ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದ ಹಳ್ಳಿಗೆ ವಿದ್ಯುತ್ ಹಾಗೂ ನೀರಿನ ಸಂಪರ್ಕವನ್ನು‌ ಕಲ್ಪಿಸಿದ 24 ವರ್ಷದ ವೈದ್ಯಕೀಯ ವಿದ್ಯಾರ್ಥಿ

ಇದು ರಾಜಸ್ಥಾನದ ದೂರದ ಹಳ್ಳಿಯೊಂದಕ್ಕೆ ಜಲ ಹಾಗೂ ವಿದ್ಯುತ್ ಪೂರೈಕೆ ತರಲು ಹೋರಾಡಿದ ಒಬ್ಬ ಮನುಷ್ಯನ ಕಥೆ. ಆತನ ಅವಿರತ ಶ್ರಮದ ಫಲವಾಗಿ ಈಗ ಈ ಹಳ್ಳಿ ವಿದ್ಯುತ್ ಹಾಗೂ ಕುಡಿಯಲು ಯೋಗ್ಯವಾದ ನೀರು ಕಂಡಿದೆ.

ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದ ಹಳ್ಳಿಗೆ ವಿದ್ಯುತ್ ಹಾಗೂ ನೀರಿನ ಸಂಪರ್ಕವನ್ನು‌ ಕಲ್ಪಿಸಿದ 24 ವರ್ಷದ ವೈದ್ಯಕೀಯ ವಿದ್ಯಾರ್ಥಿ

Tuesday August 06, 2019,

4 min Read

ರಾಜಸ್ಥಾನ ಹಾಗೂ ಮಧ್ಯಪ್ರದೇಶದ ಗಡಿಭಾಗದಲ್ಲಿ ಬರುವ ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದಿರುವ ಹಳ್ಳಿಯೇ ರಾಜಘಾಟ್.


ಸುಸಜ್ಜಿತವಲ್ಲದ ಕಲ್ಲು ಮಣ್ಣುಗಳಿಂದ ಕೂಡಿರುವ ಮಾರ್ಗಗಳೊಂದಿಗೆ ಮತ್ತು ಕಲ್ಲಿನ ಬಂಡೆಗಳಿಂದ ಕೂಡಿರುವ ಪ್ರದೇಶದಲ್ಲಿ, ಒಳ್ಳೆಯ ಡಾಂಬರು ರಸ್ತೆಗಳು ದೂರದ ಕನಸಾಗಿ ಉಳಿದಿವೆ. ಈ ಹಳಿಯಲ್ಲಿ ನೀರು ಮತ್ತು ವಿದ್ಯುತ್ ಗಾಗಿ ಜನರು ಪರದಾಡುವುದು ಸಾಮಾನ್ಯವಾಗಿದೆ. ಆರೋಗ್ಯಕರ ಮಾನವನ ಆವಾಸಸ್ಥಾನಕ್ಕೆ ಅಗತ್ಯವಾದ ಕೆಲವು ಮೂಲಭೂತ ಸೌಲಭ್ಯಗಳನ್ನು ಇಲ್ಲಿಯ ಜನರಿಗೆ ನಿರಾಕರಿಸಲಾಗಿದೆ.


ಈ ಕಲ್ಲುಗಳಿಂದ ಕೂಡಿದ ಭೂ ಪ್ರದೇಶವನ್ನು ಹಾಗೂ ಜನರ ಅತೃಪ್ತ ಜೀವನವನ್ನು ಬದಲಾಯಿಸಬೇಕೆಂದು ಬಂದ ಅಶ್ವನಿ ಪರಶರ್, 24 ವರ್ಷದ ವೈದ್ಯರಾದ ಇವರು ತಮ್ಮ ಜೀವನದ ಗುರಿಯೆ ಬದಲಾವಣೆ ತರುವುದೆಂದು ನಿಶ್ಚಯಿಸಿದರು.


ಕ

ರಾಜ್ ಘಾಟ್ ನ ಜನರ ಜೀವನವನ್ನು ಬದಲಾಯಿಸುವ ಹೊಣೆ ಹೊತ್ತ ಅಶ್ವನಿ ಪರಶರ್.


ಅಶ್ವನಿ, ಜೈಪುರ್ ನ ಸವಾಯ್ ಮನ್ ಸಿಂಗ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ. ಈತ 2016 ರಲ್ಲಿ ಸಾಮಾನ್ಯ ಹಕ್ಕುಗಳಿಂದ ವಂಚಿತರಾದವರಿಗೆ ದೀಪಾವಳಿ ಹಬ್ಬದ ಸಿಹಿ ಹಂಚಲು ಮೊದಲ ಬಾರಿಗೆ ರಾಜ್ ಘಾಟ್ ಗೆ ಬಂದಿದ್ದರು. ಆಗ ಅಲ್ಲಿನ ಜನರಿಗೆ ಕುಡಿಯುವ ನೀರಿನ ಸರಬರಾಜು ಹಾಗೂ ವಿದ್ಯುತ್ ಸಂಪರ್ಕವೆ ಇಲ್ಲದಿರುವುದನ್ನು ಕಂಡು ಅಚ್ಚರಿಗೊಂಡರು.


ಒಂದು ಕೈಪಂಪನ್ನು ಬಿಟ್ಟರೆ ಅಲ್ಲಿನವರಿಗೆ ನೀರಿನ ಮೂಲ ಅಂತ ಇರುವುದು ಕಲುಷಿತಗೊಂಡ ಚಂಬಲ್ ನದಿಯೊಂದೆ.


"ಸತ್ತ ಪ್ರಾಣಿಗಳ ಮೃತದೇಹ ನದಿಯಲ್ಲಿ ತೇಲಿ ಬರುತ್ತಿರುವುದನ್ನು ನಾನು ಕಂಡೆ‌. ಬೇರೆ ದಾರಿ ಇಲ್ಲದೆ ಜನ, ಅದೇ ನೀರನ್ನು ಕುಡಿದು ತಮ್ಮ ಜೀವಕ್ಕೆ ಆಪತ್ತು ತಂದುಕೊಳ್ಳುತ್ತಿದ್ದರು. ಇದು ಅವರೆಲ್ಲ ಬದುಕುತ್ತಿದ್ದ ಅಮಾನುಷ ಪರಿಸ್ಥಿತಿ," ಎನ್ನುತ್ತಾರೆ ಅಶ್ವನಿ.


ಕ

ನೀರು ಹಾಗೂ ವಿದ್ಯುತ್ ನಿಂದ ವಂಚಿತರಾದ ರಾಜ್ ಘಟ್ ನ ಜನತೆ.


ಹಲವಾರು ಹಳ್ಳಿಗರಿಗೆ ಸೂರ್ಯ ಮುಳುಗುತ್ತಿದ್ದಂತೆ ಜಗತ್ತು ನಿಂತಂತಾಗುತಿತ್ತು. ಮಹಿಳೆಯರೆಲ್ಲ ಬೆಳಕಿರುವಾಗಲೆ ಅಡುಗೆ ಮಾಡಿದರೆ, ಮಕ್ಕಳೆಲ್ಲ ಸೂರ್ಯಾಸ್ತದ ಮುಂಚೆಯೇ ಓದಬೇಕಿತ್ತು. ಶೌಚಾಲಯಗಳ ಕೊರತೆ ಇದ್ದಿದ್ದರಿಂದ ತೆರೆದ ಮಲವಿಸರ್ಜನೆ ವಿಧಾನ ಜಾರಿಯಲ್ಲಿತ್ತು.


ನಂತರದ ವರ್ಷದಲ್ಲಿ ತಮ್ಮ ಸ್ನೇಹಿತರೊಂದಿಗೆ ಕೂಡಿ ಅಶ್ವನಿ, ಜನರ ಕಲ್ಯಾಣಕ್ಕಾಗಿ ಸರಕಾರಿ ಇಲಾಖೆಗಳ ಬಾಗಿಲು ಬಡಿಯಲು ಆರಂಭಿಸಿದರು. ಪ್ರಧಾನ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾ ಆಯುಕ್ತರೊಂದಿಗೆ ಸಭೆ ನಡೆಸಿದ ಅಶ್ವನಿ, ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಗಳ ಕಚೇರಿಗಳಿಗೂ ಪತ್ರ ಬರೆದರು.


ಕ

ರಾಜಘಟ್ ನ ಗ್ರಾಮಸ್ಥರೊಂದಿಗೆ ಮಾತನಾಡುತ್ತಿರುವ ಅಶ್ವನಿ ಪರಶರ್.


ಬರೆದ ಪತ್ರಗಳು ಯಾವುದೇ ಫಲ ನೀಡದ ಸಮಯದಲ್ಲಿ, ಅಶ್ವನಿ, #SaveRajghat(ರಾಜಘಟ್ ಉಳಿಸಿ) ಎಂಬ ಹ್ಯಾಷ್ ಟ್ಯಾಗ್ ಉಪಯೋಗಿಸಿ, ಜನರನ್ನು ಒಟ್ಟುಗೂಡಿಸುವುದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದರು. ನಂತರ, ರಾಜಸ್ಥಾನ ಸರ್ಕಾರದ ವಿರುದ್ಧ ರಾಜಸ್ಥಾನದ ಹೈಕೋರ್ಟ್ ನಲ್ಲಿ ಭಾರತೀಯ ಸಂವಿಧಾನದ 21 ನೇ ವಿಧಿಯಾದ ಜೀವಿಸುವ ಹಕ್ಕಿನ ಅಡಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿದರು.


#saverajghat ಅಭಿಯಾನದ ಮೂಲಕ ಜನರಲ್ಲಿ ಅರಿವು ಮೂಡಿಸುವುದಷ್ಟೇ ಅಲ್ಲದೆ, ಹಳ್ಳಿಯ ಜನರ ಜೀವನವನ್ನು ಸುಧಾರಿಸುವುದಕ್ಕಾಗಿ ಫೇಸ್ಬುಕ್ ಟ್ವಿಟರ್ ಮೂಲಕ ಸಾಕಷ್ಟು ಜನರ ಬೆಂಬಲ ಹಾಗೂ ಸಹಾಯವನ್ನು ಪಡೆದರು.


ಕ

ಹಳ್ಳಿಗರ ಜೀವನ ಸುಧಾರಿಸಲು #saverajghat ಅಭಿಯಾನ ಪ್ರಾರಂಭಿಸಿದ ಅಶ್ವನಿ.


ತಮ್ಮ ಪ್ರಯತ್ನಗಳಿಂದ, ರಾಜಘಟ್ ನ ಅಭಿವೃದ್ಧಿಗಾಗಿ ಸರಕಾರೇತರ ಸಂಸ್ಥೆಗಳಿಂದ ಹಾಗೂ ಸಾರ್ವಜನಿಕ ವ್ಯಕ್ತಿಗಳಿಂದ ಹಣ ಸಂಗ್ರಹಿಸುವಲ್ಲಿ ಯಶಸ್ವಿಯಾದರು. ಇಂದು ಎಲ್ಲಾ 100 ಮನೆಗಳಲ್ಲಿ ವಿದ್ಯುತ್ ಪೂರೈಕೆ ಸರಿಯಾಗಿ ನಡೆಯುತ್ತಿದೆ‌. ಹಾಗೂ ಬಹಳಷ್ಟು ಮನೆಗಳಲ್ಲಿ ಕುಡಿಯುವ ನೀರಿನ ಹಾಗೂ ಶೌಚಾಲಯದ ವ್ಯವಸ್ಥೆಯಾಗಿದೆ.


ನಾವೆಲ್ಲ ಸೇರಿದರೆ ಎಲ್ಲವೂ ಸಾಧ್ಯ


"ಇದು ಸುಲಭದ ಮಾತಾಗಿರಲಿಲ್ಲ, ಆದರೆ ಮಾಡಿದ ಪ್ರಯತ್ನಕ್ಕೆ ತಕ್ಕ ಫಲ ಬಂದಿದೆ, ಜನರ ಮುಖದಲ್ಲಿ ಮಂದಹಾಸ ಮೂಡಿದೆ," ಎಂದು ಅಶ್ವನಿ ಪರಶರ್ ಯುವರ್ ಸ್ಟೋರಿ ಗೆ ಹೇಳಿದರು.


"ರಾಜಘಟ್ ಹಳ್ಳಿಯನ್ನು ಬದಲಾವಣೆ ಮಾಡಲು ಬಹಳಷ್ಟು ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಮುಂದೆಬಂದವು. ಅಹಮದಾಬಾದ್ ಮೂಲದ ಕರ್ಮ ಕನೆಕ್ಟ್ ಕ್ರೌಡ್ ಫಂಡಿಂಗ್ ಅಭಿಯಾನದ ಮೂಲಕ ಸಾಕಷ್ಟು ಪ್ರಮಾಣದಲ್ಲಿ ಹಣ ಸಂಗ್ರಹಿಸಿದರು. ಸಂಗ್ರಹಗೊಂಡ ಹಣವನ್ನು ಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲು ಉಪಯೋಗಿಸಲಾಯಿತು. ದೆಹಲಿ ಮೂಲದ ಹೆಸರಾಂತ ಉದ್ಯಮಿ ಸುರೇಂದ್ರ ಜಿತನಿ ಸೌರ ಫಲಕಗಳನ್ನು ಅಳವಡಿಸಲು ಹಣ ನೀಡಿದರು. ಭಾರತ-ನಾರ್ವೇಜಿಯ ಸಮುದಾಯವು ನಿರಂತರ ವಿದ್ಯುತ್ ಪೂರೈಕೆಗೆ ಅವಶ್ಯಕವಿರುವ ಎಲ್ಲಾ ಸಂಪನ್ಮೂಲಗಳನ್ನು ಒದಗಿಸಿದರು.”


ಕ

ಅಶ್ವನಿ ಪರಶರ್ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹಾಕಿದ ನಂತರ ರಾಜಸ್ಥಾನದ ಸರಕಾರವು ಎಂಟು ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿದೆ.


ಅಶ್ವನಿ ಹೂಡಿದ ಪಿಐಎಲ್ ಕೊನೆಗೂ ಕೆಲಸ ಮಾಡಿತು. ರಾಜ್ಯ ಸರ್ವೋಚ್ಚ ನ್ಯಾಯಾಲಯವು ಪ್ರಧಾನ ಕಾರ್ಯದರ್ಶಿಗೆ ಹಳ್ಳಿಯಲ್ಲಿ ಎಂಟು ಶೌಚಾಲಯ ನಿರ್ಮಿಸಲು ಆದೇಶಿಸಿತು. ಇದರೊಂದಿಗೆ, ಇಡೀ ಹಳ್ಳಿ ತೆರದ ಮಲವಿಸರ್ಜನೆಯಿಂದ ಮುಕ್ತವಾಯಿತು. ಪ್ರಸ್ತುತದಲ್ಲಿ ಸರಕಾರವು ಪ್ರತಿಯೊಂದೂ ಮನೆಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿದೆ.


ಸಕಾರಾತ್ಮಕ ತಿರುವು


ರಾಜಘಟ್ ನ ನಿವಾಸಿಗಳಿಗೆ ಕೊನೆಗೂ ಬೆಳಕುಕಂಡದ್ದು, ಅಶ್ವನಿ ಹಾಗೂ ಅವರ ಗೆಳೆಯರು ನೀರು ಮತ್ತು ವಿದ್ಯುತ್ ಪೂರೈಕೆಗಾಗಿ ಬೇಕಾದ ಸಂಪನ್ಮೂಲಗಳನ್ನು ಗಳಿಸಿದ ನಂತರ ಹಾಗೂ ಅವರು ಅದಕ್ಕೆ ಕೃತಜ್ಞರಾಗಿದ್ದಾರೆ.


"ನಮ್ಮ ಕುಟುಂಬದ ಸದಸ್ಯರು ಶುದ್ದ ನೀರು ಸಿಗದೆ‌ ಬಾಯಾರಿ ಸತ್ತರು. ನಮ್ಮ ಮಕ್ಕಳು ಶಾಲೆ ಮುಗಿದ ನಂತರ ಓದಿಕೊಳ್ಳುವ ಅವಕಾಶವಿರಲಿಲ್ಲ‌. ನಮ್ಮಲ್ಲಿ ಯಾರಲ್ಲೂ ಶೌಚಾಲಯ ಕಟ್ಟಿಸುವುದಕ್ಕೆ ಹಣವಿರಲಿಲ್ಲ. ನಾವು ಸಕಾರಾತ್ಮಕ ಪರಿಣಾಮವನ್ನು ಕಂಡದ್ದು, ಅಶ್ವನಿ ನನ್ನ ಊರಿಗೆ ಬಂದ ನಂತರವೇ," ಎನ್ನುತ್ತಾರೆ ರಾಜಘಟ್ ನ ನಿವಾಸಿ ರಾಮಚಂದ್ರನ್.


ಕ

ಶುದ್ದ ನೀರಿನ ಘಟಕದಲ್ಲಿ ನೀರು ಕುಡಿಯುತ್ತಿರುವ ಮಕ್ಕಳು.


ಮನುಷ್ಯನಿಗೆ ಬೇಕಾದ ನೀರು, ವಿದ್ಯುತ್ ಹಾಗೂ ಶೌಚಾಲಯದಂತಹ ಯಾವ ಕನಿಷ್ಠ ಸೌಕರ್ಯವೂ ಇಲ್ಲದ ಕಾರಣ ಇಲ್ಲಿಯ ಗಂಡು ಮಕ್ಕಳು ಮದುವೆಯೆ ಆಗಿರಲಿಲ್ಲ. ಅಷ್ಟಕ್ಕೂ ಇಂತಹ ಹಳ್ಳಿಗೆ ಯಾವ ತಂದೆಯೂ ತನ್ನ ಮಗಳನ್ನು ಮದುವೆ ಮಾಡಿ ಕೊಡುವುದಿಲ್ಲ. ಈ ಹಳ್ಳಿ 'ಅವಿವಾಹಿತರ ಹಳ್ಳಿ' ಎಂಬ ನಾಮವನ್ನೂ ಪಡೆದಿದೆ‌. ಕಳೆದ ಹತ್ತು ವರ್ಷಗಳಲ್ಲಿ ಈ ಹಳ್ಳಿ ಕೇವಲ ಎರಡು ಮದುವೆಗಳನ್ನು ಕಂಡಿದೆ. ಆದಾಗ್ಯೂ ಎರಡು ವಾರಗಳ ಹಿಂದೆ ನಡೆದ ವೀರಿಸಿಂಗ್ ಮತ್ತು ಉರ್ಮಿಲಾರ ಮದುವೆಗೆ ಹೆಚ್ಚು ಜನ ಸೇರಿದ್ದರು.


"ನಾನು ನನ್ನ ಮಗಳನ್ನು ರಾಜಘಾಟ್ ನ ಯಾವ ಗಂಡಿಗೂ ಕೊಡುತ್ತೇನೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ, ಅದೂ ಹಲವು ಬಲ್ಬ್‌ಗಳ ಬೆಳಕಿನಲ್ಲಿರುವ ಹಳ್ಳಿಗೆ!" ಎಂದು ಕುಹಕವಾಡಿದರು, ಊರ್ಮಿಳಾಳ ತಂದೆ ದೀನದಯಾಳ್.


ಎಲ್ಲ ಕಷ್ಟಗಳ ಹೊರತಾಗಿಯೂ ಗೆದ್ದವ


ಅಶ್ವನಿ ರಾಜಘಟ್ ನ ಅಭಿವೃದ್ಧಿಗಾಗಿ ಸಾಕಷ್ಟು ಹೋರಾಡಿದರು ಎಲ್ಲ ಕಷ್ಟಗಳನ್ನು ಎದುರಿಸಿ ತಮ್ಮ ಕಾರ್ಯವನ್ನು ಅನಿರ್ಧಿಷ್ಟವಾಗಿ ಮುಂದುವರೆಸಿದರು.


ಕ

ರಾಜಘಟದ ಬೆಳವಣಿಗೆಗಾಗಿ ಕೆಲಸ ಮಾಡಿದ ಅಶ್ವನಿ ಪರಶರ್ ಹಾಗೂ ತಂಡ.


ಒಬ್ಬರು ನಿರೀಕ್ಷಿಸಿದಂತೆ, ಈ ರೀತಿಯ ಮಹತ್ತರವಾದ ಕಾರ್ಯವನ್ನು ತೆಗೆದುಕೊಳ್ಳುವುದು ಹಲವಾರು ಸವಾಲುಗಳನ್ನು ಎದುರಿಸಿದಂತೆಯೇ.


"ಇದು ನನಗೆ ಕೊಂಚ ಸವಾಲಿನ ಕೆಲಸ ಎನಿಸಿತು. ನಾನು ವಾರದ ದಿನಗಳಲ್ಲಿ ನನ್ನ ವಿದ್ಯಾಭ್ಯಾಸ ಹಾಗೂ ವೈದ್ಯಕೀಯ ಸಂಶೋಧನೆಗಳಲ್ಲಿ ತೊಡಗಿಕೊಳ್ಳುತ್ತಿದ್ದೆ. ವಾರಾಂತ್ಯದಲ್ಲಿ ಅಭಿಯಾನದ ಮೇಲೆ ಕೆಲಸ ಮಾಡುತ್ತಿದ್ದೆ. ಹಲವಾರು ಜನ ನನ್ನ ಈ ಕಾರ್ಯವನ್ನು ವಿರೋಧಿಸಿದರು, ಧೃತಿಗೆಡಿಸಿದರು. ಅವರೆಲ್ಲ ನನ್ನ ಕೆಲಸಗಳು ಅಂದುಕೊಂಡಂತಾಗುವುದಿಲ್ಲ ಎಂದು ಯೋಚಿಸಿದ್ದರು. ಆದರೆ ನಾನು ಎಂದಿಗೂ ಧೃತಿಗೆಡಲಿಲ್ಲ‌, ನನ್ನ ಕೆಲಸವನ್ನು ನಿಲ್ಲಿಸಲಿಲ್ಲ. ಅವರ ಕರುಣಾಜನಕ ಜೀವನ ಸ್ಥಿತಿಯನ್ನು ನೋಡಿ ನನಗೆ ಹೊರಹೋಗಲು ಮನಸ್ಸು ಬರಲಿಲ್ಲ," ಎನ್ನುತ್ತಾರೆ ಅಶ್ವನಿ.


ಈ 24 ವರ್ಷದ ಹುಡುಗ ಈಗ ಎಮ್ ಡಿ ಗಾಗಿ ಪ್ರವೇಶ ಪರೀಕ್ಷೆಯ ತಯಾರಿ ನಡೆಸುತ್ತಿದ್ದಾನೆ.


ಆದಾಗ್ಯೂ ರಾಜಘಟ್ ನಲ್ಲಿ ಸುಧಾರಣೆ ತರುವ ಕೆಲಸ ಮುಂದುವರೆದಿದೆ. ಮಕ್ಕಳ ಕಲಿಕಾ ಫಲಿತಾಂಶದಲ್ಲಿ ಸುಧಾರಣೆ ತರಲು ಅಶ್ವನಿ ಹಳ್ಳಿಯ ಸರಕಾರಿ ಶಾಲೆಯನ್ನು ಪುನರಾರಂಭಿಸುವ ಹಾಗೂ ಕುಡಿಯುವ ಶುದ್ದ ನೀರಿನ ಮೇಲ್ವಿಚಾರಣೆ ನಡೆಸುವ ಯೋಜನೆ ಹೊಂದಿದ್ದಾರೆ.