ಎಲ್ಲರಿಗಾಗಿ ಆಟ: ಮೊದಲ ಅಂಗವಿಕಲ ಸ್ನೇಹಿ ಮಕ್ಕಳ ಉದ್ಯಾನ ಪಡೆದ ಚೆನ್ನೈ

ನಗರದಲ್ಲಿರುವ ಅಂಗವಿಕಲ ಮಕ್ಕಳಿನ್ನು ಉದ್ಯಾನದಲ್ಲಿ ವಿವಿಧ ಬಗೆಯ ಆಟವಾಡುತ್ತಾ ಸವಾರಿ ನಡೆಸಬಹುದಾಗಿದೆ ಜೊತೆಗೆ ಅವರ ಸಂವೇದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

ಎಲ್ಲರಿಗಾಗಿ ಆಟ: ಮೊದಲ ಅಂಗವಿಕಲ ಸ್ನೇಹಿ ಮಕ್ಕಳ ಉದ್ಯಾನ ಪಡೆದ ಚೆನ್ನೈ

Tuesday August 27, 2019,

2 min Read

ಚೆನ್ನೈನಲ್ಲಿರುವ ಅಂಗವಿಕಲ ಮಕ್ಕಳು ಹಿಗ್ಗಲು ಈಗ ಒಂದು ಕಾರಣವಿದೆ. ನಗರ ನಿಗಮವು ಇತ್ತೀಚೆಗೆ ವಿವಿಧ ರೀತಿಯ ವಿಕಲಾಂಗ ಮಕ್ಕಳಿಗಾಗಿ ತನ್ನ ಮೊದಲ ಸಂವೇದನಾ ಉದ್ಯಾನವನ್ನು ಅನಾವರಣಗೊಳಿಸಿದೆ.


ಈ ಉದ್ಯಾನವು, ಅಂತರ್ಗತ ಆಟದ ಮೈದಾನದ ಬಗ್ಗೆ ಗಮನಹರಿಸುತ್ತಿರುವ ಅಂಗವಿಕಲ ಮಕ್ಕಳ ಪಾಲಕರ ಜಾಲದ ಬೆಂಬಲವಿರುವ ಕವಿತಾ ಕೃಷ್ಣಮೂರ್ತಿಯವರ 12 ವರ್ಷದ ಕಿಲಿಕಿಲಿ ಎನ್‌ಜಿಓ ನಿಂದ ವಿನ್ಯಾಸಗೊಂಡಿದೆ. ಇದು ಗ್ರೇಟರ್ ಚೆನ್ನೈ ಕಾರ್ಪೊರೇಶನ್ನಿಂದ ಸ್ಥಾಪಿಸಲ್ಪಟ್ಟಿದ್ದು, ಅಂದಾಜು 1.5 ಕೋಟಿ ವೆಚ್ಚದ ಯೋಜನೆಯಾಗಿದೆ.


ಚಿತ್ರಕೃಪೆ: ದಿ ನ್ಯೂಸ್‌ ಮಿನಿಟ್


ಮೂರು ವರ್ಷಗಳ ಹಿಂದೆ ಕೃಷ್ಣಮೂರ್ತಿಯವರು ಶಾಶ್ವತವಾಗಿ ಚೆನ್ನೈಗೆ ಸ್ಥಳಾಂತರಗೊಂಡಾಗ, ಉದ್ಯಾನವನವನ್ನು ವಿನ್ಯಾಸಗೊಳಿಸಲು ಅಂಗವೈಕಲ್ಯ ಹಕ್ಕುಗಳ ಒಕ್ಕೂಟವು ಅವರನ್ನು ಸಂಪರ್ಕಿಸಿದಾಗ ಈ ಉದ್ಯಾನವನದ ಯೋಜನೆಯನ್ನು ಕಲ್ಪಿಸಲಾಗಿತ್ತು. ವಿನ್ಯಾಸವನ್ನು ಕಾರ್ಯಗತಗೊಳಿಸಲು, ಕಿಲಿಕಿಲಿಯು ಸಿಟಿ ವರ್ಕ್ಸ್ ಎಂಬ ಖಾಸಗಿ ವಾಸ್ತುಶಿಲ್ಪ ಸಂಸ್ಥೆಯ ಸಹಯೋಗವನ್ನು ಪಡೆಯಿತು.


1,529 ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿರುವ ಈ ಉದ್ಯಾನವನವು ಸ್ಯಾಂಥೋಮ್‌ನ 4 ನೇ ಟ್ರಸ್ಟ್ ಲಿಂಕ್ ರಸ್ತೆಯಲ್ಲಿದೆ.


ಉದ್ಯಾನವನವು ಒಳಗೆ ಪ್ರಕಾಶಮಾನವಾದ ಪ್ರಾಥಮಿಕ ಬಣ್ಣಗಳನ್ನು ಹೊಂದಿರುವ ಎರಡು ಸ್ಪರ್ಶ ಕಲಾ ಗೋಡೆಗಳನ್ನು ಹೊಂದಿದೆ. ಮಕ್ಕಳ ಸಂವೇದನಾ ಗ್ರಹಿಕೆ ಹೆಚ್ಚಿಸುವ ಸಲುವಾಗಿ, ಗೋಡೆಗಳನ್ನು ಟೈರ್‌ಗಳು, ಬಳೆಗಳು, ಚಿಪ್ಪುಗಳು ಮತ್ತು ಇತರ ವಸ್ತುಗಳನ್ನು ಬಳಸಿ ವಿನ್ಯಾಸಗೊಳಿಸಲಾಗಿದೆ.


ಚಿತ್ರಕೃಪೆ: ದಿ ಹಿಂದೂ


ಹೆಚ್ಚುವರಿಯಾಗಿ ಮರಳು, ಬೆಣಚುಕಲ್ಲುಗಳು, ಕಟ್ಟಿಗೆ, ನಾರು ಮತ್ತು ಕಾಂಕ್ರೀಟನ್ನು ಮಕ್ಕಳಿಗಾಗಿ ಮೆಟ್ಟಿಲು ಕಲ್ಲುಗಳು ಮತ್ತು ಅನಂತ ನಡಿಗೆ ಮಾರ್ಗಗಳಲ್ಲಿ ಬಳಸಲಾಗುತ್ತದೆ. ಸವಾರಿಗಳು ಮತ್ತು ಸೌಲಭ್ಯಗಳಾದ ಮರಳು ದಿನ್ನೆ ಮತ್ತು ಉಯ್ಯಾಲೆಗಳು ಗಾಲಿಕುರ್ಚಿಯಲ್ಲಿ ಓಡಾಡುವ ಮಕ್ಕಳಿಗೆ ಅವಕಾಶ ಕಲ್ಪಿಸುತ್ತದೆ ಮತ್ತು ದೃಷ್ಟಿಹೀನ, ಸ್ವಲೀನತೆ ಮತ್ತು ಗಾಲಿಕುರ್ಚಿಯಲ್ಲಿ ಓಡಾಡುವ ಮಕ್ಕಳಿಗಾಗಿ ನೆಲದ ಮಟ್ಟದ ಮೆರಿ-ಗೋ-ರೌಂಡ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ.


ಉದ್ಯಾನವನದ ವಿನ್ಯಾಸದ ಕುರಿತು ಕವಿತಾರವರು ದಿ ಹಿಂದೂಗೆ ಹೇಳಿದ್ದು ಹೀಗೆ


“ಚೆನ್ನೈನಂತಹ ನಗರಕ್ಕೆ ಸುಲಭಸಾಧ್ಯವಾದ ಉದ್ಯಾನವನಗಳು ತುಂಬಾ ನಿರ್ಣಾಯಕ ಪಾತ್ರ ವಹಿಸುತ್ತವೆ ಮತ್ತು ನಾವು, ಮಕ್ಕಳು ಮತ್ತವರ ಪಾಲಕರು, ಶಿಕ್ಷಕರು, ಚಿಕಿತ್ಸಕರು ಮತ್ತು ಅಂಗವಿಕಲರ ವಿಭಾಗದ ಅಂಗವಾಗಿರುವ ಹಲವರ ಜತೆ ಚರ್ಚಿಸಿ ಅವರ ಸಲಹೆಗಳನ್ನು ಗಣನೆಗೆ ತೆಗೆದುಕೊಂಡಿವೆ.”


ಯಾರಾದರೂ ಬಿದ್ದರೂ ನೋವಾಗದಂತೆ ನೋಡಿಕೊಳ್ಳಲು ನೆಲವನ್ನು ನಾರಿನಿಂದ ಮುಚ್ಚಲಾಗಿದೆ. ಗಮನ ಕೊರತೆಯ ಹೈಪರ್‌ಆ್ಯಕ್ಟಿವಿಟಿ ಲಕ್ಷಣವಿರುವ(ಎಡಿಎಚ್‌ಡಿ) ಮಕ್ಕಳಿಗೆ ಸಹಾಯವಾಗಲು, ಸ್ಲೈಡ್‌ಗಳು ಮತ್ತು ಕ್ಲೈಂಬರ್‌ಗಳನ್ನು ವಿನ್ಯಾಸಗೊಳಿಸಲಾಗಿದ್ದು ಅವುಗಳನ್ನು ನಡೆಸುವ ಮೂಲಕ ಗಮನವನ್ನು ಕೇಂದ್ರೀಕರಿಸಲು ಮತ್ತು ವ್ಯಾಯಾಮ ಮಾಡಲು ಸಹಾಯಮಾಡುತ್ತದೆ.


ಮೇಲಿನ ಎಡಬಾಗದಿಂದ: ಉದ್ಯಾನದಲ್ಲಿ ಎಡಿಎಚ್‌ಆರ್‌ ಮಕ್ಕಳಿಗಿರುವ ಉಪಕರಣಗಳು, ಹಾಡುವ ಕಲ್ಲು, ವಿಭಿನ್ನ ವಸ್ತುಗಳ ಮೆಟ್ಟಿಲು ಕಲ್ಲುಗಳು ಮತ್ತು ಅನಂತ ನಡಿಗೆ ದಾರಿ | ಚಿತ್ರಕೃಪೆ: ದಿ ನ್ಯೂಸ್‌ ಮಿನಿಟ್‌


ದಿ ನ್ಯೂಸ್‌ ಮಿನಿಟ್‌ನೊಂದಿಗಿನ ಸಂದರ್ಶನದಲ್ಲಿ ಕವಿತಾರವರು ಹೀಗೆ ಹೇಳುತ್ತಾರೆ,


“ಅಲ್ಲೊಂದು ಹಾಡುವ ಕಲ್ಲು ಇದೆ, ಅದು ನಿಮ್ಮ ಕೈಗಳನ್ನು ನೀರಿನಿಂದ ಒದ್ದೆ ಮಾಡಿ ಉಜ್ಜಿದರೆ ಕಂಪಿಸುತ್ತದೆ. ಅದನ್ನು ಆರೋವಿಲ್ಲೆಯ ಕೆಲವು ಹುಡುಗರು ನಿರ್ಮಿಸಿದ್ದು ತುಂಬಾ ಸುಂದರವಾಗಿದೆ. ತಂಗಾಳಿ ಇದ್ದಾಗ ಅಥವಾ ಅವುಗಳನ್ನು ಚಲಿಸಿದಾಗ ಸಂಗೀತವನ್ನು ಮಾಡುವ ಆಟಿಕೆಗಳನ್ನು ಸಹ ಅಳವಡಿಸಲಾಗಿದೆ. ಇವು ಪ್ರಚೋದನೆಗೆ ಸಹಕಾರಿಯಾಗಿದೆ.”


ಇಂತಹ ಅಂಗವಿಕಲ ಸ್ನೇಹಿ ಉದ್ಯಾನವನಗಳು ಪ್ರಾರಂಭವಾದ ಹಿಂದಿನ ಕಾರಣವನ್ನು ವಿವರಿಸುತ್ತಾ, ಕವಿತಾರವರು ಹೀಗೆ ಹೇಳುತ್ತಾರೆ,


“2005 ರಲ್ಲಿ, ನನ್ನ ಅಂದಿನ ನಾಲ್ಕು ವರ್ಷದ ಮಗನನ್ನು ಬೆಂಗಳೂರಿನ ಸಾರ್ವಜನಿಕ ಉದ್ಯಾನವನದಲ್ಲಿ ಆಡಲು ಕರೆದೊಯ್ದಿದ್ದೆ, ಅಂಗವೈಕಲ್ಯ ಹೊಂದಿರುವ ಒಂದು ಮಗು ಕೂಡ ಅಲ್ಲಿ ಆಟವಾಡುತ್ತಿಲ್ಲ ಎನ್ನುವುದನ್ನು ಗಮನಿಸಿದ್ದೆ. ಉದ್ಯಾನದಲ್ಲಿರುವ ವಿನ್ಯಾಸಗಳು ಗಾಲಿ ಚಕ್ರದಲ್ಲಿ ಓಡಾಡುವ ಮಕ್ಕಳಿಗೆ ಅಥವಾ ದೃಷ್ಟಿ ಹೀನರಿಗೆ ದೈಹಿಕ ಪ್ರವೇಶಕ್ಕೆ ಅನುಮತಿ ನೀಡುತ್ತಿರಲಿಲ್ಲ. ಸ್ವಲೀನತೆ ಅಥವಾ ಬೌದ್ಧಿಕ ವಿಕಲಾಂಗ ಮಕ್ಕಳಿಗೆ, ಸಮಾಜದಲ್ಲಿ ಪ್ರವೇಶದ ಸಮಸ್ಯೆ ಇತ್ತು. ಅವರಿಗೆ ಇತರ ಮಕ್ಕಳೊಂದಿಗೆ ಸೇರಲು ಸಾಧ್ಯವಾಗುತ್ತಿರಲಿಲ್ಲ. ಎಲ್ಲಾ ಮಕ್ಕಳಿಗಾಗಿ ಅಂತರ್ಗತ, ಉತ್ತಮವಾಗಿ ವಿನ್ಯಾಸಗೊಳಿಸಲಾದ ಸಾರ್ವಜನಿಕ ಸ್ಥಳಗಳ ತುರ್ತು ಅವಶ್ಯಕತೆಯಿರುವುದನ್ನು ನಾನು ಅರಿತುಕೊಂಡೆ.”


ಅಂಗವಿಕಲ ಸ್ನೇಹಿ ಉದ್ಯಾನ ಹೊಂದಿರುವ ನಗರಗಳ ಸಾಲಿಗೆ ಈಗ ಚೆನ್ನೈ ಕೂಡ ಸೇರಿದೆ. ಬೆಂಗಳೂರಿನಲ್ಲಿ ಇಂತಹ 3 ಉದ್ಯಾನಗಳು ಮತ್ತು ಮಂಗಳೂರು ಹಾಗೂ ನಾಗ್ಪುರದಲ್ಲಿ ತಲಾ ಒಂದು ಉದ್ಯಾನವಿದೆ.