ಬೆಂಗಳೂರು ಮೂಲದ ಸಂಸ್ಥೆಯೊಂದು ನಿರ್ಮಾಣದ ತ್ಯಾಜ್ಯಗಳನ್ನು ಬಳಸಿ ಹಸಿರು ಮನೆಗಳನ್ನು ನಿರ್ಮಿಸುತ್ತಿದೆ
“ಹಸಿರು ದಳ” ಎಂಬ ಸಂಸ್ಥೆಯಿಂದ ಈ “ಹಸಿರು ಮನೆ”ಯೋಜನೆಯು ಪ್ರಾರಂಭವಾಯಿತು. ಈ ಯೋಜನೆಯಲ್ಲಿ ಅವರು ಕಟ್ಟಡ ನಿರ್ಮಿಸುವಾಗ ಉಳಿದ ಶೇಷಗಳಿಂದ ಕಡಿಮೆ ದರದಲ್ಲಿ ಹಾಗೂ ಪರಿಸರದ ದೃಷ್ಟಿಯಲ್ಲಿಯೂ ಸುಸ್ಥಿರವಾದ ಮನೆಗಳನ್ನು ನಿರ್ಮಿಸುತ್ತಾರೆ.
ಭಾರತವು ಅಧಿಕ ಪ್ರಮಾಣದಲ್ಲಿ ತ್ಯಾಜ್ಯ ನಿರ್ವಹಣೆಯ ಸವಾಲುಗಳನ್ನು ಎದುರಿಸುತ್ತಿದೆ. ನಗರಗಳ ಬೆಳವಣಿಗೆ ಮತ್ತು ಜನಸಂಖ್ಯೆಯ ಹೆಚ್ಚಳವೇ ಇದಕ್ಕೆ ಕಾರಣ. ನಗರಗಳಲ್ಲಿ ಸುಮಾರು 62 ಮಿಲಿಯನ್ ಟನ್ ಗಳಷ್ಟು ಘನ ತ್ಯಾಜ್ಯವನ್ನು ಮಹಾನಗರ ಪಾಲಿಕೆಗಳು ಸಂಗ್ರಹಿಸುತ್ತಿವೆ.
ದುರಾದೃಷ್ಟವಶಾತ್ ಮರುಬಳಕೆ ಮಾಡಬಹುದಾದ ತ್ಯಾಜ್ಯವೂ ಸಹಿತ ಇತರ ತ್ಯಾಜ್ಯಗಳೊಂದಿಗೆ ಕಸದ ರಾಶಿಯನ್ನು ಸೇರುತ್ತಿದೆ.
ಈ ಸಮಸ್ಯೆಗೆ ಪರಿಹಾರವನ್ನು ಬೆಂಗಳೂರು ಮೂಲದ “ಹಸಿರು ದಳ” ಸಂಸ್ಥೆ ತಂದಿದೆ. ಈ ಸಂಸ್ಥೆಯು ಕಟ್ಟಡ ನಿರ್ಮಾಣದಲ್ಲಿ ಉಳಿದಿರುವಂತಹ ಮಣ್ಣು, ಕಾಂಕ್ರಿಟ್, ಉಕ್ಕಿನ ಸರಳುಗಳು, ಕೆಡವಲಾದ ಕಟ್ಟಡದ ಶೇಷಗಳು, ಮರದ ಸಾಮಾಗ್ರಿಗಳು ಮತ್ತು ಪ್ಲಾಸ್ಟಿಕ್‍ಗಳನ್ನು ಬಳಸಿ ಬಡವರಿಗೆ ಮನೆಯನ್ನು ನಿರ್ಮಿಸಿಕೊಡುತ್ತಿದೆ.
ಈ ಯೋಜನೆಯನ್ನೇ ಹಸಿರು ಮನೆ ಎಂದು ಕರೆಯಲಾಗುತ್ತದೆ. ಈ ಯೋಜನೆಯನ್ನು ಹಿಂದಿನ ವರ್ಷದಿಂದ ಜಾರಿಗೆ ತರಲಾಯಿತು. ಈ ಯೋಜನೆಗೆ ಸೆಲ್ಕೋ ಫೌಂಡೇಶನ್ ಅವರು ಹಣ ಮತ್ತು ತಂತ್ರಜ್ಞಾನದ ಬೆಂಬಲ ಒದಗಿಸಿದರು.
ಹಸಿರು ದಳದ ನಿರ್ದೇಶಕರಾದ ನಳಿನಿ ಶೇಕರ್ ದ ಹಿಂದೂ ಪತ್ರಿಕೆಯೊಡನೆ ಮಾತನಾಡುತ್ತಾ ಹೀಗೆ ಹೇಳಿದರು.
“ನಾವು ವಿಶಿಷ್ಟವಾದ ವಿನ್ಯಾಸ ವಿಧಾನವನ್ನು ಅನುಸರಿಸಿದೆವು. ಪ್ರತಿಯೊಂದು ಮನೆಯವರೊಂದಿಗೂ ಕುಳಿತು ಅವರ ಹೊಸ ಮನೆಗೆ ಏನು ಬೇಕು ಎಂದು ಬೇರೆ ಬೇರೆಯಾಗಿಯೇ ಕೇಳಿದೆವು. ಅಲ್ಲದೇ ಗಿಲಾವು ಮತ್ತು ಬಣ್ಣ ಎರಡು ಅವಶ್ಯವಿಲ್ಲದಂತಹ ಬೂದಿಯ ಇಟ್ಟಂಗಿಗಳಂತ ಹಲವು ಪರ್ಯಾಯ ವಸ್ತುಗಳನ್ನು ಬಳಸಿದೆವು”
ಪ್ರಸ್ತುತ ಈ ಸಂಸ್ಥೆಯು ಹಸಿರು ಮನೆ ಯೋಜನೆಯಡಿಯಲ್ಲಿ ಕಡಿಮೆ ಆದಾಯವಿರುವ ವರ್ಗಗಳಿಗೆ ಉದಾಹರಣೆಗೆ ಚಿಂದಿ ವ್ಯಾಪಾರಿಯಾದ ಇಂದಿರಾ ಮತ್ತು ಚಿಂದಿ ವಿತರಕರಂತಹ ದೇವರಾಜ್ ಗೋಸಾಯಿಯವರಿಗೆ ಮನೆಯನ್ನು ನಿರ್ಮಿಸುತ್ತಿದೆ.
ಹೊಸ ಮನೆಯ ಕುರಿತು ಮಾತನಾಡಿದ ದೇವರಾಜ್
“ನಾವು ಮೊದಲು ಕಲ್ನಾರಿನ ಛಾವಣಿ ಇರುವ ಮಣ್ಣಿನ ಮನೆಗಳಲ್ಲಿ ವಾಸಿಸುತ್ತಿದ್ದೆವು. ಆ ಮನೆಯು ಶಿಥಿಲವಾಗಿತ್ತು. ನಮಗೆ ಹೊಸ ಮನೆಯನ್ನು ನಿರ್ಮಿಸಿಕೊಳ್ಳಲು ಸಹಾಯ ಮಾಡಿದ ಹಸಿರು ದಳಕ್ಕೆ ನಾವು ಆಭಾರಿಯಾಗಿದ್ದೇವೆ. ಕೇವಲ ಹೊಸ ಮನೆ ಸುಂದರವಾಗಿರದೇ ವೆಚ್ಚವೂ ಸಹಿತ ನಾವಂದುಕೊಂಡಿದ್ದಕ್ಕಿಂತ ತುಂಬಾ ಕಡಿಮೆಯಾಗಿದೆ” ಎಂದು ಹರ್ಷ ವ್ಯಕ್ತಪಡಿಸಿದರು.
ನಳಿನಿಯವರು ಹೇಳುವ ಪ್ರಕಾರ ದೇವರಾಜ್ ಅವರ ಮನೆಯು ಪೂರ್ಣವಾಗುವ ಹಂತದಲ್ಲಿದೆ. ಇನ್ನು ಇಂದಿರಾ ಅವರ ಮನೆ ನಿರ್ಮಾಣ ಹಂತದಲ್ಲಿದೆ.
ನಿರ್ಮಾಣ ಶೇಷಗಳ ಮರುಬಳಕೆಯ ಕುರಿತು ಮಾತನಾಡಿದ ಈ ಯೋಜನೆಯ ಸಂಯೋಜಕ ಮತ್ತು ವಾಸ್ತುಶಿಲ್ಪಿ ಆದ ಕಾರ್ತಿಕ್ ನಟರಾಜನ್ “ಮರುಬಳಕೆಯ ಮತ್ತು ಪರ್ಯಾಯ ಸಾಮಾಗ್ರಿಗಳನ್ನು ಬಳಸುವುದರಿಂದ ಅವು ತ್ಯಾಜ್ಯವಾಗಿ ಅಲ್ಲೇ ಉಳಿಯಲಾರವು ಮತ್ತು ಎಲ್ಲೋ ತೆರೆದ ಜಾಗದಲ್ಲಿ ತ್ಯಾಜ್ಯವಾಗಿ ಸುರಿಯಲಾಗುವುದಿಲ್ಲ. ಅಲ್ಲದೆ ಇಂತಹ ವಸ್ತುಗಳನ್ನು ನಿರ್ಮಾಣಕ್ಕೆ ಬಳಸುವುದರಿಂದ ವೆಚ್ಚವನ್ನು ಕಡಿಮೆ ಮಾಡಿ ಪರಿಸರದ ಸುಸ್ಥಿರತೆಯನ್ನು ಕಾಪಾಡುತ್ತದೆ.” ಎಂದಿದ್ದಾರೆ.
ನಿರ್ಮಾಣ ಶೇಷದಿಂದಲೇ ಮನೆಯನ್ನು ನಿರ್ಮಿಸಿಕೊಂಡ ಜಿ. ದಾಸರಥಿಯವರು ಹೀಗೆ ಹೇಳಿದರು,
“ಕಟ್ಟಡ ನಿರ್ಮಾಣದ ಅವಶೇಷಗಳನ್ನು ಪುನರ್ ನಿರ್ಮಾಣಕ್ಕೆ ಬಳಸುವುದು ಆರ್ಥಿಕವಾಗಿ ಲಾಭದಾಯಕವಾಗಿದೆ. ಸಾಮಾನ್ಯ ಒಂದು ಮನೆಯನ್ನು ನಿರ್ಮಿಸಲು ಸುಮಾರು 40 ಲಕ್ಷದ ವರೆಗೂ ವೆಚ್ಚವಾಗಬಹುದು. ಆದರೆ ನಿರ್ಮಾಣ ಶೇಷದಿಂದ ಮನೆ ನಿರ್ಮಿಸಿದರೆ 17 ಲಕ್ಷಕ್ಕೆ ವೆಚ್ಚವನ್ನು ಇಳಿಸಬಹುದು” ದ ಸಾಫ್ಟ್ ಕಾಪಿ ವರದಿ.
ಮುಂಬರುವ ದಿನಗಳಲ್ಲಿ ಈ ಹಸಿರು ದಳ ಸಂಸ್ಥೆಯು ಸಣ್ಣ ಸಣ್ಣ ಯೋಜನೆಗಳಾಗಿ ಅಸ್ತಿತ್ವದಲ್ಲಿರುವ ರಚನೆಗಳನ್ನೇ ನವೀಕರಣಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತಿದೆ. ಆರ್ಥಿಕ ಸಹಾಯದ ಕುರಿತು ಮಾತನಾಡಿದ ನಳನಿಯವರು
“ನಾವು ಈಗಾಗಲೇ ಕಡಿಮೆ ಬಡ್ಡಿದರದಲ್ಲಿ ಸಾಲಗಳನ್ನು ಪಡೆಯಲು ಹಲವು ಹಣಕಾಸು ಸಂಸ್ಥೆಗಳನ್ನು ಸಂಪರ್ಕಿಸಿದ್ದೇವೆ. ಆದರೆ ಅವರು ಸಹಾಯಕ್ಕೆ ಮುಂದೆ ಬರಲಿಲ್ಲ. ಈಗ ಈ ಎರಡು ಮನೆಗಳ ಮಾದರಿಯನ್ನು ಅವರಿಗೆ ತೋರಿಸಿದ ನಂತರವಾದರೂ ಬ್ಯಾಂಕ್‍ಗಳು ಮತ್ತು ಇತರ ಸಂಸ್ಥೆಗಳು ಯೋಜನೆಗಳಿಗೆ ಹಣವನ್ನು ಒದಗಿಸಿ ಆರ್ಥಿಕ ಸಹಾಯ ಮಾಡಬಹುದು“ ಎಂದು ಆಶಿಸಿದ್ದಾರೆ.