500 ರೂಪಾಯಿ ಸಂಬಳದಿಂದ ಆರಂಭವಾದ ಜೀವನ- ಕೋಟಿ ದಾಟಿದೆ ತಿಂಗಳ ಆದಾಯ
ಟೀಮ್ ವೈ.ಎಸ್. ಕನ್ನಡ
ಮನೀಷ್ ಮಲ್ಹೋತ್ರ. ಸಿನಿಮಾ ಅಭಿಮಾನಿಗಳಿಗೆ ಈ ಹೆಸರು ಚಿರಪರಿಚಿತ. ಬಾಲಿವುಡ್ ಮಂದಿಗೆ ಮನೀಷ್ ಮಲ್ಹೋತ್ರ ಅಂದ್ರೆ ಸಖತ್ ಇಷ್ಟ. ಆದ್ರೆ ಮನೀಷ್ ಕಥೆ ಮಾತ್ರ ಎಲ್ಲದಕ್ಕಿಂತಲೂ ವಿಭಿನ್ನ. ಇವತ್ತು ಬಾಲಿವುಡ್ನಲ್ಲಿ ಡಿಸೈನರ್ ಆಗಿ ಸುದ್ದಿ ಮಾಡುತ್ತಿರುವ ಮನೀಷ್ ಬಾಲಿವುಡ್ನ ಸೂಪರ್ ಸ್ಟಾರ್ ಮತ್ತು ಹಾಲಿವುಡ್ ನಟರ ಔಟ್ಫಿಟ್ ಡಿಸೈನರ್ ಆಗಿ ಕೆಲಸ ಆರಂಭಿಸಿದವರು ಅಂದ್ರೆ ನಂಬಲೇಬೇಕು. ಆದ್ರೆ ಇವತ್ತು ಮನೀಷ್ ಬೆಳೆದ ರೀತಿ ಎಲ್ಲರಿಗೂ ಸ್ಫೂರ್ತಿ ಅನ್ನುವುದರಲ್ಲಿ ಎರಡು ಮಾತಿಲ್ಲ.
ಚಿಕ್ಕವಯಸ್ಸಿನಲ್ಲೇ ಮನೀಷ್ ಫ್ಯಾಷನ್ ಕಡೆಗೆ ಮಾರುಹೋಗಿದ್ದರು. ಚಿಕ್ಕವಯಸ್ಸಿನಲ್ಲಿ ತನ್ನ ತಾಯಿ ಧರಿಸುತ್ತಿದ್ದ ಸೀರೆಗಳಲ್ಲೇ ಡಿಸೈನ್ ಮಾಡಿ, ಅಮ್ಮನಿಗೆ ಫ್ಯಾಷನ್ ಬಗ್ಗೆ ಪಾಠ ಮಾಡುತ್ತಿದ್ದರು. ಆರಂಭದ ಆಸಕ್ತಿ ನಿಧಾನವಾಗಿ ವೃತ್ತಿಯಾಗಿ ಪರಿವರ್ತನೆಯಾಯಿತು. ಅಷ್ಟೇ ಅಲ್ಲ ಇವತ್ತಿನ ಸೂಪರ್ ಡಿಸೈನರ್ ಆಗಿ ರೂಪುಗೊಳ್ಳಲುಸ ಸಹಕಾರಿ ಆಯಿತು. ಶೈಕ್ಷಣಿಕ ವಿಚಾರದಲ್ಲಿ ಮನೀಷ್ ಸಾಮಾನ್ಯ ವಿದ್ಯಾರ್ಥಿ ಆಗಿದ್ದರೂ ಕಲೆ, ಪೈಟಿಂಗ್, ಡಿಸೈನಿಂಗ್ನಲ್ಲಿ ಮನೀಷ್ ಸಾಕಷ್ಟು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದರು.
ಮನೀಷ್ ಹುಟ್ಟಿದ್ದು ಮಧ್ಯಮವರ್ಗದ ಕುಟುಂಬದಲ್ಲಿ. ಭವಿಷ್ಯ ಏನು ಅನ್ನುವುದು ಸ್ವತಃ ಮನೀಷ್ಗೆ ಸರಿಯಾಗಿ ತಿಳಿದಿರಲಿಲ್ಲ. ಹೀಗಾಗಿ ಬ್ಯೂಟಿಪಾರ್ಲರ್ ಒಂದರಲ್ಲಿ ಕೇವಲ 500 ರೂಪಾಯಿ ಸಂಬಳಕ್ಕಾಗಿ ಕೆಲಸಕ್ಕೆ ಸೇರಿಕೊಂಡ್ರು. ಕಠಿಣ ಪರಿಶ್ರಮದ ಮೂಲಕ ತನ್ನಲ್ಲಿದ್ದ ಡಿಸೈನರ್ ಕಲೆಯನ್ನು ಮತ್ತಷ್ಟು ಒರೆಗೆ ಹಚ್ಚಲು ಇದು ಸಹಕಾರ ನೀಡಿತು. ಮಹಿಳೆಯರಿಗೆ ಬಟ್ಟೆಗಳನ್ನು ಡಿಸೈನ್ ಮಾಡುವ ಜೊತೆಗೆ ಪುರುಷರಿಗೂ ಬಟ್ಟೆ ಡಿಸೈನ್ ಮಾಡಲು ಆರಂಭಿಸಿದ್ರು. ಡಿಸೈನಿಂಗ್ ವಿಚಾರದಲ್ಲಿ ಯಾವುದೇ ಪದವಿ ಪಡೆಯದೇ ಇದ್ರೂ ಮನೀಷ್ ಕೇವಲ ತನ್ನ ಹಾರ್ಡ್ ವರ್ಕ್ನಿಂದ ಎಲ್ಲವನ್ನೂ ಸಂಪಾದಿಸಿಕೊಂಡ್ರು. ತನ್ನ ಬದುಕಿನ ದಾರಿಯನ್ನೇ ಬದಲಿಸಿಕೊಂಡ್ರು.
ಕನಸುಗಳನ್ನು ಕಟ್ಟಿಕೊಂಡು 25ರ ಹರೆಯದಲ್ಲೇ ಮನೀಷ್ ಬಾಲಿವುಡ್ಗೆ ಎಂಟ್ರಿಕೊಟ್ರು. 1990ರಲ್ಲಿ "ಸ್ವರಾಗ್" ಅನ್ನುವ ಸಿನಿಮಾದಲ್ಲಿ ಜೂಹಿ ಚಾವ್ಲಾಗೆ ಡಿಸೈನರ್ ಆಗಿ ಕಾಸ್ಟ್ಯೂಮ್ ರೆಡಿ ಮಾಡಿದ್ರು. 1993ಲ್ಲಿ "ಗುಮ್ರಾ" ಅನ್ನುವ ಸಿನಿಮಾದಲ್ಲಿ ಮೋಹಕ ತಾರೆ ಶ್ರೀದೇವಿಗೆ ಡಿಸೈನರ್ ಆಗಿ ಗಮನ ಸೆಳೆದ್ರು. ಬಾಲಿವುಡ್ನಲ್ಲಿ ಆಗಿನ ಕಾಲಕ್ಕೆ ಟಾಪ್ ಹೀರೋಯಿನ್ಗಳಾಗಿದ್ದ ಜೂಹಿ ಚಾವ್ಲಾ ಮತ್ತು ಶ್ರೀದೇವಿಗೆ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದು ದೊಡ್ಡ ಸುದ್ದಿಯಾಯಿತು. ಅಷ್ಟೇ ಅಲ್ಲ "ರಂಗೀಲಾ" ಚಿತ್ರದಲ್ಲಿ ಊರ್ಮಿಳಾ ಮಾತೋಡ್ಕರ್ಗೆ ಡಿಸೈನ್ ಮಾಡಿದ್ದ ಕಾಸ್ಟ್ಯೂಮ್ಗೆ ಫಿಲ್ಮ್ಫೇರ್ ಅವಾರ್ಡ್ ಕೂಡ ಸಿಕ್ಕಿತ್ತು ಅನ್ನುವುದು ಮನೀಷ್ ಶ್ರಮಕ್ಕೆ ಹಿಡಿದ ಕೈಗನ್ನಡಿ.
ಇದನ್ನು ಓದಿ: ಕೆನಾಡ ಬಿಟ್ಟು ಬಂದ ಆ ಹುಡುಗ ಮನೆ ಮನೆಯಲ್ಲೂ ಹಸಿರು ತಂದ!
ಬಾಲಿವುಡ್ನಲ್ಲಿ ಮನೀಷ್, " ದಿಲ್ವಾಲೇ ದುಲ್ಹಾನಿಯ ಲೇ ಜಾಯೆಂಗೇ", " ದಿಲ್ ತೋ ಪಾಗಲ್ ಹೈ", "ಸತ್ಯ"," ಕುಚ್ ಕುಚ್ ಹೋತಾ ಹೈ", "ಕಹೋ ನಾ ಪ್ಯಾರ್ ಹೈ", "ಮೊಹಬ್ಬತೈನ್", "ಧಡ್ಕನ್", "ಅಸೋಕ", "ಕಭೀ ಖುಷಿ ಕಭೀ ಗಮ್", "ಕಲ್ ಹೋ ನಹೋ" ಸೇರಿದಂತೆ ಹಲವು ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ತಮಿಳಿನಲ್ಲಿ "ಶಿವಾಜಿ ದಿ ಬಾಸ್", "ಎಂದಿರನ್" ಚಿತ್ರಗಳಲ್ಳೂ ಮನೀಷ್ ಕೈಚಳಕ ಕಾಣಸಿಗುತ್ತದೆ.
ಮನೀಷ್ ಯಶಸ್ಸಿನ ನಂತರವೂ ಕಠಿಣ ಪರಿಶ್ರಮವನ್ನು ಮರೆಯಲಿಲ್ಲ. ಹೀಗಾಗಿ ತನ್ನ 39ನೇ ವಯಸ್ಸಿನಲ್ಲೇ "ಮನೀಷ್ ಮಲ್ಹೋತ್ರಾ" ಅನ್ನುವ ತನ್ನದೇ ಬ್ರಾಂಡ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ರು. ಹಾಲಿವುಡ್ ಸೆಲೆಬ್ರಿಟಿಗಳಾದ ಕೇಟ್ ಮೋಸ್, ನವೋಮಿ ಕ್ಯಾಂಬೆಲ್ ಮತ್ತು ಕೈಲಿ ಮಿನೊಗ್ ರಂತಹ ಖ್ಯಾತನಾಮರು ಕೂಡ ಮನೀಷ್ ಕೈಚಳಕಕ್ಕೆಮಾರು ಹೋಗಿದ್ದಾರೆ. ಪಾಪ್ ಲೋಕದ ದಂತಕಥೆ ದಿವಂಗತ ಮೈಕ್ ಜಾಕ್ಸನ್ಗೆ ಕೂಡ ಮನೀಷ್ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದರೂ ಅನ್ನೋದು ಮತ್ತೊಂದು ವಿಶೇಷ. ಇವತ್ತು ಮನೀಷ್ ಡಿಸೈನ್ಗಳು ಲಂಡನ್, ನ್ಯೂಯಾರ್ಕ್, ಕೆನಾಡಾ, ದುಬೈ, ರಿಯಾದ್ನಲ್ಲಿ ಟ್ರೆಂಡ್ ಆಗಿವೆ ಅಂದ್ರೆ ನಂಬಲೇಬೇಕಿದೆ.
“ ಬದುಕಿನಲ್ಲಿ ಸವಾಲುಗಳು ಇಲ್ಲದೇ ಇದ್ರೆ ಅದಕ್ಕೆ ಅರ್ಥ ಇರುವುದಿಲ್ಲ. ಭಾರತದ ಫ್ಯಾಷನ್ ಲೋಕದಲ್ಲಿ ನಾನು ಇಷ್ಟು ಎತ್ತರಕ್ಕೆ ಬೆಳೆಯುತ್ತೇನೆ ಅನ್ನುವುದನ್ನು ಅಂದುಕೊಂಡಿರಲಿಲ್ಲ. ಆದ್ರೆ ಪರಿಶ್ರಮ ಇದ್ದರೆ ಯಾವ ಸವಾಲನ್ನು ಕೂಡ ಗೆಲ್ಲಬಹುದು.”
- ಮನೀಷ್ ಮಲ್ಹೋತ್ರಾ, ಫ್ಯಾಷನ್ ಡಿಸೈನರ್
ಮನೀಷ್ ಸಾಧನೆಗಳು ಕೇವಲ ಪರಿಶ್ರಮದಿಂದ ಎಲ್ಲವನ್ನೂ ಸಾಧಿಸಬಹುದು ಅನ್ನೋದನ್ನ ತೋರಿಸಿಕೊಡುತ್ತದೆ. ತಾನು ಮಾಡುವ ಕೆಲಸದಲ್ಲಿ ನಂಬಿಕೆ ಇಟ್ರೆ ಯಾವುದೂ ಕೂಡ ಅಸಾಧ್ಯವಲ್ಲ ಅನ್ನುವುದು ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ.
1. ಸೈಲೆಂಟ್ ಹಾರ್ಟ್ ಅಟ್ಯಾಕ್ ವಿರುದ್ಧ ಹೋರಾಟ- ಹೊಸ ಡಿವೈಸ್ ಕಂಡುಹಿಡಿದ 15ರ ಹರೆಯದ ಬಾಲಕ
2. ಕೆಲಸ ಬೇಕಿರುವವರಿಗೆ, ಕೆಲಸ ಕೊಡುವವರಿಗೆ- ಎಲ್ಲರಿಗೂ ಆಪತ್ಭಾಂಧವ ವಿಸ್ಡಮ್ ಜಾಬ್ಸ್