ಸ್ಟಾರ್ಟ್​ಅಪ್​ ಯಶಸ್ಸಿಗೆ ಏನೇನು ಮುಖ್ಯ..?

ಟೀಮ್​ ವೈ.ಎಸ್​. ಕನ್ನಡ

ಸ್ಟಾರ್ಟ್​ಅಪ್​ ಯಶಸ್ಸಿಗೆ ಏನೇನು ಮುಖ್ಯ..?

Friday May 26, 2017,

3 min Read

ಒಂದೇ ಸಂಬಳಕ್ಕೆ ಕೆಲಸ ಮಾಡುವುದು, ಇವತ್ತಿನ ದುನಿಯಾದಲ್ಲಿ ಕಷ್ಟದ ಕೆಲಸ. ಹಾಗಂತ ಬೇರೆ ಬೇರೆ ಕೆಲಸ ಮಾಡಲು ಸಮಯ ಸಾಕಾಗುವುದಿಲ್ಲ. ಹೀಗಾಗಿ ಇವತ್ತು ಸ್ವಂತ ಉದ್ಯಮ ನಡೆಸುವ ಬಗ್ಗೆ ಯುವ ಜನತೆ ಕನಸುಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ. ಉದ್ಯಮಿಯಾಗು ಉದ್ಯೋಗ ನೀಡುವ ಅನ್ನುವ ಯೋಚನೆ ಇರುವುದು ಸುಳ್ಳಲ್ಲ. ಆದ್ರೆ ಉದ್ಯಮಕ್ಕೆ ಬೇಕಾದ ಹಣಕಾಸು ಸಮಸ್ಯೆಯ ಮೂಲವಾಗುತ್ತದೆ. ಆರಂಭಿಕ ಉದ್ಯಮಗಳಲ್ಲಿ ಬಹುತೇಕ ಉದ್ಯಮಿಗಳು ಹಿನ್ನಡೆ ಕಾಣುವುದು ಇಲ್ಲೇ. ಯಾಕಂದ್ರೆ ಮೂಲ ಬಂಡವಾಳವಿಲ್ಲದೆ ಉದ್ಯಮ ನಡೆಸುವುದು ಕಷ್ಟಸಾಧ್ಯವೇ ಸರಿ.

image


ಯಾವುದೇ ಉದ್ದಿಮೆ ಅಥವಾ ಸ್ಟಾರ್ಟ್ ಅಪ್ ಗಳನ್ನ ಶುರುಮಾಡುವುದು ಸರಿ ಎನಿಸಿದ್ರೂ, ಅದಕ್ಕೆ ಅಗತ್ಯವಿರುವ ಬಂಡವಾಳವನ್ನ ಹರಿಸುವುದು ಅಷ್ಟು ಸುಲಭವಲ್ಲ.. ಅದೆಷ್ಟೋ ಸ್ಟಾರ್ಟ್ ಅಪ್ ಗಳ ಮಾಲಿಕರು ತಮ್ಮ ಬಹುಪಾಲು ಸಮಯವನ್ನ ಬಂಡವಾಳದ ಮೂಲ ಹುಡುಕುವುದಕ್ಕಾಗೇ ಮೀಸಲಿಡುತ್ತಾರೆ. ತಮ್ಮ ಶಕ್ತಿ ಸಾಮರ್ಥ್ಯಗಳನ್ನ ಇದಕ್ಕಾಗೇ ವಿನಿಯೋಗಿಸುತ್ತಾರೆ. ಇನ್ವೆಸ್ಟರ್ಸ್​ಗಾಗಿ ಹುಡುಕಾಡುತ್ತಾ ಕಾನ್ಫರೆನ್ಸ್ ಗಳಲ್ಲಿ ಭಾಗವಹಿಸುತ್ತಾ ಪ್ರಯತ್ನ ಪಡುತ್ತಿರುತ್ತಾರೆ. ಜೊತೆಗೆ ತಮ್ಮ ಉದ್ಯಮದ ಬಗ್ಗೆ ಮಾರುಕಟ್ಟೆ ಸೃಷ್ಠಿಸಿಕೊಳ್ಳಲು ಹಾಗೂ ಇತರರ ಗಮನ ಸೆಳೆಯಲು ಇನ್ನಿಲ್ಲದ ರೀತಿ ಪಾಡು ಪಡುತ್ತಿರುತ್ತಾರೆ. ಆದ್ರೆ ತಮ್ಮ ಶ್ರಮದ ಬಗ್ಗೆ, ತಾವು ಆಯ್ಕೆ ಮಾಡಿಕೊಂಡಿರುವ ದಾರಿಯ ಬಗ್ಗೆ ಯಾವತ್ತಿಗೂ ಯೋಚಿಸುವುದಿಲ್ಲ. ಜೊತೆಗೆ ಪದೇ ಪದೇ ಕೇವಲ ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಮೇಲೆ ಅವಲಂಬಿತರಾಗಿ ಸಮಯ ವ್ಯರ್ಥಮಾಡಿಕೊಳ್ಳುತ್ತಿದ್ದಾರೆ. ಆದ್ರೆ ಅವರ ಈ ಎಲ್ಲಾ ಸರ್ಕಸ್ ಗಳು ಮಾರುಕಟ್ಟೆಯನ್ನ ಸೆಳೆಯಲು ಹಾಗೂ ತಾವು ಆರಂಭಿಸಿರುವ ಸ್ಟಾರ್ಟ್ ಅಪ್ ಬಗ್ಗೆ ಪುನರ್ ಅವಲೋಕಿಸಿಕೊಳ್ಳಲು ಅನ್ನೋದ್ರಲ್ಲಿ ಅನುಮಾನವಿಲ್ಲ. ಆದ್ರೆ ಕೆಲವೊಂದು ಸೂತ್ರಗಳನ್ನ ಸೂಕ್ತ ಸಮಯದಲ್ಲಿ ಪಾಲಿಸಿದ್ರೆ ಅವರಿಗೆ ಬಂಡವಾಳವನ್ನ ಹುಡುಕಿಕೊಳ್ಳುವುದು ಹಾಗೂ ಮಾರುಕಟ್ಟೆಯಲ್ಲಿ ಗಟ್ಟಿಗರಾಗಿ ಉಳಿಯುವುದು ಎರಡೂ ಕಷ್ಟವಲ್ಲ. ಒಬ್ಬ ಆಟಗಾರನಿಗೆ ಪ್ರತೀ ಪಂದ್ಯ ಹಾಗೂ ಮೈದಾನ ಹೇಗೆ ಭಿನ್ನವಾಗಿರುತ್ತದೆಯೋ ಹಾಗೇ ಪ್ರತೀ ಉದ್ಯಮಿಗೂ ಪ್ರತೀ ದಿನವೂ ವಿಭಿನ್ನವಾಗಿರುತ್ತದೆ. ಹೀಗಾಗಿ ಭಿನ್ನ ಯೋಚನೆಗಳ ಹೊರತಾಗಿ ದೊಡ್ಡ ಮಟ್ಟದ ಬಂಡವಾಳವನ್ನ ಹರಿಸುವುದು ಸ್ಪಲ್ಪ ಕಷ್ಟ. ಹೀಗಾಗಿ ಅಂತಹವರಿಗಾಗಿ ಕೆಲವು ಸಿದ್ಧ ಸೂತ್ರಗಳು ಇಲ್ಲಿವೆ.

ಇದನ್ನು ಓದಿ: ಕೈ ತುಂಬಾ ಸಂಬಳ ಬರುವ ಕೆಲಸ ಬಿಟ್ರು- ಬಡವರ ಆರೋಗ್ಯ ಸೇವೆಗೆ ನಿಂತ ಮೊಬೈಲ್ ಡಾಕ್ಟರ್..!

 ಸೂಕ್ತ ಯೋಜನೆಗಳು ಜೊತೆಗಿರಲಿ

ಯಾವುದೇ ಪೂರ್ವ ಯೋಜನೆಗಳಿಲ್ಲದೆ ಫಂಡ್ ಗಾಗಿ ಹುಡುಕಾಡುವುದು ಅಷ್ಟೊಂದು ಸೂಕ್ತವಾದ ನಡೆಯಲ್ಲ. ಹೀಗಾಗಿ ನಿಮ್ಮ ಯೋಚನೆ ಹಾಗೂ ಯೋಜನೆಗಳನ್ನ ಆಗಾಗ ಪರೀಕ್ಷಿಸುತ್ತಾ, ಅವಲೋಕಿಸುವುದು ಅನಿವಾರ್ಯ. ಹೀಗೆ ಮಾಡಿದಾಗ ಮಾತ್ರ ನಿಮ್ಮ ಐಡಿಯಾಗಳು ಎಷ್ಟು ಹೊಸತನವಾಗಿದೆ, ಎಷ್ಟರ ಮಟ್ಟಿಗೆ ವಿಭಿನ್ನತೆಯಿಂದ ಕೂಡಿದೆ ಅನ್ನುವುದು ಅರಿವಿಗೆ ಬರುತ್ತದೆ. ಹೀಗಾಗಿ ನಿಮ್ಮ ಯೋಜನೆಗಳ ಬಗ್ಗೆ ಮೊದಲು ಭಿನ್ನತೆ ಕಂಡುಬಂದ್ರೆ ಅದು ಮಾರುಕಟ್ಟೆಯಲ್ಲಿ ಆಕರ್ಷಿತವಾಗಿರುತ್ತದೆ ಅನ್ನೋದ್ರಲ್ಲಿ ಅನುಮಾನವಿಲ್ಲ. ಅಲ್ಲದೆ ಆ ಭಿನ್ನ ಆಲೋಚನೆಗಳೇ ನಿಮ್ಮ ಉದ್ಯಮಕ್ಕೆ ಅಡಿಪಾಯವಾಗಿರುತ್ತೆ.

ಮಾದರಿ ಆಲೋಚನೆಗಳಿರಲಿ 

ನಿಮ್ಮ ಯಾವುದೇ ಆಲೋಚನೆಯಾಗಿರಲಿ ಅಥವಾ ಹೊಸ ದಾರಿಯಲ್ಲಿ ಇಡುವ ಹೆಜ್ಜೆಯಾಗಲಿ ಅದರ ಬಗ್ಗೆ ಹಲವು ಬಾರಿ ಯೋಚಿಸುವುದು ಅತ್ಯುತ್ತಮ. ಅಲ್ಲದೆ ಅದನ್ನ ಇತರ ಅಭಿಪ್ರಾಯಗಳನ್ನ ಪಡೆಯಲು ವೇದಿಕೆಯನ್ನಾಗಿ ಬದಲಾಯಿಸುವುದು ಹೆಚ್ಚು ಸೂಕ್ತ. ನಿಮ್ಮ ಆತ್ಮೀಯರನ್ನೇ ಗ್ರಾಹಕರ ದೃಷ್ಠಿಯಿಂದ ನೋಡಿ ಅವರಿಂದ ವಿಶ್ಲೇಷಣೆಗಳನ್ನ ಪಡೆದ್ರೆ ಒಂದು ಉತ್ತಮ ಫಲಿತಾಂಶ ಸಿಗುವುದರಲ್ಲಿ ಅನುಮಾನವಿಲ್ಲ. ಇದ್ರ ನಂತರ ಮಾರುಕಟ್ಟೆಯ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಪಕ್ಕಾ ಬ್ಲ್ಯೂ ಪ್ರಿಂಟ್ ತಯಾರಿಸುವುದರಿಂದ ಹೆಚ್ಚು ಲಾಭವಾಗಬಹುದು.

ಕ್ರಿಯಾತ್ಮಕ ಮಾದರಿಗಳಿರಲಿ 

ಬಂಡವಾಳದ ಹುಡುಕಾಟದಲ್ಲಿರುವ ಅದೆಷ್ಟೋ ಮಂದಿಗೆ ಈ ಹಂತ ಅತ್ಯಂತ ಹೆಚ್ಚು ಕಠಿಣವಾಗಿ ಕಾಡಿದ ಉದಾಹರಣೆಗಳೇ ಹೆಚ್ಚು. ಹಾಗಂತ ಈ ಪ್ರಕ್ರಿಯೆ ಅಷ್ಟೊಂದು ಕ್ಲಿಷ್ಟಕರವೂ ಅಲ್ಲ. ಇದಕ್ಕೆ ಚೈನ್ ಸಿಸ್ಟಮ್ ನಲ್ಲಿ ಪ್ರಯತ್ನ ಅತ್ಯಗತ್ಯ. ಫ್ರೆಂಡ್ಸ್.. ಫ್ರೆಂಡ್ ನ ಫ್ರೆಂಡ್ ಹೀಗೆ ಈ ಚೈನ್ ಸಿಸ್ಟಮ್ ನಲ್ಲಿ ಪ್ರಯತ್ನಗಳನ್ನ ಮುಂದುವರಿಸಿದ್ರೆ ಬಂಡವಾಳ ಹುಡುಕಾಟ ಅರ್ಥಪೂರ್ಣವಾಗಿರುತ್ತೆ. ಬಹಿರಂಗ ಪಡಿಸಲಾಗದ ದಾಖಲೆಗಳಂತೆ ಇಲ್ಲಿ ವೈಯುಕ್ತಿಕ ನಂಬಿಕೆಗಳ ಆಧಾರದ ಮೇಲೆ ಎಲ್ಲವೂ ನಡೆಯುವುದರಿಂದ ಪರಸ್ಪರ ಐಡಿಯಾಗಳು ಒಂದೇ ತೆರನಾದಂತೆ ಇರಲು ಸಾಧ್ಯವಿಲ್ಲ. ಹೀಗಾಗಿ ಹಳೇ ಸಂಪ್ರದಾಯಗಳಿಗೆ ಬ್ರೇಕ್ ಹಾಕಿ ಹೊಸತನದಲ್ಲಿ ಇಲ್ಲಿ ಮುಂದುವರಿಯಲು ಸಾಧ್ಯವಾಗುತ್ತದೆ.

ನಿಮ್ಮ ಸ್ಟಾರ್ಟ್ ಅಪ್ ಗ್ರಾಹಕರ ಮನಸ್ಥಿತಿ ತಲುಪುವಂತಿರಲಿ

ಇದು ಹೊಸ ಉದ್ಯಮಿಗಳಿಗೆ ಮತ್ತೊಂದು ಅಗ್ನಿಪರೀಕ್ಷೆಯೇ ಸರಿ.. ಯಾಕಂದ್ರೆ ನೀವು ಈ ಹಂತದಲ್ಲಿ ತೆಗೆದುಕೊಳ್ಳುವ ಪ್ರತೀ ನಿರ್ಧಾರ ಹೆಚ್ಚು ನಿರ್ಣಾಯಕವಾಗಿರುತ್ತದೆ. ಇರುವ ಅವಕಾಶದಲ್ಲಿ ಹೊಸ ಉದ್ಯಮಿಗಳು ಗ್ರಾಹಕರ ಮನಸ್ಥಿತಿಗೆ ಪ್ಲಾನ್ ಗಳನ್ನ ಮಾಡಿದ್ರೆ ಅದೇ ನಿಮ್ಮ ಯಶಸ್ಸಿಗೆ ಪ್ರಮುಖ ಅಸ್ತ್ರವಾಗಿರುತ್ತದೆ. ಇನ್ನು ಗ್ರಾಹಕರ ಮನಸ್ಥಿಯನ್ನ ಅರಿತುಕೊಳ್ಳಲು ಹಾಗೂ ಅವರ ನಿರೀಕ್ಷೆಗಳನ್ನ ತಲುಪಲು ಉದ್ಯಮಿಗಳಿಗೆ ಈಗ ಹೆಚ್ಚು ಅವಕಾಶಗಳಿವೆ. ಯಾಕಂದ್ರೆ ಬಹುತೇಕ ಸ್ಟಾರ್ಟ್ ಅಪ್ ಗಳು ಹಾಗೂ ಅವುಗಳ ಸೇವಾದಾರರು ಸೋಶಿಯಲ್ ನೆಟ್ ವರ್ಕ್ ಗಳಲ್ಲಿ ಹೆಚ್ಚು ಸಕ್ರೀಯವಾಗಿರುತ್ತಾರೆ. ಹೀಗಾಗಿ ಇದನ್ನೇ ಬಂಡವಾಳವನ್ನಾಗಿಸಿಕೊಂಡ್ರೆ ಸುಲಭವಾಗಿ ಅವರನ್ನ ತಲುಪಲು ಸಾಧ್ಯವಾಗುತ್ತದೆ. ಒಂದೊಮ್ಮೆ ಆರಂಭದಲ್ಲೇ ಅವರಿಂದ ಉತ್ತಮ ಪ್ರತಿಕ್ರಿಯೆಗಳು ಸಿಕ್ಕಿದ್ರೆ ಬಂಡವಾಳದ ನಿರೀಕ್ಷೆಗಳೂ ಸಾಕಾರಗೊಳ್ಳುತ್ತವೆ.

ನಿಮ್ಮ ಉತ್ಪನ್ನಗಳ ಬಗ್ಗೆ ಸರಿಯಾದ ಅಂದಾಜಿರಲಿ, ಪರಿಹಾರವೂ ಇರಲಿ..

ಒಂದೊಮ್ಮೆ ನೀವು ಈ ಹಿಂದೆ ತಿಳಿಸಲಾದ ಹಂತಗಳನ್ನೆಲ್ಲಾ ಯಶಸ್ವಿಯಾಗಿ ಮೀರಿದ್ದೇ ಆದ್ರೆ , ನೀವು ಹೆಚ್ಚಿನ ಗಮನ ಕೊಡಬೇಕಾಗಿರುವುದು ಉತ್ಪಾದನಾ ಹಂತದಲ್ಲಿ. ಇಲ್ಲಿ ನೀವು ಯಾವ ಬಗೆಯ ಕ್ಷೇತ್ರದಲ್ಲಿದ್ದೀರಿ. ನಿಮ್ಮಿಂದ ಮಾರುಕಟ್ಟೆಗೆ ಬರಬಹುದಾದ ಉತ್ಪನ್ನಗಳೇನು ಹಾಗೂ ಒಂದೊಮ್ಮೆ ಆರಂಭಿಕ ಹಂತದಲ್ಲೇ ಅವುಗಳಲ್ಲಿ ಎಡವಟ್ಟಾದ್ರೆ ಅದನ್ನ ಪರಿಹರಿಸಲು ನಿಮಗಿರುವ ಇತಿಮಿತಿಗಳೇನು ಅನ್ನೋದನ್ನ ತಿಳಿದುಕೊಳ್ಳುವುದು ಹೆಚ್ಚು ಸೂಕ್ತ. ಇದರಿಂದಾಗಿ ಮಾರುಕಟ್ಟೆಯಲ್ಲಿರುವ ಇರುವ ಪೈಪೋಟಿಯನ್ನ ಅರಿತುಕೊಳ್ಳುವುದರ ಜೊತೆಗೆ ನೀವಿಟ್ಟಿರುವ ಗುರಿಯ ಬಗ್ಗೆಯೂ ಮತ್ತೊಮ್ಮೆ ಯೋಚಿಸಲು ಇಲ್ಲಿ ಅವಕಾಶವಿರುತ್ತದೆ.

ಆರಂಭಿಕ ಹಂತದಲ್ಲಿರುವ ಸವಾಲುಗಳನ್ನ ಮೀರಿ ನಿಂತ್ರೆ ನಂತ್ರ ಯೋಚಿಸಬೇಕಾಗಿರುವುದು ಹಣವನ್ನ ಹರಿಯಲು ಬಿಡಲು ಬೇಕಾದ ಮಾರ್ಗ ಹಾಗೂ ಅದನ್ನ ಸುಗಮಗೊಳಿಸಲು ಬೇಕಾಗಿರುವ ತಂತ್ರ. ಇದಕ್ಕೆ ನೀವು ನೆಟ್ ವರ್ಕ್ ಗಳ ಸಂಪರ್ಕ ಪಡೆಯುವುದು ಅನುಕೂಲಕರವಾಗಿರುತ್ತದೆ. ಏಂಜಲ್ ನೆಟ್ ವರ್ಕ್ಸ್, ಲಿಡ್ಕನ್, ಪರ್ಸನಲ್ ಕಾನ್ಟ್ಯಾಕ್ಟ್ ನಂತಹ ನೆಟ್ ಹಬ್ ಗಳಿಂದ ಆರಂಭಿಕ ಹಂತದಲ್ಲಿರುವ ನಿಮಗೆ ಹೆಚ್ಚು ನೆರವಾಗುತ್ತವೆ. ಹೀಗೆ ಪ್ರಯೋಗ ಹಾಗೂ ಪ್ರಯತ್ನಗಳಿಂದಲೇ ಸಾಗಬೇಕಾಗಿರುವುದರಿಂದ ನೀವು ಎಲ್ಲಕ್ಕಿಂತ ಹೆಚ್ಚಾಗಿ ಗಟ್ಟಿರಾಗಿರುವುದು ಹೆಚ್ಚು ಅನಿವಾರ್ಯ. ಹೀಗಾದ್ರೆ ಮಾತ್ರ ನಿಮ್ಮ ಉದ್ದಿಮೆ ಅಥವಾ ಸ್ಟಾರ್ಟ್ ಅಪ್ ಗಳಿಗೆ ನಿರೀಕ್ಷಿತ ಬಂಡವಾಳಗಳು ಹರಿದು ಬರವುದರಲ್ಲಿ ಅನುಮಾನವಿಲ್ಲ. 

ಇದನ್ನು ಓದಿ:

1. ಫೇಸ್​ಬುಕ್​, ಇನ್ಸ್ಟಾಗ್ರಾಂನಲ್ಲಿ ಯುವ ಮನಸ್ಸುಗಳ ಖದರ್​- ಡಬ್​ಸ್ಮಾಶ್​ನಲ್ಲಿ ಇವರು ಸೂಪರ್​..! 

2. ಕಾರ್ಪೋರೇಟ್​ ಕೆಲಸ ಬಿಟ್ಟ ಮಹಿಳೆ- ಪ್ಲಾಸ್ಟಿಕ್​ ವಿರೋಧಿ ಆಂದೋಲನ ಮಾಡುತ್ತಿರುವ "ಬೆಳ್ಳಿ ಕಿರಣ"

3. 5 ದಿನಗಳಲ್ಲಿ 2 ಬಾರಿ ಮೌಂಟ್ ಎವರೆಸ್ಟ್ ಏರಿದ ಧೀರ ಮಹಿಳೆ