ದೇಶದ ಹೆಮ್ಮೆಯ ‘ವಿರಾಟ್’ ಅಂತಿಮ ಪಯಣ
ಅಗಸ್ತ್ಯ
ಭಾರತೀಯ ನೌಕಾಪಡೆಯಲ್ಲಿ 56 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ ವಿರಾಟ್ ವಿಮಾನವಾಹಕ ಯುದ್ಧನೌಕೆ ಈ ವರ್ಷ ನಿವೃತ್ತಿ ಹೊಂದಲಿದೆ. ಭಾರತೀಯ ನೌಕಾಪಡೆಯ ಎರಡನೇ ದೊಡ್ಡ ಸೇನಾ ನೌಕೆಯಾಗಿರುವ ಬ್ರಿಟನ್ ನಿರ್ಮಿತ ಐಎನ್‍ಎಸ್ ವಿರಾಟ್ ಯುದ್ಧನೌಕೆ ಮುಂದಿನ ವರ್ಷದಿಂದ ಇತಿಹಾಸವಾಗುಳಿಯಲಿದೆ. ವಿಶ್ವದಲ್ಲೇ ಯಾವುದೇ ನೌಕಪಡೆಯಲ್ಲಿ ಅತಿ ಹೆಚ್ಚು ವರ್ಷ ಸೇವೆ ಸಲ್ಲಿಸಿದ ಯುದ್ಧನೌಕೆ ಎಂಬ ಹೆಗ್ಗಳಿಕೆಯೂ ವಿರಾಟ್‍ಗೆ ಲಭ್ಯವಾಗಿದೆ.
ಇಂಗ್ಲೆಂಡ್‍ನಲ್ಲಿ ನಿರ್ಮಾಣವಾದ ವಿರಾಟ್ ಯುದ್ಧನೌಕೆ ದೇಶದ ನೌಕಾಪಡೆಗೆ ಸೇರ್ಪಡೆಗೊಂಡಿದ್ದೇ ರೋಚಕ ಕಥೆ. 1944ರಲ್ಲಿ ಇಂಗ್ಲೆಂಡಿನ ವಿಕ್ಕರ್ಸ್ ಅಮ್ಸಾರ್‍ಟ್ರಂಗ್ ಹಡಗು ನಿರ್ಮಾಣ ಸಂಸ್ಥೆ ವಿರಾಟ್ ಯುದ್ಧನೌಕೆಯನ್ನು ನಿರ್ಮಿಸಿತು. ನಂತರ 1956ರಲ್ಲಿ ಬ್ರಿಟನ್ ನೌಕಾಪಡೆಗೆ ಎಚ್‍ಎಂಎಸ್ ಹರ್ಮಿಸ್ ಎಂದು ಕರೆಸಿಕೊಳ್ಳುತ್ತಿದ್ದ ವಿರಾಟನ್ನು ಹಸ್ತಾಂತರಿಸಲಾಯಿತು. ಅಂದಿನಿಂದ ಬ್ರಿಟನ್ ರಾಯಲ್ ನೇವಿಯಲ್ಲಿ ಕಾರ್ಯಾರಂಭ ಮಾಡಿದ ಈ ಯುದ್ಧನೌಕೆ 1985ರಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿತು. ನಂತರ ಅದನ್ನು ಖರೀದಿಸಿದ್ದು ಭಾರತೀಯ ನೌಕಾಪಡೆ.
1987ರಿಂದ ಭಾರತದಲ್ಲಿ ಕಾರ್ಯಾಚರಣೆ
ಭಾರತ ನೌಕಾಪಡೆಗೆ ಸೇರಿದ ನಂತರ 1987 ಮೇ 12ರಲ್ಲಿ ಎಚ್‍ಎಂಎಸ್ ಹರ್ಮಿಸ್ ನವೀಕೃತಗೊಂಡು ವಿರಾಟಾಗಿ ಪರಿವರ್ತನೆಯಾಯಿತು. ಭಾರತ ನೌಕೆಗೆ ಸೇರ್ಪಡೆಗೂ ಮುನ್ನ ಬ್ರಿಟನ್ ರಾಯಲ್ ನೇವಿಯಲ್ಲಿ ಎಚ್‍ಎಂಎಸ್ ಹರ್ಮಿಸ್ ಅರ್ಜೆಂಟಿನಾ ವಿರುದ್ಧ ಮಹತ್ವದ ಫಾಲ್ಕ್‍ಲ್ಯಾಂಡ್ ಯುದ್ಧದಲ್ಲಿ ಪಾಲ್ಗೊಂಡಿತ್ತು. ಅಲ್ಲದೆ ಬ್ರಿಟನ್ ನೌಕಾಪಡೆಯಲ್ಲಿ 30 ವರ್ಷಗಳ ಕಾಲ ಅಲ್ಲಿ ನಿರಂತರ ಕಾರ್ಯಾಚರಣೆ ನಡೆಸಿತ್ತು.
ಹಲವು ವೈಶಿಷ್ಟ್ಯಗಳ ವಿರಾಟ್
ವಿರಾಟ್ ಯುದ್ಧನೌಕೆ ಹಲವು ವಿಶೇಷತೆಗಳನ್ನು ಹೊಂದಿದೆ. ಅದರಲ್ಲಿ ಬರಾಕ್ ಮಿಸೈಲ್ ಉಡಾವಣಾ ವ್ಯವಸ್ಥೆ, ಎರಡು ವಿಮಾನ ನಿರೋಧಕ ಬೋಫೋರ್ಸ್ ತೋಪು, ಎ.ಕೆ.230 ಗನ್‍ಗಳು ಅದರಲ್ಲಿರಲಿದೆ. ಅದರೊಂದಿಗೆ 30 ವಿಮಾನಗಳನ್ನು ಹೊತ್ತೊಯ್ಯುವ ಸಾಮಥ್ರ್ಯ ವಿರಾಟ್‍ಗಿದೆ. 1,200 ಅಧಿಕಾರಿಗಳು ವಿರಾಟ್‍ನಲ್ಲಿದ್ದು ಕರ್ತವ್ಯ ನಿರ್ವಹಣೆ ಮಾಡಲಿದ್ದಾರೆ. ಹಾಗೆಯೇ, 100 ಮೀಟರ್‍ಗಿಂತ ಕಡಿಮೆ ರನ್‍ವೇಯಲ್ಲೂ ಟೇಕಾಫ್ ಮಾಡಬಲ್ಲ ಮತ್ತು ವರ್ಟಿಕಲ್ ಲ್ಯಾಂಡಿಂಗ್ ಕೈಗೊಳ್ಳಬಲ್ಲ ಜಗತ್ತಿನ ಏಕೈಕ ಯುದ್ಧನೌಕೆ ಎಂಬ ಹೆಗ್ಗಳಿಕೆಯನ್ನು ವಿರಾಟ್ ಹೊಂದಿದೆ. ದೇಶದ ಮೊದಲ ವಿಮಾನವಾಹ ಯುದ್ಧನೌಕೆ ಐಎನ್‍ಎಸ್ ವಿಕ್ರಾಂತ್ ನಿವೃತ್ತಿ ನಂತರ ಅದರ ಸ್ಥಾನ ತುಂಬಿದ್ದು ಐಎನ್‍ಎಸ್ ವಿರಾಟ್. ವಿರಾಟ್ ನಿವೃತ್ತಿನಂತರ ಐಎನ್‍ಎಸ್ ವಿಕ್ರಮಾದಿತ್ಯ ಆ ಸ್ಥಾನಕ್ಕೆ ಬರಲಿದೆ.
ಅಂತಿಮ ಪಯಣ
ಸದ್ಯ ತನ್ನ ಕೊನೆಯ ಪಯಣ ಆರಂಭಿಸಿರುವ ವಿರಾಟ್ ಯುದ್ಧನೌಕೆಯಲ್ಲಿ 6 ಯುದ್ಧ ವಿಮಾನ, ನಾಲ್ಕು ಚೇತಕ್ ಹಾಗೂ ಆರು ಸಿ ಕಿಂಗ್ ಹೆಲಿಕಾಪ್ಟರ್‍ಗಳಿವೆ. ಹೀಗೆ ಅಂತಿಮ ಪಯಣ ಆರಂಭಿಸಿರುವುದು ಫೆ. 5ರಿಂದ 8ರವರೆಗೆ ವಿಶಾಖಪಟ್ಟಣಂನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಫ್ಲೀಟ್ ರಿವ್ಯೂನಲ್ಲಿ ಪಾಲ್ಗೊಳ್ಳಲು. ಈ ಫೀಟ್ ರಿವ್ಯೂನಲ್ಲಿ 50 ದೇಶಗಳ 10ಕ್ಕೂ ಹೆಚ್ಚು ವಿಮಾನವಾಹಕ ಯುದ್ಧನೌಕೆಗಳು ಪಾಲ್ಗೊಳ್ಳಲಿವೆ. ಈ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸೇನೆಯ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
ಹಿಂದು ಮಹಾಸಾಗರದಲ್ಲಿ ಭಾರತಿಯ ನೌಕಾಪಡೆ ಜಗತ್ತಿಗೆ ತನ್ನ ಶಕ್ತಿಪ್ರದರ್ಶನ ಮಾಡಲಿದೆ. ಇದಾದ ನಂತರ ವಿಶಾಖಪಟ್ಟಣಂನಿಂದ ಮುಂಬೈಗೆ ಮರಳುವ ಮಾರ್ಗದಲ್ಲಿ ದೇಶದ ಪ್ರಮುಖ ಸೇನಾ ಬಂದರುಗಳಲ್ಲಿ ವಿರಾಟ್ ನಿಲ್ಲಲಿದೆ. ಅಲ್ಲಿ ಭಾರತಿಯ ಸೇನೆಯ ಅಧಿಕಾರಿಗಳು ಮತ್ತು ಯೋಧರು ವಿರಾಟ್‍ಗೆ ಅಂತಿಮ ಗೌರವ ಸಲ್ಲಿಸಲಿದ್ದಾರೆ.
ವಸ್ತು ಸಂಗ್ರಹಾಲಯವಾಗಿ ಮಾರ್ಪಾಡು
ಫ್ಲೀಟ್ ರಿವ್ಯೂನಲ್ಲಿ ಪಾಲ್ಗೊಂಡ ನಂತರ ದೇಶದ ಎರಡನೇ ಯುದ್ಧನೌಕೆ ವಿರಾಟ್ ನಿವೃತ್ತಿಯಾಗಲಿದೆ. ಅದಾದ ನಂತರ ವಿರಾಟ್ ವಸ್ತು ಸಂಗ್ರಹಾಲಯವಾಗಿ ಮಾರ್ಪಡಲಿದೆ. ಅದಕ್ಕಾಗಿ ಕೇಂದ್ರ ರಕ್ಷಣಾ ಇಲಾಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಕರಾವಳಿ ತೀರದ 9 ರಾಜ್ಯಗಳಿಗೆ ಸ್ಥಳ ಗುರುತಿಸುವಂತೆಯೂ ಸೂಚಿಸಿದ್ದಾರೆ. ಅಲ್ಲದೆ ಆಸಕ್ತ ರಾಜ್ಯವೇ ವಿರಾಟ್ ವಸ್ತು ಸಂಗ್ರಹಾಲುವಾಗಿಸಬಹುದು ಎಂದು ಕೂಡ ತಿಳಿಸಿದ್ದಾರೆ. ವಸ್ತುಸಂಗ್ರಹಾಯಲದ ಮೂಲಕ ಜನರಲ್ಲಿ ನೌಕಾ ಸೇನೆ ಬಗ್ಗೆ ಅರಿವು ಮೂಡಿವ ಉದ್ದೇಶ ಹೊಂದಲಾಗಿದೆ.