Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ಕಸದಲ್ಲೂ ಕಲೆ ಅರಳುತ್ತದೆ..!

ಕೃತಿಕಾ

ಕಸದಲ್ಲೂ ಕಲೆ ಅರಳುತ್ತದೆ..!

Monday January 11, 2016 , 3 min Read

ಕೆಲವರು ಸದ್ದಿಲ್ಲದೇ ತಮ್ಮ ಹವ್ಯಾಸಗಳನ್ನು ಮಾಡುತ್ತಿರುತ್ತಾರೆ. ಆ ಹವ್ಯಾಸಗಳೇ ಮುಂದೊಂದು ದಿನ ಸಾಧನೆಗಳೂ ಆಗುತ್ತವೆ. ಕಸದಲ್ಲೂ ಕಲೆ ಅರಳುತ್ತದೆ ಅನ್ನೋದನ್ನ ಇಲ್ಲೊಬ್ಬಳು ಹೆಣ್ಣು ಮಗಳು ಸಾಧಿಸಿ ತೋರಿಸಿದ್ದಾಳೆ. ಬೆಂಗಳೂರಿನ ಯಲಹಂಕದಲ್ಲಿರುವ ಪಾರ್ವತಿ ಭಟ್ ಕಸದಿಂದಲೇ ಹೂವು ಅರಳುವಂತೆ ಮಾಡುತ್ತಾರೆ. ಕಸವೇ ಬಾಳೆಯ ಗೊನೆಯಾಗಿ ನೀರೂರಿಸುವಂತೆ ಮಾಡುತ್ತದೆ. ಗಾಜಿನ ಬಾಟಲಿ ಗಣಪನ ಮಂಟಪವಾಗಿ ಬೀಗುತ್ತದೆ. ಪಾಳುಬಿದ್ದ ಪೈಪ್ ಕಲಾಕೃತಿಯಾಗಿ ಮನೆಯ ಮೂಲೆಯನ್ನು ಸಿಂಗರಿಸುತ್ತದೆ. ಬೇಡದ ಪ್ಲಾಸ್ಟಿಕ್ ಕವರ್​ಗೆ ಹೂವಿನ ಕಂಪು ಸಿಗುತ್ತದೆ. ಬೇರೆಲ್ಲೋ ಬೇಡವಾಗಿ ಬಿದ್ದ ಈರುಳ್ಳಿ ಚೀಲದ ದಾರಕ್ಕೆ ಮಾಲೆಯ ಮೆರುಗು. ಇದು ಪಾರ್ವತಿ ಭಟ್ ಅವರ ಕೈಚಳಕದ ಪರಿ. ಉತ್ತರ ಕನ್ನಡ ಮೂಲದ ಪಾರ್ವತಿ ಎಲ್. ಭಟ್ ಅವರ ಕೈಯಲ್ಲಿ ಕಸವೂ ಕಲಾಕೃತಿಯಾಗುತ್ತದೆ. ಪೇಂಟಿಂಗ್, ಪ್ಯಾಚ್ ವರ್ಕ್, ಪಾಟ್ ಪೇಂಟಿಂಗ್, ವಿವಿಧ ಬಗೆಯ ಗೊಂಬೆ ತಯಾರಿ, ಪಿಸ್ತಾ ಸಿಪ್ಪೆ ಕಲಾಕೃತಿ, ಲೈನಿಂಗ್ ಬಟ್ಟೆಯಿಂದ ಹೂ ರಚನೆ, ಸ್ಟ್ರಾನಲ್ಲಿ ಹೂ, ಟೂತ್ಪೇಸ್ಟ್ ಕವರ್ನಿಂದ ಕಲಾಕೃತಿ.

image


ಕಸದಿಂದ ಕಲೆ ಅರಳಿಸುವ ಹವ್ಯಾಸಕ್ಕೆ ತೆರೆದುಕೊಂಡ ಪಾರ್ವತಿ ಅವರಿಗೆ ಚಿಕ್ಕಂದಿನಿಂದಲೂ ಕಲೆಯೆಡೆಗೆ ಆಸಕ್ತಿ ಇತ್ತು. ಎಸ್ಸೆಸ್ಸೆಲ್ಸಿ ಓದಿರುವ ಅವರಿಗೆ ಗಣಪತಿ ಮೂರ್ತಿ ಮೂಡುತ್ತಿದ್ದ ಅಪ್ಪನೇ ಸ್ಫೂರ್ತಿ. ತಮ್ಮ ತಂದೆ ಗಣೇಶನ ಮೂರ್ತಿ ಮಾಡುವಾಗ ಸಹಾಯ ಮಾಡುವ ನೆಪದಲ್ಲಿ ಪಾರ್ವತಿಗೆ ಈ ಕಲೆಯ ಗೀಳು ಅಂಟಿಕೊಂಡಿತು. ಹಾಗೆ ಶುರುವಾದ ಈ ಗೀಳು ಇವತ್ತು ವಿಶಿಷ್ಟ ಕಲೆಯಾಗಿ ಮಾರ್ಪಟ್ಟಿದೆ. ಬೆಂಗಳೂರಿನಲ್ಲಿ ಕಸ ಅನ್ನೋದು ಒಂದು ದದೊಡ್ಡ ಸಮಸ್ಯೆಯಾಗಿದ್ರೆ ಈ ಪಾರ್ವತಿ ಭಟ್ ಅವರಿಗೆ ಮಾತ್ರ ಕಸ ಒಂದು ಸಮಸ್ಯೆಯೇ ಅಲ್ಲ. ಮೊದ ಮೊದಲು ರಂಗೋಲಿ, ಶೇಡಿಯಲ್ಲಿ ಪೇಂಟಿಂಗ್ ಮಾಡುತ್ತಿದ್ದ ಅವರ ಆಸಕ್ತಿ ನಂತರದ ದಿನಗಳಲ್ಲಿ ಕಸದಿಂದ ಕಲಾಕೃತಿ ಮಾಡುವತ್ತ ತಿರುಗಿತು. ಯಾವುದಾದ್ರೂ ಕಲಾಕೃತಿಯನ್ನು ನೋಡಿದಾಗ ತಾನೂ ಆ ರೀತಿಯ ಕಲಾಕೃತಿ ಮಾಡಬೇಕು ಅಂತ ಪಾರ್ವತಿ ಅವರ ಮನಸು ಚಡಪಡಿಸುತ್ತಿತ್ತಂತೆ. ಹಾಗೆ ಶುರುವಾದ ಚಡಪಡಿಕೆ ಇವತ್ತು ಮನೆ ತುಂಬಾ ಕಲಾಕೃತಿಗಳೇ ತುಂಬುವಂತೆ ಮಾಡಿದೆ.

image


ಚಿತ್ರಗಳು ಅಂದ್ರೆ ಮೊದಲಿನಿಂದಲೂ ಅದೇನೋ ಸೆಳೆತವಿತ್ತು. ಆ ಸೆಳೆತವೇ ಇವತ್ತು ನನ್ನನ್ನು ಕಲಾಕೃತಿ ಮಾಡುವಂತೆ ಪ್ರೇರೇಪಿಸಿದೆ. ಮೊದಲು ಹಣಕಾಸಿನ ತೊಂದರೆಯಿಂದಾಗಿ ಮನೆಯಲ್ಲಿ ಬಳಿಸಿ ಎಸೆಯಲ್ಪಡುವ ವಸ್ತುಗಳಿಂದ ಕಲಾಕೃತಿಗಳನ್ನು ಮಾಡಲು ಆರಂಭಿಸಿದೆ. ಆದ್ರೆ ಮುಂದಿನ ದಿನಗಳಲ್ಲಿ ಅದೇ ಕಲೆಯಾಗುತ್ತದೆ ಅಂದುಕೊಂಡಿರಲಿಲ್ಲ. ಬಳಸಿ ಬಿಸಾಡುವ ವಸ್ತುಗಳಿಂದಾಗಿ ನನ್ನ ಮನೆ ಸುಂದರವಾಗಿದೆ. ಇದರ ಜೊತೆಗೆ ಕಸವನ್ನು ರಸವನ್ನಾಗಿ ಮಾಡಿ ಪರಿಸರದ ಉಳಿವಿಗೆ ತಾನೂ ಅಳಿವು ಸೇವೆ ಸಲ್ಲಿಸುತ್ತಿದ್ದೇನೆ ಎಂಬ ಸಂತಸವೂ ಇದೆ. ಪತ್ರಿಕೆಗಳಲ್ಲಿ ಟಿವಿಗಳಲ್ಲಿ ಬರುವ ಚಿತ್ರಗಳೂ, ಕಲೆಗೆ ಸಂಬಂಧಿಸಿದ ಬರಹಗಳೇ ನನ್ನ ಕಲೆಗೆ ಮೂಲ ಅಂತಾರೆ ಪಾರ್ವತಿ ಭಟ್.

image


ಪೇಂಟಿಂಗ್, ಗೊಂಬೆ ತಯಾರಿ ಕುರಿತು ಪ್ರಾಥಮಿಕ ಪಾಠವನ್ನು ಹೇಳಿಸಿಕೊಂಡ ಅವರು ತಮ್ಮ ಸ್ವಂತ ಪರಿಶ್ರಮದಿಂದಲೇ ಕಲೆಯಲ್ಲಿ ಪಳಗಿದವರು. ಬೇಡದ ಪ್ಲಾಸ್ಟಿಕ್ ಬಾಟಲ್​ಗಳನ್ನು ಅಗತ್ಯಕ್ಕೆ ತಕ್ಕಂತೆ ಕತ್ತರಿಸಿ ಹೂವಿನ ರೂಪು ನೀಡಿ ಪೇಂಟ್ನಿಂದ ತುಸು ಅಂದಗೊಳಿಸುವ ಕ್ರಿಯಾಶೀಲತೆಯೂ ಇವರಿಗಿದೆ. ಹೀಗೆ ಕಲಿತಿರುವ ಕಲೆಯನ್ನು ಆಸಕ್ರಿಗೆ ಕಲಿಸುವ ಮನಸ್ಸೂ ಕೂಡ ಪಾರ್ವತಿ ಭಟ್ ಅವರಿಗಿದೆ.

ಎಷ್ಟೇ ಕಷ್ಟವಿದ್ದರೂ ಪರವಾಗಿಲ್ಲ. ಅನೇಕ ಬಾರಿ ರಾತ್ರಿ ಎದ್ದು ಬಂದು ಮನಸ್ಸಿಗೆ ಹೊಳೆದ ಚಿತ್ರಗಳನ್ನು ಮಾಡುತ್ತಾ ಕೂತಿರುತ್ತೇನೆ. ಕಲೆಯಲ್ಲಿ ಮುಳುಗಿಹೋದರೆ ನನಗೆ ಸಮಯದ ಪರಿವೇ ಇರುವುದಿಲ್ಲ. ಈರುಳ್ಳಿ ಚೀಲದಿಂದ ಮಾಲೆ ಮಾಡಬೇಕು ಎನಿಸಿದಾಗಲೂ ಅಷ್ಟೆ. ತುಸುವೂ ಬೇಸರವಿಲ್ಲದೆ ಅವುಗಳ ಒಂದೊಂದು ಎಳೆಯನ್ನೂ ಬಿಡಿಸಿದೆ. ಎಳೆಗಳನ್ನು ಜೋಡಿಸಿ ಮಾಲೆಯ ರೂಪು ಕೊಟ್ಟೆ. ಅದರ ಅಂದ ನೋಡಿ ತುಂಬಾ ಖುಷಿ ಎನಿಸಿತು. ಯಾವ ನೈಜ ಹೂವಿನ ಮಾಲೆಗಿಂತ ಇದು ಕಡಿಮೆ ಇಲ್ಲ. ಹೆಚ್ಚು ಬಾಳಿಕೆ ಬರುವ ಇದನ್ನು ಅಲಂಕಾರಕ್ಕೂ ಬಳಸಿಕೊಳ್ಳಬಹುದು. ಮಾಲೆ ಹೆಣೆಯುತ್ತಾ ಗಿನ್ನೆಸ್ ದಾಖಲೆ ಮಾಡಬೇಕು ಎಂಬ ಆಸೆಯೂ ಮನಸ್ಸಲ್ಲಿ ಇಣುಕಿತ್ತು ಎನ್ನುತ್ತಾರೆ ಪಾರ್ವತಿ ಭಟ್.

image


ಕೇವಲ ಕಲಾಕೃತಿಗಳ ಸೃಷ್ಟಿಯಲ್ಲಷ್ಟೇ ಅಲ್ಲ ಪಾರ್ವತಿ ಭಟ್ ಅವರಿಗೆ ಏಕಪಾತ್ರಾಭಿನಯದ ಕಲೆಯೂ ಕೂಡ ಸಿದ್ದಿಸಿದೆ. ಇದದರ ಜೊತೆಗೆ ಮಕ್ಕಳಿಗೆ ಕಲೆಯ ಬಗ್ಗೆ ಪಾಠ ಕೂಡ ಮಾಡುತ್ತಾರೆ. ಇದಿಷ್ಟೇ ಅಲ್ಲ ಪಾರ್ವತಿ ಅವರು ಯೋಗ ಶಿಕ್ಷಕರೂ ಹೌದು. ಅವರ ಕಣ್ಣಿಗೆ ಬೀಳುವ ಪ್ರತಿಯೊಂದು ವಸ್ತುವಿನಲ್ಲೂ ಕಲೆಯನ್ನು ಅರಳಿಸುವ ತುಡಿತ ಪಾರ್ವತಿ ಅವರಲ್ಲಿದೆ. ಕಲಾಸಕ್ತಿಗೆ ಕಟ್ಟುಬಿದ್ದು ಹಾತೊರೆಯುವ ಅವರ ಮನಸ್ಸು ಹಣ, ಸಮಯದ ಬಗ್ಗೆ ಹೆಚ್ಚು ಯೋಚಿಸುವುದೇ ಇಲ್ಲ. ಬಿಡುವಿನ ಸಮಯವನ್ನು ಅರ್ಥಪೂರ್ಣವಾಗಿ ಕಳೆಯುತ್ತಿದ್ದಾರೆ.

ಕಣ್ಣಿಗೆ ಕಾಣುವ ಎಲ್ಲಾ ವಸ್ತುಗಳಲ್ಲೂ ಕಲಾಕೃತಿಯಾಗಬಲ್ಲ ಸೌಂದರ್ಯವಿದೆ. ಮನೆಯಲ್ಲಿ ಕುಳಿತು ಸುಮ್ಮನೆ ಕಾಲಹರಣ ಮಾಡುವ ಬದಲು ಉತ್ತಮ ಹವ್ಯಾಸದ ಮೂಲಕ ಸಮಯವನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಕಸದಿಂದ ಕಲೆ ಸೃಷ್ಟಿಸುವುದರ ಮೂಲಕ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ತಮ್ಮದೇ ಕೊಡುಗೆ ನೀಡುತ್ತಿರುವ ಪಾರ್ವತಿ ಭಟ್ ಬೆಂಗಳೂರಿನ ಅನೇಕ ಗೃಹಿಣಿಯರಿಗೆ ಮಾದರಿಯಾಗುತ್ತಾರೆ.