Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

ರಂಗಕರ್ಮಿ ದಿವಂಗತ ಎ.ಎಸ್ ಮೂರ್ತಿ ಸಂಸ್ಮರಣೆಯ ಪ್ರಯುಕ್ತ ಅತ್ಯದ್ಭುತವಾಗಿ ನೆರವೇರಿದ ಕಲಾ ಜಾತ್ರೆ -‘ಕಲೋತ್ಸವ-2015’

ವಿಶ್ವಾಸ್​ ಭಾರಾಧ್ವಾಜ್​​

ರಂಗಕರ್ಮಿ ದಿವಂಗತ ಎ.ಎಸ್ ಮೂರ್ತಿ ಸಂಸ್ಮರಣೆಯ ಪ್ರಯುಕ್ತ ಅತ್ಯದ್ಭುತವಾಗಿ ನೆರವೇರಿದ ಕಲಾ ಜಾತ್ರೆ -‘ಕಲೋತ್ಸವ-2015’

Sunday December 20, 2015 , 3 min Read

image


ಉದ್ಯಾನ ನಗರಿ ಬೆಂಗಳೂರಿನಲ್ಲಿ 2 ದಿನಗಳ ಕಲಾ ಹಬ್ಬ ಅತ್ಯದ್ಭುತ ಯಶಸ್ಸಿನೊಂದಿಗೆ ಮುಕ್ತಾಯಗೊಂಡಿತು. ಪ್ರತೀ ವರ್ಷದಂತೆ ಈ ವರ್ಷವೂ ಅಂತ್ಯದಲ್ಲಿ ಕಲಾಪ್ರೇಮಿಗಳ ಮುಖದಲ್ಲಿ ಅದೊಂದು ದಿವ್ಯ ತೃಪ್ತಿ ಕಾಣಿಸಿಕೊಂಡಿತು. ಹನುಮಂತ ನಗರದ ರಾಮಾಂಜನೇಯ ಗುಡ್ಡದ ಕಲಾಮಂದಿರ ಆವರಣ ಈ ವಾರಾಂತ್ಯದ ಶನಿವಾರ ಹಾಗೂ ಭಾನುವಾರ ಕಲಾವಿದರು ಮತ್ತು ಕಲೆಗಳ ಮೇಳದಿಂದ ಸಮ್ಮಿಳಿತಗೊಂಡಿತ್ತು. ಹಿರಿಯ ಕಲಾವಿದ ದಿವಂಗತ ಎ.ಎಸ್. ಮೂರ್ತಿ ಸಂಸ್ಮರಣೆ ಅಂಗವಾಗಿ ಕಲೋತ್ಸವ ಸಮಿತಿ ಪ್ರತಿ ವರ್ಷದಂತೆ 2 ದಿನಗಳ ಕಾಲ ಆಯೋಜಿಸಿರುವ ‘ಕಲೋತ್ಸವ-2015'ಕ್ಕೆ ಶನಿವಾರ ಚಾಲನೆ ನೀಡಲಾಯಿತು. ಶನಿವಾರದ ಬೆಳಗ್ಗೆಯಿಂದಲೇ ವಿವಿಧ ಕಲೆಗಳು ರಾಮಾಂಜನೇಯ ಗುಡ್ಡದಾದ್ಯಂತ ಮೇಳೈಸಿ ಕಲಾ ರಸಿಕರನ್ನು ಕೈ ಬೀಸಿ ಕರೆಯತೊಡಗಿದ್ದವು. ನಾನಾ ವೇದಿಕೆಗಳಡಿ ತರಹೇವಾರಿ ಅಪರೂಪದ ಕಾರ್ಯಕ್ರಮಗಳು ಅತ್ಯದ್ಭುತವಾಗಿ ನೆರವೇರಿದವು. ಕಳೆದ ಮೂರು ವರ್ಷದಿಂದ ಸಂಭ್ರಮದೊಂದಿಗೆ ನಡೆಸಿಕೊಂಡು ಬರುತ್ತಿರುವ ಕಲೋತ್ಸವ ಸಾಂಸ್ಕೃತಿಕ ಸಂಭ್ರಮ ಎಲ್ಲಾ ಬಗೆಯ ಕಲೆಗಳನ್ನು ಒಂದೇ ವೇದಿಕೆಯಲ್ಲಿ ಕಾಣುವ ಅವಕಾಶವನ್ನು ಕಲಾರಸಿಕರಿಗೆ ಒದಗಿಸಿಕೊಡುತ್ತಿದೆ.

image


ಸಿಲಿಕಾನ್ ನಗರಿಯ ಮಂದಿಗೆ ವೈವಿಧ್ಯತೆ ಒದಗಿಸಿದ ಕಲಾ ಮೇಳ:

ಈ ಬಾರಿಯ ಕಲೋತ್ಸವದಲ್ಲಿ ಉದ್ಯಾನ ನಗರಿಯ ಅಸಂಖ್ಯಾತ ಕಲಾವಿದರು, ಕಲಾರಸಿಕರು ಹಾಗೂ ಕಲೋಪಾಸಕರು ಕಲೋತ್ಸವದ ರಂಗಿನಲ್ಲಿ ಮಿಂದೆದ್ದರು. ನಿತ್ಯ ಬದುಕಿನ ಜಂಜಾಟದಲ್ಲಿ ಸಿಲುಕಿ ಒದ್ದಾಡುವ ಸಿಲಿಕಾನ್ ಸಿಟಿಯ ಮಂದಿಗೆ ಕಲೋತ್ಸವದ ವಿಭಿನ್ನತೆ ಹಾಗೂ ವೈವಿಧ್ಯತೆ ಬರಪೂರ ಮನೋರಂಜನೆ ಒದಗಿಸಿತು. ಕಲಾಮಂದಿರ, ಅಭಿನಯ ತರಂಗ ಹಾಗೂ ಹನುಮಂತನಗರ ಬಿಂಬ ಸಂಸ್ಥೆಗಳ ಸಹಯೋಗದಲ್ಲಿ ರಂಗಕರ್ಮಿ ಎ.ಎಸ್.ಮೂರ್ತಿ ಅವರ ಸವಿ ನೆನಪಿಗಾಗಿ ಕಲೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವರ್ಷದ ಕಲೋತ್ಸವಕ್ಕೆ ಹಿರಿಯ ನಟ ಎಚ್.ಎಸ್ ಸೋಮಶೇಖರ್ ಚಾಲನೆ ನೀಡಿದರು. ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ, ಕಲಾವಿದ ಎಸ್.ಜಿ ವಸುದೇವ್, ವಿಮರ್ಶಕ ಎಂ.ಎಸ್ ಕೃಷ್ಣಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರತಿ ವರ್ಷದಂತೆ ಈ ವರ್ಷವೂ ಎಲ್ಲಾ ಕಾರ್ಯಕ್ರಮಗಳನ್ನು ರಂಗಕರ್ಮಿ ಎ.ಎಸ್ ಮೂರ್ತಿರವರಿಗೆ ಅರ್ಪಣೆ ಮಾಡಲಾಗಿದೆ.

image


ಕಲೋತ್ಸವ ಸಮಿತಿಯ ಗೌರವಾಧ್ಯಕ್ಷ ಅ.ರಾ ಮಿತ್ರ ನೇತೃತ್ವದಲ್ಲಿ ಕನ್ನಡದ ಹೆಸರಾಂತ ಗಾಯಕಿ ಎಂ.ಡಿ ಪಲ್ಲವಿ ಮುಂತಾದವರು ಕಳೆದ 3 ವರ್ಷಗಳಿಂದ ಈ ಕಲೋತ್ಸವವನ್ನು ಪ್ರತೀ ವರ್ಷ ಡಿಸೆಂಬರ್ನಲ್ಲಿ ನಡೆಸುತ್ತಿದ್ದಾರೆ. 2012ರ ಡಿಸೆಂಬರ್ನಲ್ಲಿಯೇ ರಂಗಕರ್ಮಿ ಎ.ಎಸ್ ಮೂರ್ತಿಯವರು ಇಹಲೋಕದ ಯಾತ್ರೆ ಮುಗಿಸಿದ್ದರು. ಆಕಾಶವಾಣಿ ಈರಣ್ಣ ಎಂದೇ ನಾಟಕರಂಗದಲ್ಲಿ ಚಿರಪರಿಚಿತರಾದ ಮೂರ್ತಿಯವರ ಪುಣ್ಯಸ್ಮರಣೆ ಅಂಗವಾಗಿ ವಿವಿಧ ಕಲಾ ಪ್ರಕಾರಗಳ ಪ್ರದರ್ಶನ ನಡೆಸಲಾಗುತ್ತಿದೆ.

ಸೃಜನಶೀಲ ಕಲೆಗಳ ವಿಶ್ವದಲ್ಲಿ ವಿಹಾರ ಮಾಡುವುದೇ ಆನಂದ:

ಒಂದೆಡೆ ಕಲಾವಿದರ ಅಪೂರ್ವ ಕಲಾಕೃತಿಗಳ ಚಿತ್ತಾರಗಳು ಮೂಡಿಬಂತು. ಇನ್ನೊಂದೆಡೆ ಕಲಾಕೃತಿಗಳ ವೀಕ್ಷಣೆಗೆ ಬಂದ ವೀಕ್ಷಕರು ಮುಕ್ತವಾಗಿ ಕಲಾವಿದರೊಂದಿಗೆ ಸಂವಾದ ನಡೆಸುವ ಅವಕಾಶವನ್ನು ಒದಗಿಸಲಾಗಿತ್ತು. ಕಲಾಮಂದಿರದ ಹಿರಿಯ ವಿದ್ಯಾರ್ಥಿಗಳಿಂದ ಚಿತ್ರಕಲಾ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನಗಳ ರಂಗು ವೀಕ್ಷಕರನ್ನು ಸಂತಸಗೊಳಿಸಿತು. ರಾಮಾಂಜನೇಯ ಗುಡ್ಡದ ತುದಿಯಲ್ಲಿರುವ ರಾಮಾಂಜನೇಯ ದೇವಸ್ಥಾನದ ಮುಂಭಾಗದ ಆವರಣದಲ್ಲಿ ಚಿತ್ರ ಕಲಾವಿದರು ತಮ್ಮ ಕಲ್ಪನೆಯ ಕೂಸನ್ನು ಕುಂಚದಲ್ಲಿ ಅರಳಿಸುತ್ತಿದ್ದ ದೃಶ್ಯ ಎಂತಹವರ ಮನಸಿಗೂ ಒಂದರೆಕ್ಷಣವಾದರೂ ನಿರ್ಮಲವಾದ ಆಸ್ವಾದ ನೀಡಿತು. ರಾಮಾಂಜನೇಯ ಗುಡ್ಡದ ಮೆಟ್ಟಿಲುಗಳ ಮೇಲೆ ಸಾಲಾಗಿ ಜೋಡಿಸಿ ತೂಗುಬಿಟ್ಟ, ವರ್ಣಚಿತ್ರ, ತೈಲಚಿತ್ರಗಳು ಒಂದಕ್ಕಿಂತ ಇನ್ನೊಂದು ಭಿನ್ನ, ಅಪೂರ್ವ ಹಾಗೂ ಅನನ್ಯ. ಈ ಚಿತ್ರ ಸಂತೆಯಲ್ಲಿ ಜನತೆ ಕಣ್ಣರಳಿಸಿಕೊಂಡು ಬೆರಗಿನಿಂದ ಕಲಾವಿದರ ಕಲ್ಪನಾ ವಿಶ್ವದಲ್ಲಿ ವಿಹರಿಸಿದರು.

image


ಇದರ ಜೊತೆ 32 ಕಲಾವಿದರ ಆಲೋಚನೆಯಲ್ಲಿ ಸೃಷ್ಟಿಯಾದ 150 ಬಗೆಯ ಸೃಜನಶೀಲ ಛಾಯಾಚಿತ್ರಗಳು ವೀಕ್ಷಕರನ್ನು ಸೆಳೆದವು. ಯುವ ಛಾಯಾಚಿತ್ರಗಾರರಿಗೆ ಪ್ರದರ್ಶನದಲ್ಲಿ ಅವಕಾಶ ನೀಡಲಾಗಿತ್ತು. ಹೆಚ್ಚಾಗಿ ಕರ್ನಾಟಕದ ಪ್ರಸಿದ್ಧ ಯಾತ್ರಾಸ್ಥಳಗಳು ಹಾಗೂ ಪ್ರಾಕೃತಿಕ ಸುಂದರ ಪ್ರದೇಶಗಳನ್ನು ವಿವಿಧ ಕೋನಗಳಿಂದ ಸೆರೆಹಿಡಿದ ಕ್ಯಾಮರಾ ಕಣ್ಣುಗಳಲ್ಲಿ ಮೂಡಿಬಂದ ಔಟ್ಪುಟ್ ಅತ್ಯಂತ ರಸವತ್ತಾಗಿತ್ತು ಹಾಗೂ ಭಾವಪೂರ್ಣವಾಗಿತ್ತು.

ದೇಶ-ವಿದೇಶಗಳ ಅರ್ಥಪೂರ್ಣ ಕಿರುಚಿತ್ರಗಳ ಪ್ರದರ್ಶನ:

ಕೆ.ಹೆಚ್ ಕಲಾಸೌಧದ ರಂಗಮಂದಿರದಲ್ಲಿ ಕಿರುಚಿತ್ರೋತ್ಸವ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಗಾಯಕಿ ಎಂ.ಡಿ ಪಲ್ಲವಿ ಈ ಶಾರ್ಟ್ ಫಿಲಂ ಪ್ರದರ್ಶನದ ಆಯೋಜನೆಯ ಉಸ್ತುವಾರಿ ಹೊತ್ತಿದ್ದರು. ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತಯಾರಾದ ಸಿನಿಮಾಗಳನ್ನು ಒಂದೇ ವೇದಿಕೆಯಲ್ಲಿ ನೋಡುವ ಸುವರ್ಣಾವಕಾಶವನ್ನು ಒದಗಿಸಲಾಗಿತ್ತು. ದೇಶ ವಿದೇಶಗಳ ಸುಮಾರು 91 ಕಿರುಚಿತ್ರಗಳು, ವಾರ್ ಡಾಕ್ಯುಮೆಂಟರಿಗಳು. ಆರ್ಟ್ ಚಿತ್ರಗಳು ಉಚಿತವಾಗಿ ಪ್ರದರ್ಶನಗೊಂಡು ಚಿತ್ರಪ್ರೇಮಿಗಳಿಗೆ ಮುದ ನೀಡಿದವು.

image


ಮಕ್ಕಳು ಮತ್ತು ಹಿರಿಯರಿಗೆ ಪ್ರತ್ಯೇಕವಾಗಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಿರಿಯರಿಗಾಗಿ ಕಲೆಗೆ ಸಂಬಂಧಿಸಿದ ಚಿತ್ರ ಬಿಡಿಸುವುದು, ಫೋಟೋ ಮತ್ತು ಪ್ರಾತ್ಯಕ್ಷಿಕೆ ಪ್ರದರ್ಶನ, ಜಾನಪದ ಗೀತೆ ಮತ್ತು ನೃತ್ಯ, ಸಂವಾದ, ಕವಿಗಳ ಸಭೆ, ಜಾದೂ ಪ್ರದರ್ಶನ, ಬೀದಿ ನಾಟಕಗಳು, ಮೂಕಾಭಿನಯ ಸೇರಿದಂತೆ ಅನೇಕ ಕಾರ್ಯಕ್ರಮಗಳು ನೆರೆದವರ ಮನ ಗೆದ್ದಿತು.

ಶನಿವಾರ ಸಂಜೆ ಗೀತ ಸಂಗೀತ ವೇದಿಕೆಯಲ್ಲಿ ಖ್ಯಾತ ಗಾಯಕಿ ಎಂ.ಡಿ. ಪಲ್ಲವಿ ನೇತೃತ್ವದಲ್ಲಿ ಹಲವು ಗಾಯಕ-ಗಾಯಕಿಯರು ಸಂಗೀತ ರಸಸಂಜೆ ಹರಿಸಿದರು. ಈ ಸಂಗೀತ ರಸದೌತಣ ಸವಿದ ಜನತೆ ಕುಟುಂಬ ಸಹಿತರಾಗಿ ಬಂದು ತನ್ಮಯತೆ ಹೊಂದಿದರು. ಕಲೋತ್ಸವ ಪ್ರಯುಕ್ತ ನಡೆಸಲಾದ ಕವಿಗೋಷ್ಠಿ ಹಾಗೂ ಕಾವ್ಯ ಸಂವಾದ ಕಾರ್ಯಕ್ರಮವನ್ನು ಹಿರಿಯ ಕವಿ ಎಚ್.ಎಸ್ ವೆಂಕಟೇಶ್ ಮೂರ್ತಿ ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಅಭಿನಯ ತರಂಗದ ವಿದ್ಯಾರ್ಥಿಗಳಿಂದ ನಾಟಕ ಕಾರ್ಯಕ್ರಮ, ನಾಟಕದ ಆಸಕ್ತರ ಗಮನ ಸೆಳೆದರೆ, ರಘು ದೀಕ್ಷಿತ್ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ಸಂಗೀತ ಪ್ರೇಮಿಗಳ ಮನಸಿಗೆ ಉಲ್ಲಾಸ ನೀಡಿತು.

ಭರ್ಜರಿಯಾಗಿ ನಡೆದ ಕಲಾಕೃತಿಗಳ ಪ್ರದರ್ಶನ-ಮಾರಾಟ:

ರಾಮಾಂಜನೇಯ ಗುಡ್ಡದಲ್ಲಿ ವಿವಿಧ ಕಲಾಕೃತಿಗಳ ಮಾರಾಟ ಮಳಿಗೆಗಳನ್ನು ತೆರೆಯಲಾಗಿತ್ತು. ಮರದ, ಮಣ್ಣಿನ ಹಾಗೂ ಲೋಹದ ಸೃಜನಶೀಲ ಕಲಾಕೃತಿಗಳು ಪ್ರದರ್ಶನ ಹಾಗೂ ಮಾರಾಟಕ್ಕಿದ್ದವು. ಕಲಾವಿದರ ಕಲಾ ಮಾಡೆಲ್ಗಳು, ವರ್ಣಚಿತ್ರಗಳು, ತೈಲಚಿತ್ರಗಳು ಹಾಗೂ ಸ್ಥಳದಲ್ಲಿಯೇ ಬಿಡಿಸುವ ಚಿತ್ರಕಲೆಗಳನ್ನು ಮಾರಾಟ ಭರ್ಜರಿಯಾಗಿಯೇ ನಡೆಯಿತು. ಜೊತೆಗೆ ವಿವಿಧ ಬಗೆಯ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟವೂ ಇತ್ತು. ಮಕ್ಕಳ ಉದ್ಯಾನವನದಲ್ಲಿ ಮಕ್ಕಳಿಗಾಗಿ ವಿವಿಧ ಬಗೆಯ ಆಟಗಳು, ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಮಕ್ಕಳ ಚಿತ್ರಕಲೆಗೂ ಆದ್ಯತೆ ನೀಡಿದ್ದು ಈ ಬಾರಿಯ ಕಲೋತ್ಸವದ ವಿಶೇಷವಾಗಿತ್ತು.

image


ಸಾಂಪ್ರದಾಯಿಕ ಕಲೆಗಳಿಗೆ ಮಹತ್ವ ನೀಡುವುದಕ್ಕಾಗಿ ರಾಮಾಂಜನೇಯ ಗುಡ್ಡದ ಎಲ್ಲಾ ಪ್ರವೇಶ ದ್ವಾರಗಳನ್ನು ಸಾಂಪ್ರದಾಯಿಕ ಕರ್ನಾಟಕದ ಕಲಾಶೈಲಿಗಳಿಂದ ಅಲಂಕರಿಸಲಾಗಿತ್ತು. ತಳಿರು ತೋರಣಗಳಿಂದ ಸಾಲಂಕೃತಗೊಂಡ ಗುಡ್ಡ ಎಲ್ಲಾ ಬಗೆಯ ಮನಸ್ಥಿತಿಯ ಜನರನ್ನು ತೋಳು ಚಾಚಿ ಆಹ್ವಾನಿಸುತ್ತಿತ್ತು. ಒಟ್ಟಿನಲ್ಲಿ ಈ ಬಾರಿಯೂ ರಂಗಕರ್ಮಿ ಎ.ಎಸ್ ಮೂರ್ತಿ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಕಲಾಮಂದಿರ, ಅಭಿನಯ ತರಂಗ ಮತ್ತು ಹನುಮಂತನಗರ ಬಿಂಬದ ಆಶ್ರಯದಲ್ಲಿ ನಡೆದ ‘ಕಲೋತ್ಸವ' ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಹನುಮಂತ ನಗರದಲ್ಲಿ ರಾಮಾಂಜನೇಯ ಗುಡ್ಡದ ಸುಂದರ ಪರಿಸರದಲ್ಲಿ ನೆರವೇರಿದ ಕಲಾಜಾತ್ರೆಗೆ ನಾಗರೀಕರಿಂದ ಮುಕ್ತಕಂಠದ ಶ್ಲಾಘನೆ ವ್ಯಕ್ತವಾಯಿತು.

ಚಿತ್ರಗಳು ಹಾಗೂ ಲೇಖನ:

-ವಿಶ್ವಾಸ್ ಭಾರದ್ವಾಜ್