ಆವೃತ್ತಿಗಳು
Kannada

ಸಾಫ್ಟ್​​ವೇರ್​​​ ಎಂಜಿಯನಿಯರ್​​ ಈಗ ಸಾವಯವ ಕೃಷಿಕ..!

ಉಷಾ ಹರೀಶ್​​

usha harish
10th Nov 2015
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಬೆಳೆದ ಬೆಳೆಗ ಸೂಕ್ತ ಮಾರುಕಟ್ಟೆ ಇಲ್ಲ, ಸಾಲ ತೀರಿಸಲು ಆಗುತ್ತಿಲ್ಲ ಎಂದು ಕೃಷಿಯನ್ನು ನಂಬಿ ಬದುಕಲು ಸಾಧ್ಯವಿಲ್ಲ ಎಂದು ರಾಜ್ಯಾದ್ಯಾಂತ ರೈತರು ಆತ್ಮ ಹತ್ಯೆ ಮಾಡಿಕೊಳ್ಳುತ್ತಿರುವ ಈ ಕಾಲದಲ್ಲಿ ಆದರೆ ಇಲ್ಲೊಬ್ಬ ಯುವ ಟೆಕ್ಕಿಯೊಬ್ಬರು ಸಾವಯುವ ಕೃಷಿಯತ್ತ ಆಕರ್ಷಿತರಾಗಿ ಲಕ್ಷಾಂತರ ರೂಪಾಯಿಯ ಸಂಬಳ ತ್ಯಜಿಸಿ ತವರಿಗೆ ವಾಪಾಸ್ಸಾಗಿ ಕೃಷಿಯಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಿರುವುದಲ್ಲದೇ ತಮ್ಮ ರೈತ ಮಿತ್ರರಿಗೂ ನೆರವಾಗಿದ್ದಾರೆ. ದೂರದ ಅಮೆರಿಕಾದ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಂಡ್ಯದ 37 ವರ್ಷ ವಯಸ್ಸಿನ ಸಾಫ್ಟ್​​ವೇರ್ ಡೆವಲಪರ್ ಮಧು ಚಂದನ್ ಎಸ್.ಸಿ ಎಂಬುವರೇ ಆ ಹಿರೋ.

image


ಮಧು ಚಂದನ್ ವಿಪ್ರೋ, ಎಚ್​​.ಪಿ. ಸೇರಿದಂತೆ ಅಮೆರಿಕಾದ ಕಂಪನಿಯೊಂದರಲ್ಲಿ ಉನ್ನತ ಹುದ್ದೆ ನಿರ್ವಹಿಸಿ ಲಕ್ಷಾಂತರ ರೂಪಾಯಿ ಸಂಬಳ ಪಡೆಯುತ್ತಿದ್ದರು. ಇಡೀ ರಾಜ್ಯಕ್ಕೆ ಸಕ್ಕರೆ ಹಂಚುವ ಖ್ಯಾತಿ ಹೊಂದಿರುವ ಮಂಡ್ಯದಲ್ಲಿ ಈ ವರ್ಷ ರೈತರು ಅತಿ ಹೆಚ್ಚು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಕ್ಕರೆ ಕಾರ್ಖಾನೆಗೆ ಸರಬರಾಜು ಮಾಡಿದ ಕಬ್ಬಿನ ಬಾಕಿ ಹಣ ಸಿಗದೆ, ಸರಿಯಾದ ಸಮಯಕ್ಕೆ ನೀರು ಸರಬರಾಜಗದೆ ಬೆಳೆ ನಷ್ಟದಿಂದ ಪಾರಾಗಲು ಸಾಲ ಮಾಡಿಕೊಂಡು ತೀರಿಸಿಕೊಳ್ಳಲಾಗದೆ ಇದ್ದ ಮಂಡ್ಯ ಜಿಲ್ಲಾ ರೈತರಿಗೆ, ಸ್ವಾವಲಂಬಿಗಳಾಗಿ ಸಾವಯವ ಕೃಷಿ ಮಾಡಿ ಹೇಗೆ ಬದುಕುಬಹುದೆನ್ನವುದನ್ನು ಸಾಧಿಸಿ ತೋರಿಸಿದ್ದಾರೆ. ಮಧು ಚಂದನ್ ಮಂಡ್ಯದಲ್ಲಿ ಗ್ರಾಮೀಣ ಸಹಕಾರ ಸೊಸೈಟಿ ಮತ್ತು ಕೃಷಿ ಆಧಾರಿತ ಉದ್ದಿಮೆಯನ್ನು ಸ್ಥಾಪಿಸಲು ನಿರ್ಧರಿಸಿ ಅದನ್ನು ಕೇವಲ 13 ತಿಂಗಳುಗಳಲ್ಲೇ ಸಾಕಾರ ಮಾಡಿದ್ದಾರೆ. ಇದರಿಂದಾಗಿ 300 ಕ್ಕೂ ಹೆಚ್ಚು ರೈತರ ಬದುಕಿಗೆ ಹೊಸ ತಿರುವು ಸಿಕ್ಕಿದೆ.

image


2014ರ ವರೆಗೂ ಅಮೆರಿಕದ ಕ್ಯಾಲಿಫೋರ್ನಿಯಾ ಮೂಲದ ಐಟಿ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಮಧು ಚಂದನ್, ಸೈಂಟ್​​​ ಜೋಸ್​​ನಲ್ಲಿದ್ದ ಮತ್ತೊಂದು ಖಾಸಗಿ ಕಂಪನಿಯ ಸಹ ಸಂಸ್ಥಾಪಕರಾದರು. ಅವರು ಈ ಕಂಪೆನಿಗೆ ಸಿದ್ದಪಡಿಸಿದ್ದ ತಂತ್ರಾಂಶ ಭಾರಿ ಯಶಸ್ಸು ತಂದುಕೊಟ್ಟಿತ್ತು. ಇದರಿಂದ ಹಣಗಳಿಕೆಯು ಹೆಚ್ಚುತ್ತಾ ಹೋಯಿತು ಪತ್ನಿ ಮತ್ತು ಪುತ್ರಿಯೊಂದಿಗೆ ಸುಖಕರ ಜೀವನ ನಡೆಸುತ್ತಿದ್ದರು. ಆದರೆ ಅವರ ಮನಸ್ಸು ಮಾತ್ರ ಸಾಫ್ಟ್​​ವೇರ್ ಬಿಟ್ಟು ಸಾವಯುವ ಕೃಷಿ ಕ್ಷೇತ್ರದತ್ತ ಸೆಳೆಯುತ್ತಿತ್ತು. ಕಡೆಗೆ ಗಟ್ಟಿ ನಿರ್ಧಾರ ಮಾಡಿದ ಮಧು 2014ರ ಆಗಸ್ಟ್​​ನಲ್ಲಿ ಮಂಡ್ಯಕ್ಕೆ ಹಿಂತಿರುಗಲು ನಿರ್ಧಾರ ಮಾಡಿ ಬಿಟ್ಟರು.

image


ಕೃಷಿ ಸುಲಭವಲ್ಲ ಎಂಬ ಅರಿವು

ಮೊದಲಿನಿಂದಲೂ ಕೃಷಿಯ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಮಧು ಅವರಿಗೆ ಸ್ವಲ್ಪ ದಿನಗಳ ಕಾಲ ಹೊರಗೆ ದುಡಿದುಕೊಂಡು ಹುಟ್ಟೂರಿನಲ್ಲಿ ತೋಟದ ಮನೆ ಕಟ್ಟಿಕೊಂಡು ಕೃಷಿ ಮಾಡಬೇಕೆಂಬ ಆಸೆ ಇತ್ತು. ಆದರೆ ಅವರು ಊರಿಗೆ ವಾಪಾಸ್ಸಾದಾಗ, ಮಂಡ್ಯ ಜಿಲ್ಲೆಯ ರೈತರ ಪರಿಸ್ಥಿತಿ ನೋಡಿ ಕೃಷಿ ಅಂದುಕೊಂಡದ್ದು ಅಷ್ಟು ಸುಲಭವಲ್ಲ ಎಂದು ತಿಳಿಯಿತು. ರೈತರ ಪರಿಸ್ಥಿತಿ ಅರಿಯಲು ಮಧು ಚಂದನ್ ಮಂಡ್ಯದ ಕೆಲ ಭಾಗಗಳಿಗೆ ಪ್ರವಾಸ ಮಾಡಿದರು. ಆಗ ಅವರಿಗೆ ಅರಿವಿಗೆ ಬಂದದ್ದು ನೀರಾವರಿ ಭೂಮಿಯಿದ್ದರು, ಬೆಳೆಯನ್ನು ಕೆಲವು ಬಾರಿ ಸರಿಯಾದ ಸಮಯಕ್ಕೆ ಬೆಳೆಯಲಾಗುತ್ತಿಲ್ಲ, ಕಬ್ಬು ಮತ್ತು ಭತ್ತಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲ ಎನ್ನುವುದು.

image


ಈ ಸಮಸ್ಯೆಗೆ ಏನಾದರೂ ಪರಿಹಾರ ಪಡೆಯಲೇ ಬೇಕೆಂದು ತೀರ್ಮಾನಿಸಿ ಮಧು, ಪತ್ನಿ ಮತ್ತು ಮಗಳನ್ನು ಬೆಂಗಳೂರಿನಲ್ಲಿ ಮನೆ ಮಾಡಿ ಬಿಟ್ಟರು. ತಾವು ಮಂಡ್ಯದ ತನ್ನ ಕೆಲ ಸ್ನೇಹಿತರು, ರೈತರ ಜತೆಗೆ ಚರ್ಚಿಸಿದರು.

ಆರ್ಗ್ಯಾನಿಕ್ ಮಂಡ್ಯ ಎಂಬ ಸೂಪರ್ ಮಾರ್ಕೆಟ್

ಆಗ ಅವರಿಗೆ ಮನಸ್ಸಿಗೆ ಬಂದ ಆಲೋಚನೆ ಸಾವಯವ ಕೃಷಿ ಉತ್ಪನ್ನಗಳ ಮಾರಾಟ ಮಾಡುವುದು. ಅದಕ್ಕಾಗಿ ಒಂದು ಮಳಿಗೆಯನ್ನು ತೆರೆಯಬೇಕೆಂದು. ಹಾಗಾಗಿ ಸ್ನೇಹಿತರನ್ನು, ರೈತರನ್ನು ಜತೆಗೂಡಿಸಿ ಬೆಂಗಳೂರು-ಮೈಸೂರು ಹೆದ್ದಾರಿಯ ಮಂಡ್ಯದ ಬುದನೂರಿನಲ್ಲಿ ‘ಆರ್ಗ್ಯಾನಿಕ್ ಮಂಡ್ಯ’ ಎಂಬ ಸಾವಯವ ಸೂಪರ್ ಮಾರುಕಟ್ಟೆಯನ್ನು ಸ್ಥಾಪಿಸಿಯೇ ಬಿಟ್ಟರು. ಈ ಆರ್ಗ್ಯಾನಿಕ್ ಮಂಡ್ಯದಲ್ಲಿ ಸಾವಯವ ಕಬ್ಬು, ತರಕಾರಿ, ತೆಂಗಿನಕಾಯಿ, ಧಾನ್ಯಗಳು, ತೈಲ ಬೀಜಗಳು ಸೇರಿದಂತೆ ನಾನಾ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ಸೂಪರ್ ಮಾರುಕಟ್ಟೆಯಲ್ಲಿ ಸಾವಯವ ಪದಾರ್ಥಗಳಿಂದ ತಯಾದ ಆಹಾರಗಳ ರೆಸ್ಟೊರೆಂಟ್, ಸಾವಯವ ಜ್ಯೂಸ್ ಸೆಂಟರ್ ಇದೆ. ಇಲ್ಲಿ ತಾರಸಿ ತೋಟ ನಿರ್ಮಿಸಲು ಬೇಕಾದ ಸಾಧನಗಳು ಸಹ ದೊರೆಯುತ್ತವೆ. ಕಳೆದ ಅಕ್ಟೋಬರ್ 1ರಂದು ಆರಂಭವಾಗಿರುವ ಆರ್ಗ್ಯಾನಿಕ್ ಮಂಡ್ಯ ಉದ್ಘಾಟನೆಯಾಗಿ ಕೇಲವೇ ದಿನಗಳಲ್ಲಿ 12 ಲಕ್ಷಕ್ಕೂ ಹೆಚ್ಚು ವಹಿವಾಟು ನಡೆಸಿದೆ. ವಾರ್ಷಿಕ 36 ಕೋಟಿ ರೂಪಾಯಿಗೂ ಹೆಚ್ಚು ವಹಿವಾಟು ನಡೆಸುವ ವಿಶ್ವಾಸ ಅವರಲ್ಲಿದೆ.

image


ಕಬ್ಬು ಪ್ರತಿ ಟನ್ನಿಗೆ 3500 ರೂ.

ಮಧುಚಂದನ್ ಸ್ಥಾಪಿಸಿರುವ ಈ ಸಹಕಾರ ಸಂಘದಲ್ಲಿ 270 ಮಂದಿ ಸದಸ್ಯರಿದ್ದು, ಮಂಡ್ಯದ ವಿಸಿ ಫಾರ್ಮ್​ನಲ್ಲಿರುವ ಸಾವಯವ ಬೆಲ್ಲದ ಉಪ ಉತ್ಪನ್ನಗಳನ್ನು ತಯಾರಿಸುವ ಹಕ್ಕುಗಳನ್ನು ಪಡೆದಿದೆ. ಇಲ್ಲಿ ರೈತರಿಂದ ಸಾವಯವ ವಿಧಾನದಲ್ಲಿ ಬೆಳೆದ ಕಬ್ಬಿಗೆ ಪ್ರತಿ ಟನ್ನಿಗೆ 3,501 ರೂ. ದರದಲ್ಲಿ ಖರೀದಿಸಲಾಗುತ್ತಿದೆ. ಭಾರತದಲ್ಲಿ ಎಲ್ಲಿಯೂ ರೈತರಿಗೆ ಕಬ್ಬಿಗೆ ಇಷ್ಟು ದೊಡ್ಡ ಮೊತ್ತದ ದರವನ್ನು ಸರಕಾರವಾಗಲಿ, ಸಕ್ಕರೆ ಕಾರ್ಖಾನೆಯಾಗಲಿ ಕೊಡುವುದಿಲ್ಲ ಎನ್ನುತ್ತಾರೆ ಮಧು ಚಂದನ್. ಸಹಕಾರ ಸಂಘದಲ್ಲಿರುವ ಇತರ ನಿರ್ದೇಶಕರು ಇದರ ಬಗ್ಗೆ ಕೇಳಿದರೆ ಮಾರುಕಟ್ಟೆ ದೊಡ್ಡದಿರುವ ಕಾರಣ ನಮಗೆ ಸಿಗುವ ಲಾಭವನ್ನು ರೈತರಿಗೆ ಹಂಚುತ್ತಾರಾಂತೆ ಮಧುಚಂದನ್. ನಿಮಗೂ ಸಾವಯುವ ವಸ್ತುಗಳನ್ನು ಬಳಸುವ ಆಸಕ್ತಿ ಇದ್ದರೆ ಆರ್ಗ್ಯಾನಿಕ್ ಮಂಡ್ಯಗೆ ಭೇಟಿ ನೀಡಬಹುದು. ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವ ಟೆಕ್ಕಿಗಳಿಗೇನು ಗೊತ್ತು ರೈತರ ಕಷ್ಟ ಎನ್ನುವ ಈ ಕಾಲದಲ್ಲಿ ಮಧು ಅವರ ಕೆಲಸ ನಿಜಕ್ಕೂ ಶ್ಲಾಘನೀಯ.

"ಸದ್ಯ ಮಂಡ್ಯ ನಗರ, ಬೆಂಗಳೂರು, ಮೈಸೂರು ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ಈ ಸಹಕಾರ ಸಂಘದ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಇದೆ. ಇನ್ನು ಮುಂದಿನ ದಿನಗಳಲ್ಲಿ ಫೇಸ್​​ಬುಕ್ ಮೂಲಕ ಹೆಚ್ಚೆಚ್ಚು ಗ್ರಾಹಕರನ್ನು ಸೆಳೆಯಲಾಗುವುದು. ಮಾರುಕಟ್ಟೆ ವಿಸ್ತರಣೆಗೆ ಸಾಮಾಜಿಕ ಜಾಲ ತಾಣಗಳನ್ನು ಬಳಸಿಕೊಳ್ಳಲಾಗುವುದು". ಮಧು ಚಂದನ್, ಯುವ ಸಾಹಸಿ ರೈತ

 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags

Latest Stories