ಆನಂದ ಮಹೀಂದ್ರರಿಗೆ ಕಳಿಸಿದ ಒಂದು ಇಮೇಲ್‌ ಸುಹಾನಿ ಎಂಬುವವರು ದಿನಕ್ಕೆ 3,000 ಮಾಸ್ಕ್‌ಗಳನ್ನು ತಯಾರಿಸುವಂತೆ ಮಾಡಿತು

ಸ್ಯಾನಿಟರಿ ನವೋದ್ಯಮ ಸರಳ್‌ ಡಿಸೈನ್ಸ್‌ನ ಸಹ ಸ್ಥಾಪಕಿ, ಐಐಟಿ ಪದವೀಧರೆಯಾದ ಸುಹಾನಿ ಮೋಹನ್‌, ತಮ್ಮ ಕಾರ್ಖಾನೆಯ ಯಂತ್ರಗಳನ್ನು ಕೋವಿಡ್‌-19 ತಡೆಗಟ್ಟಲು ಬೇಕಾಗುವ ಮಾಸ್ಕ್‌ ತಯಾರಿಸಲು ಅನುಕೂಲವಾಗುವಂತೆ ರೂಪಾಂತರಿಸಲು ಸಹಾಯ ಮಾಡುವಂತೆ ಮಹೀಂದ್ರ ಸಂಸ್ಥೆಯನ್ನು ಸಂಪರ್ಕಿಸಿದರು.

ಆನಂದ ಮಹೀಂದ್ರರಿಗೆ ಕಳಿಸಿದ ಒಂದು ಇಮೇಲ್‌ ಸುಹಾನಿ ಎಂಬುವವರು ದಿನಕ್ಕೆ 3,000 ಮಾಸ್ಕ್‌ಗಳನ್ನು ತಯಾರಿಸುವಂತೆ ಮಾಡಿತು

Sunday April 05, 2020,

3 min Read

ಸ್ಯಾನಿಟರಿ ಪ್ಯಾಡ್‌ಗಳನ್ನು ತಯಾರಿಸುವ ನವೋದ್ಯಮ ಸರಳ್‌ ಡಿಸೈನ್ಸ್‌ನ ಸಹ ಸ್ಥಾಪಕರರಾದ ಸುಹಾನಿ ಮೋಹನ್‌ ಹಾಗೂ ಕಾರ್ತಿಕ್‌ ಮೆಹ್ತಾ ಈಗ ಮಹೀಂದ್ರಾ ಸಂಸ್ಥೆಯ ಆಟೋಮೋಟಿವ್‌ ತಂಡದ ಸಹಾಯದಿಂದ ಮೂರು ಪದರಗಳ ಸರ್ಜಿಕಲ್‌ ಮಾಸ್ಕ್‌ಗಳನ್ನು ತಯಾರಿಸುತ್ತಿದ್ದಾರೆ.


ಎರಡೂ ಸಂಸ್ಥೆಗಳು ಸೇರಿಕೊಂಡು ಕೋವಿಡ್‌-19 ಅನ್ನು ತಡೆಗಟ್ಟಲು ತಮ್ಮ ಜೀವವನ್ನೂ ಲೆಕ್ಕಿಸದೆ ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಹಾಗೂ ವೈದ್ಯಕೀಯ ಸಿಬ್ಬಂದಿಗಳಿಗೆ ಮಾಸ್ಕ್‌ಗಳನ್ನು ಸಮರ್ಪಕವಾಗಿ ತಲುಪಿಸುವ ಸಲುವಾಗಿ ಉತ್ಪಾದನಾ ವೇಗವನ್ನು ಹೆಚ್ಚುಗೊಳಿಸುತ್ತಿದ್ದಾರೆ. ಜೊತೆಗೆ, ಮಹೀಂದ್ರಾ ಸಂಸ್ಥೆಯು ವೆಂಟಿಲೇಟರ್‌ಗಳಂತಹ ಅತ್ಯಗತ್ಯ ವಸ್ತುಗಳನ್ನು ತಯಾರಿಸುವಲ್ಲಿ ನಿರತವಾಗಿದೆ.


ಸರಳ್‌ ಡಿಸೈನ್ಸ್‌ನ ಸಹ ಸ್ಥಾಪಕರರಾದ ಸುಹಾನಿ ಮೋಹನ್‌ ಹಾಗೂ ಕಾರ್ತಿಕ್‌ ಮೆಹ್ತಾ


ಈಗ ಸುಹಾನಿ ಹಾಗೂ ಕಾರ್ತಿಕ್‌ ಮಹೀಂದ್ರ ಸಂಸ್ಥೆಯ ಕಾಂದಿವಲಿಯ ಕಾರ್ಖಾನೆಯಲ್ಲಿ ಕೆಲಸಮಾಡುತ್ತಿದ್ದು, ಇವರ ಕಾರ್ಯವನ್ನು ಹೊಗಳುತ್ತ ಮಹೀಂದ್ರಾ ಸಮೂಹದ ಅಧ್ಯಕ್ಷ ಆನಂದ್‌ ಮಹೀಂದ್ರ ಈ ಜೋಡಿಯ ನವೋದ್ಯಮದ ಕಥೆಯನ್ನು ಬಾಲಿವುಡ್‌ನ ‘ಪ್ಯಾಡ್ಮ್ಯಾನ್‌ʼ ಚಿತ್ರದ ಮುಂದುವರಿದ ಭಾಗವೆಂದು ಟ್ವೀಟ್‌ ಮಾಡಿದ್ದಾರೆ.



ಕೋವಿಡ್‌-19 ವಿರುದ್ಧ ಒಟ್ಟಾಗಿ ಹೋರಾಡುವುದು

ಭಾರತದಲ್ಲಿ ಕೋವಿಡ್-19 ನ ಹೆಚ್ಚುತ್ತಿರುವ ಪ್ರಕರಣಗಳನ್ನು ಕಂಡ ಸುಹಾನಿ ಮತ್ತು ಅವರ ಸಹ-ಸಂಸ್ಥಾಪಕರು ಮಾಸ್ಕ್‌ ತಯಾರಿಸುವ ಯಂತ್ರವನ್ನು ಅಭಿವೃದ್ಧಿಪಡಿಸುವ ಅವಶ್ಯಕತೆಯಿದೆ ಎಂದು ಭಾವಿಸಿದರು. ಸ್ಯಾನಿಟರಿ ನ್ಯಾಪ್‌ಕಿನ್‌ ಮತ್ತು ಮಾಸ್ಕ್‌ ಎರಡನ್ನೂ ತಯಾರಿಸಲು ಬಳಸುವ ತಂತ್ರಜ್ಞಾನವು ಒಂದೇ ರೀತಿಯಾಗಿರುವುದರಿಂದ ಅವರಿಗೆ ಇದು ಸಾಧ್ಯವೆನಿಸಿತು.


ಯುವರ್ ಸ್ಟೋರಿಯೊಂದಿಗಿನ ತಮ್ಮ ಸಂದರ್ಶನದಲ್ಲಿ, ಅವರು “ಮಾರ್ಚ್‌ 15ರ ಹೊತ್ತಿಗೆ ನಮ್ಮ ಡಿಸೈನ್‌ಗಳು ತಯಾರಿದ್ದವು. ಆದರೆ ಲಾಕ್‌ಡೌನ್‌ ಇದ್ದದ್ದರಿಂದ ಯಾವ ತಯಾರಕರೂ ಉತ್ಪಾದಿಸಲು ಸಿಗಲಿಲ್ಲ,” ಎಂದರು.


ಆ ಸಮಯದಲ್ಲಿ ಅವರು ಆನಂದ್ ಮಹೀಂದ್ರಾ ಅವರ ಕಾರ್ಯನಿರ್ವಾಹಕ ಸಹಾಯಕರಾದ ಮತ್ತು ಐಐಟಿ-ಬಾಂಬೆಯ ಸುಹಾನಿಯ ಕಿರಿಯ ವಿದ್ಯಾರ್ಥಿಯಾದ ಶ್ರುತಿ ಅಗರ್ವಾಲ್ ಸೇರಿದಂತೆ ತಮ್ಮ ಸಂಪರ್ಕದಲ್ಲಿ ಸಹಾಯ ಮಾಡಬಲ್ಲ ಜನರನ್ನು ಸಂಪರ್ಕಿಸಲು ಪ್ರಾರಂಭಿಸಿದರು.


"ನಾನು ಅನೇಕ ಜನರಿಗೆ ಕೇಳುತ್ತಲಿದ್ದೆ ಮತ್ತು ಯಾರಾದರೂ ಪ್ರತಿಕ್ರಿಯಿಸಬಹುದೇ ಎಂಬುದು ಖಚಿತವಾಗಿರಲಿಲ್ಲ. ಆದರೆ ನಾಲ್ಕು ಗಂಟೆಗಳಲ್ಲಿ, ಆನಂದ್ ಅವರು ನಮ್ಮನ್ನು ಮಹೀಂದ್ರಾ ಆಟೋಮೋಟಿವ್ ಮುಖ್ಯಸ್ಥರೊಂದಿಗೆ ಸಂಪರ್ಕಿಸಿದರು. ನಮ್ಮ ಎಲ್ಲ ಅವಶ್ಯಕತೆಗಳಲ್ಲಿ ನಮ್ಮನ್ನು ಬೆಂಬಲಿಸುವ ಮೂಲಕ ಅವರು ನಮಗೆ ದೊಡ್ಡ ರೀತಿಯಲ್ಲಿ ಸಹಾಯ ಮಾಡಿದರು. ಮತ್ತು ಆ ಇಮೇಲ್ ಸ್ವೀಕರಿಸಿದ 100 ಗಂಟೆಗಳ ಒಳಗೆ, ನಾವು ಉತ್ಪಾದನಾ ಘಟಕವನ್ನು ಸ್ಥಾಪಿಸಲು ಸಾಧ್ಯವಾಯಿತು," ಎಂದರು.


ಸದ್ಯಕ್ಕೆ ಒಂದು ದಿನಕ್ಕೆ 3,000 ಮಾಸ್ಕ್‌ಗಳನ್ನು ಉತ್ಪಾದಿಸಲಾಗುತ್ತದೆ. ಹಾಗೂ ಇನ್ನು ಏಳು - ಏಂಟು ದಿನಗಳಲ್ಲಿ ದಿನವೊಂದಕ್ಕೆ 10,000 ಮಾಸ್ಕ್‌ಗಳನ್ನು ಉತ್ಪಾದಿಸುವ ಭರವಸೆಯನ್ನು ಹೊಂದಿದ್ದಾರೆ.


"ಪ್ರಸ್ತುತ, ಮಾಸ್ಕ್‌ಗಳನ್ನು ಮಹೀಂದ್ರಾ ಗ್ರೂಪ್ನ ಸಿಎಸ್ಆರ್ ವಿಂಗ್ ಮೂಲಕ ಸರ್ಕಾರಿ ಆಸ್ಪತ್ರೆಗಳು, ಪೊಲೀಸರು ಮತ್ತು ಈ ಹೋರಾಟದಲ್ಲಿ ಇರಬೇಕಾದ ಪ್ರತಿಯೊಬ್ಬರಿಗೂ ವಿತರಿಸಲಾಗುತ್ತಿದೆ," ಎಂದು 30 ರ ಹರೆಯದ ಉದ್ಯಮಿ ಹಂಚಿಕೊಂಡರು. ಮಾಸ್ಕ್‌ ಉತ್ಪಾದನೆಯನ್ನು ಯಶಸ್ವಿಯಾಗಿ ಹೆಚ್ಚಿಸಿದ ನಂತರ ಸಾರ್ವಜನಿಕರಿಗೂ ವಿತರಿಸುವ ಆಶಯವನ್ನು ಅವರು ಹೊಂದಿದ್ದಾರೆ.


ಮಹೀಂದ್ರಾ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಪವನ್ ಕೆ ಗೋಯೆಂಕಾ ಕೂಡ ಉತ್ಪಾದನಾ ಪ್ರಕ್ರಿಯೆಯ ಪ್ರಗತಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಅಕ್ಯುಮೆನ್ ಇಂಡಿಯಾ ಫೆಲೋ ಆಗಿದ್ದ ಸುಹಾನಿ, ಮಹೀಂದ್ರಾ ಗ್ರೂಪ್‌ ಸಹಾಯ ಮಾಡಿದ್ದಕ್ಕೆ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



ಸಮಾಜದ ಒಳಿತಿಗಾಗಿ

ಸುಹಾನಿಯವರಿಗೆ ಇಂಥ ಸವಾಲುಗಳು ಹೊಸತೇನಲ್ಲ. 2015ರಲ್ಲಿ ಡಾಯ್ಚ ಬ್ಯಾಂಕ್ನಲ್ಲಿ ಇನ್ವೆಸ್ಟ್‌ಮೆಂಟ್‌ ಬ್ಯಾಂಕರ್‌ ಆಗಿದ್ದ ಸುಹಾನಿ, ಆ ಕೆಲಸ ತೊರೆದು ಸರಳ್‌ ಡಿಸೈನ್ಸ್‌ ಆರಂಭಿಸಿದರು.


ಆರ್ಥಿಕವಾಗಿ ತೀರಾ ಹಿಂದುಳಿದ ಪ್ರದೇಶಗಳಲ್ಲಿ ಮುಟ್ಟಿನ ನೈರ್ಮಲ್ಯ ಉತ್ಪನ್ನಗಳು ಸುಲಭವಾಗಿ ದೊರೆಯುವಂತೆ ಮಾಡಲು ಅವರು ತಮ್ಮ ಸಹ ಸ್ಥಾಪಕರೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ.


ಸ್ಯಾನಿಟರಿ ಪ್ಯಾಡ್‌ಗಳನ್ನು ತಯಾರಿಸುವ ಭಾರತದ ಮೊದಲ ವಿಕೇಂದ್ರೀಕೃತ ಸ್ವಯಂಚಾಲಿತ ಯಂತ್ರವನ್ನು ಅಭಿವೃದ್ಧಿ ಪಡಿಸಿದ್ದೇವೆಂದು ಹೇಳಿಕೊಂಡಿದ್ದಾರೆ. ಇಲ್ಲಿಯವರೆಗೆ, ಇದು ಯಂತ್ರಗಳನ್ನು ಎರಡನೇ ಶ್ರೇಣಿ ಮತ್ತು ಮೂರನೇ ಶ್ರೇಣಿ ನಗರಗಳಲ್ಲಿನ 30 ಕ್ಕೂ ಹೆಚ್ಚು ಉದ್ಯಮಿಗಳು ಮತ್ತು ಸರ್ಕಾರೇತರ ಸಂಸ್ಥೆಗಳಿಗೆ (ಎನ್‌ಜಿಒ) ಮಾರಾಟ ಮಾಡಿದೆ ಮತ್ತು ಐದು ವರ್ಷಗಳಲ್ಲಿ 6.5 ದಶಲಕ್ಷಕ್ಕೂ ಹೆಚ್ಚು ಪ್ಯಾಡ್‌ಗಳನ್ನು ಮಾರಾಟ ಮಾಡುವ ಮೂಲಕ 200,000 ಕ್ಕೂ ಹೆಚ್ಚು ಮಹಿಳೆಯರ ಮೇಲೆ ಪ್ರಭಾವ ಬೀರಿದೆ.


2015 ರಲ್ಲಿ, ನವೋದ್ಯಮವು ಐಐಟಿ ಬಾಂಬೆ ಹಳೆಯ ವಿದ್ಯಾರ್ಥಿಗಳ ನೆಟ್‌ವರ್ಕ್‌ನಲ್ಲಿ ಮತ್ತು 2017 ರಲ್ಲಿ ಅಕ್ಯುಮೆನ್‌ನ ಏಂಜಲ್ ಹೂಡಿಕೆದಾರರಿಂದ ಬಹಿರಂಗಪಡಿಸದ ಬಂಡವಾಳವನ್ನು ಸಂಗ್ರಹಿಸಿದೆ.


ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ರಾಷ್ಟ್ರೀಯ ಉದ್ಯಮಶೀಲತೆ ಪ್ರಶಸ್ತಿ ಮತ್ತು ಅಮೆರಿಕನ್ ಸೊಸೈಟಿ ಆಫ್ ಮೆಕ್ಯಾನಿಕಲ್ ಎಂಜಿನಿಯರ್ಸ್ (ಎಎಸ್ಎಂಇ ಐ-ಶೋ) ಸಾಮಾಜಿಕ ಒಳಿತಿಗಾಗಿ ಉನ್ನತ ಜಾಗತಿಕ ಯಂತ್ರಾಂಶ ನಾವೀನ್ಯತೆ ಮುಂತಾದ ಹಲವಾರು ಪುರಸ್ಕಾರಗಳೊಂದಿಗೆ ಇವರಿಬ್ಬರ ಕಾರ್ಯವನ್ನು ಗುರುತಿಸಲಾಗಿದೆ.


ನಾಸ್ಕಾಮ್ ಸರಳ್‌ ಡಿಸೈನ್ಸ್‌ಅನ್ನು ಮಹಾರಾಷ್ಟ್ರದ ಅತ್ಯಂತ ನವೀನ ನವೋದ್ಯಮವೆಂದು ಗುರುತಿಸಿದೆ.