ಕುಶಲಕರ್ಮಿಗಳಿಂದ ಉದ್ಯಮಿಗಳಾಗುವವರೆಗೆ : ಭಾರತದ ನೇಕಾರರನ್ನು ಪುನರುಜ್ಜೀವನಗೊಳಿಸುತ್ತಿರುವ ಅಂತರಣ
ಕಂಪ್ಯೂಟರ್ ಮತ್ತು ಸಂವಹನ ಕೌಶಲ್ಯಗಳು, ಮೂಲ ವಿನ್ಯಾಸ ಚಿಂತನೆ ಮತ್ತು ಅವರ ಕಂಪನಿಗಳನ್ನು ನೋಂದಾಯಿಸಲು ಸಹಾಯ ಮಾಡುವ ಮೂಲಕ ಭಾರತದಾದ್ಯಂತ ಕುಶಲಕರ್ಮಿಗಳಿಗೆ ಅಂತರಣ್ ಬೆಂಬಲವನ್ನು ಒದಗಿಸುತ್ತಿದೆ.
ಒಡಂತಿಶಾ, ಮನಿಯಬಂದಾದ ಕೈಮಗ್ಗ ಕುಶಲಕರ್ಮಿ ಅಕುಲ್ ಚರಣ ನಂದಿ ಬಟ್ಟೆಗಳನ್ನು ನೇಯ್ದು ಹಳ್ಳಿಯ ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಮೂಲಕ ಮಾಸ್ಟರ್ ವೀವರ್ ಗೆ ಮಾರಾಟ ಮಾಡುತ್ತಿದ್ದರು. ಆದಾಗ್ಯೂ 45 ವರ್ಷದ ಈತನಿಗೆ ಬರುತ್ತಿದ್ದ 15,000 ರೂಪಾಯಿಗಳಲ್ಲಿ ತನ್ನ 9 ಜನರ ಕುಟುಂಬವನ್ನು ಸಾಕುವುದು ಸಾಧ್ಯವಿರಲಿಲ್ಲ.
ಸಮಯ ಕಳೆದಂತೆ ಅಕುಲ್ ಗೆ ತನ್ನ ಸಂಸಾರ ನೌಕೆ ನಡೆಸಲು ತಾನು ನೇಯುವುದಕ್ಕಿಂತ ಹೆಚ್ಚಿನದ್ದನ್ನು ಕಲಿಯಬೇಕೆಂಬುದು ಅರಿವಾಯಿತು. ಹಾಗೆಯೇ ಅವರಿಗೆ ಕುರ್ತಾ ಹಾಗೂ ಸೀರೆಗಳನ್ನು ವಿನ್ಯಾಸಗೊಳಿಸುವ ತಮ್ಮ ಸ್ವಂತ ವ್ಯಾಪಾರವನ್ನು ಆರಂಭಿಸಬೇಕು ಎಂಬ ಕನಸಿತ್ತು. ಆದರೆ ಅವರಿಗೆ ಮಾರ್ಗದರ್ಶನ ನೀಡುವವರು ಯಾರೂ ಇರಲಿಲ್ಲ .
ನಂತರದಲ್ಲಿ ಅಕುಲ್ ಗೆ, ಸ್ಥಳೀಯ ಕುಶಲಕರ್ಮಿಗಳನ್ನು ಬೆಂಬಲಿಸಿ, ಅವರ ಉತ್ಪನ್ನಗಳನ್ನು ಸ್ಥಳೀಯ ಮಾರುಕಟ್ಟೆ ಹಾಗೂ ರಫ್ತು ಮಾರುಕಟ್ಟೆಗೆ ಪರಿಚಯಿಸಿ, ತಮ್ಮ ವ್ಯಾಪಾರವನ್ನು ಆರಂಭಿಸಲು ನೆರವು ನೀಡುವ ಟಾಟಾ ಟ್ರಸ್ಟ್ ನ ಉಪಕ್ರಮವಾದ ಅಂತರಣ್ ಬಗ್ಗೆ ತಿಳಿಯಿತು.
ಸಂದಿಗ್ಧತೆ
ಕೃಷಿಯನ್ನು ಬಿಟ್ಟರೆ ಭಾರತದಲ್ಲಿ ಅತಿ ಹೆಚ್ಚು ಉದ್ಯೋಗ ಸೃಷ್ಟಿಸುತ್ತಿರುವ ಕರಕೌಶಲ (ಕ್ರಾಫ್ಟ್) ವಲಯ ಏಳು ಮಿಲಿಯನ್ ಕುಟುಂಬಗಳಿಗೆ ಉದ್ಯೋಗವನ್ನು ಒದಗಿಸುತ್ತದೆ.
ಆದರೆ ದಿನಗಳೆದಂತೆ, ಯಾಂತ್ರೀಕೃತಗೊಂಡ ಹಾಗೂ ಸುಧಾರಿತ ಉತ್ಪಾದನಾ ಘಟಕಗಳು ಅದೇ ಉತ್ಪನ್ನಗಳನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಿ ಹಾಗೂ ಕಡಿಮೆ ಬೆಲೆಗೆ ಮಾರಾಟ ಮಾಡುವುದರಿಂದ ಕುಶಲಕರ್ಮಿಗಳು ದುರ್ಬಲಗೊಂಡಿದ್ದಾರೆ. ಅದರೊಂದಿಗೆ, ಒಡಿಶಾ, ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಇತರ ಪೂರ್ವ ಮತ್ತು ಈಶಾನ್ಯ ಭಾಗಗಳ ರಾಜ್ಯಗಳ ಗ್ರಾಮೀಣ ಪ್ರದೇಶಗಳ ಸ್ಥಳೀಯ ಕುಶಲಕರ್ಮಿಗಳಿಗೆ ಸ್ಥಳೀಯ ಹಾಗೂ ರಫ್ತು ಮಾರುಕಟ್ಟೆಯ ಸಂಪರ್ಕವೂ ಇಲ್ಲ.
ಈಶಾನ್ಯ ಭಾರತವು ಕೈಮಗ್ಗ ನೇಕಾರರ 55 ಪ್ರತಿಶತ ಜನಸಂಖ್ಯೆಯನ್ನು ಹೊಂದಿದ್ದಾರೆ, ಆದರೆ ಅವರು ತಯಾರಿಸುವ ಉತ್ಪನ್ನಗಳಿಗೆ ಬೃಹತ್ ಮಾರುಕಟ್ಟೆಗೆ ಪ್ರವೇಶವಿಲ್ಲದ ಕಾರಣ, ಕೇವಲ ಸ್ಥಳೀಯ ಉದ್ದೇಶಗಳಿಗಾಗಿ ಹಾಗೂ ವಿಶೇಷ ಸಂದರ್ಭದಲ್ಲಿ ಬಳಕೆಯಾಗುತ್ತವೆ.
ಬದಲಾವಣೆಯ ಪರ್ವ
ಇಂತಹುದೇ ಸವಾಲುಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ ಅಕುಲ್, 2018 ರ ಮಧ್ಯದಲ್ಲಿ ಅಂತರಣ್ ಗೆ ಸೇರಿಕೊಂಡರು. ಸೋಷಿಯಲ್ ಸ್ಟೋರಿ ಯೊಂದಿಗೆ ಮಾತನಾಡುತ್ತಾ, ಅಕುಲ್,
"ಬರಿ ವಿನ್ಯಾಸಗೊಳಿಸುವುದಕ್ಕಿಂತ ಹೆಚ್ಚಿನದನ್ನು ನಾನು ಕಲಿತೆ. ಬಣ್ಣ ಸಂಯೋಜನೆ, ವಿವಿಧ ರೀತಿಯ ಬಟ್ಟೆಗಳನ್ನು ನೇಯುವುದು, ಗ್ರಾಹಕರೊಂದಿಗೆ ವ್ಯವಹರಿಸುವ ಬಗೆ ಹಾಗೂ ಸ್ವಂತವಾಗಿ ವ್ಯಾಪಾರ ನಡೆಸುವುದು ಹೇಗೆ ಎಂಬುದನ್ನು ನಾನು ಕಲಿತೆ. ಈಗ ನಾನು ಸೀರೆಯಷ್ಟೇ ಅಲ್ಲದೆ, ಕುರ್ತಾ, ದುಪ್ಪಟ್ಟ, ಹಾಗೂ ಇತರ ಬಟ್ಟೆಗಳನ್ನು ನೇಯುವುದನ್ನು ಸಹ ಕಲಿತಿದ್ದೇನೆ." ಎಂದರು.
ಅಂತಿಮವಾಗಿ, ಈ ಫೆಬ್ರವರಿಯಲ್ಲಿ ಅಂತರಣ್ ಉಪಕ್ರಮದ ಸಹಾಯದಿಂದ ಒಡಿಶಾದ ಕಟಕ್ ನಲ್ಲಿ ಅಕುಲ್ ತ್ರಿರತ್ನ ಹ್ಯಾಂಡ್ ಲೂಮ್ ಕ್ರಾಫ್ಟ್ ಅನ್ನು ಪ್ರಾರಂಭಿಸಿದ್ದಾರೆ. ಅಂದಿನಿಂದ ಅವರು ಚೆನ್ನೈ ಹಾಗೂ ಮುಂಬೈ ನಗರದ ಮಾರುಕಟ್ಟೆಗಳಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ.
"ನನ್ನ ಉತ್ಪನ್ನಗಳನ್ನು ಮಾರಾಟ ಮಾಡಲು ಜಿಎಸ್‌ಟಿ ನೊಂದಣಿ ಮಾಡಿಸಬೇಕು ಎಂದು ತಿಳಿದು ಅದನ್ನೂ ಮಾಡಿಸಿದೆ. ಈಗ ನನ್ನ ವ್ಯಾಪಾರವನ್ನು ವಿಸ್ತರಿಸಬೇಕೆಂದಿರುವ ನಾನು, ನೇರವಾಗಿ ಗ್ರಾಹಕರಿಂದ ಬೃಹತ್ ಪ್ರಮಾಣದ ಆರ್ಡರ್ ತಗೆದುಕೊಳ್ಳುತ್ತೇನೆ."
ಜೂನ್ ತಿಂಗಳ ಅಂತ್ಯಕ್ಕೆ ಅಕುಲ್ ಅವರ ಉದ್ಯಮದ ವಹಿವಾಟು 8 ಲಕ್ಷ ಮುಟ್ಟಿದೆ. ಪ್ರಸ್ತುತದಲ್ಲಿ, ಅವರ ಕಂಪನಿಯಲ್ಲಿ ಅವರ ತಮ್ಮನನ್ನು ಸೇರಿಸಿ 15 ಜನರಿದ್ದಾರೆ.
ಅಕುಲ್ ಅಷ್ಟೇ ಅಲ್ಲದೆ ಟಾಟಾ ಸಂಸ್ಥೆಯ ಅಂತರಣ್ ಉಪಕ್ರಮದಿಂದಾಗಿ ಹಲವು ಕರಕುಶಲಕರ್ಮಿಗಳು ಕೈಮಗ್ಗ ಕೌಶಲಗಳನ್ನು, ನವ್ಯ ವಿನ್ಯಾಸವನ್ನು ಹಾಗೂ ಯಂತ್ರ ಚಾಲನೆಯನ್ನೂ ಕಲಿತಿದ್ದಾರೆ. ಅದರ ಕರಕೌಶಲ ಆಧರಿತ ಜೀವನೋಪಾಯ ಕಾರ್ಯಕ್ರಯವು ಅಸ್ಸಾಂ, ನಾಗಾಲೆಂಡ್ ಹಾಗೂ ಒಡಿಶಾದ 200 ಕುಶಲಕರ್ಮಿಗಳಿಗೆ ಸಹಾಯಮಾಡಿದೆ.
ಅಂತರವನ್ನು ನಿವಾರಿಸುವುದು
ಈಶಾನ್ಯ ರಾಜ್ಯಗಳಲ್ಲಿ ನೇಕಾರರ ಜನಸಂಖ್ಯೆಯ 99 ಪ್ರತಿಶತ ಜನರು ಮಹಿಳೆಯರೆ ಇದ್ದಾರೆ. ಸರಿಯಾದ ಮಾರ್ಗದರ್ಶನ ಹಾಗೂ ಬೆಂಬಲದ ಕೊರತೆಯಿಂದಾಗಿ ಈ ಮಹಿಳೆಯರಿಗೆ ತಮ್ಮ ಉತ್ಪನ್ನಗಳನ್ನು ಎಲ್ಲಿ ಮಾರಬೇಕೆಂಬುದು ಅರ್ಥವಾಗುತ್ತಿರಲಿಲ್ಲ.
ಟಾಟಾ ಟ್ರಸ್ಟ್ ನ ಕರಕುಶಲ ವಸ್ತುಗಳ ವಿಭಾಗದ ಮುಖ್ಯಸ್ಥೆಯಾದ ಶಾರದಾ ಗೌತಮ್, ಒಂದು ಉಪಕ್ರಮವು ಹೇಗೆ ಗ್ರಾಮೀಣ ಪ್ರದೇಶದ ಕುಶಲಕರ್ಮಿಗಳಿಗೆ ಸಹಾಯವಾಗಬಲ್ಲದು ಎಂದು ಸೋಷಿಯಲ್ ಸ್ಟೋರಿ ಗೆ ವಿವರಿಸುತ್ತಾ,
"ನೀವು ಈಶಾನ್ಯ ಭಾರತದ ಭಾಗಗಳಲ್ಲಿ ನೋಡಿದರೆ ಅಲ್ಲಿನ ಬಹುತೇಕರು ತಮ್ಮ ಜೀವನೋಪಾಯಕ್ಕಾಗಿ ಕೈಮಗ್ಗವನ್ನೇ ನಂಬಿಕೊಂಡಿರುವುದರಿಂದ ಅಲ್ಲಿ ಕೌಶಲ್ಯಯುತ ವಿನ್ಯಾಸಕಾರರು ಹಾಗೂ ಕುಶಲಕರ್ಮಿಗಳು ಸಿಗುತ್ತಾರೆ. ಇದಲ್ಲದೆ ಇಲ್ಲಿನ ಕುಶಲಕರ್ಮಿಗಳು ಮಾರುಕಟ್ಟೆಯ ಸಂಪರ್ಕದಿಂದ ದೂರವೇ ಉಳಿದಿದ್ದಾರೆ. ಹಾಗಾಗಿ ಅವರ ಬಹುತೇಕ ಉತ್ಪನ್ನಗಳು ತಮ್ಮ ಸ್ವಂತದ ಬಳಕೆಗೆ ಅಂದರೆ ಹಬ್ಬದ ಉಡುಪಾಗಿ ಅಥವ ದಿನನಿತ್ಯದ ಉಪಯೋಗಕ್ಕಾಗಿ ಬಳಕೆಯಾಗುತ್ತವೆ. "
ಅಂತರಣ್ ಅವರನ್ನು ತನ್ನ ಕಾರ್ಯಕ್ರಮಗಳಿಂದ ಪುನರುಜ್ಜೀವನಗೊಳಿಸುವ ಗುರಿ ಹೊಂದಿದೆ. ಕುಶಲ ಕರ್ಮಿಗಳಿಗೆ ಕಂಪ್ಯೂಟರ್ ಮತ್ತು ಸಂವಹನ ಕೌಶಲ್ಯಗಳು, ಮೂಲ ವಿನ್ಯಾಸ ಚಿಂತನೆಯನ್ನು ತಿಳಿಸಿಕೊಡಲಾಗುತ್ತದೆ. ಇದರೊಡನೆ ಕುಶಲಕರ್ಮಿಗಳಿಗೆ ತಮ್ಮ ಉದ್ಯಮ ಸ್ಥಾಪಿಸಿ ಹಾಗೂ ನೊಂದಾಯಿಸಲು ಸಹಾಯ ಮಾಡುತ್ತದೆ.
ಇಲ್ಲಿಯವರೆಗೆ ನಾಗಾಲೆಂಡ್, ಒಡಿಸ್ಸಾ ಹಾಗೂ ಅಸ್ಸಾಮಿನ ಮೂರು ಕುಶಲಕರ್ಮಿಗಳ ಸಮೂಹವನ್ನು ಆರಿಸಲಾಗಿದ್ದು ಇವರೆಲ್ಲರನ್ನೂ ಉದ್ಯಮಿಗಳನ್ನಾಗಿ ಪರಿವರ್ತಿಸಿ ಹಾಗೂ ಸಣ್ಣ ಉದ್ಯಮವನ್ನು ಸ್ಥಾಪಿಸಲು ಸಹಾಯ ಮಾಡಲಾಗುತ್ತದೆ.
ಶಾರದಾರ ಪ್ರಕಾರ ಉಪಕ್ರಮದ ಅಡಿಯಲ್ಲಿ ಇಲ್ಲಿಯವರೆಗೆ ಒಡಿಶಾವೊಂದರಲ್ಲೆ 1,000 ನೇಕಾರರನ್ನು ಪರಿಗಣಿಸಲಾಗಿದೆ.
ಮುಂದಿನ ಹಾದಿ
ವಿನ್ಯಾಸಕಾರರು ಹಾಗೂ ಕುಶಲಕರ್ಮಿಗಳು ಈಶಾನ್ಯ ಭಾಗಕ್ಕೆ ಹೋಲಿಸಿದರೆ ದೇಶದ ಪಶ್ಚಿಮ ಭಾಗದಲ್ಲಿ ಬಹುಪಾಲು ಯಶಸ್ವಿಯಾಗಿದ್ದರೆ. ಅದಕ್ಕಾಗಿ ಈ ಉಪಕ್ರಮವನ್ನು ಈಶಾನ್ಯ ಭಾರತದಲ್ಲಿ ನಡೆಸಲು ತೀರ್ಮಾನಿಸಿದೆವು ಎನ್ನುತ್ತಾರೆ ಶಾರದ.
ತನ್ನ ಐದು ವರ್ಷಗಳ ಅವಧಿಯಲ್ಲಿ ಕುಶಲಕರ್ಮಿಗಳಿಗೆ ಯಂತ್ರ ಕೌಶಲ, ಬಣ್ಣ ಸಂಯೋಜನೆ ಹಾಗೂ ವ್ಯಾಪಾರ ತಂತ್ರ ಮತ್ತು ಇತರ ಕೌಶಲಗಳನ್ನು ಸಂಪಾದಿಸಲು ಸಹಾಯ ಮಾಡುತ್ತದೆ.
ಶಾರದ ಹೇಳುವ ಪ್ರಕಾರ ಮೂರು ರೀತಿಯ ಕುಶಲಕರ್ಮಿಗಳಿದ್ದಾರೆ. ಮೊದಲನೆಯವರು, ಕಲಾಕರ್ ಅಥವಾ ಉದ್ಯಮವನ್ನು ತಿಳಿದಿರುವ ಮತ್ತು ಗ್ರಾಹಕರ ಅಗತ್ಯವನ್ನು ಅರ್ಥಮಾಡಿಕೊಳ್ಳುವ ಕೌಶಲ್ಯ ಹೊಂದಿರುವ ಉದ್ಯಮಶೀಲ ಕುಶಲಕರ್ಮಿಗಳು.
ಎರಡನೆಯದಾಗಿ, ಕರಿಗಾರ್. ಇವರು ಸುಧಾರಿತ ಉತ್ಪಾದನಾ ತಂತ್ರಗಳನ್ನು ಚೆನ್ನಾಗಿ ತಿಳಿದಿಲ್ಲವಾದರೂ ಕೈಮಗ್ಗ ನೇಯ್ಗೆ ಕೌಶಲ್ಯವನ್ನು ಹೊಂದಿದ್ದಾರೆ.
ಮೂರನೆಯದಾಗಿ, ಯಾವುದೇ ಕೌಶಲ್ಯಗಳನ್ನು ಹೊಂದಿರದ ಆದರೆ ಮೊದಲ ಎರಡು ಪ್ರಕಾರಗಳಿಗೆ ಬೆಂಬಲವಾಗಿ ಕಾರ್ಯನಿರ್ವಹಿಸುವ ಕಾರ್ಮಿಕರಾದ ಮಜ್‌ದೂರ್‌ಗಳು.
ಅಂತರಣ್ ಉಪಕ್ರಮವು ಮೊದಲೆರಡು ರೀತಿಯ ಕುಶಲಕರ್ಮಿಗಳಿಗೆ ಶಿಕ್ಷಣ ನೀಡುವ ವಿಕಸನ ಕೇಂದ್ರಗಳನ್ನು ಒಳಗೊಂಡಿದೆ. ಕಟಕ್ ಜಿಲ್ಲೆಯ (ಒಡಿಶಾ) ಮಣಿಯಾಬಂಧ ಗ್ರಾಮ, ಕಮ್ರೂಪ್ ಜಿಲ್ಲೆಯ ಭಗವತಿಪಾರ ಗ್ರಾಮ (ಅಸ್ಸಾಂ) ಮತ್ತು ದಿಮಾಪುರ ಜಿಲ್ಲೆಯ 5 ನೇ ಮೈಲಿ (ನಾಗಾಲ್ಯಾಂಡ್) ನಲ್ಲಿ ಇವುಗಳನ್ನು ತೆರೆಯಲಾಗುತ್ತಿದೆ.
ಶಾರದಾ ಹೇಳುವಂತೆ, ಈ ಪಂಚವಾರ್ಷಿಕ ಯೋಜನೆಯ ಅಂತ್ಯದಲ್ಲಿ ಉದ್ಯಮಿಗಳಾಗಿ ಬದಲಾದ ಕುಶಲಕರ್ಮಿಗಳ ವಹಿವಾಟು 45-50 ಲಕ್ಷ ರೂಪಾಯಿ ಮುಟ್ಟಲಿದೆ.
ಕುಶಲಕರ್ಮಿಗಳ ಸ್ಥಿತಿ ಹಾಗೂ ವೇಳೆಯನ್ನು ಪರಿಗಣಿಸಿ, ಒಡಿಶಾದಲ್ಲಿ ಸಂಜೆ 6-9 ರ ವರೆಗೆ ತರಗತಿಗಳನ್ನು ನಡೆಸಲಾಗುತ್ತದೆ. ಆದರೆ ಅಸ್ಸಾಂ ಹಾಗೂ ನಾಗಾಲೆಂಡ್‌ನಲ್ಲಿ ತಮ್ಮ ಮಕ್ಕಳನ್ನು ಶಾಲೆಗೆ ಹಾಗೂ ಪತಿಯನ್ನು ಕೆಲಸಕ್ಕೆ ಕಳುಹಿಸಿದ ನಂತರದ ಬೆಳಗ್ಗಿನ ಬಿಡುವಿನ ವೇಳೆಯಲ್ಲಿ ತರಗತಿ ನಡೆಸಲಾಗುತ್ತದೆ.
ಕಾಲಾಂತರದಲ್ಲಿ, ಅಂತರಣ್ ಕಲಾಕರ್ ಸಮೂಹದೊಂದಿಗೆ ಕರಿಗಾರ್ ಹಾಗೂ ಮಜ್‌ದೂರ್‌ಗಳನ್ನೂ ಒಂದುಗೂಡಿಸುವ ಗುರಿ ಹೊಂದಿದೆ.
ವಿವಿಧ ರಾಜ್ಯಗಳ ಕುಶಲಕರ್ಮಿಗಳನ್ನು ಒಂದುಗೂಡಿಸಿ ಅವರಿಗೆ ತರಬೇತಿ ಕೊಡುವ ಗುರಿಯನ್ನು ಅಂತರಣ್ ಹೊಂದಿದೆ. ಶಾರದ ಅವರು ಹೇಳುವ ಪ್ರಕಾರ ಮುಂಬರುವ ದಿನಗಳಲ್ಲಿ ಆಂಧ್ರ, ಒಡಿಸ್ಸಾ ಹಾಗೂ ಅಸ್ಸಾಂನಲ್ಲಿ ವಿಕಸನ ಕೇಂದ್ರಗಳನ್ನು ತೆಗೆಯಲಾಗುತ್ತದೆ.
ಮುಂದುವರಿದು, ಇಂತಹ ಆರು ಸಮೂಹಗಳನ್ನು ಸೃಷ್ಟಿಸಿ, 3,000 ಕುಶಲಕರ್ಮಿಗಳಿಗೆ ತರಬೇತಿ ಕೊಡುವ ಗುರಿಯನ್ನು ಹೊಂದಿದೆ. ಇದರಲ್ಲಿ 3,00 ಕುಶಲಕರ್ಮಿಗಳು ಆಂಧ್ರಪ್ರದೇಶವೊಂದರಿಂದಲೇ ಬರಲಿದ್ದಾರೆ.