ಆವೃತ್ತಿಗಳು
Kannada

ಮಾಸ್ತಿ ಕನ್ನಡದ ಆಸ್ತಿ

ಚೈತ್ರ.ಎನ್​​​

CHAITHRA N
4th Nov 2015
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಕನ್ನಡದಲ್ಲಿ ದೊಡ್ಡ ಕಾದಂಬರಿಗಳನ್ನು ಓದುವ ಒಂದು ವರ್ಗವಾದರೇ ಸಣ್ಣ ಕಥೆಗಳ ಅಭಿರುಚಿಯ ಇನ್ನೊಂದು ವರ್ಗ. ನಮ್ಮಲ್ಲಿ ಕಾದಂಬರಿಕಾರರ ಸಂಖ್ಯೆಗೆ ಕೊರತೆಯಿಲ್ಲ. ಆದರೆ ಸಣ್ಣ ಕಥೆಗಳು ? ಬರೆದರೂ ಅಷ್ಟು ಓದಿಸಿಕೊಂಡು ಹೋಗಬಲ್ಲ ಛಾತಿ ಯಾರ ಬರಹಕ್ಕೆ ಇದೆ? ಹೀಗೆ ನಾನಾ ಪ್ರಶ್ನೆಗಳಿಗೆ 1910ರ ಸಮಯದಲ್ಲಿ ಉತ್ತರವಾಗಿ ಬಂದವರು ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್‍ರವರು. ಡಿಸ್ಟ್ರಿಕ್ ಕಮಿಷನರ್ ಆಗಿದ್ದವರು, ತಮಗೆ ಅನ್ಯಾಯವಾದುದನ್ನು ಸಹಿಸಲಾಗದೇ ಆ ಕೆಲಸವನ್ನೆ ಬಿಟ್ಟು ಬಂದವರು. ಕೆಲವು ಕಾಲ ಇಂಗ್ಲೀಷ್‍ನಲ್ಲಿ ಬರೆದು ನಂತರ ಕನ್ನಡಕ್ಕೆ ಹೊರಳಿಕೊಂಡರು. ಕನ್ನಡದಲ್ಲಿ ಯಾರಿಗೆ ಓದಬೇಕು, ತಿಳಿಯಬೇಕು ಅನ್ನೊ ಆಸೆ ಇದೆಯೋ ಅವರೆಲ್ಲಾ ತಪ್ಪದೇ ಮಾಸ್ತಿಯವರನ್ನು ಓದಲೇಬೇಕು ಅಂತಾರೆ ಸಾಹಿತಿ ಕಿರಂ ನಾಗರಾಜುರವರು.

image


ಎಲ್ಲಾ ಪೀಳಿಗೆಯನ್ನು ತಲುಪುವ ಸಾಹಿತಿ ಮಾಸ್ತಿ. ಸಾಹಿತ್ಯಕ್ಕೆ ಹೊಸದಾಗಿ ಪರಿಚಯವಾಗುವ ಎಲ್ಲಾ ಸಾಹಿತ್ಯ ಓದುಗನನ್ನು ಬೆಳೆಸುವಂಥ ಶ್ರೇಷ್ಠಸಾಹಿತ್ಯ ಮಾಸ್ತಿಯವರ ಸಾಹಿತ್ಯ. ಪತ್ರಿಕೆಗಳ ಅಂಕಣದಲ್ಲೂ ಮಾಸ್ತಿಯವರದ್ದು ಎತ್ತಿದ ಕೈ. ಇನ್ನು ಮಾಸ್ತಿಯವರ ಕಾಕಾನ ಕೋಟೆ ನಾಟಕ, ಸಿನಿಮಾವಾಗಿಯೂ ಹೆಚ್ಚು ಪ್ರಸಿದ್ಧಿ, ಇನ್ನು ಮಾಸ್ತಿ ಅವರ ಸಣ್ಣ ಕಥೆಗಳದ್ದು ಮಾಯ ಪ್ರಪಂಚವೇ ಸರಿ. ಒಮ್ಮೆ ಅದರ ಸೆಳೆತಕ್ಕೆ ಸಿಲುಕಿಬಿಟ್ಟರೆ ಬಿಟ್ಟು ಬರಲು ಮನಸಂತೂ ಸುತರಾಂ ಒಪ್ಪುವುದಿಲ್ಲ.

ಅಲ್ಲದೇ ಮಾಸ್ತಿಯವರ ಕಥೆಗಳಲ್ಲಿನ ಬರಹಗಳ ವೈಶಿಷ್ಟ್ಯವೇ ಅಂತದ್ದು, ಪಟ್ಟಣದವರ ಕನ್ನಡವಾಗಲಿ, ಗ್ರಾಮೀಣ ಸೊಗಡಿನ ಕನ್ನಡವಾಗಲಿ ಅದನ್ನು ಅಕ್ಷರದಲ್ಲಿ ಕಾಣುವ ಸೌಂದರ್ಯವೇ ಬೇರೆ. ಬರವಣಿಗೆಯಲ್ಲಿ ಸೂಕ್ಷ್ಮ ಅಭಿವ್ಯಕ್ತಿ. ಅದು ಅಬ್ಬರವಿಲ್ಲದ ಸೌಮ್ಯವಾಗಿಯೇ ಅಭಿವ್ಯಕ್ತವಾಗುವ ಬರಹ. ಮಾಸ್ತಿಯವರ ಭಾಷೆ ಓದಿದದವರಿಗೆ, ಕೇಳಿದವರಿಗೆ ಅನುಭವವಾಗುವ ಒಂದು ಅಂಶವೆಂದರೆ ಅವರ ಭಾಷೆ ನಿರಾಳ ಮತ್ತು ಸರಳ. ಅವರ ಕಾಲದ ಲೇಖಕರಲ್ಲಿ ಅಲಂಕಾರವಿಲ್ಲದೇ ಬರೆದವರು. ಅವರ ಆಲೋಚನೆಯೇ, ಭಾವಿಸುವ ಕ್ರಮವೇ ವಿಭಿನ್ನ.

image


ಹಿರಿಯ ಸಾಹಿತಿ ಯು. ಆರ್. ಅನಂತ ಮೂರ್ತಿ ಅವರು ಮಾಸ್ತಿಯವರೊಟ್ಟಿಗೆ ನಡೆಸಿದ ಸಂದರ್ಶನದಲ್ಲಿ ಮಾಸ್ತಿಯವರು ಹೀಗೆ ಹೇಳೀಕೊಳ್ಳುತ್ತಾರೆ. "ಸೃಷ್ಟಿಯೇ ಎಲ್ಲ, ಚಿಕ್ಕಂದಿನಿಂದಲೂ ನಮ್ಮ ತಂದೆ ತಾಯಿ ನಮ್ಮ ತಾತಾನದ್ದು ಮೇಲ್ಪಂಕ್ತಿ ಬದುಕು, ಆದರೆ ಅವರಿಗೆ ಸಿಕ್ಕಿದಷ್ಟು ಅನುಭೂತಿ ನನಗೆ ದಕ್ಕಿಲ್ಲ. ನೀನಿರುವಲ್ಲೇ ಒಳ್ಳೆದು ಮಾಡು, ಸಹಾಯ ಮಾಡು, ಅನ್ನೊದು ಅವರ ಸಹಜವಾದ ಪಾಡಾಯಿತು. ಕಷ್ಟ ಬಂತು, ಆದರೆ ಸಮಸ್ಯೆ ಬರಲಿಲ್ಲ. ನೋವು ಮತ್ತು ಸಮಸ್ಯೆ ಎರಡು ಭಿನ್ನ. ಒಳಗಿದ್ದ ದೇವರು ಆತ್ಮನ ಹಿಡಿದಿಟ್ಟುಕೊಂಡಿದ್ದಾನೆ. ಎಲ್ಲವನ್ನು ಸಹಿಸಿಕೊಳ್ಳಬೇಕು. ಸೃಷ್ಟಿಯಲ್ಲಿ ಧ್ವಂಧ್ವ ತಪ್ಪಿದಲ್ಲ. ಒಳಿತು ಕೆಡುಕು ಎರಡು ಇದೆ. ಕೆಟ್ಟದ್ದು ಲೇಖಕನಿಗೆ ಸಮಸ್ಯೆ ಆಗಲಿಲ್ಲ. ಬರವಣಿಗೆ ನನಗೆ ಪ್ರೇರಣೆಯಾಗಿ ಒದಗಿ ಬಂದಿದ್ದು. 1921ರಲ್ಲಿ ಬೇಲೂರಿನ ದೇವಸ್ಥಾನದಲ್ಲಿ ಮೂರ್ತಿ ನೋಡಿದಾಗ ಸಂತೋಷಕ್ಕಿಂತ ದುಃಖವಾಯಿತು. ಆ ಕಾಲದವರಂತೆ ನಮಗೆ ಇಂತಹ ಸೃಷ್ಟಿಸೋ ಶಕ್ತಿ ಇಲ್ವಲ್ಲಾ, ದೇಶ ಈ ಬೆಳವಣಿಗೆಗೆ ಏಕೆ ಹೋಯಿತು ಅನ್ನಿಸಿಬಿಡ್ತು. ಊರಿನ ವಾತವರಣ, ರಾಮಯಣ, ಹರಿಶ್ಚಂದ್ರ, ನಳ ಚರಿತ್ರೆ ಓದುತ್ತಿದ್ದೆ. 11 ವರ್ಷದ ಹುಡುಗನಾಗಿದ್ದಾಗಲೇ ಶೇಕ್ಸ್​​​ಪಿಯರ್, ಕಾಳಿದಾಸನನ್ನು ಓದುವ ಅವಕಾಶ ಸಿಕ್ಕಿತ್ತು. ಹೊಂಗೇನಳ್ಳಿಯ ಪಟ್ಟಣದ ದಾರಿ, ಹನುಮಂತರಾಯನ ದೇವಸ್ಥಾನ, ನೇರಳೆ ಹಣ್ಣಿನ ಗಿಡ, ಹತ್ತಿಮರ, ಎಲ್ಲವೂ ಬಾಲ್ಯವನ್ನು ರೂಪಿಸಿದ್ದು. ಈಗ ಅವು ಯಾವುದು ಇಲ್ಲ. ಇಂದಿಗೂ ಆ ನೆನೆಪು ಹಸಿರಾಗೆ ಕಾಡುತ್ತಲಿರುತ್ತದೆ.

ಮಾಸ್ತಿ ಪೇಟೆಯೇ ಹೆಚ್ಚು ಪರಿಣಾಮ ಬೀರಿದೆ. ಹುಟ್ಟಿದ ಊರಿಗೆ ಸೇವೆ ಸಲ್ಲಿಸಲು ಅಲ್ಲಿ ಲೈಬ್ರರಿ ಮಾಡುತ್ತಿದ್ದೇನೆ. 1902 ರಲ್ಲಿ ಕಾಲೇಜು ಹೋಗ್ತಿದ್ದೆ, ಮೈಸೂರಿನ ಮಹಾರಾಜದಲ್ಲಿ ಕಾಲೇಜು ಮುಗಿಸಿದೆ. ಇಂಗ್ಲೀಷ್ ಕಲಿಯಲು ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಬಂದೆ. ಆಗೆಲ್ಲ ನಮ್ಮ ಊರುಗಳಲ್ಲಿ ವೈಷಮ್ಯ ಇರಲಿಲ್ಲ. ಈಗ ಪರಿಸ್ಥಿತಿ ಹಾಗಿಲ್ಲ ಎಲ್ಲವೂ ಬದಲಾಗಿದೆ. ಜಾತಿ ರಾಜಕೀಯ ಇಂದು ದೇಶವನ್ನು ಹಾಳು ಮಾಡಿದೆ ಎಂದು ನೋವು ವ್ಯಕ್ತಪಡಿಸಿದ್ದವರು ಮಾಸ್ತಿ. ಈ ಸಂದರ್ಶನವಾದ ಕೆಲವೇ ತಿಂಗಳಲ್ಲಿ ಮಾಸ್ತಿಯವರು ನಮ್ಮನ್ನೆಲ್ಲಾ ಅಗಲಿದರು.

image


ಇನ್ನು ಮಾಸ್ತಿಯವರ ಸಾಹಿತ್ಯದಲ್ಲಿ ಕಾಮದ ಬಗ್ಗೆ ಬಹಳ ಆರೋಗ್ಯಕರವಾದ ವಿಶ್ಲೇಷಣೆ ಸಿಗುತ್ತದೆ. ಬಾಲ್ಯದಲ್ಲಿ ಕಂಡ ಕಥೆಗಳನ್ನು ವಿಭಿನ್ನ ಆಲೋಚನೆಗಳಲ್ಲಿ ಅಭಿವ್ಯಕ್ತಿಸಿದವರು. ಸಮಾಜಕ್ಕೆ ತಪ್ಪಾಗಿ ಕಂಡದ್ದು, ವ್ಯಕ್ತಿಗೆ ಸರಿ ಅನ್ನಿಸಿದೆ ಅಷ್ಟೇ ಎನ್ನುತ್ತಿದ್ದರು.

ಮಾಸ್ತಿಯವರು ಮೂಲತಃ ತಮಿಳಿನವರಾದರೂ ಕನ್ನಡದ ಬಗ್ಗೆ ಅಪಾರ ಗೌರವವಿತ್ತು. ಕನ್ನಡದ ಬಗ್ಗೆ ಅವರು ಹೇಳುತ್ತಿದ್ದದ್ದು ಹೀಗೆ "ನಾನು ತಮಿಳಿನವನಾದರು ಕನ್ನಡದಲ್ಲೇ ಹೆಚ್ಚು ಪ್ರಬುದ್ಧತೆ ಇದೆ. ಕನ್ನಡ ಕಲಿಯಲೇಬೆಕು. ಭಾಷೆಗೆ ಸಾವಿರ ಎಡೆ ಇದೆ. ಸರಸ್ವತಿ ಭಾಷೆ ಹಲವು. ಕನ್ನಡಿಗನಾಗಿ ಕನ್ನಡ ಭಾಷೆ ಬೇಡ ಅನ್ನೊ ಸಣ್ಣ ತನ ಇರಿಸಿಕೊಳ್ಳಬಾರದು.

1910ರಲ್ಲಿ ಬರೆದ ರಂಗಣ್ಣನ ಮದುವೆ ಮಾಸ್ತಿಯವರ ಮೊದಲ ಸಣ್ಣ ಕಥೆ. ಇಲ್ಲಿಯ ತನಕ 123 ಪುಸ್ತಕಗಳನ್ನು ಕನ್ನಡದಲ್ಲಿ ರಚಿಸಿದರೆ, 17 ಪುಸ್ತಕಗಳನ್ನು ಇಂಗ್ಲೀಷ್‍ನಲ್ಲಿ ಬರೆದಿದ್ದಾರೆ. ಇನ್ನು 1983ರಲ್ಲಿ "ಚಿಕ್ಕವೀರ ರಾಜೇಂದ"ರ ಕೊಡಗಿನ ಕಡೆಯ ರಾಜನ ಬಗ್ಗೆ ಬರೆದ ಕೃತಿಗೆ ಸಾಹಿತ್ಯಲೋಕದ ಧ್ರವತಾರೆ ಜ್ಞಾನಪೀಠ ಲಭಿಸಿದೆ. ಇದಿಷ್ಟೇ ಅಲ್ಲದೇ ಮಾಸ್ತಿಯವರ ಸಾಹಿತ್ಯ ಕೃಷಿ ಈ ರೀತಿ ಇದೆ. ಕಾದಂಬರಿ, ನಾಟಕ, ಪ್ರಬಂಧ, ಮತ್ತು ಪದ್ಯಗಳನ್ನು ರಚಿಸಿದ್ದಾರೆ. ಶ್ರೀ ರಾಮ ಪಟ್ಟಾಭಿಷೇಕ ಮಹಾಕಾವ್ಯ, ಕೊಡಗಿನ ಕಡೆಯ ರಾಜ ಚಿಕ್ಕವೀರ ರಾಜೇಂದ್ರ, ಶಿವಮೊಗ್ಗದ ಕಡೆಯ ನಾಯಕ ಚನ್ನಬಸವ ನಾಯಕನ ಕುರಿತು ಐತಿಹಾಸಿಕ ಕಾದಂಬರಿಗಳನ್ನು ಬರೆದಿದ್ದಾರೆ. ಸುಬ್ಬಣ್ಣ, ಶೇಷಮ್ಮ ಪ್ರಮುಖ ಕಾದಂಬರಿಗಳು. ಇನ್ನು ಮಾಸ್ತಿಯವರ ಸಣ್ಣ ಕಥೆಗಳು ಪಠ್ಯವಾಗಿದೆ. ಕೆಲವು ಸಣ್ಣ ಕಥೆಗಳು, ನೂರು ಸಣ್ಣ ಕಥೆಗಳು, ಕಾಕಾನಕೋಟೆ, ಮಂಜುಳೆ, ಯಶೋಧರ, ಭಟ್ಟರ ಮಗಳು, ಶಾಂತ ಪ್ರಮುಖ ನಾಟಕಗಳು. "ಭಾವ" ಎನ್ನುವುದು ಮಾಸ್ತಿಯವರ ಆತ್ಮಕಥೆಯಾಗಿದೆ. ಮಾಸ್ತಿಯವರು ತಮ್ಮ 95 ನೇ ವಯಸ್ಸಿಗೆ 1986 ರಲ್ಲಿ ಇಹಲೋಕ ತ್ಯಜಿಸುತ್ತಾರೆ. ಆಗ ಬರೆದ ಮಾತುಗಾರ ರಾಮಣ್ಣ ಅವರ ಕಡೆಯ ಸಾಹಿತ್ಯ ಕೃಷಿಯಾಗುತ್ತದೆ.

ಮಾಸ್ತಿ ಕನ್ನಡದ ಆಸ್ತಿ ಅವರ ನೆನಪಲ್ಲೆ ಇಂದಿಗೂ ಮಾಸ್ತಿಯವರು ನೆಲೆಸಿದ್ದ ಬೆಂಗಳೂರಿನ ಬಸವನಗುಡಿಯಲ್ಲಿ ಮ್ಯೂಸಿಯಂ ಮಾಡಲಾಗಿದೆ. ಇದನ್ನು ಮಾಸ್ತಿ ಅಯ್ಯಂಗಾರ್ ಕಲ್ಯಾಣ ಟ್ರಸ್ಟ್ ನೋಡಿಕೊಳ್ಳುತ್ತಿದೆ. ಆ ಮೂಲಕ ಮಾಸ್ತಿಯವರ ಕುರಿತು ಅನೇಕ ಪುಸ್ತಕಗಳು ಪ್ರಕಟವಾಗುತ್ತವೆ. ಇನ್ನು ಮಾಸ್ತಿ ಅವರ ಹೆಸರಿನಲ್ಲಿ ಪ್ರತಿವರ್ಷ ಸಾಹಿತಿಗಳಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಮಾಸ್ತಿಯವರ ಸಣ್ಣ ಕಥೆಗಳು ಇಂದಿನ ಮುಂದಿನ ಮತ್ತು ಎಲ್ಲ ಪೀಳಿಗೆಯ ಆಸ್ತಿ ಎಂಬುದು ಕನ್ನಡಿಗರ ಹೆಮ್ಮೆ.

 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags