ಪಾತ್ರೆಪರಡಿಗಳನ್ನು ಬಾಡಿಗೆ ನೀಡಿ ತ್ಯಾಜ್ಯ ಸೃಷ್ಟಿಯನ್ನು ತಡೆಯುತ್ತಿದ್ದಾರೆ ಬೆಂಗಳೂರಿನ ಈ ಜೋಡಿ
ರಿಶಿತಾ ಶರ್ಮಾ ಮತ್ತು ಲಕ್ಷ್ಮಿ ಶಂಕರನ್ ತಮ್ಮ ರೆಂಟ್-ಎ-ಕಟ್ಲರಿ ಉಪಕ್ರಮದ ಮೂಲಕ ವಿವಿಧ ಸಮಾರಂಭಗಳು ಹಾಗೂ ಸಂಧರ್ಭಗಳಿಗೆ ಪಾತ್ರೆಪರಡಿಗಳನ್ನು ಬಾಡಿಗೆಗೆ ನೀಡುತ್ತಿದ್ದಾರೆ.
ಕಳೆದ ಕೆಲವು ವರ್ಷಗಳಿಂದ, ಪ್ಲಾಸ್ಟಿಕ್ ದೊಡ್ಡ ಅಪಾಯವಾಗಿ ಪರಿಣಮಿಸಿದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಬೇಜವಾಬ್ದಾರಿಯಿಂದ ನಿರ್ವಹಿಸುವುದರಿಂದ ಗಂಭೀರವಾದ ಭೂಮಿ ಹಾಗೂ ಸಾಗರ ಮಾಲಿನ್ಯ ಉಂಟಾಗಿದೆ.
ಸ್ಪಷ್ಟವಾದ ಚಿತ್ರಣವನ್ನು ನೀಡಬೇಕೆಂದರೆ, ವಿಶ್ವ ಸಂಸ್ಥೆಯ ಪ್ರಕಾರ, 1950 ರ ದಶಕದ ಆರಂಭದಿಂದಲೂ ಪ್ರಪಂಚವು 8.3 ಶತಕೋಟಿ ಟನ್‌ಗಳಿಗಿಂತ ಹೆಚ್ಚು ಪ್ಲಾಸ್ಟಿಕ್ ಅನ್ನು ಉತ್ಪಾದಿಸಿದೆ, ಮತ್ತು ಇದರಲ್ಲಿ 60 ಪ್ರತಿಶತದಷ್ಟು ಒಳನಾಡು ಅಥವಾ ಸಾಗರವನ್ನು ಸೇರಿದೆ.
ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ನಿಷೇಧಿಸುವುದರಿಂದ ಹಿಡಿದು ಜೈವಿಕ ವಿಘಟನೀಯ ಉತ್ಪನ್ನಗಳನ್ನು ಆಯ್ಕೆ ಮಾಡುವವರೆಗೆ, ಅನೇಕ ದೇಶಗಳು ಮತ್ತು ವೈಯಕ್ತಿಕವಾಗಿ ಸಾರ್ವಜನಿಕರೂ ಸಮಸ್ಯೆಯನ್ನು ನಿಭಾಯಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ.
ಹಾಗೂ ಈ ವಿಷಯದಲ್ಲಿ ಬದಲಾವಣೆಗಳನ್ನು ತರುತ್ತಿರುವುದು ಬೆಂಗಳೂರು ಮೂಲದ ರಿಶಿತಾ ಶರ್ಮಾ ಮತ್ತು ಲಕ್ಷ್ಮಿ ಶಂಕರನ್. 2016 ರಿಂದ ರೆಂಟ್-ಎ-ಕಟ್ಲರಿ ಎಂಬ ಉಪಕ್ರಮದ ಮೂಲಕ ಇವರಿಬ್ಬರು ಹೊಸ ಬದಲಾವಣೆಯನ್ನು ಉಂಟುಮಾಡುತ್ತಿದ್ದಾರೆ.
"ತ್ಯಾಜ್ಯವನ್ನು ಕಡಿಮೆ ಮಾಡುವ ಪರಿಕಲ್ಪನೆಯೊಂದಿಗೆ ಪ್ರಾರಂಭವಾದ ಈ ಪಾತ್ರೆಪರಡಿಗಳ (ಕಟ್ಲರಿ) ಬ್ಯಾಂಕ್ ಬಿಸಾಡಬಹುದಾದ ಕಾಗದದ ತಟ್ಟೆಗಳನ್ನು ಮತ್ತು ಕಪ್‌ಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದ್ದು, ನಗರದಾದ್ಯಂತ ಆರು ಶಾಖೆಗಳನ್ನು ಹೊಂದಿದೆ.
ಪರ್ಯಾಯವಾಗಿ, ಬ್ಯಾಂಕ್ ಈಗ ಉಕ್ಕಿನ ತಟ್ಟೆ, ಲೋಟ, ಚಮಚ ಮತ್ತು ಬಟ್ಟಲುಗಳನ್ನು ಒದಗಿಸುತ್ತದೆ ಹಾಗೂ ಪ್ರತಿ ಸೆಟ್‌ಗೆ ಶುಲ್ಕವನ್ನು ನಿಗದಿ ಪಡಿಸಿದೆ. ಉದಾಹರಣೆಗೆ, ಸ್ಟೇನ್‌ಲೆಸ್ ಸ್ಟೀಲ್ಸ್ ಮತ್ತು ಕಪ್‌ಗಳಂತಹ ಎಲ್ಲಾ ಪಾತ್ರೆಪರಡಿಗಳನ್ನು ಒಳಗೊಂಡಿರುವ ಪ್ರತಿ ಸೆಟ್‌ಗೆ 15 ರೂ ಶುಲ್ಕವಿದೆ.
ಇಲ್ಲಿಯವರೆಗೆ ಬೆಂಗಳೂರಿನಾದ್ಯಂತ ಸುಮಾರು 200 ಸಮಾರಂಭಗಳಲ್ಲಿ ಕಟ್ಲರಿ ತ್ಯಾಜ್ಯವನ್ನು ಕಡಿಮೆ ಮಾಡಲು ಬ್ಯಾಂಕ್ ಯಶಸ್ವಿಯಾಗಿದೆ. ತಟ್ಟೆಗಳು ಮತ್ತು ಕಪ್‌ಗಳನ್ನು ಸ್ವಚ್ಛಗೊಳಿಸಲು ಅವರು ಮನೆಯಲ್ಲಿ ತಯಾರಿಸಿದ ಜೈವಿಕ ಕಿಣ್ವಗಳನ್ನು ಮಾತ್ರ ಬಳಸುತ್ತಾರೆ ಎಂಬುದು ಅವರನ್ನು ಅನನ್ಯವಾಗಿಸಿದೆ.
ವಿನಮ್ರವಾದ ಆರಂಭ
ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿದ ರಿಶಿತಾ,
"ಒಂದು ದಿನ, ನಮ್ಮ ಗೇಟೆಡ್ ಸಮುದಾಯದಲ್ಲಿ ನಾವಿಬ್ಬರು ತ್ಯಾಜ್ಯ ನಿರ್ವಹಣೆ ಮತ್ತು ಪ್ರತ್ಯೇಕತೆಯ ಬಗ್ಗೆ ಜಾಗೃತಿ ಅಧಿವೇಶನ ನಡೆಸುತ್ತಿದ್ದಾಗ - ಪ್ರೇಕ್ಷಕರು ಪ್ಲಾಸ್ಟಿಕ್‌ಗಾಗಿ ಪರ್ಯಾಯ ಆಯ್ಕೆಗಳ ಪ್ರಶ್ನೆಗಳನ್ನು ಎತ್ತಿದರು. ಗೇಟೆಡ್ ಸಮುದಾಯಗಳು ಸಾಮಾನ್ಯವಾಗಿ ಅನೇಕ ಪಾರ್ಟಿಗಳನ್ನು ಮತ್ತು ಕಾರ್ಯಕ್ರಮಗಳನ್ನು ನಡೆಸುತ್ತಿದ್ದರಿಂದ, ತ್ಯಾಜ್ಯ ಸೃಷ್ಟಿ ಮಾಡುವ ಬದಲು, ನಾವು ಹೂಡಿಕೆ ಮಾಡಿ ಕಟ್ಲರಿ ಬ್ಯಾಂಕ್ ಅನ್ನು ಪ್ರಾರಂಭಿಸಲು ನಿರ್ಧರಿಸಿದೆವು," ಎಂದರು.
ಇದು ಕೇವಲ ನಮ್ಮ ಸಮುದಾಯದ ವಿಷಯವಾದ್ದರಿಂದ ಜನರು ಶೀಘ್ರದಲ್ಲೇ ಪರಿಕಲ್ಪನೆಯನ್ನು ಒಪ್ಪಿಕೊಳ್ಳಲು ಪ್ರಾರಂಭಿಸಿದರು. ಆದಾಗ್ಯೂ, ಅನೇಕರು ಈ ಉತ್ಪನ್ನಗಳ ನೈರ್ಮಲ್ಯವನ್ನು ಪ್ರಶ್ನಿಸಿದ್ದರು. ಆಗ, ಪ್ರತಿ ಪಾತ್ರೆಪರಡಿಗಳನ್ನು ಜೈವಿಕ-ಕಿಣ್ವಗಳಿಂದ ತೊಳೆಯಲಾಗುವುದು ಎಂದು ಇಬ್ಬರು ಭರವಸೆ ನೀಡಿದರು. ವರ್ಷಗಳಲ್ಲಿ, ಈ ಜೋಡಿ ಸುಮಾರು 80,000 ಡಿಸ್ಪೋಸಬಲ್‌ಗಳನ್ನು ಹೊಂದಿದ್ದಾರೆ.
ಹಸಿರು ಮಾರ್ಗ
ರೆಂಟ್-ಎ-ಕಟ್ಲರಿ ಉಪಕ್ರಮದ ಪರಿಕಲ್ಪನೆಯಿಂದ ಪ್ರೇರಿತರಾಗಿ, ನಮ್ಮ ಊರು ಸಂಸ್ಥೆಯ ಪಿ ನಟರಾಜನ್ ಈ ವರ್ಷದ ಆರಂಭದಲ್ಲಿ ಚೆನ್ನೈನಲ್ಲಿ ನಮ್ಮ ಕಟ್ಲರಿ ಬ್ಯಾಂಕ್ ಅನ್ನು ಸ್ಥಾಪಿಸಿದರು. ಎಫರ್ಟ್ಸ್ ಫಾರ್ ಗುಡ್ ನೊಂದಿಗೆ ಮಾತನಾಡುತ್ತಾ, ಅವರು,
"ಪರಿಸರ ಸ್ನೇಹಿ ರೀತಿಯಲ್ಲಿ ಸಮಾರಂಭಗಳನ್ನು ಆಚರಿಸಲು ನಾವು ಹಿಂತಿರುಗಬೇಕಾಗಿದೆ. ಮುಂಚೆ ಬಾಡಿಗೆ ಪಾತ್ರೆಗಳು ರೂಢಿಯಲ್ಲಿದ್ದವು. ಟ್ಯೂಬ್ ಲೈಟ್‌ಗಳು, ಕುರ್ಚಿಗಳು, ತಟ್ಟೆ, ಕಪ್ಗಳು ಮತ್ತು ನೀರನ್ನು ಪೂರೈಸಲು ಬಳಸುವ ಜಗ್‌ಗಳನ್ನು ಸಹ ಜನರು ಬಾಡಿಗೆಗೆ ಪಡೆಯುತ್ತಿದ್ದರು. ಎಲ್ಲವನ್ನೂ ಸ್ವಚ್ಛಗೊಳಿಸಿ ಮರಳಿ ಕೊಡುತ್ತಿದ್ದರು. ತ್ಯಾಜ್ಯ ಆಗ ಸೃಷ್ಟಿಯಾಗುತ್ತಿರಲಿಲ್ಲ. ನಂತರ ಬಳಸಿ ಎಸೆಯುವ ಸಂಸ್ಕೃತಿ ಬಂದಿತು, ಮತ್ತು ಇದ್ದಕ್ಕಿದ್ದಂತೆ ತುಂಬಾ ಕಸ ಸೃಷ್ಟಿಯಾಯಿತು" ಎಂದರು.
ಈಗ, ಒಂದು ವಿವಾಹವು ಸುಮಾರು ಎರಡು ಟ್ರಕ್ ಲೋಡ್ ತ್ಯಾಜ್ಯವನ್ನು ಉತ್ಪಾದಿಸುತ್ತದೆ, ಅದು ಮಣ್ಣಿನೊಳಗೆ ಸೇರಿ ಕೊನೆಗೊಳ್ಳುತ್ತದೆ, ಎನ್ನುತ್ತಾರೆ, ಪಿ ನಟರಾಜನ್.
ರೆಂಟ್-ಎ-ಕಟ್ಲರಿ ಜೊತೆಗೆ, ರಿಶಿತಾ ತನ್ನ ಸ್ನೇಹಿತರೊಂದಿಗೆ #ಬೈಯೊಸೆಲ್ಫೀ ಎಂಬ ಸವಾಲನ್ನು ಸಹ ಪ್ರಾರಂಭಿಸಿದ್ದಾರೆ.
ಅವರು ಹೇಳಿದ ಸವಾಲಿನ ಬಗ್ಗೆ ಮಾತನಾಡುತ್ತಾ,
"ದೊಡ್ಡ ಸಮಾರಂಭಗಳ ವಿಷಯಕ್ಕೆ ಬಂದರೆ, ನೈರ್ಮಲ್ಯದ ಅಂಶದ ಬಗ್ಗೆ ಮತ್ತು ಬಾಡಿಗೆ ಸ್ಟೇನ್‌ಲೆಸ್ ಸ್ಟೀಲ್ ಪ್ಲೇಟ್‌ಗಳಲ್ಲಿ ಆಹಾರವನ್ನು ನೀಡುತ್ತಿರುವುದರ ಬಗ್ಗೆ ಜನರು ಇನ್ನೂ ಚಿಂತಿತರಾಗಿದ್ದಾರೆ. ಆದರೆ ಈ ಕಾಳಜಿಯನ್ನು ಪರಿಹರಿಸಲು ಇರುವ ಏಕೈಕ ಮಾರ್ಗವೆಂದರೆ ಬಾಡಿಗೆ ಪಾತ್ರೆಪರಡಿಳನ್ನು ಬಳಸುವುದರಿಂದ ಗಮನಾರ್ಹ ಪ್ರಮಾಣದ ತ್ಯಾಜ್ಯವನ್ನು ಹೇಗೆ ಕಡಿಮೆ ಮಾಡುತ್ತದೆ ಎಂಬ ಸಕಾರಾತ್ಮಕ ಕಥೆಗಳನ್ನು ನಿರಂತರವಾಗಿ ಹಂಚಿಕೊಳ್ಳುವುದು” ಎಂದು ಎಫರ್ಟ್ಸ್ ಫಾರ್ ಗುಡ್ ವರದಿ ಮಾಡಿದೆ.