ಆವೃತ್ತಿಗಳು
Kannada

ರಾಜ್ಯ ಸರ್ಕಾರದ ವಿನೂತನ ಆರೋಗ್ಯ ಕವಚ ಯೋಜನೆ-ಬೈಕ್ ಆ್ಯಂಬುಲೆನ್ಸ್ ಸೇವೆಗಳಿಗೆ ಹೆಚ್ಚುತ್ತಿದೆ ತೀವ್ರ ಬೇಡಿಕೆ

ವಿಶ್ವಾಸ್​ ಭಾರಾಧ್ವಾಜ್​

Vishwas Bharadwaj
23rd Jan 2016
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಬೆಂಗಳೂರಿನಲ್ಲಿ-203119 ಕರೆಗಳು, ದಕ್ಷಿಣ ಕನ್ನಡ-2862, ಬೆಳಗಾವಿ-1501, ಮೈಸೂರು-841, ತುಮಕೂರು-1131, ದಾವಣಗೆರೆ-601, ಕಲಬುರಗಿ-1961, ವಿಜಯಪುರ-1311, ಕೋಲಾರ-741, ಹುಬ್ಬಳ್ಳಿ- ಧಾರವಾಡದಲ್ಲಿ-841 ಹಾಗೂ ಶಿವಮೊಗ್ಗದಿಂದ-1741 ಕರೆಗಳು. ಡಿಸೆಂಬರ್ 31ರವರೆಗೆ ಬೈಕ್ ಆ್ಯಂಬುಲೆನ್ಸ್​ಗೆ ಬಂದ ಒಟ್ಟು ಕರೆಗಳಿವು. ಈವರೆಗೆ ವಿನೂತನ ಬೈಕ್ ಆ್ಯಂಬುಲೆನ್ಸ್ ಸೇವೆಯಲ್ಲಿ ಸ್ವೀಕರಿಸಲ್ಪಟ್ಟ ಒಟ್ಟು ಕರೆಗಳು-338330. ಸಿಲಿಕಾನ್ ಸಿಟಿಯಲ್ಲಿ ಕೇವಲ 5 ಕಿ.ಮೀ ಅಂತರದ ಸ್ಥಳ ತಲುಪಲು 30 ನಿಮಿಷ ಬೇಕು. ಟ್ರಾಫಿಕ್‌ಜಾಮ್ ಹೆಚ್ಚಿರುವ ರಸ್ತೆಗಳಲ್ಲಿ ಆರೋಗ್ಯ ಕವಚ ಆ್ಯಂಬುಲೆನ್ಸ್ ಸಂಚರಿಸಿ ಸಕಾಲದಲ್ಲಿ ನಿರ್ದಿಷ್ಟ ಸ್ಥಳ ತಲುಪಲು ಸಾಧ್ಯವಿಲ್ಲ. ಇದೇ ಕಾರಣದಿಂದ ಬೈಕ್ ಆಂಬ್ಯುಲೆನ್ಸ್​​ಗಳನ್ನು ಪರಿಚಯಿಸಿತ್ತು ರಾಜ್ಯ ಆರೋಗ್ಯ ಇಲಾಖೆ. ಸಕಾಲದಲ್ಲಿ ಚಿಕಿತ್ಸಾ ಸೇವೆ ಒದಗಿಸುವ ಮೂಲಕ ಶುರುವಾದ ಕೇವಲ 8 ತಿಂಗಳಿನಲ್ಲಿ 3300ಕ್ಕೂ ಹೆಚ್ಚು ಕರೆಗಳಿಗೆ ಸ್ಪಂದನೆ ನೀಡುವ ಮೂಲಕ ಮಹಾನಗರದಲ್ಲಿ ಬೈಕ್ ಆ್ಯಂಬುಲೆನ್ಸ್ ಜನಪ್ರಿಯಗೊಳ್ಳತೊಡಗಿದೆ.

image


2 ಕಿಲೋಮೀಟರ್​ ವ್ಯಾಪ್ತಿಯಲ್ಲಿ ಯಾವುದೇ ಸ್ಥಳದಲ್ಲೂ ಬೈಕ್ ಆ್ಯಂಬುಲೆನ್ಸ್ ಸೇವೆ ಲಭ್ಯವಿದೆ. ವಾರದ ಏಳೂದಿನ ಬೆಳಗ್ಗೆ 8 ರಿಂದ ರಾತ್ರಿ 8ರವರೆಗೆ ಈ ಬೈಕ್ ಆ್ಯಂಬುಲೆನ್ಸ್ ಕಾರ್ಯ ನಿರ್ವಹಿಸುತ್ತದೆ. 40 ಮಂದಿ ತಜ್ಞ ಶುಶ್ರೂಷಕರಿಂದ ಗಾಯಾಳುಗಳಿಗೆ ಚಿಕಿತ್ಸೆ ನೀಡುವ ಸೌಕರ್ಯವಿದ್ದು, ಈ ಬೈಕ್ ಆ್ಯಂಬುಲೆನ್ಸ್ ಈವರೆಗೆ ನಿಭಾಯಿಸಿದ ಹೆಚ್ಚಿನ ಸೇವೆಗಳಲ್ಲಿ ಅಪಘಾತ ಪ್ರಕರಣಗಳ ಕರೆಗಳೇ ಹೆಚ್ಚು.

image


ಕರ್ನಾಟಕ ರಾಜ್ಯ ಸರಕಾರ ಪರಿಚಯಿಸಿದ ಏಷ್ಯಾದಲ್ಲೇ ಪ್ರಪ್ರಥಮ ಬೈಕ್ ಆಂಬ್ಯುಲೆನ್ಸ್ ಸೇವೆ ದಿನದಿಂದ ದಿನಕ್ಕೆ ಜನಪ್ರಿಯಗೊಳ್ಳುತ್ತಿದೆ. ಅಪಘಾತಕ್ಕೀಡಾದ ಸಾವಿರಾರು ಮಂದಿಯ ನೋವಿಗೆ ಈ ಬೈಕ್ ಆ್ಯಂಬುಲೆನ್ಸ್ ಸಕಾಲದಲ್ಲಿ ಸ್ಪಂದಿಸುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಪ್ರತಿನಿತ್ಯ ವಿಪರೀತ ವಾಹನ ದಟ್ಟಣೆ ಇರುವ ಕಾರಣ ಆರೋಗ್ಯ ಕವಚ 108 ಆಂಬ್ಯುಲೆನ್ಸ್​​ಗಳು ಅಪಘಾತ ಅಥವಾ ರೋಗಿಗಳ ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ತಲುಪುವುದು ವಿಳಂಬವಾಗುತ್ತಿದೆ. ಹೀಗಾಗಿ ಅಪಘಾತದಲ್ಲಿ ಗಾಯಾಳುಗಳಾದವರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ, ಜೀವ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಬೈಕ್ ಆ್ಯಂಬುಲೆನ್ಸ್ ಸೇವೆಗಳು ನಿರ್ಣಾಯಕ ಪಾತ್ರವಹಿಸಿವೆ.

image


ರಾಜ್ಯ ಆರೋಗ್ಯ ಇಲಾಖೆ ಕಳೆದ ಏಪ್ರಿಲ್ 15ರಂದು ಸರಕಾರಿ ಬೈಕ್ ಆಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಿತ್ತು. ಮೊದಲು ಬೆಂಗಳೂರಿನಲ್ಲಿ ಆರಂಭವಾದ ಈ ಸೇವೆ ಕ್ರಮೇಣ ರಾಜ್ಯಾದ್ಯಂತ ವಿಸ್ತರಿಸಲಾಗಿತ್ತು. ವಾಹನ ದಟ್ಟಣೆಯಿಂದ 108 ಆಂಬ್ಯುಲೆನ್ಸ್ ಸಿಬ್ಬಂದಿ ಸ್ಥಳಕ್ಕೆ ತೆರಳುವುದು ತಡವಾದರೆ, ಬೈಕ್ ಆ್ಯಂಬುಲೆನ್ಸ್ ಸಿಬ್ಬಂದಿಯೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ರೋಗಿಗಳಿಗೆ ಅಗತ್ಯವಿರುವ ಪ್ರಥಮ ಚಿಕಿತ್ಸೆ ನೀಡುತ್ತಾರೆ.

image


ಬೈಕ್ ಆ್ಯಂಬುಲೆನ್ಸ್ ಸೇವೆ ಪ್ರಾರಂಭಿಸಿ ಈ 8 ತಿಂಗಳು ಕಳೆಯೋದರೊಳಗೆ ಸುಮಾರು 3,383 ಕರೆಗಳನ್ನು ಸ್ವೀಕರಿಸಿ, ಸ್ಥಳಕ್ಕೆ ತೆರಳಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಆರೋಗ್ಯ ಕವಚ 108 ಆಂಬ್ಯುಲೆನ್ಸ್​​ಗಳ ನಿರ್ವಹಣೆ ಹೊತ್ತಿರುವ ಜಿವಿಕೆ-ಇಎಂಆರ್‌ಐ ಸಂಸ್ಥೆಯೇ ಈ ಬೈಕ್ ಆಂಬ್ಯುಲೆನ್ಸ್​​ಗಳ ನಿರ್ವಹಣೆಯನ್ನು ವಹಿಸಿಕೊಂಡಿದೆ. ಕಳೆದ ಏಪ್ರಿಲ್‌ನಿಂದ ಡಿಸೆಂಬರ್ 31ರವರೆಗೆ ಇದರ ಸಿಬ್ಬಂದಿಗಳು ಸ್ವೀಕರಿಸಿದ ಒಟ್ಟು ಕರೆಗಳಲ್ಲಿ ಬೆಂಗಳೂರಿನಿಂದಲೇ ಸುಮಾರು 2031 ಕರೆಗಳಿವೆ. ಈ ಬೈಕ್ ಆಂಬ್ಯುಲೆನ್ಸ್ ಸಿಬ್ಬಂದಿಗಳು ಶೇ.95ರಷ್ಟು ಅಪಘಾತ ಪ್ರಕರಣದ ಸ್ಥಳಗಳಿಗೆ ಭೇಟಿ ನೀಡಿ, ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಕೇವಲ ಅಪಘಾತ ಮಾತ್ರವಲ್ಲದೇ ಹೃದ್ರೋಗ, ಶ್ವಾಸಕೋಶ ಸೇರಿದಂತೆ ಇನ್ನಿತರೆ ಆರೋಗ್ಯ ಸಮಸ್ಯೆಗಳಿಗೂ ಬೈಕ್ ಆ್ಯಂಬುಲೆನ್ಸ್ ಸಿಬ್ಬಂದಿಗಳು ಕ್ಷಿಪ್ರಗತಿಯಲ್ಲಿ ಸ್ಪಂದಿಸುತ್ತಿದ್ದಾರೆ.

ರಾಜ್ಯಾದ್ಯಂತ ಈ ಬೈಕ್ ಆ್ಯಂಬುಲೆನ್ಸ್ ಸೇವೆಗೆಂದೇ 30 ವಿಶೇಷ ಬೈಕ್​ಗಳನ್ನು ಸಿಬ್ಬಂಧಿ ಸಹಿತ ನಿಯೋಜಿಸಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಒಟ್ಟು 11 ಜಿಲ್ಲೆಗಳಲ್ಲಿ ಆಂಬ್ಯುಲೆನ್ಸ್ ಬೈಕ್ ಸೇವೆ ಲಭ್ಯವಿದೆ. ಜನದಟ್ಟಣೆ, ಟ್ರಾಫಿಕ್‌ಜಾಮ್ ಮತ್ತು ಅಪಘಾತ ಪ್ರಕರಣ ಹೆಚ್ಚಿರುವ ಉದ್ಯಾನನಗರಿಯಲ್ಲಿ ಒಟ್ಟು 19 ಬೈಕ್‌ಗಳು ಚಿಕಿತ್ಸೆಗೆ ಧಾವಿಸುತ್ತಿವೆ. ಒಂದು ಬಜಾಜ್ ಅವೆಂಜರ್ ಬೈಕ್ ಆ್ಯಂಬುಲೆನ್ಸ್ ಖರೀದಿಗೆ ಬೆಲೆ 2 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಬೈಕ್‌ನ ಹಿಂಬದಿ ಸೀಟಿನಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ಅಳವಡಿಸಲಾಗಿದೆ. ಇದರಲ್ಲಿ ಅಗತ್ಯ ಔಷಧಿ, ಆಮ್ಲಜನಕ ವ್ಯವಸ್ಥೆ ಇರುತ್ತದೆ. ಪ್ರತಿ ಬೈಕ್‌ನ ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿ 57-60 ಬಗೆಯ ಔಷಧಿ ಮತ್ತು ವೈದ್ಯಕೀಯ ಉಪಕರಣಗಳಿರುತ್ತವೆ. ಪ್ರತಿ ತಿಂಗಳು ಬೈಕ್​​ನಲ್ಲಿರುವ ಈ ಔಷಧಗಳ ಪರಿಶೀಲನೆ ನಡೆಸಿ, ಅಗತ್ಯ ಬಿದ್ದರೆ ಬದಲಿ ಔಷದಿಗಳನ್ನು ಇಡಲಾಗುತ್ತದೆ.

image


ಬೈಕ್‌ ಆ್ಯಂಬುಲೆನ್ಸ್​ಗಳನ್ನು ಬೆಂಗಳೂರಿನ ಹನುಮಂತನಗರ, ಬನಶಂಕರಿ, ಮೆಜೆಸ್ಟಿಕ್ ನಿಲ್ದಾಣ, ಸಿರ್ಸಿ ವೃತ್ತ, ಕೆಂಗೇರಿ, ಮೇಯೋಹಾಲ್, ಸಿಲ್ಕ್‌ಬೋರ್ಡ್, ನೈಸ್ ಟೋಲ್ ಜಂಕ್ಷನ್, ಕೆ.ಆರ್.ಪುರ, ವರ್ತೂರು, ಸುಮನಹಳ್ಳಿ ಜಂಕ್ಷನ್, ಪೀಣ್ಯ, ಯಶವಂತಪುರ, ಹೆಬ್ಬಗೋಡಿ, ಸರ್ಜಾಪುರ ಮುಂತಾದ ಆಯಕಟ್ಟಿನ ಪ್ರದೇಶಗಳಲ್ಲಿ ನಿಲುಗಡೆ ಮಾಡಲಾಗಿರುತ್ತದೆ. ಕರೆ ಬಂದ ಕೂಡಲೆ ಸಮಯಕ್ಕೆ ಸರಿಯಾಗಿ ತಲುಪಲು ಇದರಿಂದ ಅನುಕೂಲವಾಗ್ತಿದೆ.

ಬೆಂಗಳೂರಿನಲ್ಲಿಯೇ ಈ ಬೈಕ್ ಆ್ಯಂಬುಲೆನ್ಸ್​​ಗಳಿಗೆ ಪ್ರತಿದಿನ 10-12 ಕರೆಗಳು ಬರುತ್ತವೆ. 108ಗೆ ಬರುವ ಕರೆಗಳನ್ನು ಪರಿಶೀಲಿಸಿ, ಘಟನಾ ಸ್ಥಳಕ್ಕೆ ಬೈಕ್ ಆಂಬ್ಯುಲೆನ್ಸ್‌ಗಳನ್ನು ಕಳುಹಿಸಲಾಗುತ್ತದೆ. ತರಬೇತಿ ಪಡೆದಿರುವ ಸಿಬ್ಬಂದಿಗಳನ್ನೇ ನೇಮಕ ಮಾಡಿಕೊಳ್ಳಲಾಗಿದೆ ಅಂದಿದ್ದಾರೆ ಜಿವಿಕೆ ಇಎಂಆರ್‌ಐ ಹಿರಿಯ ವ್ಯವಸ್ಥಾಪಕ, ಜಿವಿಕೆ ಇಎಂಆರ್‌ಐ ಪರ್ವೀಜ್.

ಯಾವುದೇ ಸ್ಥಳದಲ್ಲಿ ಅಪಘಾತ ಸಂಭವಿಸಿದ ಕೂಡಲೇ 108 ಸೇವೆಗೆ ಕರೆ ಮಾಡಿದರೆ, ಕೂಡಲೆ ನಿಯಂತ್ರಣಾ ಕೊಠಡಿಯಲ್ಲಿನ ಸಿಬ್ಬಂದಿಗಳು ಜಿಪಿಎಸ್ ತಂತ್ರಜ್ಞಾನದ ಮೂಲಕ ಘಟನಾ ಸ್ಥಳದ ವಾಹನ ದಟ್ಟಣೆ ಪರಿಶೀಲಿಸುತ್ತಾರೆ. ಒಂದು ವೇಳೆ ಅಲ್ಲಿ ಸುತ್ತಮುತ್ತ ಸಂಚಾರ ದಟ್ಟಣೆ ಹೆಚ್ಚಿದ್ದರೆ, ಶೀಘ್ರದಲ್ಲೂ ತಲುಪುವಂತೆ ಬೈಕ್ ಆ್ಯಂಬುಲೆನ್ಸ್ ಸೇವೆ ಒದಗಿಸಲಾಗುತ್ತದೆ. ಬೈಕ್ ಆಂಬ್ಯುಲೆನ್ಸ್ ಸಿಬ್ಬಂದಿಗಳು ಅಪಘಾತ ಸ್ಥಳಕ್ಕೆ ಬಂದು ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಅಗತ್ಯವಿದ್ದರೆ ಆಸ್ಪತ್ರೆಗಳಿಗೆ ರವಾನಿಸುವ ವ್ಯವಸ್ಥೆಯನ್ನು ಮಾಡುತ್ತಾರೆ. ಇಲ್ಲವೇ ಆರೋಗ್ಯ ಕವಚ ಆಂಬ್ಯುಲೆನ್ಸ್ ಅನ್ನು ಸ್ಥಳಕ್ಕೆ ಕರೆಸಿಕೊಳ್ಳುತ್ತಾರೆ. ಕೆಲವೊಮ್ಮೆ ತುರ್ತು ಚಿಕಿತ್ಸೆ ನೀಡಬೇಕಾದ ಸಂದರ್ಭದಲ್ಲಿ ವೈದ್ಯರಿಗೆ ಕರೆ ಮಾಡಿ, ಅವರ ಸಲಹೆಯಂತೆ ಚಿಕಿತ್ಸೆ ನೀಡುವ ವ್ಯವಸ್ಥೆಯೂ ಇದೆ.

 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags