ಬೆಂಗಾಡಿಗೆ ಭಾಗೀರತಿಯಾದ ಅಮಲಾ ರೂಯಿಯಾ...

ಟೀಮ್ ವೈ.ಎಸ್.ಕನ್ನಡ 

ಬೆಂಗಾಡಿಗೆ ಭಾಗೀರತಿಯಾದ ಅಮಲಾ ರೂಯಿಯಾ...

Friday April 15, 2016,

3 min Read

ಆಕೆಗೆ ಆಧ್ಯಾತ್ಮದೆಡೆಗೆ ಆಸಕ್ತಿಯಿತ್ತು. ಆದ್ರೆ ಒಂದು ಘಟನೆ ಅವರನ್ನು ಎಷ್ಟು ವಿಚಲಿತರಾಗಿಸಿತು ಅಂದ್ರೆ ಹನಿ ನೀರಿಗಾಗಿ ಪರಿತಪಿಸುತ್ತಿದ್ದ ಜನರಿಗೆ ತಿಂಗಳಿಗೆ ಬೇಕಾಗುವಷ್ಟು ಜೀವಜಲ ಒದಗಿಸುವ ಮಹಾನ್ ಕಾರ್ಯಕ್ಕೆ ಆಕೆ ಕೈಹಾಕಿದ್ರು. ಉತ್ತಮ ಆದರ್ಶ ಹಾಗೂ ಬಲವಾದ ಉದ್ದೇಶಗಳನ್ನುಳ್ಳ 70ರ ಹರೆಯದ ಅಮಲಾ ರೂಯಿಯಾ ಮುಂಬೈ ನಿವಾಸಿ, ಆದ್ರೆ ತಮ್ಮ ಉದಾತ್ತ ಕಾರ್ಯದ ಮೂಲಕ ಬರಪೀಡಿತ ರಾಜಸ್ತಾನದ ಚಿತ್ರಣವನ್ನೇ ಬದಲಾಯಿಸಿದ್ದಾರೆ. ಸಾಂಪ್ರದಾಯಿಕ ಮಳೆ ನೀರು ಕೊಯ್ಲು ತಂತ್ರವನ್ನು ಬಳಸಿಕೊಂಡು 200 ನೀರಿನ ಕೊಳಗಳನ್ನು ನಿರ್ಮಾಣ ಮಾಡಿದ್ದಾರೆ. ಅಲ್ಲಿ 1 ಕೋಟಿ ಲೀಟರ್ ನೀರನ್ನು ಸಂಗ್ರಹಿಸಲಾಗುತ್ತಿದೆ. ಕೇವಲ ರಾಜಸ್ತಾನ ಮಾತ್ರವಲ್ಲ ನೀರಿಲ್ಲದೆ ಬವಣೆ ಅನುಭವಿಸುತ್ತಿದ್ದ ಹಲವು ರಾಜ್ಯಗಳಲ್ಲಿ ಅಮಲಾ ಇಂತಹ ಚೆಕ್ ಡ್ಯಾಮ್ಗಳನ್ನು ನಿರ್ಮಾಣ ಮಾಡಿದ್ದಾರೆ. ಆ ಪ್ರದೇಶಗಳಲ್ಲೆಲ್ಲ ಈಗ ವರ್ಷಪೂರ್ತಿ ಬಾವಿಗಳು ನೀರಿನಿಂದ ತುಂಬಿರುತ್ತವೆ, ಹಸಿರು ನಳನಳಿಸುತ್ತಿದೆ.

image


ದೇಶದ ಶೇ.60ರಷ್ಟು ಕೃಷಿ ಭೂಮಿ ಮಳೆಯನ್ನೇ ಅವಲಂಬಿಸಿದೆ. ಕೆಲವೆಡೆ ವರ್ಷಧಾರೆಯಿಂದ ಪ್ರವಾಹ ಉಂಟಾದ್ರೆ ಇನ್ನು ಕೆಲ ಪ್ರದೇಶಗಳು ಮಳೆಯಿಲ್ಲದೆ ಬೆಂಗಾಡಾಗುತ್ತವೆ. ಸರ್ಕಾರವೇನೋ ರೈತರ ನೆರವಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ, ಆದ್ರೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಆದ್ರೆ ಯೋಜನೆಯನ್ನು ವಾಸ್ತವವಾಗಿ ಬದಲಾಯಿಸುವ ಕಲೆ ಕೆಲವರಿಗೆ ತಿಳಿದಿರುತ್ತೆ. ಅವರಲ್ಲೊಬ್ಬರು ಅಮಲಾ ರೂಯಿಯಾ. ಅವರ ಪತಿಯ ಕುಟುಂಬ ರಾಜಸ್ತಾನದ ರಾಮಗಢ ಜಿಲ್ಲೆ ಶೇಖಾವತಿ ಗ್ರಾಮದಲ್ಲಿ ವಾಸವಾಗಿದ್ದರು. ``ಆಧ್ಯಾತ್ಮದಲ್ಲಿ ನನಗೆ ಆಸಕ್ತಿಯಿತ್ತು. 90ರ ದಶಕದಲ್ಲಿ ರಾಜಸ್ತಾನದಲ್ಲಿ ಭೀಕರ ಬರ ತಾಂಡವವಾಡುತ್ತಿತ್ತು, ಮನಕಲಕುವ ಆ ದೃಶ್ಯಗಳನ್ನೆಲ್ಲ ನಾನು ಟಿವಿಯಲ್ಲಿ ವೀಕ್ಷಿಸಿದ್ದೆ. ಆ ಚಿತ್ರಗಳು ನನ್ನನ್ನು ಕಂಗೆಡಿಸಿತ್ತು. ಆ ರೈತರಿಗಾಗಿ ಏನನ್ನಾದ್ರೂ ಮಾಡಬೇಕೆಂದು ನಾನಾಗ ನಿರ್ಧರಿಸಿದೆ'' ಎನ್ನುತ್ತಾರೆ ಅಮಲಾ.

ಆ ಸಂದರ್ಭದಲ್ಲಿ ಅಮಲಾ ಅವರ ಮಾವ ಬರಪೀಡಿತ ಪ್ರದೇಶದ ಜನರಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಿದ್ರು. ಆಹಾರವನ್ನೂ ಪೂರೈಕೆ ಮಾಡಿದ್ರು. ಆದ್ರೆ ಅದ್ರಿಂದ ಅಮಲಾ ಅವರ ಮನಸ್ಸಿಗೆ ಸಮಾಧಾನವಾಗಲಿಲ್ಲ. ಹದಗೆಟ್ಟ ಸ್ಥಿತಿಯಲ್ಲೂ ಜನರು ಆರಾಮಾಗಿ ಬದುಕಲು ಸಾಧ್ಯವಾಗುವಂತೆ ಏನನ್ನಾದ್ರೂ ಮಾಡಬೇಕೆಂದು ಅವರಿಗೆ ಅನಿಸಿತ್ತು. ``ಏನು ಮಾಡಬೇಕೆಂದು ನನಗೆ ಗೊತ್ತಿರಲಿಲ್ಲ, ಈ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದೆ. ಈ ಪ್ರದೇಶಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಎನ್ಜಿಓಗಳ ಬಗ್ಗೆ ಮಾಹಿತಿ ಸಿಕ್ತು. ಅವರ ಕೆಲಸವನ್ನೇ ಆಧಾರವಾಗಿಟ್ಟುಕೊಂಡು ನಾನು ನನ್ನ ಕಾರ್ಯ ಆರಂಭಿಸಿದೆ. ಶೇಖಾವತಿಯಿಂದ್ಲೇ ಈ ಕೆಲಸವನ್ನು ನಾನು ಶುರು ಮಾಡಿದೆ. ಇಲ್ಲಿರುವ ಸಮತಲ ಜಾಗವೊಂದು ಮಳೆ ನೀರನ್ನು ಹೀರಿಕೊಳ್ಳುತ್ತದೆ. ಸಾಂಪ್ರದಾಯಿಕ ಮಳೆ ಕೊಯ್ಲಿನ ಮೂಲಕ ಅಲ್ಲಿ ನೀರಿನ ಕೊಳ ನಿರ್ಮಾಣ ಮಾಡಲು ನಾನು ತೀರ್ಮಾನಿಸಿದೆ'' ಎನ್ನುತ್ತಾರೆ ರೂಯಿಯಾ.

ಇದನ್ನೂ ಓದಿ...

ಪೆಟ್ರೋಲ್ ಡೀಸೆಲ್ ಬೇಡ್ವೇ ಬೇಡ..! ನೀರಿನಿಂದಲೇ ಓಡುತ್ತೆ ಈ ಅದ್ಭುತ ಕಾರು

2000ನೇ ಇಸ್ವಿಯಲ್ಲಿ ಈ ಕಾರ್ಯ ಆರಂಭಿಸಿದ ರೂಯಿಯಾ ಶೇಖಾವತಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ 200 ನೀರಿನ ಕೊಳಗಳನ್ನು ನಿರ್ಮಾಣ ಮಾಡಿದ್ದಾರೆ. ಪ್ರತಿ ಕೊಳದಲ್ಲಿ 16000-50000 ಲೀಟರ್ ನೀರು ಸಂಗ್ರಹವಾಗುತ್ತದೆ, ಅದು ಕೂಡ ಕೇವಲ 2-3 ಗಂಟೆ ಮಳೆಯಲ್ಲಿ. ವಿಶೇಷ ಅಂದ್ರೆ ವರ್ಷಪೂರ್ತಿ ಇದರಲ್ಲಿ ನೀರಿರುತ್ತದೆ. ಈ ಕೊಳಗಳಿಂದ್ಲೇ 1 ಕೋಟಿ ಲೀಟರ್ ನೀರು ಸಂಗ್ರಹವಾಗುತ್ತದೆ. ರೈತರಿಗೆ ಇದರಿಂದ ಸಾಕಷ್ಟು ಅನುಕೂಲವಾಗಿದೆ. ಮಹಿಳೆಯರು ನೀರಿಗಾಗಿ ಕಿಲೋ ಮೀಟರ್ಗಟ್ಟಲೆ ಹೋಗಬೇಕಾದ ಪರಿಸ್ಥಿತಿ ಈಗಿಲ್ಲ. ಪಶುಪಾಲನೆಯ ಮೂಲಕ ಅವರು ಹಾಲು, ಮೊಸರು, ತುಪ್ಪ ಮಾರಾಟ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.

ಇದೇ ರೀತಿ ರಾಜಸ್ತಾನ ರೈತರ ಆತ್ಮಹತ್ಯೆ ಬಗ್ಗೆ ತಿಳಿದ ಅಮಲಾ ಅವರಿಗಾಗಿ ಚೆಕ್ ಡ್ಯಾಮ್ ನಿರ್ಮಾಣ ಮಾಡಲು ತೀರ್ಮಾನಿಸಿದ್ರು. ಇದಕ್ಕಾಗಿ ಅವರು ರಾಜಸ್ಥಾನದ ಬೇವಿನ ನಿಲ್ದಾಣವನ್ನು ಆಯ್ಕೆ ಮಾಡಿಕೊಂಡ್ರು, ಯಾಕಂದ್ರೆ ಅದು ಬೆಟ್ಟದ ಕೆಳಗಿನ ಜಾಗ. ಅಲ್ಲಿ ಆಣೆಕಟ್ಟು ನಿರ್ಮಾಣ ಮಾಡಿದ್ರೆ ಎತ್ತರದಿಂದ ನೀರು ಸಂಗ್ರಹಿಸಬಹುದು. ಕೇವಲ 2 ಗಂಟೆ ಮಳೆ ಸುರಿದ್ರೆ ಡ್ಯಾಮ್ ಸಂಪೂರ್ಣ ಭರ್ತಿಯಾಗುತ್ತೆ. ಇದರಿಂದ ಭೂಮಿಯ ನೀರಿನ ಮಟ್ಟ ಕೂಡ ಹೆಚ್ಚುತ್ತೆ. 80 ಅಡಿಗಿಂತಲೂ ಕೆಳಕ್ಕೆ ಹೋಗಿದ್ದ ಬಾವಿಗಳ ನೀರಿನ ಮಟ್ಟ 50 ಅಡಿಗಳಷ್ಟು ಮೇಲಕ್ಕೆ ಬಂದಿದೆ. ವರ್ಷಕ್ಕೆ ಒಂದೇ ಬೆಳೆ ಬೆಳೆಯುತ್ತಿದ್ದ ರೈತರು ಕನಿಷ್ಟ 2 ಬೆಳೆಗಳನ್ನಾದ್ರೂ ಬೆಳೆಯಬಹುದು. ನೀರು ಹೆಚ್ಚಾಗಿರುವ ಪ್ರದೇಶಗಳಲ್ಲಿ ರೈತರು ತರಕಾರಿಗಳನ್ನು ಕೂಡ ಬೆಳೆಯುತ್ತಿದ್ದಾರೆ. ನೀರಾವರಿ ಸೌಲಭ್ಯ ಚೆನ್ನಾಗಿರುವುದರಿಂದ ಉತ್ಪಾದಕತೆಯೂ ಹೆಚ್ಚಾಗಿದ್ದು ರೈತರು ತಾವು ಬೆಳೆದ ಧಾನ್ಯಗಳನ್ನು ಮಾರಾಟ ಮಾಡಲಾರಂಭಿಸಿದ್ದಾರೆ. ಈ ಪ್ರದೇಶಗಳಿಂದ ಈಗ ಯಾರೂ ವಲಸೆ ಹೋಗುತ್ತಿಲ್ಲ, ಪಟ್ಟಣಕ್ಕೆ ತೆರಳಿದ್ದವರೆಲ್ಲ ವಾಪಸ್ ಬಂದಿದ್ದಾರೆ ಎಂದು ಹೆಮ್ಮೆಯಿಂದ ಅಮಲಾ ಹೇಳಿಕೊಳ್ತಾರೆ. ಮಹಿಳೆಯರು ಮನೆಯಲ್ಲೇ ಕೆಲಸ ಮಾಡಲಾರಂಭಿಸಿದ್ದು, ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಇದೆಲ್ಲವೂ ರೂಯಿಯಾ ಅವರ ಸಾಮಾಜಿಕ ಕಾರ್ಯದ ಪ್ರತಿಫಲ. ಮಹಾರಾಷ್ಟ್ರ, ಬಿಹಾರ, ಉತ್ತರಪ್ರದೇಶ, ಹರಿಯಾಣದಲ್ಲೂ 216ಕ್ಕೂ ಹೆಚ್ಚು ಚೆಕ್ ಡ್ಯಾಂಗಳನ್ನು ಅಮಲಾ ನಿರ್ಮಾಣ ಮಾಡಿದ್ದಾರೆ. ಈ ಚೆಕ್ ಡ್ಯಾಮ್ಗಳಿಂದ ಸಾವಿರಾರು ಹಳ್ಳಿಗಳ ಲಕ್ಷಾಂತರ ರೈತರಿಗೆ ಪ್ರಯೋಜನವಾಗುತ್ತಿದೆ.

image


ಅಮಲಾ ರೂಯಿಯಾ ಆಕಾರ್ ಚಾರಿಟೇಬಲ್ ಟ್ರಸ್ಟ್ ಅನ್ನು ಕೂಡ ಸ್ಥಾಪಿಸಿದ್ದಾರೆ. ಬೇರೆ ಬೇರೆ ಕಡೆ ಚೆಕ್ ಡ್ಯಾಂ ನಿರ್ಮಾಣಕ್ಕೆ ಬೇಕಾಗುವ ಹಣದಲ್ಲಿ ಶೇ.30-40ರಷ್ಟನ್ನು ರೈತರು ನೀಡಿದ್ರೆ ಉಳಿದ ಹಣವನ್ನು ಈ ಟ್ರಸ್ಟ್ ಭರಿಸುತ್ತದೆ. ಇದರಿಂದ ಚೆಕ್ ಡ್ಯಾಂ ತಮ್ಮದು ಎಂಬ ಭಾವನೆ ರೈತರಲ್ಲಿ ಮೂಡುತ್ತದೆ. ಅದರಲ್ಲೇನಾದ್ರೂ ಬಿರುಕು ಕಾಣಿಸಿಕೊಂಡ್ರೆ ಅವರೇ ರಿಪೇರಿ ಮಾಡುತ್ತಾರೆ. ಅಮಲಾ ಅವರ 9 ಸದಸ್ಯರ ತಂಡ ಈ ಕೆಲಸವನ್ನೆಲ್ಲ ನೋಡಿಕೊಳ್ಳುತ್ತದೆ. ಅಮಲಾ ಅವರ ಪ್ರಯತ್ನದ ಫಲವಾಗಿ ಸುತ್ತಮುತ್ತಲ ಪ್ರದೇಶದ ಜನರ ಆದಾಯ 5 ಕೋಟಿ ರೂಪಾಯಿಗೆ ತಲುಪಿದೆ.

ಆದ್ರೆ ಸರ್ಕಾರದಿಂದ ಇದುವರೆಗೂ ಅಮಲಾ ಅವರಿಗೆ ಯಾವುದೇ ನೆರವು ದೊರೆತಿಲ್ಲ. ನೀರಿನ ಕೊಳ ಮತ್ತು ಚೆಕ್ ಡ್ಯಾಂ ನಿರ್ಮಾಣಕ್ಕೆ ತಮ್ಮ ಸ್ವಂತ ಹಣ, ಸ್ನೇಹಿತರಿಂದ ಹಾಗೂ ಸಂಬಂಧಿಕರಿಂದ ಪಡೆದ ಹಣವನ್ನು ಬಳಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಗ್ರಾಮಸ್ಥರು ಕೂಡ ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದಾರೆ. ಅಮಲಾ 8 ಕೋಟಿ ರೂಪಾಯಿ ಖರ್ಚು ಮಾಡಿದ್ದು, ಗ್ರಾಮಸ್ಥರು 2.80 ಕೋಟಿ ಹಣ ನೀಡಿದ್ದಾರೆ. ಆಸ್ಟ್ರೇಲಿಯಾದ ಹೈ ಕಮಿಷನ್ ಈ ಕಾರ್ಯಕ್ಕಾಗಿ ಅವರಿಗೆ 10 ಲಕ್ಷ ರೂಪಾಯಿ ನೆರವು ನೀಡಿದೆ. ದೇಶದ ಎಲ್ಲ ಕಡೆಗಳಲ್ಲೂ ಇಂತಹ ಚೆಕ್ ಡ್ಯಾಂ ನಿರ್ಮಿಸುವ ಮೂಲಕ ಅನ್ನದಾತರ ಸಮಸ್ಯೆಗೆ ಇತಿಶ್ರೀ ಹಾಡಬೇಕು ಅನ್ನೋದು ಅಮಲಾ ಅವರ ಒತ್ತಾಯ.

ಲೇಖಕರು: ಗೀತಾ ಬಿಶ್ತ್

ಅನುವಾದಕರು: ಭಾರತಿ ಭಟ್

ಇದನ್ನೂ ಓದಿ...

ಬೆಂಗಳೂರಿನಲ್ಲೂ ಇದೆ ತಾಜ್​ಮಹಲ್