ಎಂಟರ ನಂಟು ಬಿಡಲಿಲ್ಲ ಬಣ್ಣದ ನಂಟು
ಟೀಮ್ ವೈ.ಎಸ್. ಕನ್ನಡ
ಬಣ್ಣದ ಬದುಕೇ ಹಾಗೇ..ಒಮ್ಮೆ ಮುಖಕ್ಕೆ ಬಣ್ಣ ಸೋಕಿಸಿದ್ರೆ ಆಯ್ತು ಅದು ಉಸಿರು ಇರುವ ತನಕ ಹಾಗೆಯೇ ಉಳಿದಿಕೊಂಡು ಬಿಡುತ್ತದೆ. ನಾವೀಗ ಹೇಳೋದು ಪುಟ್ಟ ಹುಡುಗನ ದೊಡ್ಡ ಕನಸಿನ ಬಗ್ಗೆ. ಕಂಡ ಕನಸನ್ನ ಅಲ್ಪ ಸಮಯದಲ್ಲೇ ನನಸು ಮಾಡಿಕೊಂಡ ಕಲಾವಿದ ಈತ. ಸಿಕ್ಕ ಸಣ್ಣ ಅವಕಾಶವನ್ನ ಬಳಸಿಕೊಂಡು ಇಂದು ಅದ್ಬುತ ಕಲವಿದನಾಗಿ ಕನ್ನಡ ಚಿತ್ರರಂಗದಲ್ಲೇ ಯಶಸ್ಸಿನ ಮೆಟ್ಟಿಲನ್ನ ಒಂದೊಂದಾಗಿ ಏರುತ್ತಿದ್ದಾನೆ. ಎಂಟನೇ ತರಗತಿಯಲ್ಲಿ ಸಿಕ್ಕ ಪುಟ್ಟ ವೇದಿಕೆಯನ್ನ ಸದ್ಭಳಕೆ ಮಾಡಿಕೊಂಡು ಕನ್ನಡ ಸಿನಿಮಾಗಳಲ್ಲಿ ಚಿರಪರಿಚಿತನಟನಾಗಿ ಬೆಳೆಯುತ್ತಿದ್ದಾನೆ.
ಹೇಮಂತ್ ಅನ್ನೋ ಯುವ ಪ್ರತಿಭೆ
ಹೇಮಂತ್.. ಈಗ ತಾನೆ ಚಂದನವನದಲ್ಲಿ ಅರಳುತ್ತಿರೋ ಯುವ ಪ್ರತಿಭೆ. ನಾಟಕಗಳ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟಿರೋ ನಟ. 8ನೇ ತರಗತಿಯಲ್ಲಿ ಶಾಲೆಯಲ್ಲಿ ಸಿನಿಮಾಟೋಗ್ರಾಫರ್ "ಅದ್ವೈತ" ಹಾಗೂ "ಅಪೇಕ್ಷ" ನಡೆಸಿದ ನಾಟಕ ಕಾರ್ಯಗಾರದಲ್ಲಿ ಆಯ್ಕೆಯಾಗಿ ಸುಮಾರು 200ಕ್ಕೂ ಹೆಚ್ಚು ನಾಟಕಗಳನ್ನ ಮಾಡುತ್ತಾ ಬಂದಿರುವ ಪ್ರತಿಭೆ .ಕಲೆಯ ಮೇಲಿರುವ ಶ್ರದ್ದೆ ಹಾಗೂ ನಿಷ್ಠೆ ಇಂದು ಸಿನಿಮಾರಂಗದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದೆ .ಮಾಡಿದ ಒಂದೇ ಒಂದು ನಾಟಕದಿಂದ ಇಂದಿಗೆ ನೂರಾರು ನಾಟಕಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಬಾಯಲ್ಲಿ ಬೇಷ್ ಅನ್ನಿಸಕೊಂಡಿರುವ ಕಲಾವಿದ. ಹೇಮಂತ್ ತನ್ನ 13ನೇ ವಯಸ್ಸಿನಲ್ಲೇ ಬಣ್ಣದ ಗೀಳು ಅಂಟಿಸಿಕಿಕೊಂಡವರು. ನಾಟಕಗಳನ್ನ ಮಾಡುತ್ತಾ ರಾಜ್ಯದ ಗಡಿದಾಟಿ ಹೊರ ರಾಜ್ಯದಲ್ಲೂ ತನ್ನ ಪ್ರತಿಭೆಯನ್ನ ತೋರುತ್ತಾ ಬೆಳೆದು ನಿಂತವರು. ಮುಂಬೈ, ಒಡಿಶಾ,ಪಾಂಡಿಚೆರಿ,ಹೀಗೆ ಇನ್ನೂ ಅನೇಕ ಕಡೆ ಹೇಮಂತ್ ನಾಟಕ ಪ್ರದರ್ಶನವನ್ನ ನೀಡಿದ್ದಾರೆ. ರಂಗ ನಿರಂತರ,ರಂಗ ಮಂಟಪ, ಪ್ರಸಂಗ, ಪ್ರ.ಕಾ.ಸಂ.,ಭೂಮಿ ತಂಡಗಳಲ್ಲಿ ಕೆಲಸ ಮಾಡಿದ್ದಾರೆ. ಗಾಂಧಿಬಂದ,ಅಭಿಜ್ಞಾ ಶಾಕುಂತಲಾ,ಮಾಸ್ತಿ ಕಲ್ಲು ಇಂತಹ ಅನೇಕ ನಾಟಕದಲ್ಲಿ ಹೇಮಂತ್ ಬಣ್ಣ ಹಂಚಿದ್ದಾರೆ.
ಇದನ್ನು ಓದಿ: 1000 ಸಿಸಿ ಹ್ಯಾಂಡ್ಮೇಡ್ ಬೈಕ್ ತಯಾರಿಸಿದ ರಿದ್ದೇಶ್ ಕಥೆ
ಓದಿದ್ದು ಎಂಜಿನಿಯರ್ ಆಗಿದ್ದು ಕಲಾವಿದ
ಮೊದಲೇ ಹೇಳಿದಂತೆ ಬಣ್ಣದ ಲೋಕದ ಪರಿಚಯ ಒಮ್ಮೆ ಆದ್ರೆ ಮುಗೀತು. ಅದು ಯಾರನ್ನೂ ಅಷ್ಟು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಅದ್ರಲ್ಲೂ ಸರಸ್ವತಿ ಒಲವು ಒಂದಿಷ್ಟು ಹೆಚ್ಚಾಗಿ ಸಿಕ್ಕರೆ ಮುಗಿಯಿತು. ಇಲ್ಲೇ ಬದುಕು ಕಟ್ಟಿಕೊಳ್ಳುವುದರ ಜೊತೆಗೆ ಜೀವನ ಬಣ್ಣದಿಂದ ತುಂಬಿಹೋಗುತ್ತದೆ. ಇದೇ ರೀತಿ ಇಂದು ಹೇಮಂತ್ ತನ್ನ ಯಶಸ್ಸಿನ ಮೆಟ್ಟಿಲನ್ನ ಒಂದೊಂದಾಗಿ ಹತ್ತುತ್ತಿದ್ದಾರೆ. ಅಪ್ಪ -ಅಮ್ಮ ಹೇಳಿದಂತೆ ಎಂಜಿನಿಯರಿಂಗ್ ಓದುತ್ತಾ ಅದರ ಜೊತೆಯಲ್ಲೇ ತಾನು ಅಂದುಕೊಂಡಿದ್ದನ್ನೂ ಸಾಧಿಸಿಕೊಂಡಿದ್ದಾರೆ. ನಾಟಕದಲ್ಲಿ ಹೇಮಂತ್ ಅಭಿನಯವನ್ನ ಕಂಡ ನಿರ್ದೇಶಕ ಬಿ. ಎಂ.ಗಿರಿರಾಜ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಮೈತ್ರಿ ಸಿನಿಮಾದಲ್ಲಿ ಪಾತ್ರವೊಂದನ್ನ ನೀಡಿದ್ದರು. ಅಲ್ಲಿಂದ ಇಲ್ಲಿ ತನಕ ಹೇಮಂತ್ ಒಳ್ಳೆಯ ಪಾತ್ರವನ್ನ ಗಿಟ್ಟಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ. "ಮೈತ್ರಿ" ಚಿತ್ರದ ನಂತರ "ಸಂತು ಸ್ಟೈಟ್ ಫಾರ್ವರ್ಡ್" ," ರನ್ ಆಂಟನಿ", "ಅಮರಾವತಿ" ಹೀಗೆ ವಿಭಿನ್ನ ರೀತಿಯ ಪಾತ್ರಗಳನ್ನ ನಿರ್ವಹಿಸುತ್ತಾ ಬಂದಿದ್ದಾರೆ. ಅಭಿನಯದ ಜೊತೆಯಲ್ಲೇ ಸಹಾಯಕ ನಿರ್ದೇಶಕನಾಯೂ ಕೆಲಸ ಮಾಡಿರುವ ಹೇಮಂತ್, ಮುಂದಿನ ದಿನಗಳಲ್ಲಿ ತೆರೆಯ ಹಿಂದೆಯೂ ಕೆಲಸ ಮಾಡುವ ಎಲ್ಲಾ ಸೂಚನೆಗಳು ಕಂಡು ಬರುತ್ತಿದೆ.
ಕೈ ಹಿಡಿತು ಕನ್ನಡ- ಸ್ಪಷ್ಟತೆಯೇ ಸಾಧನ
ಹೇಮಂತ್ ರಂಗಭೂಮಿಗೂ ಮತ್ತು ಚಿತ್ರರಂಗಕ್ಕೂ ಪಾದಾರ್ಪಣೆ ಮಾಡುವುದಕ್ಕೆ ಸಹಾಯವಾಗಿದ್ದು ಕನ್ನಡದ ಸ್ಪಷ್ಟತೆ. ಹೇಮಂತ್ ಸುಲಲಿತವಾಗಿ ಕನ್ನಡವನ್ನ ಮಾತನಾಡ್ತಾರೆ. ಅದನ್ನ ನೋಡಿದ ನಿರ್ದೇಶಕರು ಮತ್ತು ತಂತಜ್ಞರು ಅವಕಾಶ ಕೊಡುವುದಕ್ಕೆ ಹಿಂದು ಮುಂದು ನೋಡಬೇಕಿಲ್ಲ. ಇನ್ನು ಹೇಮಂತ್, ಫ್ಲಸ್ ಪಾಯಿಂಟ್ ಅಂದ್ರೆ ಅವ್ರ ಧ್ವನಿ. ಅದರ ಜೊತೆಯಲ್ಲಿ ಅದ್ಬುತ ನಟ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ರಂಗಭೂಮಿಯಲ್ಲಿ ಚೆನ್ನಾಗಿ ಅನುಭವ ಪಡೆದಿರುವ ಹೇಮಂತ್ ಸಿನಿಮಾರಂಗಕ್ಕೆ ಬೇಗನೆ ಒಗ್ಗಿಕೊಂಡಿದ್ದಾರೆ. ಈಗಾಗಲೇ ಪುನೀತ್ ಹಾಗೂ ಯಶ್ ಜೊತೆಯಲ್ಲಿ ಅಭಿನಯಿಸಿದ್ದು ಈಗ ಅಮರಾವತಿ ಅನ್ನುವ ವಿಭಿನ್ನ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿಭಿನ್ನ ಪಾತ್ರಗಳಲ್ಲಿ ವಿಶೇಷವಾದ ಸಿನಿಮಾಗಳಲ್ಲಿ ಹೇಮಂತ್ ಮಿಂಚಲಿ ಅನ್ನೋದು ಎಲ್ಲರ ಆಶಯ.
1. ಕೆಲಸದ ಟೆನ್ಷನ್ ಬಿಟ್ಟು ಬಿಡಿ- ಒಂದು ದಿನ ಕೃಷಿಕರಾಗಿ ಎಂಜಾಯ್ ಮಾಡಿ..!
2. ಅಡುಗೆ ಬರಲ್ಲ ಅನ್ನುವ ಟೆನ್ಷನ್ ಬಿಟ್ಟುಬಿಡಿ- ಆ್ಯಪ್ ಡೌನ್ಲೋಡಿ ಮಾಡಿ ಅಡುಗೆ ಕಲಿಯಿರಿ..!