ಕೊಯಮತ್ತೂರಿನಲ್ಲಿ 2003 ರಿಂದ ನೀರಿನ ಸಂಪನ್ಮೂಲಗಳನ್ನು ಪುನರುಜ್ಜೀವನಗೊಳಿಸುತ್ತಿರುವ ಸಂಸ್ಥೆ

ಕೊಯಮತ್ತೂರಿನಲ್ಲಿರುವ ಸಿರುಥುಲಿ ಎಂಬ ಲಾಭೋದ್ದೇಶವಿರದ ಸಂಸ್ಥೆ ಇದುವರಗೆ 26 ಸ್ಥಳೀಯ ಜಲಮೂಲಗಳನ್ನು ಪುನಸ್ಫೂರಣಗೊಳಿಸಿ 7 ದಶಲಕ್ಷ ಕ್ಯೂಬಿಕ್ ಮೀಟರ್ ನೀರನ್ನು ಸಂಗಹ್ರಹಿಸುವ ಸಾಮರ್ಥ್ಯವುಳ್ಳ ಜಲಸಂಗ್ರಹಾರಗಳನ್ನು ಸ್ಥಾಪಿಸಿದೆಯಲ್ಲದೆ 700 ಮಳೆನೀರು ಕೊಯ್ಲಿನ ರಚನೆಗಳನ್ನು ಸಿದ್ಧಪಡಿಸಿದೆ.

ಕೊಯಮತ್ತೂರಿನಲ್ಲಿ 2003 ರಿಂದ ನೀರಿನ ಸಂಪನ್ಮೂಲಗಳನ್ನು ಪುನರುಜ್ಜೀವನಗೊಳಿಸುತ್ತಿರುವ ಸಂಸ್ಥೆ

Thursday October 24, 2019,

2 min Read

ಮುಂದಿನ ದಿನಗಳಲ್ಲಿ ನೀರಿನ ಕೊರತೆಯನ್ನು ಎದುರಿಸಲು ನಮ್ಮ ಸಮಾಜವು ಸಿದ್ಧವಾಗಬೇಕಾಗಿದೆ. ಇದು ಪ್ರಾಕೃತಿಕವಾಗಿಯೂ ಮತ್ತು ನೀರಿನ ಮಾಲಿನ್ಯ, ನೀರಿನ ಅಗಾಧ ವೆಚ್ಚ, ನೀರಿನ ಸರಿಯಾದ ನಿರ್ವಹಣೆ ಇಲ್ಲದಿರುವುದು ಮುಂತಾದ ಮಾನವನಿರ್ಮಿತ ಕಾರಣಗಳಿಂದಾಗಿಯೂ ಸಂಭವಿಸಬಹುದಾಗಿದೆ.


ನಮ್ಮ ದೇಶದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಸಂಭವಿಸುತ್ತಿರುವ ನೀರಿನ ಕೊರತೆಯ ಅರಿವಿದ್ದರೂ ಸಹ ನಾವು ಈ ಪ್ರಾಕೃತಿಕ ಸಂಪನ್ಮೂಲವನ್ನು ರಕ್ಷಿಸಲು ಏನೊಂದೂ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ.


ಆದರೆ ಕೊಯಮತ್ತೂರು ಮೂಲದ ಸಿರುಥುಲಿಯಂತಹ ಸಂಸ್ಥೆಗಳು ನಮ್ಮ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ಒಂದಿಷ್ಟು ಕೆಲಸ ಮಾಡುತ್ತಿವೆ.


ವಿನುತಾ ಮೋಹನ್, ಸಿರುಥುಲಿ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ(ಚಿತ್ರ ಕೃಪೆ: ಇಮೋಟ್‌ ಫೋರಮ್)




ಸಿರುಥುಲಿ(ತಮಿಳಿನಲ್ಲಿ ನೀರಿನ ಒಂದು ಸಣ್ಣ ಹನಿ ಎಂಬ ಅರ್ಥ) ಸಂಸ್ಥೆಯು ಕೊಯಮತ್ತೂರಿನಲ್ಲಿ ಕಳೆದ ಹದಿನೈದು ವರ್ಷಗಳಿಂದ ಜಲಮೂಲಗಳನ್ನು ಉಳಿಸಲು ಹರಸಾಹಸ ಮಾಡುತ್ತಿದೆ.


ಇದುವರಗೆ ಈ ಸಂಸ್ಥೆಯು 26 ಜಲಮೂಲಗಳನ್ನು ಯಶಸ್ವಿಯಾಗಿ ಮರುಸ್ಫೂರಣಗೊಳಿಸಿದೆ. 7 ದಶಲಕ್ಷ ಕ್ಯೂಬಿಕ್‌ ಮೀಟರ್ ನೀರನ್ನು ಹಿಡಿದಿಟ್ಟುಕೊಳ್ಳುವ ಜಲ ಸಂಗ್ರಹಾರಗಳನ್ನು ನಿರ್ಮಿಸಿದೆ ಮತ್ತು 700 ಮಳೆನೀರಿನ ಕೊಯ್ಲು ರಚನೆಗಳನ್ನು ಸಿದ್ಧಪಡಿಸಿದೆ, ವರದಿ ಇಂಡಿಯಾ ಟುಡೇ.


ಇದೇ ಅಲ್ಲದೆ ಈ ಸಂಸ್ಥೆಯು ಹಸಿರು ಕಾವಲು, ತ್ಯಾಜ್ಯ ನಿರ್ವಹಣೆ, ಪರಿಸರದ ಬಗ್ಗೆ ಜಾಗೃತಿ ಮೂಡಿಸುವಂತಹ ಕೆಲಸಗಳನ್ನು ಮಾಡುತ್ತಿದೆ.


2003 ರಲ್ಲಿ ಕೊಯಮತ್ತೂರಿನಲ್ಲಿ ದುರಂತಮಯವಾದ ನೆರೆಹಾವಳಿ ಸಂಭವಿಸಿದಾಗ ಪ್ರಾಕೃತಿಕ ಸಂಪನ್ಮೂಲಗಳನ್ನು ರಕ್ಷಿಸುವ ಕಾರ್ಯ ಪ್ರಾರಂಭವಾಯಿತು.


125 ಎಕರೆ ವಿಸ್ತೀರ್ಣದ ಕ್ರಿಷ್ಣಂಪತ್ತಿ ಸರೋವರದ ಹೂಳು ಎತ್ತುವ ಕಾರ್ಯ ಈ ಸಂಸ್ಥೆಯ ಮೊದಲ ಯೋಜನೆಯಾಯಿತು. ಸರೋವರದ ಸುಮಾರು 50 ಎಕರೆ ಪ್ರದೇಶವು ಒತ್ತುವರಿಯಾಗಿ ಆಕ್ರಮಿಸಲ್ಪಟ್ಟಿತ್ತು. ಎರಡೇ ದಿನದಲ್ಲಿ ಸಿರುಥುಲಿ ಸಂಸ್ಥೆಯು ಈ ಸರೋವರದ ಹೂಳನ್ನು ಎತ್ತುವ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿತು. ಅದಾದ ಕೆಲವೇ ದಿನಗಳ ನಂತರ ಸುತ್ತಮುತ್ತಲಿನ ಒಣಗಿಹೋಗಿದ್ದ ಬೋರ್ ವೆಲ್ ಮತ್ತು ಕೆರೆಗಳು ಎರಡು ದಿನದ ಮಳೆಯಿಂದಾಗಿ ಸಂಪೂರ್ಣವಾಗಿ ತುಂಬಿಕೊಂಡವು.


ಎಪರ್ಟ್ಸ್ ಫಾರ್ ಗುಡ್ ನೊಂದಿಗೆ ಮಾತನಾಡುತ್ತಾ ಸಿರುಥುಲಿಯ ಮ್ಯಾನೇಜಿಂಗ್ ಟ್ರಸ್ಟಿ ವನಿತಾ ಮೋಹನ್ ಹೀಗೆ ಹೇಳುತ್ತಾರೆ,


“ಕೊಯಮತ್ತೂರಿನ ನಾಗರೀಕರು ತುಂಬಾ ಸಂತೋಷಗೊಂಡಿದ್ದಾರೆ. ಏಕೆಂದರೆ ಅವರು ಇಷ್ಟೊಂದು ನೀರನ್ನೂ ಎಂದೂ ನೋಡಿರಲಿಲ್ಲ. ಇಲ್ಲಿ ಇದುವರೆಗೂ ಮಳೆ ನೀರಿನ ಕೊಯ್ಲು ಪದ್ಧತಿಯಿರಲಿಲ್ಲ. ಅವರೆಲ್ಲರೂ ಒಂದೇ ಒಂದು ಜಲಮೂಲದಲ್ಲಿ ಇಷ್ಟೊಂದು ನೀರನ್ನು ನೋಡಿ ಆಶ್ಚರ್ಯಗೊಂಡಿದ್ದಾರೆ. ಅವರೆಲ್ಲಾ ತಾವಾಗಿಯೇ ಈ ಯೋಜನೆಯಲ್ಲಿ ಪಾಲ್ಗೊಂಡಿದ್ದಾರೆ”


ನೋಯ್ಯಲ್ ನದಿಯ ಪುನರುಜ್ಜೀವನ (ಚಿತ್ರಕೃಪೆ: ಎಪರ್ಟ್ಸ್ ಫಾರ್ ಗುಡ್)




ಇದು ಈ ಯೋಜನೆಯ ಪ್ರಾರಂಭವಾಗಿದೆ. ಈ ಸಂಸ್ಥೆಯು ಅದಾದ ನಂತರ ಶಾಲೆ ಮತ್ತು ಕಾಲೇಜುಗಳಿಗೆ ಭೇಟಿ ನೀಡಿ ಈ ಯೋಜನೆಯಲ್ಲಿ ಪಾಲ್ಗೊಳ್ಲುವಂತೆ ಹುರಿದುಂಬಿಸಿತು.


ನಂತರ ಸಿರುಥುಲಿ ಸಂಸ್ಥೆಯು ನೊಯ್ಯಲ್ ನದಿಯ ಬಗ್ಗೆ ಜಾಗೃತಿ ಮೂಡಿಸಲು ಒಂದು ಜಾಥಾವನ್ನು ಏರ್ಪಡಿಸಿತು. ಅದರಲ್ಲಿ ಸುಮಾರು ಒಂದು ಲಕ್ಷ ಜನ ಭಾಗವಹಿಸಿ ನೊಯ್ಯಲ್ ನದಿಯನ್ನು ಕಾಪಾಡಲು ಮತ್ತು ಅದನ್ನು ಪುನರುಜ್ಜೀವನಗೊಳಿಸಲು ಕೆಲಸ ಮಾಡಿದರು.


ಸಿರುಥುಲಿ ಸಂಸ್ಥೆಯು ಹನ್ನರೆಡು ಜನ ನೌಕರರನ್ನು ಹೊಂದಿದ್ದು ಇವರು ಇತರ ಸ್ವಯಂ ಸೇವಕರು ಮತ್ತು ಅರೆ ಕೆಲಸದಾಳುಗಳ ಸಹಾಯದಿಂದ ಎಲ್ಲಾ ಚಟುವಟಿಕೆಗಳನ್ನು ನಿರ್ವಹಿಸುತ್ತಾರೆ.


“ನಾವು ಜಲಮೂಲಗಳನ್ನು ಪುನರುಜ್ಜೀವನಗೊಳಿಸುವ ಸಮಿತಿ, ನೊಯ್ಯಲ್ ನದಿಯ ಪುನರುಜ್ಜೀವನ ಸಮಿತಿ, ಬರಡು ಭೂಮಿಯಲ್ಲಿ ಕಾಡು ಬೆಳೆಸುವ ಕಾಡು ನಿರ್ವಹಣಾ ವಿಭಾಗಗಳನ್ನು ಹೊಂದಿದ್ದೇವೆ. ನಾಗರೀಕರ ಸಂಯೋಜನಾ ಸಮಿತಿಯು ನಾಗರೀಕರು ಮತ್ತು ವಿದ್ಯಾರ್ಥಿಗಳು ಮತ್ತು ಇತರ ಜನರನ್ನು ಸಿರುಥುಲಿ ಸಂಸ್ಥೆಗೆ ಸೇರಿಕೊಳ್ಳುವಂತೆ ಹುರಿದುಂಬಿಸುತ್ತದೆ,” ಎಂದು ವಿನುತಾ ಹೇಳುತ್ತಾರೆ.


ಈಗ ಸಿರುಥುಲಿ ಸಂಸ್ಥೆಯು ನೊಯ್ಯಲ್ ನದಿಯ ಸುತ್ತಮುತ್ತಲಿನ ಜಲಮೂಲಗಳನ್ನು ಹೆಚ್ಚಿಸಿ ನದಿಯನ್ನು ಪುನರುಜ್ಜೀವನಗೊಳಿಸುವ ಯೋಜನೆಯನ್ನು ಕೈಗೊಂಡಿದೆ ಮತ್ತು ನಗರಕ್ಕೆ ಹಸಿರು ಪರಿಸರವನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿದೆ.


ಸಿರುಥುಲಿ ಸಂಸ್ಥೆಯ ಕೊಯಮತ್ತೂರಿನ ನೊಯ್ಯಲ್ ನದಿಯನ್ನು ಪುನರುಜ್ಜೀವನಗೊಳಿಸುವ ಮತ್ತು ಜಲಮೂಲಗಳನ್ನು ಮರುಸ್ಫೂರಣಗೊಳಿಸುವ ಕಾರ್ಯವನ್ನು ಉತ್ತಮ ನದಿ ಸ್ವಚ್ಛತಾ ಯೋಜನೆ ಎಂದು ಘೋಷಿಸಿ ಪ್ರಶಂಸಿಸಲಾಗಿದೆ.


ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.