ನಿಮ್ಮ ಮುದ್ದಿನ ಪಪ್ಪಿಗೆ ನೆಮ್ಮದಿಯ ವಿದಾಯ ಹೇಳಿ..!
ಅಗಸ್ತ್ಯ
ನಿಮ್ಮ ಮುದ್ದಿನ ಪ್ರಾಣಿ ಅಸುನೀಗಿದಾಗ ಅದಕ್ಕೊಂದು ನೆಮ್ಮದಿಯ ಬೀಳ್ಕೊಡುಗೆ ನೀಡಬೇಕೆಂದರೆ ಏನು ಮಾಡಬೇಕೆಂದು ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ನಿಮ್ಮ ಪ್ರೀತಿ ಪಾತ್ರ ಜೀವಿಯ ಅಂತ್ಯಸಂಸ್ಕರಾಕ್ಕಾಗಿ ಬಿಬಿಎಂಪಿ ಪ್ರಾಣಿ ಚಿತಾಗಾರ ನಿರ್ಮಿಸಿದೆ. ನೀವು ಪ್ರಾಣಿಯ ಮೃತ ದೇಹವನ್ನು ಅಲ್ಲಿಗೆ ತೆಗೆದುಕೊಂಡು ಹೋದರೆ ಸಾಕು ಅಂತ್ಯಸಂಸ್ಕಾರ ನಡೆಸಿ, ಅದರ ಬೂದಿಯನ್ನು ನೆನಪಿಗಾಗಿ ನೀಡುತ್ತಾರೆ.
ರಾಜ್ಯದ ಮೊದಲ ಮತ್ತು ದೇಶದ 5ನೇ ಪ್ರಾಣಿ ಚಿತಾಗಾರವಾಗಿರುವ ಇದು ಇರುವುದು ಸುಮನಹಳ್ಳೀ ಜಂಕ್ಷನ್ ಬಳಿಯ ಕೆಎಸ್‍ಆರ್‍ಟಿಸಿ ಡಿಪೋ ಪಕ್ಕದಲ್ಲಿ. ಒಟ್ಟು 2.5 ಎಕರೆ ವಿಸ್ತೀರ್ಣದಲ್ಲಿ 3.09 ಕೋಟಿ ರೂ. ವೆಚ್ಚದಲ್ಲಿ ಈ ಚಿತಾಗಾರ ನಿರ್ಮಿಸಲಾಗಿದೆ. ಕಳೆದ ಆಗಸ್ಟ್ನಿಂದ ಕಾರ್ಯಾರಂಭ ಮಾಡಿರುವ ಈ ಚಿತಾಗಾರದಲ್ಲಿ ಈವರೆಗೆ 28 ನಾಯಿಗಳು, 1 ಹಸು ಮತ್ತು 1 ಕುದುರೆಗಳಿಗೆ ನೆಮ್ಮದಿಯ ವಿದಾಯ ನೀಡಲಾಗಿದೆ.
ಚಿತಾಗಾರದಲ್ಲಿ ಹಸು, ಎಮ್ಮೆ, ಕುದುರೆಯಂತಹ ದೊಡ್ಡ ಗಾತ್ರದ ಹಾಗೂ ನಾಯಿ, ಬೆಕ್ಕು, ಮೊಲದಂತಹ ಚಿಕ್ಕ ಗಾತ್ರದ ಪ್ರಾಣಿಗಳನ್ನು ಸುಡಲು ಪ್ರತ್ಯೇಕ ಚಿತಾಗಾರ ನಿರ್ಮಿಸಲಾಗಿದೆ. ದೊಡ್ಡ ಪ್ರಾಣಿಗಳನ್ನು 600ರಿಂದ 800 ಡಿಗ್ರಿ ಶಾಖದಲ್ಲಿ ಮತ್ತು 100ರಿಂದ 200 ಡಿಗ್ರಿ ಶಾಖದಲ್ಲಿ ಚಿಕ್ಕ ಪ್ರಾಣಿಗಳ ದೇಹ ಸುಡಬೇಕಾಗಿರುವುದರಿಂದಾಗಿ ಈ ವ್ಯವಸ್ಥೆಯಿದೆ. ಎರಡೂ ಗಾತ್ರದ ಪ್ರಾಣಿಗಳ ದೇಹ ರಚನೆಯಲ್ಲಿ ಸಾಕಷ್ಟು ವ್ಯತ್ಯಾಸವಿರುವ ಕಾರಣದಿಂದಾಗಿ ಪ್ರತ್ಯೇಕ ಚಿತಾಗಾರ ನಿರ್ಮಿಸಲಾಗಿದೆ.
ಸಾಕು ಮತ್ತು ಬೀದಿ ಪ್ರಾಣಿಗಳನ್ನು ಇಲ್ಲಿ ಸುಡಲು ಅವಕಾಶವಿದೆ. ಆದರೆ, ಸಾಕು ಪ್ರಾಣಿಗಳ ದೇಹವನ್ನು ಸುಡಲು ಮಾತ್ರ ಶುಲ್ಕ ಪಡೆಯಲಾಗುತ್ತದೆ. ದೊಡ್ಡ ಪ್ರಾಣಿಗಳಿಗೆ 1 ಸಾವಿರ ಹಾಗೂ ಚಿಕ್ಕ ಪ್ರಾಣಿಗಳಿಗೆ 300 ರೂ. ಶುಲ್ಕ ವಿಧಿಸಲಾಗುತ್ತದೆ. ಇನ್ನು ಬೀದಿ ನಾಯಿಗಳು ಸೇರಿದಂತೆ ಮತ್ತಿತರ ಪ್ರಾಣಿಗಳ ದೇಹ ಸುಡಲು ಯಾವುದೇ ಶುಲ್ಕ ಪಡೆದುಕೊಳ್ಳುವುದಿಲ್ಲ. ಬೀದಿ ನಾಯಿ ಅಥವಾ ಇನ್ನಿತರ ವಾರಸುದಾರರಿಲ್ಲ ಪ್ರಾಣಿಗಳು ಸಾವನ್ನಪ್ಪಿದ್ದರ ಬಗ್ಗೆ ಸಾರ್ವಜನಿಕರು ದೂರವಾಣಿ ಸಂಖ್ಯೆ 080 23289422ಗೆ ಕರೆ ಮಾಡಿ ತಿಳಿಸಿದರೆ ಬಿಬಿಎಂಪಿ ಸಿಬ್ಬಂದಿಯೇ ಬಂದು ಆ ಪ್ರಾಣಿಯ ದೇಹವನ್ನು ತೆಗೆದುಕೊಂಡು ಹೋಗುತ್ತಾರೆ. ನಂತರ ಆ ದೇಹವನ್ನು ತಾವೇ ಅಂತ್ಯ ಸಂಸ್ಕಾರ ಮಾಡುತ್ತಾರೆ. ಆದರೆ, ಆ ಬಗ್ಗೆ ಮಾಹಿತಿ ನೀಡುವರು ತಮ್ಮ ಸಂಪೂರ್ಣ ವಿವರವನ್ನು ತಮಗೆ ತಿಳಿಸಬೇಕಷ್ಟೇ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.
ಪ್ರಾಣಿಗಳ ದೇಹಗಳನ್ನಷ್ಟೇ ಅಲ್ಲದೆ ಈ ಚಿತಾಗಾರದಲ್ಲಿ ಕೋಳಿ ಮಾಂಸದ ಅಂಗಡಿಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನೂ ಸುಡಲಾಗುತ್ತದೆ. ಬಿಬಿಎಂಪಿ ವಾರ್ಡ್ ಮಟ್ಟದ ಅಧಿಕಾರಿಗಳು ತ್ಯಾಜ್ಯ ವಿಲೇವಾರಿ ಮಾಡುವ ಸಂದರ್ಭದಲ್ಲಿ ಪ್ರತ್ಯೇಕವಾಗಿ ಕೋಳಿ ತ್ಯಾಜ್ಯವನ್ನು ತಂದು ಚಿತಾಗಾರಕ್ಕೆ ನೀಡುತ್ತಾರೆ. ಅದನ್ನು ಇಲ್ಲಿ ಸುಡಲಾಗುತ್ತದೆ. ಆ ಮೂಲಕ ಕೋಳಿ ತ್ಯಾಜ್ಯದಿಂದ ಉಂಟಾಗುವ ಕಸದ ಸಮಸ್ಯೆಯು ನಿವಾರಣೆಯಾದಂತಾಗುತ್ತದೆ.
ನೆನಪನ್ನು ನೀಡುತ್ತಾರೆ..!
ಮುದ್ದಾಗಿ ಸಾಕಿದ ಪ್ರಾಣಿ ಬಗ್ಗೆ ಅತೀವ ಪ್ರೀತಿ ಇರುವರು ಅದರ ನೆನಪು ಸದಾ ತಮ್ಮೊಂದಿಗೆ ಇಟ್ಟುಕೊಳ್ಳಲೂ ಕೂಡ ಇಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ಹೇಗೆಂದರೆ ಪ್ರಾಣಿಯ ದೇಹ ಸುಟ್ಟ ನಂತರ ಅದರಿಂದ ಉತ್ಪತ್ತಿಯಾಗುವ ಬೂದಿಯನ್ನು ಚಿತಾಗಾರದ ಸಿಬ್ಬಂದಿ ಸಂಗ್ರಹಿಸಿ ಒಂದು ಕವರ್‍ನಲ್ಲಿ ಹಾಕಿಟ್ಟುಕೊಳ್ಳುತ್ತಾರೆ. ಪ್ರಾಣಿ ಸಾಕಿದವರಿಗೆ ಅದು ಬೇಕೆಂದರೆ ಅದನ್ನು ನೀಡುತ್ತಾರೆ. ಅದಕ್ಕೂ ಮುನ್ನ ಆ ಕವರ್ ಮೇಲೆ ಪ್ರಾಣಿ ಹೆಸರು, ಅದು ಮರಣ ಹೊಂದಿದ ದಿನಾಂಕ ಮತ್ತು ಮಾಲೀಕರ ವಿವರವನ್ನು ಬರೆದು ಕೊಡಲಾಗುತ್ತದೆ. ಒಟ್ಟಿನಲ್ಲಿ ನಿಮಗಿಷ್ಟವಾದ ಪ್ರಾಣಿಯ ನೆನಪನ್ನು ನಿಮ್ಮಲ್ಲೇ ಇಟ್ಟುಕೊಳ್ಳೋದಿಕ್ಕೆ ಅವಕಾಶ ಸಿಕ್ಕಿದೆ.