಾಕಷ್ಟು ಪಾಠ ಕಲಿತಿದ್ದರು ಮಧುಸೂದನ್. ಇದರಿಂದ ನಾನು ಮತ್ತಷ್ಟು ವೇಗವಾಗಿ ಬೆಳೆದೆ ಎನ್ನುತ್ತಾರೆ ಇವರು.
ಸ್ನೇಹಿತರಿಂದ ಮೋಸವಾದ ಬಳಿಕ ಮಧುಸೂದನ್ ಗುತ್ತಿಗೆ ಕೆಲಸ ಬಿಟ್ಟು ಇಂಜಿನಿಯರಿಂಗ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡರಂತೆ. ಈ ವೇಳೆ ಇವರಿಗೆ ಮದುವೆ ಕೂಡ ಆಯ್ತು.ಪತ್ನಿ ಪದ್ಮ ಲತಾ ಹಾಗೂ ಅವರ ಸಹೋದರಿಯರಿಗೆ ಉದ್ಯಮದಲ್ಲಿ ಮೋಸ ಹೋಗಿರುವ ವಿಚಾರ ತಿಳಿದಿತ್ತು. ಹಾಗಾಗಿ ಇನ್ನು ಮುಂದೆ ಉದ್ಯಮಕ್ಕೆ ಇಳಿಯಬಾರದು.ನೌಕರಿ ಮಾಡಬೇಕೆಂದು ಮಾತು ತೆಗೆದುಕೊಂಡಿದ್ದರಂತೆ ಪತ್ನಿ. ಆದ್ರೆ ಮಧುಸೂದನ್ ಮನಸ್ಸು ಮಾತ್ರ ಉದ್ಯಮದ ಕಡೆ ಸೆಳೆಯುತ್ತಿತ್ತಂತೆ.
ಪತ್ನಿಗೆ ತಿಳಿಯದೆ ಒಂದು ಕಂಪನಿ ಶುರುಮಾಡಿದ್ದಾರೆ ಮಧುಸೂದನ್. ಒಂದು ದಿನ ಮನೆಗೆ ಬಂದ ಪತ್ರದಿಂದ ಪತ್ನಿಗೆ ಸತ್ಯ ಗೊತ್ತಾಗಿದೆ. ಆಗ ಪತ್ನಿ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ಅವರ ಮನವೊಲಿಸಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ ಮಧುಸೂದನ್. ಪ್ರತಿ ತಿಂಗಳು ನನಗೆ 20 ಸಾವಿರ ರೂಪಾಯಿ ಬರುತ್ತದೆ. ನಿನಗೆ 15 ಸಾವಿರ ರೂಪಾಯಿ ಬರುತ್ತದೆ. ಒಟ್ಟೂ 30-35 ಸಾವಿರ ರೂಪಾಯಿಯನ್ನು ನಾವು ಮನೆಗೆ ತರುತ್ತೇವೆ. ನೀನು ಉದ್ಯಮ ಮಾಡಲು ನನಗೆ ಬಿಟ್ಟರೆ ನಾನು ಪ್ರತಿ ತಿಂಗಳು 3 ಲಕ್ಷ ರೂಪಾಯಿಯನ್ನು ನಿನಗೆ ತಂದುಕೊಡುವೆನೆಂದು ಹೇಳಿದ್ದಾರೆ ಮಧುಸೂದನ್. ಆಗ ಕಂಪನಿ ನಡೆಸಲು ಪತ್ನಿ ಒಪ್ಪಿಗೆ ನೀಡಿದ್ದಾರೆ.
``ಪ್ರತಿ ವಿಚಾರದಲ್ಲೂ ನನ್ನ ಪತ್ನಿಯಿಂದ ನನಗೆ ಸಹಾಯ ಸಿಕ್ಕಿದೆ. ಅವರಿಂದಾಗಿ ನನ್ನ ಜೀವನದಲ್ಲಿ ಸಂತೋಷ ತುಂಬಿದೆ. ಅವರೇ ನನ್ನ ಶಕ್ತಿ’’ ಎಂದಿದ್ದಾರೆ ಮಧುಸೂದನ್.
ಮಧುಸೂದನ್ ಉದ್ಯಮ ಕ್ಷೇತ್ರದಲ್ಲಿ ಬೆಳೆದಿದ್ದು ಒಂದು ಅದ್ಭುತ ಉದಾಹರಣೆ. ಗುತ್ತಿಗೆಯಿಂದ ಶುರುವಾದ ಇವರ ಉದ್ಯಮ ಐಟಿ,ಆಹಾರ ಸಂಸ್ಕರಣಾ ಕ್ಷೇತ್ರ ಸೇರಿದಂತೆ 20 ಕ್ಷೇತ್ರಗಳಲ್ಲಿ ಕಂಪನಿ ತೆರೆದಿದ್ದಾರೆ. ದೇಶದಲ್ಲೊಂದೇ ಅಲ್ಲ ವಿದೇಶದಲ್ಲೂ ಇವರ ಹೆಸರು ಪ್ರಸಿದ್ಧಿ ಪಡೆದಿದೆ. ದಲಿತ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ನ ಆಂಧ್ರಪ್ರದೇಶ ಶಾಖೆಯ ಅಧ್ಯಕ್ಷರು ಮಧುಸೂದನ್.
ಇಷ್ಟೊಂದು ಕಂಪನಿಯನ್ನು ಹೇಗೆ ನೋಡಿಕೊಳ್ತಾರೆ ಎಂಬ ಪ್ರಶ್ನೆಗೆ ಮಧುಸೂದನ್ ಹೀಗೆ ಹೇಳ್ತಾರೆ.
``ನಾನೊಬ್ಬನೆ ಅಲ್ಲ,ಇಡೀ ಕುಟುಂಬ ನನ್ನ ಜೊತೆಗಿದೆ. ನನ್ನ ಅಣ್ಣ ನನಗೆ ಸಹಾಯ ಮಾಡ್ತಾರೆ. ಕುಟುಂಬದ ಎಲ್ಲ ಸದಸ್ಯರು ಒಂದೊಂದು ಕೆಲಸವನ್ನು ಹಂಚಿಕೊಂಡಿದ್ದಾರೆ. ಎಲ್ಲ ಕಂಪನಿಗೂ ಆಯಾ ಕ್ಷೇತ್ರದ ತಜ್ಞರನ್ನು ಮುಖ್ಯಸ್ಥರನ್ನಾಗಿ ನೇಮಿಸಿಕೊಂಡಿದ್ದೇನೆ. ಪ್ರತಿ ದಿನ ಎಲ್ಲ ಕಂಪನಿಯ ಮುಖ್ಯಸ್ಥರ ಜೊತೆ ಮಾತುಕತೆ ನಡೆಸುತ್ತೇನೆ. ಹೊಸ ಅವಕಾಶಗಳ ಹುಡುಕಾಟದಲ್ಲಿ ನಾನು ಸದಾ ನಿರತನಾಗಿರುತ್ತೇನೆ. ನನಗೆ ಟೈಂ ಮ್ಯಾನೇಜ್ ಮಾಡುವುದು ಬಹಳ ಮುಖ್ಯ’’.
``ನನ್ನ ತಂದೆ ತಾಯಿಯೇ ನನಗೆ ಪ್ರೇರಣೆ. ಅವರು ದಿನದಲ್ಲಿ 18 ಗಂಟೆ ಕೆಲಸ ಮಾಡ್ತಾ ಇದ್ದರು. ನಾನು ಕೂಡ 18 ಗಂಟೆ ಕೆಲಸ ಮಾಡುತ್ತೇನೆ. ನನ್ನ ಸಿಬ್ಬಂದಿ ಕೂಡ ಮನಸ್ಸಿಟ್ಟು ಕೆಲಸ ಮಾಡ್ತಾರೆ. ನನಗೆ ನನ್ನ ತಂದೆ ತಾಯಿಯೇ ಸ್ಫೂರ್ತಿ ಹಾಗೂ ಆದರ್ಶ. ನನಗೆ ಸಮಸ್ಯೆ ಬಂದಾಗ ನಾನು ನನ್ನ ತಂದೆ ತಾಯಿಯನ್ನು ನೆನೆಯುತ್ತೇನೆ. ಅವರು ಎದುರಿಸಿದಷ್ಟು ದೊಡ್ಡ ಸಮಸ್ಯೆ ನನ್ನದಲ್ಲ ಎಂದುಕೊಳ್ಳತ್ತೇನೆ. ಅವರು ಎದುರಿಸಿದ ಸಮಸ್ಯೆ ಮುಂದೆ ನನ್ನ ಸಮಸ್ಯೆಗಳು ಏನೂ ಅಲ್ಲ’’. ಎನ್ನುತ್ತಾರೆ ಮಧುಸೂದನ್.
ಯಶಸ್ವಿನ ಗುಟ್ಟನ್ನು ಹೀಗೆ ಬಿಚ್ಚಿಡುತ್ತಾರೆ ಮಧುಸೂದನ್.
"ಮನುಷ್ಯ, ಹಣ ಹಾಗೂ ಸರಕು ನಮ್ಮ ಬಳಿ ಇದ್ದು, ಇದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಯಶಸ್ಸು ತಾನಾಗಿಯೇ ಬರುತ್ತೆ. ನಾನು ಇದರ ನಿರ್ವಹಣೆ ಬಗ್ಗೆ ಸಂಪೂರ್ಣ ಗಮನ ನೀಡಿದೆ ಹಾಗೂ ಯಶಸ್ಸನ್ನು ನನ್ನದಾಗಿಸಿಕೊಂಡೆ.’’
ಮುಂದಿನ ಐದಾರು ವರ್ಷಗಳಲ್ಲಿ ಗ್ರಾಮೀಣ ಯುವಜನತೆಗೆ ತರಬೇತಿ ನೀಡುವುದು ಅವರ ಮುಖ್ಯ ಗುರಿ. ಗ್ರಾಮೀಣ ಪ್ರದೇಶದಿಂದ ಬರುವ ಜನರು ಎಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂಬುದು ನನಗೆ ಗೊತ್ತು. ಹಾಗಾಗಿ ಗ್ರಾಮೀಣ ಪ್ರದೇಶದಿಂದ ಬರುವ 5 ಸಾವಿರ ಯುವಜನತೆಯನ್ನು ಇನ್ನೈದು ವರ್ಷಗಳಲ್ಲಿ ನೌಕರಿ ಅಥವಾ ಉದ್ಯಮ ಸ್ಥಾಪಿಸಲು ಯೋಗ್ಯ ವ್ಯಕ್ತಿಗಳನ್ನಾಗಿ ಮಾಡುವ ಪಣ ತೊಟ್ಟಿದ್ದೇನೆ ಎನ್ನುತ್ತಾರೆ ಮಧುಸೂದನ್.
ಮುಂದಿನ ಪೀಳಿಗೆ ಕಷ್ಟಪಡುವುದು ಇವರಿಗೆ ಇಷ್ಟವಿಲ್ಲವಂತೆ. ಗ್ರಾಮಿಣ ಪ್ರದೇಶದಲ್ಲಿ ಸಂಪೂರ್ಣ ಬಡತನ ತೊಲಗಬೇಕೆನ್ನುತ್ತಾರೆ ಮಧುಸೂದನ್. ಕುಟುಂಬದಲ್ಲಿ ಒಬ್ಬ ವ್ಯಕ್ತಿ ನೌಕರಿ ಮಾಡಿದ್ರೂ ಆ ಕುಟುಂಬ ಪ್ರಸನ್ನವಾಗುತ್ತದೆ. ನಮ್ಮ ಮನೆಯಲ್ಲಿ ಕೂಡ ಅದೆ ಆಗಿದೆ. ಗುಡಿಸಲಿನಲ್ಲಿದ್ದ ನಾವು ಈಗ ಬಂಗಲೆಯಲ್ಲಿದ್ದೇವೆ. ನಮ್ಮ ಮನೆಯಲ್ಲಿ 65 ಮಂದಿ ಇದ್ದು,ಎಲ್ಲರೂ ಕೆಲಸ ಮಾಡ್ತಿದ್ದಾರೆ. ಪ್ರತಿಯೊಬ್ಬ ಯುವಜನತೆಗೂ ಉದ್ಯೋಗ ಸಿಗಲಿ,ಬಡತನ ತೊಲಗಲಿ ಎಂಬುದು ಮಧುಸೂದನ್ ಆಶಯ.
1. ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಕ್ರಾಂತಿ- ಅವಮಾನ ಮಾಡಿದ ವಿದೇಶಿಗನಿಗೆ ತಕ್ಕ ಉತ್ತರ
2. ಹಲ್ಲು ನೋವೇ...? ಡೋಂಟ್ವರಿ.. ಮನೆಗೆ ವೈದ್ಯರನ್ನು ಕರೆಸಿಕೊಳ್ಳಿ..!