ಕ್ಯಾನ್ಸರ್ ಪತ್ತೆಗೆ ನ್ಯಾನೋ ಚಿಪ್..!
ಅಗಸ್ತ್ಯ
ಕ್ಯಾನ್ಸರ್.. ಹೆಸರು ಕೇಳಿದರೇನೆ ಎಂತಹವರಾದರೂ ಅವರಲ್ಲಿ ಭಯ ಶುರುವಾಗುತ್ತದೆ. ಆದರೆ ಅದೇ ಮಾರಕ ಬಂದಿದೆಯೇ ಇಲ್ಲವೆ ಎಂಬುದನ್ನು ಪತ್ತೆ ಹಚ್ಚುವುದು ಹೇಗೆ? ಒಂದೊಮ್ಮೆ ಬಂದಿದ್ದರೂ ಕ್ಯಾನ್ಸರ್ ಕೋಶಗಳನ್ನು ಪತ್ತೆ ಮಾಡಿ ಚಿಕಿತ್ಸೆ ನೀಡುವುದು ಹೇಗೆ? ಇದಕ್ಕೆಲ್ಲಾ ಉತ್ತರ ಎನ್ನುವಂತೆ ಮೊಹಾಲಿಯ ಇನ್‍ಸ್ಟಿಟ್ಯೂಟ್ ಆಫ್ ನ್ಯಾನೊ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಹೊಸದೊಂದು ಆವಿಷ್ಕಾರ ಮಾಡಿದೆ. ಕ್ಯಾನ್ಸರ್ ಪತ್ತೆಗಾಗಿಯೆ `ಮೈಕ್ರೋಫ್ಲೂಯಿಡ್ ಚಿಪ್' ಎಂಬ ಸಣ್ಣದೊಂದು ಮಾಂತ್ರಿಕ ಚಿಪ್ ಅಭಿವೃದ್ಧಿಪಡಿಸಿದೆ. ಅದರಿಂದ ಕ್ಯಾನ್ಸರ್ ಬಗೆಗಿನ ಎಲ್ಲಾ ಮಾಹಿತಿಗಳು ರೋಗಿಗೆ ಮತ್ತು ವೈದ್ಯರಿಗೆ ದೊರಕಿಸಿಕೊಡುತ್ತದೆ.
ಮೊಹಾಲಿಯ ಇನ್‍ಸ್ಟಿಟ್ಯೂಟ್ ಆಫ್ ನ್ಯಾನೊ ಸೈನ್ಸ್ ಆ್ಯಂಡ್ ಟೆಕ್ನಾಲಜಿಯ ಇಬ್ಬರು ವಿಜ್ಞಾನಿಗಳು ಇದನ್ನು ಆವಿಷ್ಕರಿಸಿದ್ದಾರೆ. ಕ್ಯಾನ್ಸರ್ ಶಂಕಿತ ವ್ಯಕ್ತಿಯಲ್ಲಿ ಯಾವ ಬಗೆಯ ಕ್ಯಾನ್ಸರ್ ಇದೆ ಎಂಬುದನ್ನು ತಿಳಿಯಲು ಈ ನ್ಯಾನೋ ಚಿಪ್ ಉಪಯುಕ್ತವಾಗಲಿದೆ. ಸದ್ಯ ಯಾರಾದರೂ ಕ್ಯಾನ್ಸರ್ ಬಗ್ಗೆ ತಿಳಿದುಕೊಳ್ಳಬೇಕಂದರೆ ಸಾವಿರಾರು ರೂಪಾಯಿ ಖರ್ಚು ಮಾಡಿ, ದೊಡ್ಡ ನಗರಗಳಲ್ಲಿನ ಪ್ರಯೋಗಾಲಯಕ್ಕೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮಧ್ಯಮ ಮತ್ತು ಬಡ ವರ್ಗದ ಜನರಿಗೆ ಇದು ಕಷ್ಟಸಾಧ್ಯ. ಮೊಹಾಲಿ ವಿಜ್ಞಾನಿಗಳು ಆವಿಷ್ಕರಿಸಿರುವ ನ್ಯಾನೋ ಚಿಪ್ ಸಾಮಾನ್ಯ ಜನರಿಗೆ ಸಹಕಾರಿಯಾಗಲಿದೆ.
ನ್ಯಾನೋ ಚಿಪ್ ಹೇಗೆ ಕೆಲಸ ಮಾಡುತ್ತದೆ?
ಗಾಜಿನ ಚಿಪ್‍ನಲ್ಲಿ ಅತಿ ಸೂಕ್ಷ್ಮ ನ್ಯಾನೊ ಸರ್ಕಿಟ್ ಇರುತ್ತದೆ. ಮೊದಲಿಗೆ ವ್ಯಕ್ತಿಯ ದೇಹದಲ್ಲಿ ಅರ್ಬುದದ ಕೋಶಗಳು ಸಂಚರಿಸುತ್ತಿವೆಯೇ ಎಂಬುದನ್ನು ಪತ್ತೆ ಮಾಡುತ್ತದೆ. ಕೋಶಗಳು ರಕ್ತದ ಮೂಲಕ ಸಂಚರಿಸುವಾಗ ಅವುಗಳ ಇರುವಿಕೆ ನಿರ್ಧರಿಸಬಹುದು. ಅಲ್ಲದೆ ಮೈಕ್ರೋಫ್ಲೂಯಿಡ್ ಚಿಪ್ ವ್ಯವಸ್ಥೆಯೊಳಗೆ ರಕ್ತದ ಸ್ಯಾಂಪಲ್ ಹರಿಸಿದಾಗ ಮೊದಲಿಗೆ ರಕ್ತದಲ್ಲಿ ಕಣಗಳನ್ನು ಅವುಗಳ ಗಾತ್ರಗಳಿಗೆ ಅನುಗುಣವಾಗಿ ವರ್ಗೀಕರಿಸುತ್ತದೆ. ಕೇವಲ ಕ್ಯಾನ್ಸರ್ ಗಡ್ಡೆಯ ಕೋಶಗಳು ಮತ್ತು ಬಿಳಿ ರಕ್ತ ಕಣಗಳನ್ನು ಮಾತ್ರ ಒಳಗೆ ಪ್ರವೇಶಿಸಲು ಬಿಡುತ್ತವೆ. ಒಂದು ಕಡತದಲ್ಲಿ ಕೋಶಗಳು ಸಾಲುಗಟ್ಟಿ ನಿಲ್ಲುತ್ತವೆ. ಬಳಿಕ ಅಯಸ್ಕಾಂತೀಯ ಕ್ಷೇತ್ರವು ಕ್ಯಾನ್ಸರ್ ಗಡ್ಡೆಯ ಕೋಶಗಳನ್ನು ಪ್ರತ್ಯೇಕಿಸುತ್ತದೆ.
ನಂತರ ಚಿಪ್‍ನಲ್ಲಿನ ಡಿಸ್ಪ್ಲೇ ಆಗುವ ಅಂಶಗಳಿಂದ ರೋಗಿಗೆ ಯಾವ ರೀತಿಯ ಕ್ಯಾನ್ಸರ್, ಅದರ ಉಪವಿಭಾಗ ಮತ್ತು ಗುಣಲಕ್ಷಣವನ್ನೂ ಕಂಡುಕೊಳ್ಳಬಹುದು. ಅದರ ಆಧಾರದ ಮೇಲೆ ಆತನಿಗೆ ಯಾವ ರೀತಿಯ ಚಿಕಿತ್ಸೆ ಬೇಕಾಗಬಹುದು, ಚಿಕಿತ್ಸೆಯ ಉಸ್ತುವಾರಿ ಹಾಗೂ ಅದರ ಸ್ಥಾನಾಂತರವನ್ನೂ ತಿಳಿದುಕೊಳ್ಳಲು ಸಾಧ್ಯವಿದೆ. ವೈದ್ಯರಿಗೆ ಈ ಚಿಪ್ ಮೂಲಕ ಕಾಲಕ್ರಮೇಣದಲ್ಲಿ ರೋಗಿಯ ದೇಹದಲ್ಲಿ ಸಂಚರಿಸುತ್ತಿರುವ ಕ್ಯಾನ್ಸರ್ ಗಡ್ಡೆಯ ಕೋಶಗಳ ಪ್ರಮಾಣವನ್ನು ಅಳೆಯುವ ಮೂಲಕ ತಾವು ನೀಡುತ್ತಿರುವ ಚಿಕಿತ್ಸೆ ಎಷ್ಟರ ಮಟ್ಟಿಗೆ ಪರಿಣಾಮಕಾರಿ ಆಗಿದೆ ಎಂಬುದನ್ನು ಕೆಲವೇ ಕ್ಷಣಗಳಲ್ಲಿ ತಿಳಿದುಕೊಳ್ಳಬಹುದಾಗಿದೆ. ಅಲ್ಲದೆ ಕ್ಯಾನ್ಸರ್ ಕೋಶಗಳು ಆನುವಂಶಿಕ ನವವಿಕೃತಿ ಅಥವಾ ಜೆನಿಟಿಕ್ ಮ್ಯುಟೇಷನ್ ಒಳಗಾಗಿದೆಯೇ ಎಂಬುದನ್ನೂ ಪರೀಕ್ಷಿಸಬಹುದು. ಕ್ಯಾನ್ಸರ್ ಕೋಶಗಳ ನಿರ್ದಿಷ್ಟ ವಿಧಗಳು ಮತ್ತು ಹಂತಗಳ ಬಗ್ಗೆ ವೈದ್ಯರು ಒಂದು ನಿರ್ಧಾರಕ್ಕೆ ಬರಬಹುದು. ಇದರಿಂದ ರೋಗಿಗಳಿಗಷ್ಟೇ ಅಲ್ಲದೆ, ಚಿಕಿತ್ಸೆ ನೀಡುವ ವೈದ್ಯರಿಗೂ ಈ ಚಿಪ್ ಸಾಕಷ್ಟು ಸಹಾಯ ಮಾಡಲಿದೆ.
30 ರೂಪಾಯಿಗೆ ಲಭ್ಯ:
ಮೈಕ್ರೋ ಫ್ಲೂಯಿಡ್ ಚಿಪ್‍ನ ಬೆಲೆ ಅತ್ಯಂತ ಕಡಿಮೆ. ಕ್ಯಾನ್ಸರ್ ಪತ್ತೆಗಾಗಿಯೇ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾದ ಈ ಕಾಲದಲ್ಲಿ ನ್ಯಾನೋ ಚಿಪ್‍ನಿಂದ ಅದನ್ನು ಕೆಲವೇ ರೂಪಾಯಿ ವೆಚ್ಚದಲ್ಲಿ ಪತ್ತೆ ಮಾಡಬಹುದು. ಆದರೆ ಮೈಕ್ರೋ ಫ್ಲೂಯಿಡ್ ಚಿಪ್ ಇನ್ನೂ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಆದರೆ ಮುಂದೆ ಅದು ಮಾರುಕಟ್ಟೆಗೆ ಸಿಗಲಿದೆ. ಆಗ ಅದನ್ನು 20ರಿಂದ 30 ರೂಪಾಯಿಗೆ ನೀಡುವ ಕುರಿತು ಮೊಹಾಲಿ ವಿಜ್ಞಾನಿಗಳು ಹೇಳುತ್ತಾರೆ.