Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

ರಾಗಿ ಮುದ್ದೆಯಿಂದ ಬಿಗ್​ಬಾಸ್ಕೆಟ್ ತನಕ- ಗ್ರಾಹಕ, ರೈತರಿಗೆ ಲಾಭದ ಮಾರ್ಗ

ಟೀಮ್​ ವೈ.ಎಸ್​. ಕನ್ನಡ

ರಾಗಿ ಮುದ್ದೆಯಿಂದ ಬಿಗ್​ಬಾಸ್ಕೆಟ್ ತನಕ- ಗ್ರಾಹಕ, ರೈತರಿಗೆ ಲಾಭದ ಮಾರ್ಗ

Friday April 28, 2017 , 4 min Read

ಮುದ್ದೆ- ಸಾರು, ಬೆಂಗಳೂರಿನ ಸುತ್ತಮುತ್ತಲಿನ ಜನರಿಗೆ ಇದೇ ಫೆವರೀಟ್ ಫುಡ್. ರಾಗಿಯಲ್ಲಿರುವ ಪೋಷಕಾಂಶಗಳನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ. ಹೊಲಗಳಲ್ಲಿ ಕೆಲಸ ಮಾಡುವವರಿಗಂತೂ ಈ ರಾಗಿಮುದ್ದೆ ಸಖತ್ ಪವರ್ ನೀಡುತ್ತದೆ.

ಬೆಂಗಳೂರಿನ ಪ್ರಖ್ಯಾತ ಹೊಟೇಲ್​ಗಳ ಮೆನುಗಳಲ್ಲಿ ರಾಗಿ ಮುದ್ದೆ ಕಾಣುವುದಿಲ್ಲ. ಡೋರ್ ಟು ಡೋರ್ ಡೆಲಿವರಿ ನೀಡುವ ಸ್ವಿಗ್ಗಿಯ ಮೆನುವಿನಲ್ಲೂ ರಾಗಿಮುದ್ದೆ ಕಾಣುವುದಿಲ್ಲ. ಆದ್ರೆ ರಾಗಿ ಮುದ್ದೆಯ ಟೇಸ್ಟೇ ಬೇರೆ. ಇಂಟರ್ನೆಟ್​ನಲ್ಲಿ ಎಷ್ಟೇ ಸರ್ಚ್ ಮಾಡಿದ್ರೂ ರಾಗಿ ಮುದ್ದೆಯ ಮೆನು ಸಿಗುವುದಿಲ್ಲ. ರಾಗಿ ಮುದ್ದೆಯ ರುಚಿ ನೋಡಿದವರು ಅದನ್ನು ಆಹಾರವಾಗಿ ಸ್ವೀಕರಿಸದೇ ಇರಲು ಸಾಧ್ಯವೇ ಇಲ್ಲ. ಇದುವೇ ರಾಗಿ ಮುದ್ದೆಯ ಸ್ಪೆಷಾಲಿಟಿ.

ಬೆಂಗಳೂರಿನ ಚಿಕ್ಕ ಚಿಕ್ಕ ಹೊಟೇಲ್​ಗಳಲ್ಲಿ ರಾಗಿ ಮುದ್ದೆ ಸಿಗುತ್ತದೆ. ರಾಗಿ ಮುದ್ದೆಯನ್ನು ಹುಡುಕಿಕೊಂಡು ಬರುವವರಿಗೂ ಕೊರತೆ ಇಲ್ಲ. ಇನ್ನೂ ವಿಶೇಷ ಅಂದ್ರೆ ಬೆಂಗಳೂರಿಗೆ ಬಂದವರೆಲ್ಲಾ ಒಂದು ಬಾರಿಯಾದ್ರೂ ರಾಗಿಮುದ್ದೆಯ ರುಚಿ ನೋಡೇ ನೋಡ್ತಾರೆ. ಅಷ್ಟರ ಮಟ್ಟಿಗೆ ಮುದ್ದೆ ಪವರ್ ಫುಲ್ ಆಗಿದೆ. ಹೊರಗಿನಿಂದ ಬೆಂಗಳೂರಿಗೆ ಬಂದವರಿಗೆ ರಾಗಿ ಮುದ್ದೆ ತಿಂದು ಅಭ್ಯಾಸ ಇರುವುದಿಲ್ಲ. ಆದರೆ ಹೊಟೇಲ್​ಗೆ ಹೋದ್ರೆ ಅದನ್ನು ಬಡಿಸುವವರು ಮುದ್ದೆ ತಿನ್ನುವುದು ಹೇಗೆ ಅನ್ನುವುದನ್ನು ಕೂಡ ಹೇಳಿಕೊಡುತ್ತಾರೆ. ಅದು ಕೇವಲ ವ್ಯಾಪಾರದ ದೃಷ್ಟಿಯಿಂದ ಅಲ್ಲ. ಬದಲಾಗಿ ರಾಗಿಯಲ್ಲಿರುವ ಪೋಷಕಾಂಶಗಳ ಹಾಗೂ ಆರೋಗ್ಯದ ಮೇಲಿನ ಪ್ರೀತಿಯಿಂದ ಅಂದ್ರೆ ಅದು ತಪ್ಪಾಗಲಾರದು.

image


ಸಾವಯವ ಸಿರಿಧಾನ್ಯಗಳ ಜಪ

ಬೆಂಗಳೂರಿನಲ್ಲಿ ರಾಷ್ಟ್ರೀಯ ಸಿರಿಧಾನ್ಯಗಳ ಮೇಳ ನಡೆಯುತ್ತಿದೆ. ಸಾವಯವ ಕೃಷಿ ಮೂಲಕ ಉತ್ಪಾದಿಸಿದ ಧಾನ್ಯಗಳು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಮೇಳದಲ್ಲಿ ಕಾಣಸಿಗುತ್ತದೆ. ಬೆಂಗಳೂರು ದೇಶದ ಮೊತ್ತ ಮೊದಲ ಸಾವಯವ ಕೃಷಿ ಧಾನ್ಯಗಳ ಮೇಳವನ್ನು ಆಯೋಜಿಸಿದೆ. ಈ ಮೂಲಕ ಸಿರಿಧಾನ್ಯಗಳ ಬಗ್ಗೆ ಅರಿವು ಮೂಡಿಸಲು ಮುಂದಾಗಿದೆ. ಸಾವಯವ ಸಿರಿಧಾನ್ಯಗಳಲ್ಲಿ ಅಧಿಕ ಪೋಷಕಾಂಶಗಳು ಒಳಗೊಂಡಿರುತ್ತದೆ. ಕಡಿಮೆ ಪ್ರಮಾಣದ ಗ್ಲೇಮಿಕ್ ಇಂಡೆಕ್ಸ್, ಹೆಚ್ಚು ಫೈಬರ್ ಅಂಶಗಳು ಇರುವುದರಿಂದ ಇವರು ಆರೋಗ್ಯಕ್ಕೆ ಪೂರಕವಾಗಿದೆ. ಸ್ಥೂಲಕಾಯ, ಸಕ್ಕರೆ ಕಾಯಿಲೆ, ಕ್ಯಾನ್ಸರ್, ಹೈಪರ್ ಟೆನ್ಷನ್ ಮತ್ತು ಅನಿಮಿಯಾಗಳ ವಿರುದ್ಧ ಈ ಮಿಲ್ಲೆಟ್ಸ್ ಹೋರಾಡುತ್ತವೆ. ಗ್ರಾಹಕರಿಗೆ ಮತ್ತು ಕೃಷಿಕರಿಗೆ ಸಾವಯವ ಕೃಷಿ ಮತ್ತು ಅದರ ಉಪಯೋಗದ ಬಗ್ಗೆ ತಿಳಿಸುವ ಉದ್ದೇಶ ಹೊಂದಲಾಗಿದೆ. ಸಾವಯವ ಕೃಷಿ ಧಾನ್ಯಗಳ ಬೇಡಿಕೆ ಮತ್ತು ಪೂರೈಕೆಗಳ ಕುರಿತು ಕೂಡ ಯೋಜನೆ ರೂಪಿಸಲಾಗಿದೆ. ಇದು ಕೃಷಿಕರನ್ನು ಸಾವಯವ ಕೃಷಿಯತ್ತ ಗಮನಹರಿಸುವಂತೆ ಮಾಡಲಿದೆ. ಈ ಮೇಳದ ರೂವಾರಿ ಕೃಷಿ ಸಚಿವ ಕೃಷ್ಣಬೈರೇ ಗೌಡರು. ಸಾವಯವ ಕೃಷಿ ಧಾನ್ಯಗಳ ಮೇಳಕ್ಕಾಗಿ ಮಾನ್ಯ ಸಚಿವರು ಸುಮಾರು ಒಂದೂವರೆ ವರ್ಷಗಳ ಕೆಲಸವನ್ನು ಮಾಡಿದ್ದಾರೆ.

“ ಇವತ್ತು ಜನರು ಆರೋಗ್ಯಕಾರಿ ಬದುಕಿನ ಬಗ್ಗೆ ಯೋಚನೆ ಮಾಡುತ್ತಾರೆ. ಆದ್ರೆ ಮೊದಲು ಆರೋಗ್ಯಕಾರಿ ಆಹಾರ ಉತ್ಪಾದನೆ ಮತ್ತು ಕೃಷಿಯ ಬಗ್ಗೆ ಯೋಚನೆಯನ್ನೂ ಮಾಡಬೇಕಿದೆ. ಜನರು ಸ್ವಸ್ಥ ಆರೋಗ್ಯಕ್ಕಾಗಿ ಪರದಾಡುತ್ತಿದ್ದಾರೆ. ಆಧುನಿಕ ಆಹಾರಶೈಲಿ ಮತ್ತು ಆಹಾರದಲ್ಲಿನ ಪೋಷಕಾಂಶಗಳ ಕೊರತೆ ಹಲವು ಕಾಯಿಲೆಗಳಿಗೆ ಕಾರಣವಾಗಿದೆ. ”
ಕೃಷ್ಣ ಬೈರೇಗೌಡ, ಕೃಷಿ ಸಚಿವರು ಕರ್ನಾಟಕ ಸರಕಾರ

ಆರೋಗ್ಯಯುತ ಬದುಕಿಗೆ ಹೆಚ್ಚು ಶ್ರಮಪಡಬೇಕಿಲ್ಲ. ಸಾವಯವ ಧಾನ್ಯಗಳು ಸರಿಸುಮಾರು 60ರಿಂದ 70 ರೂಪಾಯಿಗಳಿಗೆ ಒಂದು ಕಿಲೋಗ್ರಾಂನಷ್ಟು ಸಿಗುತ್ತದೆ. ಆದ್ರೆ ಜನರು ಅದಕ್ಕೆ ಹೆಚ್ಚು ಬೆಲೆ ಕೊಡುತ್ತಿದ್ದಾರೆ. ಅಚ್ಚರಿ ಅಂದ್ರೆ ಸಿರಿಧಾನ್ಯಗಳನ್ನು ಕಡಿಮೆ ನೀರು, ಕಡಿಮೆ ಬಂಡವಾಳದ ಮೂಲಕ ಬೆಳೆಯಬಹುದು.

ಇದನ್ನು ಓದಿ: ವಕೀಲ ವೃತ್ತಿಗೆ ಗುಡ್ ಬೈ ಹೇಳಿದ್ರು- ಸಾವಯವ ಕೃಷಿಕನಾಗಿ ಯಶಸ್ಸಿನ ಹೆಜ್ಜೆ ಇಟ್ರು..!

ಒಂದೇ ಕಲ್ಲಿನಿಂದ ಎರಡು ಹಕ್ಕಿಗಳ ಬೇಟೆ ..!

ಸಾಮಾನ್ಯವಾಗಿ ಕೃಷಿಕರ ಹಾಗೂ ಗ್ರಾಹಕರ ನಡುವೆ ಸಾಕಷ್ಟು ಮಧ್ಯವರ್ತಿಗಳಿರುತ್ತಾರೆ. ಹೀಗಾಗಿ ಸಹಜವಾಗೇ ಬೆಲೆಗಳು ಹೆಚ್ಚಿರುತ್ತದೆ. ಆದ್ರೆ ಈಗ ಸರಕಾರ ಕೃಷಿಕರಿಂದಲೇ ನೇರವಾಗಿ ಗ್ರಾಹಕರ ಕೈಗೆ ಧಾನ್ಯಗಳು ಸಿಗುವಂತೆ ಮಾಡಲು ಯೋಜನೆ ರೂಪಿಸಿದೆ. ಈ ಮೂಲಕ ನಿಜವಾದ ಬೆಲೆಗೆ ಧಾನ್ಯಗಳು ಸಿಗುವಂತೆ ಮಾಡಿ, ಮಧ್ಯವರ್ತಿಗಳ ಲಾಭಕ್ಕೆ ಬ್ರೇಕ್ ಹಾಕುವುದು ಮಾತ್ರವಲ್ಲದೆ, ಕೃಷಿಕರಿಗೆ ಹೆಚ್ಚು ಹಣ ಸಿಗುವಂತೆ ಮಾಡುವುದೇ ಸರಕಾರದ ಮೊದಲ ಉದ್ದೇಶವಾಗಿದೆ.

“ನಾವು ಸಾವಯವ ಕೃಷಿ ಧಾನ್ಯಗಳಿಗೆ ಹೆಚ್ಚು ಬೇಡಿಕೆ ಬರುವಂತೆ ಮಾಡಬೇಕು. ಹೀಗಾದಾಗ ರೈತರು ಸಹಜವಾಗಿ ಇತ್ತಕಡೆ ಮುಖ ಮಾಡುತ್ತಾರೆ. ಇದು ನೀರಿನ ಸಂರಕ್ಷಣೆ ಮತ್ತು ಪರಿಸರ ಸಂರಕ್ಷಣೆಗೆ ಹೆಚ್ಚು ಸಹಕಾರಿ ಆಗುತ್ತದೆ. ಜನರ ಆರೋಗ್ಯವೂ ಚೆನ್ನಾಗಿರುತ್ತದೆ. ”
ಕೃಷ್ಣ ಬೈರೇಗೌಡ, ಕೃಷಿ ಸಚಿವರು ಕರ್ನಾಟಕ ಸರಕಾರ

ಸರಕಾರ ರೈತರಿಂದ ನೇರವಾಗಿ ಗ್ರಾಹಕರ ಕೈಗೆ ಧಾನ್ಯಗಳು ಸಿಗುವಂತೆ ಮಾಡಲು ಯೋಜನೆ ರೂಪಿಸಿದೆ. ಇದರ ಮೊದಲ ಹಂತವಾಗಿ ಆನ್​ಲೈನ್ ಗ್ರಾಸರಿ ಪ್ಲಾಟ್ ಫಾರ್ಮ್ ಬಿಗ್​ಬಾಸ್ಕೆಟ್ ಜೊತೆ ಒಪ್ಪಂದವನ್ನು ಮಾಡಿಕೊಂಡಿದೆ. ಕಳೆದ ಕೆಲವು ವರ್ಷಗಳಿಂದ ರೈತರ ಹಾಗೂ ಗ್ರಾಹಕರ ನಡುವೆ ಇದ್ದ ಅಂತರವನ್ನು ಕಡಿಮೆ ಮಾಡಲು ಸರಕಾರ ಮುಂದಾಗಿದೆ. ಬಿಗ್ ಬಾಸ್ಕೆಟ್ ಜೊತೆಗಿನ ಒಪ್ಪಂದ ಮಧ್ಯವರ್ತಿಗಳ ಕಾಟವನ್ನು ತಪ್ಪಿಸಿ, ರೈತರಿಗೆ ಹಾಗೂ ಗ್ರಾಹಕರಿಗೆ ವಿವಿಧ ರೀತಿಯಲ್ಲಿ ಲಾಭ ತಂದುಕೊಡಲಿದೆ.

ಬಿಗ್​ಬಾಸ್ಕೆಟ್ ಬಗ್ಗೆ..!

ಬಿಗ್​ಬಾಸ್ಕೆಟ್ ವಿವಿಧ ಫೆಡರೇಷನ್​ಗಳ ಜೊತೆ ಒಪ್ಪಂದವನ್ನು ಮಾಡಿಕೊಂಡಿದೆ. ದಾವಣಗೆರೆ ಮತ್ತು ಚಿತ್ರದುರ್ಗದ ಸಾವಯವ ಕೃಷಿಕರಿಂದ ಸುಮಾರು 2.50 ಕೋಟಿ ರೂಪಾಯಿ ಮೌಲ್ಯದ ಒಟ್ಟು 500 ಮೆಟ್ರಿಕ್ ಟನ್ ಧಾನ್ಯಗಳನ್ನು ಖರೀದಿಸಿ, ಗ್ರಾಹಕರ ಕೈ ತಲುಪಿಸುವ ಯೋಜನೆ ರೂಪಿಸಿದೆ. ಉತ್ತರ ಕನ್ನಡ ಜಿಲ್ಲೆಯ ಸಾವಯವ ಕೃಷಿಕರ ಫೆಡರೇಷನ್​ನಿಂದ 12 ಕೋಟಿ ಮೌಲ್ಯದ 300 ಮೆಟ್ರಿಕ್ ಟನ್ ಸಾಂಬಾರ ಪದಾರ್ಥಗಳನ್ನು ಖರೀದಿ ಮಾಡಲಿದೆ. ಈ ಒಪ್ಪಂದ ರೈತರಿಗೆ ಶೇಕಡಾ 15ರಿಂದ 20 ಶೇಕಡಾ ಹೆಚ್ಚು ಲಾಭವನ್ನು ತಂದುಕೊಡಲಿದೆ.

“ ನಾವು ರೈತರಿಗೆ ಗ್ರೇಡಿಂಗ್, ವಿಂಗಡಣೆ, ಕ್ವಾಲಿಟಿ ಚೆಕ್ ಮತ್ತು ಪ್ಯಾಕೇಜಿಂಗ್ ಬಗ್ಗೆ ತರಬೇತಿ ನೀಡುತ್ತೇವೆ. ವಿವಿಧ ರೈತ ಸಂಘಗಳ ಹೆಸರಿನ ಜೊತೆಗ ಬಿಗ್ ಬಾಸ್ಕೆಟ್ ಬ್ರಾಂಡಿಂಗ್ ಮಾಡಿಕೊಳ್ಳಲಿದೆ.”
ಹರಿ ಮೆನನ್, ಸಹ ಸಂಸ್ಥಾಪಕರು, ಸಿಇಒ ಬಿಗ್​ಬಾಸ್ಕೆಟ್

ಸದ್ಯ ಬಿಗ್​ಬಾಸ್ಕೆಟ್ ದೇಶದಲ್ಲಿ ಸುಮಾರು 25 ಕಲೆಕ್ಷನ್ ಸೆಂಟರ್​ಗಳನ್ನು ಹೊಂದಿದೆ. ಈಗ ಕರ್ನಾಟಕ ಸರಕಾರದ ಜೊತೆಗಿನ ಒಪ್ಪಂದಿಂದ ಮತ್ತೆ ಮೂರು ಕಲೆಕ್ಷನ್ ಸೆಂಟರ್​ಗಳು ಆರಂಭವಾಗಲಿದೆ. ಇಲ್ಲಿ ಗ್ರೇಡ್, ವಿಂಗಡಣೆ ಮತ್ತು ಕ್ವಾಲಿಟಿ ಚೆಕ್ ಆಗಿರುವ ಉತ್ಪನ್ನಗಳನ್ನು ಪ್ಯಾಕೇಜ್ ಮಾಡಿ ಗ್ರಾಹಕರಿಗೆ ತಲುಪಿಸುವ ದಾರಿಗಳಿಗೆ ನೀಡಲಾಗುತ್ತದೆ.

ಬಿಗ್​ಬಾಸ್ಕೆಟ್ ಜೊತೆಗಿನ ಒಪ್ಪಂದದಿಂದ ಮಾನ್ಯ ಕೃಷಿ ಸಚಿವರು ಸಂತಸಗೊಂಡಿದ್ದಾರೆ. ಹೊಸ ತಂತ್ರಜ್ಞಾನಗಳು ಮತ್ತು ಹೊಸ ವ್ಯಾಪಾರದ ನೀತಿಗಳುಸ ರೈತರಿಗೆ ನೆರವಾಗಲಿದೆ ಅನ್ನುವುದು ಬೈರೇ ಗೌಡರ ವಿಶ್ವಾಸ. ಒಟ್ಟಿನಲ್ಲಿ ರಾಗಿ ಮುದ್ದೆಯಿಂದ ಆರಂಭವಾದ ಕಥೆ ಈಗ ಡಿಜಿಟಲ್ ವ್ಯಾಪಾರಾದ ತನಕ ಬಂದು ನಿಂತಿದೆ. ಕಾಲ ಬದಲಾದ ಹಾಗೇ ಆರೋಗ್ಯದಲ್ಲಿ ಏರುಪೇರಾಗಿದೆ. ಈಗ ಆರೋಗ್ಯವನ್ನು ಮತ್ತೆ ಪಡೆಯುವ ತವಕ ಹೆಚ್ಚುತ್ತಿದೆ. 

ಇದನ್ನು ಓದಿ:

1. ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಿರಿಧಾನ್ಯಗಳ ಕಲರವ...

2. ನಮ್ಮ ಬೆಂಗಳೂರಿನಲ್ಲಿ ಆರೋಗ್ಯದ ಬಗ್ಗೆ ಯಾಕಿಷ್ಟು ಕಾಳಜಿ ಅನ್ನೋದಿಕೆ ಇಲ್ಲಿದೆ ಕಾರಣಗಳು

3. ಮರೆತುಹೋಗಿದ್ದ ಆರೋಗ್ಯಕರ ಆಹಾರ : ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ ಕರ್ನಾಟಕ ಸರ್ಕಾರ