Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ಸ.. ರೆ.. ಗ.. ಮೆ.. ಕನ್ನಡ ಮಾತಾಡ್ಬೇಕಮ್ಮಿ..!

ಚೈತ್ರ. ಎನ್​​

ಸ.. ರೆ.. ಗ.. ಮೆ.. ಕನ್ನಡ ಮಾತಾಡ್ಬೇಕಮ್ಮಿ..!

Sunday November 01, 2015 , 3 min Read

  • ಸೆಲೆಬ್ರಿಟಿ: ಪೂರ್ಣಚಂದ್ರ ತೇಜಸ್ವಿ, ರಾಜ್ಯ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕರು
  • ನಿರೂಪಣೆ: ಚೈತ್ರ. ಎನ್​​​

ಸಾಂಸ್ಕೃತಿಕ ನಗರಿ ಮೈಸೂರಿನ ಅಪ್ಪಟ ದೇಸಿ ಪ್ರತಿಭೆ ಲೂಸಿಯಾ ಖ್ಯಾತಿಯ ಚಲನಚಿತ್ರ ಸಂಗೀತ ನಿರ್ದೇಶಕ ಪೂರ್ಣ ಚಂದ್ರ ತೇಜಸ್ವಿ. ಎಂಜಿನಿಯರ್ ಆಗಿದ್ದು, ಕ್ರಿಯೆಟಿವ್ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ವೃತ್ತಿಯನ್ನು ಬಿಟ್ಟು ಸಿನಿಮಾ ಕ್ಷೇತ್ರ ಆಯ್ಕೆ ಮಾಡಿಕೊಂಡವರು. ಲೂಸಿಯಾ ಸಿನಿಮಾದ ತಿನ್‍ಬೇಡ ಕಮ್ಮಿ ಹಾಡು ಪೂರ್ಣರ ಟ್ರೇಡ್ ಮಾರ್ಕ್. ಇದೇ ಸಿನಿಮಾಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಇನ್ನು ಚತುರ್ಭುಜ, ರಾಕೇಟ್, ವಾಸ್ಕೋಡಿಗಾಮ ಚಿತ್ರಕ್ಕೆ ಸಂಗೀತ ನಿರ್ದೇಶಿಸಿ ಹಲವಾರು ಯುವ ಮನಸನು ಸೆಳೆದಿದ್ದಾರೆ. ಸದ್ಯ ಎಲ್ಲೆಡೆ ಬಿರುಗಾಳಿ ಎಬ್ಬಿಸಿರುವ ಬಾರಿಸು ಕನ್ನಡ ಡಿಂ ಡಿಮವ ಹಾಡಿನ ಮೂಲಕ ವಿದೇಶದಲ್ಲೂ ಕನ್ನಡದ ಕಂಪನ್ನು ಪಸರಿಸಿದ್ದಾರೆ. ಕನ್ನಡ ರಾಜ್ಯೋತ್ಸವದ ವಿಶೇಷ ಸಂದರ್ಭದಲ್ಲಿ ಯುವರ್ ಸ್ಟೋರಿಯಲ್ಲಿ ತಮ್ಮ ಕನ್ನಡದ ಪ್ರೀತಿಯನ್ನು ಅಭಿವ್ಯಕ್ತಿಸಿದ್ದು ಹೀಗೆ.

ಕನ್ನಡದ ಹಬ್ಬಕ್ಕೆ ದಿನವೊಂದು ಬೇಕಾ ಅನ್ನೋದ್ರ ಬಗ್ಗೆ ಬಾರಿ ಚರ್ಚೆಗಳನ್ನು ಗಮನಿಸಿದ್ದೇವೆ. ಆದರೆ ನನಗನ್ನಿಸೋದು ಇಂದಿನ ಕನ್ನಡದ ಸ್ಥಿತಿಗತಿಗಳನ್ನ ಸುಧಾರಿಸಲು ಖಂಡಿತಾ ಕನ್ನಡಕ್ಕೆ ದಿನವೊಂದು ಅಗತ್ಯವಿದೆ. ನಮ್ಮಲ್ಲಿ ಗಿಡ ಬೆಳೆದು ಫಲ ಕೊಟ್ಟರು ಅದನ್ನ ಸಂಕ್ರಾಂತಿ ಅಂತ ಆಚರಿಸುತ್ತೇವೆ. ಇನ್ನು ದಿನ ನಿತ್ಯ ನಮ್ಮ ಬದುಕೇ ಆಗಿರುವ ಭಾಷೆಯನ್ನು ಮರೆಯೋದಾದರೂ ಹೇಗೆ? ಆದರೆ ಒಂದು ನಾವು ಈ ಒಂದು ದಿನವಷ್ಟೇ ಅಲ್ಲ. ಪ್ರತಿದಿನವೂ ಕಛೇರಿಗಳಲ್ಲಿ , ದಿನನಿತ್ಯದ ವ್ಯವಹಾರಗಳಲ್ಲಿ ಕನ್ನಡವನ್ನು ಬಳಸಲೇಬೇಕು. ಇನ್ನು ಕನ್ನಡ ರಾಜ್ಯೋತ್ಸವ ನಮ್ಮ ಮನೆಯ ಹಬ್ಬ . ಹಬ್ಬದ ದಿನದಂದೇ ಎಲ್ಲರೂ ಒಗ್ಗೂಡುವುದು, ಆಗಲೇ ಬದುಕು ಮತ್ತು ಭಾಷೆ ಬೆಳೆಯುವುದು. ಆದ್ದರಿಂದ ಕರ್ನಾಟಕ ಮತ್ತು ಕನ್ನಡಕ್ಕೆ ಸಾಕಷ್ಟು ತೊಡಕುಗಳು ಉಂಟಾದರೂ ಕನ್ನಡದ ಹಬ್ಬವನ್ನು ನಾವು ಮರೆತರೇ ಆ ಸಮಸ್ಯೆಗಳಿಗೆ ಇನ್ನಷ್ಟು ಪುಷ್ಠಿ ಕೊಟ್ಟಂತೆ. ಆದರೆ ಅದು ನವೆಂಬರ್ 1 ಕ್ಕೆ ಮಾತ್ರ ಸೀಮಿತವಾಗಬಾರದು.

image


ನಾಡಿನ ಸಮಸ್ಯೆಗಳನ್ನ ಮನೆಯಲ್ಲಿ ಕುಳಿತು ಬಗೆಹರಿಸುವುದಕ್ಕಿಂತಲೂ ಹೀಗೆ ಎಲ್ಲರೂ ಒಗ್ಗೂಡಿ ಹಬ್ಬದ ವಾತವರಣದಲ್ಲಿ ಆಲೋಚಿಸಬೇಕು. ಏಕಮುಖವಾಗಿ ಯೋಚಿಸೋ ಸಾಧ್ಯತೆ ಇರುತ್ತದೆ. ಈಗಾಗಲೇ ಹದಗೆಟ್ಟಿರುವ ಪರಿಸ್ಥಿತಿಯಲ್ಲಿ ಕನ್ನಡದ ಹಬ್ಬವನ್ನು ಮರೆತರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಹೇಗೆ? ಈಗಾಗಲೇ ಬಿದ್ದು ಸ್ವಗೃಹದಲ್ಲೆ ಅನಾಥ ಶಿಶುವಾಗಿರುವ ಕನ್ನಡಕ್ಕೆ ಹಬ್ಬದ ವಾತಾವರಣದ ಮೂಲಕ ಪಾಸಿಟಿವ್ ಎಲಿಮೆಂಟ್ ತರಬೇಕು. ಇನ್ನು ಕನ್ನಡದ ಕಾರ್ಯಕ್ರಮಗಳಲ್ಲಿ ಕನ್ನಡದ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚೆ ಆಗಬೇಕು. ಹಣವನ್ನು ಒಟ್ಟು ಮಾಡಿ, ಸಮಾಜದಲ್ಲಿ ನೊಂದವರಿಗೆ ತಲುಪಿಸುವ ವ್ಯವಸ್ತೆ ಮಾಡಬಹುದು. ಈ ಹಂತದಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆ ನಮ್ಮ ಮನೆ ಜೊತೆಗೆ ನಮ್ಮ ನಾಡನ್ನು ಒಗ್ಗೂಡಿಸುತ್ತದೆ.

ನೋಡಿ ಕನ್ನಡ ಹೆಚ್ಚೆಚ್ಚು ಯುವ ಮನಸುಗಳನ್ನು ತಲುಪಬೇಕು. ಅದಕ್ಕಾಗಿ ಅವರನ್ನು ಕನ್ನಡದ ಹತ್ತಿರಕ್ಕೆ ಸೆಳೆಯಬೇಕು, ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಬಾರಿಸು ಕನ್ನಡ ಡಿಂ ಡಿಮ ಹಾಡಿಗೆ ದೇಶಿ ಮತ್ತು ವಿದೇಶಿ ಟಚ್ ನೀಡಿದೆ. ಆ ಮೂಲಕ ಯುವ ಮನಸುಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ವೆಸ್ಟರ್ನ್ ಮನಸ್ಥತಿ ತಪ್ಪಲ್ಲ, ಆದರೆ ಅದರ ಜೊತೆಗೆ ಕನ್ನಡದ ಮನಸನ್ನು ಜೊತೆ ಜೊತೆಯಲ್ಲೇ ಜೀವಿಸಬೇಕು, ಆ ಕನ್ನಡದ ಮನಸನ್ನೇ ಎಲ್ಲರಿಗೂ ಫೀಡ್ ಮಾಡಬೇಕು. ಕುವೆಂಪು ಅವರ ಬಾರಿಸು ಕನ್ನಡ ಹಾಡು ಇಂದು ವಿದೇಶ ಮತ್ತು ಹೆಚ್ಚಾಗಿ ಯುವ ಪೀಳಿಗೆಯನ್ನು ತಲುಪುತ್ತಿದೆ, ಮುಖ್ಯವಾಗಿ ನಮ್ಮವರಿಗೆ ನಮ್ಮ ಬಗೆಯ ಕೀಳರಿಮೆಯನ್ನು ಹೋಗಲಾಡಿಸಬೇಕು. ಕನ್ನಡ ಅನ್ನೋದ್ರ ಬಗ್ಗೆ ಬೇರೆ ನೆಲದಲ್ಲೇ ನಿಂತರೂ ಹೆಮ್ಮೆ ಮೂಡಿಸಬೇಕು. ಈ ಎಲ್ಲ ಅಂಶಗಳನ್ನು ಮನಸಿನಲ್ಲಿರಿಸಿಕೊಂಡು ಹುಟ್ಟಿಕೊಂಡ ಹಾಡು ಕುವೆಂಪು ಅವರ ಬಾರಿಸು ಕನ್ನಡ... ಪ್ರತಿಯೊಬ್ಬ ಕನ್ನಡಿಗನಲ್ಲಿರುವ ಕೀಳರಿಮೆ ಯನ್ನು ಬಡಿದೋಡಿಸಲು ಈ ಹಾಡು ಕೆಲಸ ನಿರ್ವಹಿಸುತ್ತದೆ. ನಮ್ಮ ಈ ಹಾಡು ಮೊದಲ ವಾರದಲ್ಲೇ 3 ವರೆ ಲಕ್ಷಕ್ಕೂ ಹೆಚ್ಚು ಜನರನ್ನು ತಲುಪಿತ್ತು. ಎಲ್ಲಾ ವೆಬ್, ಆನ್‍ಲೈನ್ , ಯೂಟ್ಯೂಬ್‍ನಲ್ಲಿ ಸಾಕಷ್ಟು ಕ್ಲಿಕ್‍ಗಳನ್ನು ಪಡೆದಿತ್ತು. ಕೇವಲ 3 ದಿನದಲ್ಲಿ 80,000 ಜನರು ವಿವ್ ಮಾಡಿದ್ದರು.

image


ಇನ್ನು ಕನ್ನಡಿಗನಾಗಿ ನನ್ನ ನೆಲದಲ್ಲಿ ನನಗೆ ಯಾವತ್ತಿಗೂ ನಾನೊಬ್ಬ ಅನ್ಯ ಅನಿಸಿಲ್ಲ. ಆದರೆ ಲೂಸಿಯಾ ಸಿನಿಮಾ ನಂತರ ತಮಿಳುನಾಡು, ಆಂಧ್ರ, ಹೀಗೆ ನಾನಾ ಕಡೆ ಪ್ರಶಸ್ತಿಗಳನ್ನು ಪಡೆಯಲು ಹೊರಟಾಗ ಬಹಳ ನೋವಾಗುತಿತ್ತು. ಕನ್ನಡ ಪ್ರತಿಭೆಯನ್ನು ಗುರುತಿಸಲು ನಮ್ಮ ಸ್ಥಳಿಯರು ಸಿಗುವುದಿಲ್ಲ. ಬೇರೆ ಬೇರೆ ಭಾಷೆಗಳಲ್ಲಿ ಬಸ್‍ಗಳನು ಏರಿಕೊಂಡು ಬಂದು ಆ ಕಲಾವಿದರನ್ನು ಬೆಳೆಸುತ್ತಾರೆ. ಆದರೆ ನಮ್ಮಲ್ಲಿ ಹಾಗಿಲ್ಲ. ಇನ್ನು ಬೇರೆ ಭಾಷೆಯ ಸಿನಿಮಾದ ನಟ ಮಾತನಾಡಿದರೇ ಜನ ಕುಣಿದು ಕುಪ್ಪಳಿಸಿ ಬಿಡುತ್ತಾರೆ. ನಮ್ಮಲ್ಲಿ ನಮ್ಮಕಲಾವಿದರನ್ನು ಗಮನಿಸುವ ಪರಿಯೇ ಇಲ್ಲ. ಅನ್ಯ ಭಾಷೆಯ ಟ್ರೈಲರ್ , ಪ್ರಮೋಷನ್ ವಿಡಿಯೋಗಳು ತೆರೆಯ ಮೇಲೆ ರಾರಾಜಿಸಿದರೆ ಅಲ್ಲಿನ ಜನರಿಂದ ಬರುವ ರಿಯಾಕ್ಷನ್ ನೋಡುವುದೇ ಒಂದು ಚೆಂದ. ಆದರೆ ನಮ್ಮ ಕಲಾವಿದರನನು ಪ್ರೋತ್ಸಾಹಿಸುವ ಚಪ್ಪಾಳೆಯ ಸಂಖ್ಯೆಯೂ ಕೂಡ ಕಡಿಮೆ.

image


ಕನ್ನಡ ಚಿತ್ರರಂಗದವರನ್ನು ಅನ್ಯ ಭಾಷೆಯವರು ಗುರುತಿಸುವ ಪರಿಯೇ ವಿಭಿನ್ನ. ಕನ್ನಡದವರು ಏನೋ ಕಷ್ಟ ಪಟ್ಟು ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಕನಿಕರದಿಂದ ನೋಡುವ ಪರಿಸ್ಥಿತಿ ಇದೆ. ಆ ಮೂಲಕ ಕನ್ನಡದ ಬಗ್ಗೆ ಕನ್ನಡಿಗರ ಶ್ರಮದ ಬಗ್ಗೆ ಅವರಿಗೆ ಅಪಾರ ಗೌರವ, ಹೈದ್ರಬಾದ್, ತಮಿಳು ನಾಡಿನಲ್ಲಿ ನಮ್ಮನ್ನು ಹೀಗೆ ಅಸಹಾಯಕತೆಯಿಂದ ನೋಡಲಾಗುತ್ತಿದೆ. ಇಂತಹ ವಿಷಯವನ್ನೆಲ್ಲಾ ಮೆಟ್ಟಿ ನಿಲ್ಲಲು ಬಾರಿಸು ಕನ್ನಡ ಹಾಡು ಕಿಚ್ಚನ್ನು ಹಚ್ಚುತ್ತದೆ. ಆ ಮೂಲಕ ಕನ್ನಡದ ಬೆಳಕನ್ನು ಎಲ್ಲೆಲ್ಲೂ ಪಸರಿಸುತ್ತದೆ. ಅಮೇರಿಕಾದಲ್ಲಿ ರೇಡಿಯೋದಲ್ಲಿ ಬಿತ್ತರವಾಗುತ್ತಿರೋ ಮೊದಲ ಹಾಡು ಇದು.

ನಾನು ಹುಟ್ಟಿ ಬೆಳೆದದ್ದು ಕರ್ನಾಟಕದಲ್ಲೇ , ಮನೆಯಲ್ಲಿ ಕನ್ನಡದ ವಾತವರಣವಿತ್ತು. ನನ್ನೊಳಗೆ ಅಡಗಿದ್ದ ಒಂದು ಶಕ್ತಿಯನ್ನು ಕನ್ನಡದ ವಾತವಾರಣ ಬಡಿದೆಬ್ಬಿಸಿತ್ತು. ನನ್ನ ಭಾಷೆ ಕನ್ನಡ ಆಗಿರೋದ್ರಿಂದ ಹೆಚ್ಚೆಚ್ಚು ಕ್ರಿಯೆಟಿವ್ ಆಗಿರೋದಕ್ಕೆ ಸಾಧ್ಯವಾಗುತ್ತಿದೆ. ತಿನ್‍ಬೇಡ ಕಮ್ಮಿ ನಮ್ಮ ಗ್ರಾಮೀಣದ ಸೊಗಡು, ಅಚ್ಚ ಕನ್ನಡ ಬೇರು ಇದೇ ನನ್ನನ್ನು ಇಲ್ಲಿಯವರೆಗೆ ತಂದಿರೋದು. ಕನ್ನಡ ನನಗೆ ಎಲ್ಲವನ್ನು ಕೊಟ್ಟಿದೆ. ಇನ್ನು ಕನ್ನಡಕ್ಕೆ ನನ್ನಿಂದಾಗುವ ಅಳಿಲು ಸೇವೆಯನ್ನು ಮಾಡುವ ಜವಾಬ್ದಾರಿಯಲ್ಲಿ ಮುನ್ನಡೆಯುತ್ತಿದ್ದೇನೆ. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.