ರೈತರಿಗೆ ನೆರವಾಗಲು ಬಾಳೆ ಎಲೆಗಳನ್ನು ಬಳಸಲು ಮುಂದಾದ ಮಹಿಂದ್ರಾ ಕಾರ್ಖಾನೆ
ಮಹಾಮಾರಿ ಕೊರೊನಾವೈರಸ್, ಆರ್ಥಿಕ ಹಿಂಜರಿತದ ಈ ಸಮಯದಲ್ಲಿ ಮಹೀಂದ್ರಾ ಕಂಗೆಟ್ಟ ರೈತರಿಗೆ ನೆರವಾಗಲೆಂದು ಬಾಳೆ ಎಲೆಗಳನ್ನು ಬಳಸಲು ನಿರ್ಧರಿಸಿದೆ.
ವರ್ಲ್ಡೋಮೀಟರ್ ಪ್ರಕಾರ ಭಾರತದಲ್ಲಿ ಒಟ್ಟು ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಸೋಮವಾರದಂದು 9,240 ಆಗಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪ್ರಕರಣಗಳು ಮತ್ತು ಮಾರ್ಚ್ 25 ರಂದು ಘೋಷಿಸಲಾದ ಲಾಕ್‌ಡೌನ್ ನಿಂದ ಉದ್ಯೋಗ ಇಲ್ಲದಿರುವುದು ಮತ್ತು ಬೆಳೆ ಹಾನಿ ಮುಂತಾದ ಆರ್ಥಿಕ ಸಮಸ್ಯೆಗಳು ಸಣ್ಣ ರೈತರನ್ನು, ಉದ್ಯಮಿಗಳನ್ನು ಮತ್ತು ದಿನ ಕೂಲಿ ಕಾರ್ಮಿಕರನ್ನು ಕಾಡುತ್ತಿವೆ.
ವಿಶ್ವ ಬ್ಯಾಂಕ್ ಪ್ರಕಾರ ದಕ್ಷಿಣ ಏಷಿಯಾ ಜಾಗತಿಕ ಪಿಡುಗಿನಿಂದ ಕಳೆದ ನಾಲ್ಕು ದಶಕಗಳಲ್ಲಿ ಕಾಣದಷ್ಟು ಆರ್ಥಿಕ ಹಿಂಜರಿತಕ್ಕೆ ಸಾಕ್ಷಿಯಾಗಲಿದೆ.
ಏಪ್ರಿಲ್ 9 ರಂದು ಮಹೀಂದ್ರ ಗ್ರೂಪ್ ನ ಅಧ್ಯಕ್ಷ ಆನಂದ ಮಹೀಂದ್ರ ತಮ್ಮ ಕಾರ್ಖಾನೆಯ ಕ್ಯಾಂಟೀನ್ ನಲ್ಲಿ ಪ್ಲೇಟ್‌ಗಳ ಬದಲಾಗಿ ಬಾಳೆ ಎಲೆಗಳನ್ನು ಬಳಸಲು ನಿರ್ಧಿರಿಸದ್ದಾರೆ. ಕಷ್ಟದಲ್ಲಿರುವ ಬಾಳೆ ರೈತರಿಗೆ ನೇರವಾಗಬೇಕೆಂಬುದು ಈ ನಡೆಯ ಹಿಂದಿನ ಉದ್ದೇಶ.
“ಈ ಉಪಕ್ರಮವನ್ನು ಹಿರಿಯ ಪತ್ರಕರ್ತ ಪದ್ಮ ರಾಮನಾಥ್ ಅವರ, ‘ಈ ನಡೆಯು ಬಾಳೆ ಎಲೆಗಳನ್ನು ಮಾರಲು ಕಷ್ಟಪಡುತ್ತಿರುವ ರೈತರಿಗೆ ಸಹಕಾರಿಯಾಗಬಹುದು,ʼ ಎಂಬ ಸಲಹೆಯ ಮೇರೆಗೆ ತೆಗೆದುಕೊಳ್ಳಲಾಗಿದೆ,” ಎಂದು ಮಹೀಂದ್ರಾ ದಿ ಲಾಜಿಕಲ್ ಇಂಡಿಯನ್ ಗೆ ತಿಳಿಸಿದರು.
ನಿವೃತ್ತ ಹಿರಿಯ ಪತ್ರಕರ್ತ ಪದ್ಮ ರಾಮನಾಥ್ ಈ ಸಲಹೆಯನ್ನು ಮಹೀಂದ್ರಾರಿಗೆ ಮೇಲ್ ಮಾಡಿದ್ದರು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಮಹೀಂದ್ರಾ, ತಮ್ಮ ಕಾರ್ಖಾನೆಯ ಕೆಲಸಗಾರರು ಬಾಳೆ ಎಲೆಯಲ್ಲಿ ಊಟ ಮಾಡುತ್ತಿರುವ ಚಿತ್ರವನ್ನು ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದರು.
“ಅವರ ಕಾರ್ಖಾನೆಯ ಕ್ರೀಯಾತ್ಮಕ ತಂಡವು ಈ ಸಲಹೆಯ ಮೇಲೆ ಕಾರ್ಯಪ್ರವೃತ್ತರಾಗಿ, ಪ್ಲೇಟ್‌ಗಳ ಬದಲಾಗಿ ಬಾಳೆ ಎಲೆಗಳನ್ನು ಬಳಸಲು ಪ್ರಾರಂಭಿಸಿದರು,” ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಪ್ರಸ್ತುತ, ಮಹೀಂದ್ರಾ ಅವರ ಟ್ವೀಟ್ 11,6 ಸಾವಿರ ರಿಟ್ವೀಟ್‌ಗಳನ್ನು ಮತ್ತು 72.6 ಸಾವಿರ ಲೈಕ್‌ಗಳನ್ನು ಅಲ್ಲದೆ, ಈ ಕೆಲಸಕ್ಕೆ ಮೆಚ್ಚುಗೆಯನ್ನು ಗಳಿಸಿಕೊಂಡಿದೆ.
ಇದಲ್ಲದೆ, ಮಹೀಂದ್ರಾ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ತಂಡದಿಂದ ಕೊರೊನಾವೈರಸ್ ಬಿಕ್ಕಟ್ಟಿನಿಂದ ಅತೀ ಹೆಚ್ಚು ಸಮಸ್ಯೆಗೆ ಒಳಗಾದವರಿಗೆ ನಿಧಿಯನ್ನು ನೀಡಲಾಗುವುದು ಎಂದು ಆನಂದ ಮಹೀಂದ್ರಾ ದೃಢೀಕರಿಸಿದ್ದಾರೆ. ಮಹೀಂದ್ರಾ ಫೌಂಡೇಶನ್‌ನ ನಿಧಿಯು ಸಣ್ಣ ಉದ್ಯಮಗಳು ಮತ್ತು ಸ್ವ-ಉದ್ಯೋಗಿಗಳಿಗೂ ಸಹಾಯವಾಗಲಿದೆ.
ಈ ನಿಧಿಗೆ ಸದ್ಯದಲ್ಲೆ ಮತ್ತಷ್ಟು ಸೇರ್ಪಡೆಗಳಾಗಲಿವೆ ಮತ್ತು ಬಿಕ್ಕಟ್ಟು ನಿರ್ವಹಣೆಗೆ ವಿವಿಧ ರಂಗಗಳ ಜನರು ಮುಂದೆ ಬಂದು ಸ್ವಯಂ ಪ್ರೇರಿತರಾಗಿ ಸಹಾಯ ಮಾಡಬೇಕೆಂದಿದ್ದಾರೆ ಮಹೀಂದ್ರಾ.
ಮಾರ್ಚ್‌ನಲ್ಲಿ, ತಮ್ಮ 100 ಪ್ರತಿಶತ ವೇತನವನ್ನು ಭಾರತದ ಕೊರೊನಾವೈರಸ್ ಸಮಸ್ಯೆಗೆ ಸಹಾಯನಿಧಿಯಾಗಿ ನೀಡಿದ್ದಾರೆ. ಅಷ್ಟೇ ಅಲ್ಲದೆ, ಕೇವಲ 7,500 ರೂ ಬೆಲೆಬಾಳುವ ವೆಂಟಿಲೇಟರ್ ತಯಾರಿಕೆಗೆ ಮುಂದಾಗಿದ್ದಾರೆ. ಸಾಂಪ್ರದಾಯಿಕ ವೆಂಟಿಲೇಟರ್‌ಗೆ 10 ಲಕ್ಷ ವೆಚ್ಚವಾಗುತ್ತದೆ. ಆರೋಗ್ಯ ಕಾರ್ಯಕರ್ತರಿಗೆ ಸುರಕ್ಷಾ ಮುಖಗವಸುಗಳನ್ನು ತಯಾರಿಸಲು ಕಂಪನಿ ಸಹಾಯ ಮಾಡುತ್ತಿದೆ.