7,500ರೂ ವೆಚ್ಚದಲ್ಲಿ ವೆಂಟಿಲೇಟರ್ ತಯಾರಿಸಲಿರುವ ಮಹೀಂದ್ರಾ
ಕರೋನವೈರಸ್ ಸಾಂಕ್ರಾಮಿಕ ರೋಗವನ್ನು ಎದುರಿಸಲು ಸಹಾಯ ಮಾಡಬಲ್ಲ ವೆಂಟಿಲೇಟರ್ ನ ಮೂಲಮಾದರಿಯ ಬಗ್ಗೆ ತಮ್ಮ ಯೋಜನೆಗಳನ್ನು ಘೋಷಿಸುವುದರ ಜೊತೆಗೆ, ಮಹೀಂದ್ರಾ ಮತ್ತು ಮಹೀಂದ್ರಾ ಈ ವೆಂಟಿಲೇಟರ್‌ಗಳನ್ನು ಕೇವಲ 7,500 ರೂ.ಗೆ ಮಾರಾಟ ಮಾಡುವ ನಿರೀಕ್ಷೆಯಿದೆ. ಈ ತರಹದ ಸಾಂಪ್ರದಾಯಿಕ ವೆಂಟಿಲೇಟರ್‌ನ ಬೆಲೆ 10 ಲಕ್ಷ ರೂ.ವರೆಗಿದೆ.
ಇನ್ನು ಮೂರು ದಿನಗಳಲ್ಲಿ, ಅಂಬು ಬ್ಯಾಗ್ ಎಂದು ಕರೆಯಲ್ಪಡುವ ಬ್ಯಾಗ್ ವಾಲ್ವ್ ಮಾಸ್ಕ್ ವೆಂಟಿಲೇಟರ್‌ನ ಸ್ವಯಂಚಾಲಿತ ಆವೃತ್ತಿಯ ಮೂಲಮಾದರಿಯನ್ನು ತಯಾರಿಸುವುದಾಗಿ ಮಹೀಂದ್ರಾ ಮತ್ತು ಮಹೀಂದ್ರಾ ಗುರುವಾರ ಹೇಳಿದೆ.
ವಿನ್ಯಾಸ ಮತ್ತು ಸ್ಕೇಲ್-ಅಪ್ ಸಾಮರ್ಥ್ಯವನ್ನು ಸರಳೀಕರಿಸಲು ಸಹಾಯ ಮಾಡುವ ಸಲುವಾಗಿ ಈಗ ಲಭ್ಯವಿರುವ ಹೈ ಸ್ಪೆಕ್ ವೆಂಟಿಲೇಟರ್‌ಗಳ ತಯಾರಕರೊಂದಿಗೆ ಹಾಗೂ ಎರಡು ದೊಡ್ಡ ಸಾರ್ವಜನಿಕ ವಲಯದ ಸಂಸ್ಥೆಗಳೊಂದಿಗೆ ಸಹ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಕಂಪನಿ ಹೇಳಿದೆ.
ವೆಂಟಿಲೇಟರ್‌ಗಳ ಕೊರತೆಯನ್ನು ನೀಗಿಸುವ ಪ್ರಯತ್ನದಲ್ಲಿ ಕಂಪನಿಯ ದ್ವಿಮುಖ ವಿಧಾನದ ಕುರಿತು ಮಾತನಾಡಿದ ಎಂ ಹಾಗೂ ಎಂ ವ್ಯವಸ್ಥಾಪಕ ನಿರ್ದೇಶಕ ಪವನ್ ಗೋಯೆಂಕಾ,
"ಒಂದೆಡೆ, ನಾವು ಎರಡು ಬೃಹತ್ ಸಾರ್ವಜನಿಕ ವಲಯದ ಸಂಸ್ಥೆಗಳೊಂದಿಗೆ ಹಾಗೂ ವಿನ್ಯಾಸ ಮತ್ತು ಉತ್ಪಾದನಾ ಸಾಮರ್ಥ್ಯವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಸಹಾಯ ಮಾಡಲು ಪ್ರಸ್ತುತ ಲಭ್ಯವಿರುವ ಹೈ ಸ್ಪೆಕ್ ವೆಂಟಿಲೇಟರ್‌ಗಳ ತಯಾರಕರೊಂದಿಗೆ ಕೆಲಸಮಾಡುತ್ತಿದ್ದೇವೆ. ಸದ್ಯ ನಮ್ಮ ಎಂಜಿನಿಯರಿಂಗ್ ತಂಡವು ಅವರ ಜೊತೆಗೂಡಿ ಕೆಲಸ ಮಾಡುತ್ತಿದೆ," ಎಂದರು.
ಇದರ ಕುರಿತು ಸರಣಿ ಟ್ವೀಟ್‌ಗಳನ್ನು ಮಾಡಿದ ಅವರು, "ಮತ್ತೊಂದೆಡೆ ನಾವು ಬ್ಯಾಗ್ ವಾಲ್ವ್ ಮಾಸ್ಕ್ ವೆಂಟಿಲೇಟರ್‌ನ (ಸಾಮಾನ್ಯವಾಗಿ ಅಂಬು ಬ್ಯಾಗ್ ಎಂದು ಕರೆಯಲ್ಪಡುವ) ಸ್ವಯಂಚಾಲಿತ ಆವೃತ್ತಿಯನ್ನು ತಯಾರಿಸುವಲ್ಲಿ ಕಾರ್ಯನಿರ್ವಹಿಸುತ್ತಿದೇವೆ. 3 ದಿನಗಳಲ್ಲಿ ಮೂಲಮಾದರಿ ಸಿದ್ಧವಾಗಲಿದೆ ಎಂದು ನಾವು ಭಾವಿಸುತ್ತೇವೆ ಹಾಗೂ ಅದನ್ನು ಅನುಮೋದನೆಗೆ ಕಳುಹಿಸುತ್ತೇವೆ. ಒಪ್ಪಿಗೆಯಾದಲ್ಲಿ ಈ ವಿನ್ಯಾಸವು ಉತ್ಪಾದನೆಗೆ ಲಭ್ಯವಾಗಲಿದೆ," ಎಂದಿದ್ದಾರೆ.
ಇದರೊಟ್ಟಿಗೆ, ಮಹೀಂದ್ರ ಮತ್ತು ಮಹೀಂದ್ರ ಕೇವಲ 7,500 ರೂ.ಗಳಿಗೆ ಅತ್ಯಾಧುನಿಕ ವೆಂಟಿಲೇಟರ್ ತಯಾರಿಸುವ ಉತ್ಸಾಹದಲ್ಲಿದೆ. ಸಾಮಾನ್ಯವಾಗಿ ವೆಂಟಿಲೇಟರ್‌ಗಳ ಬೆಲೆ 10 ಲಕ್ಷವಿದ್ದು, ಕೊರೊನಾವೈರಸ್ ಅನ್ನು ಎದುರಿಸುವ ನಿಟ್ಟಿನಲ್ಲಿ ಕಡಿಮೆ ಬೆಲೆಗೆ ತಯಾರಿಸಲಾಗುತ್ತಿದೆ.
ಮಹೀಂದ್ರ ಸಮೂಹ ಸಂಸ್ಥೆಗಳ ಅಧ್ಯಕ್ಷ ಆನಂದ್ ಮಹೀಂದ್ರ, ಮೂಲಮಾದರಿಯನ್ನು ತಯಾರಿಸಲು ಹಗಲುರಾತ್ರಿಯೆನ್ನದೆ 48 ತಾಸುಗಳ ಕಾಲ ನಿರಂತರವಾಗಿ ಕೆಲಸ ಮಾಡಿದ ಕಂಡಿವಲಿ ಹಾಗೂ ಇಘಟಪುರಿ ತಂಡಗಳನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ.
“ಕೊರೊನಾವೈರಸ್‌ನ ವಿರುದ್ಧ ಹೋರಾಡುವ ಸಲುವಾಗಿ ಮಹೀಂದ್ರಾ ಗ್ರೂಪ್ ತನ್ನಲ್ಲಿ ಲಭ್ಯವಿರುವ ಉತ್ಪಾದನಾ ಸೌಲಭ್ಯಗಳಿಂದ ವೆಂಟಿಲೇಟರ್ಗಳನ್ನು ಹೇಗೆ ತಯಾರಿಸಬಹುದು ಎಂಬುದರ ಕುರಿತು ತಕ್ಷಣವೇ ಕೆಲಸವನ್ನು ಪ್ರಾರಂಭಿಸುತ್ತದೆ,” ಎಂದರು.
"ನಾವು ಮಹೀಂದ್ರದಲ್ಲಿ ವೆಂಟಿಲೇಟರ್‌ಗಳನ್ನು ಲಭ್ಯವಾಗುವಂತೆ ಮಾಡುವ ಪ್ರಯತ್ನಕ್ಕಾಗಿ ಹಲವರ ಮತ್ತು ಕಂಪನಿಗಳ ಅಭೂತಪೂರ್ವ ಬೆಂಬಲವನ್ನು ಕಂಡು ಮೂಕವಿಸ್ಮಿತರಾಗಿದ್ದೇವೆ," ಎಂದು ಗೋಯೆಂಕಾ ಹೇಳಿದರು.