ಫುಡ್ ವೇಸ್ಟ್ ಬೂಸ್ಟ್ ಮಾಡಿ ಕಂಪೋಸ್ಟ್ ಮಾಡೋ ಕಾಲೇಜ್ ಗರ್ಲ್ಸ್..! ರಾಜಧಾನಿ ಕಸದ ಸಮಸ್ಯೆಗೆ ಇಲ್ಲಿದ ಸೊಲ್ಯುಷನ್..!

ಭಾವನಾ ಜಿ

ಫುಡ್ ವೇಸ್ಟ್ ಬೂಸ್ಟ್ ಮಾಡಿ ಕಂಪೋಸ್ಟ್ ಮಾಡೋ ಕಾಲೇಜ್ ಗರ್ಲ್ಸ್..! ರಾಜಧಾನಿ ಕಸದ ಸಮಸ್ಯೆಗೆ ಇಲ್ಲಿದ ಸೊಲ್ಯುಷನ್..!

Saturday January 02, 2016,

3 min Read

image


ನಿಮ್ಮ ಅಪಾರ್ಟ್​ಮೆಂಟ್​​ನಲ್ಲಿ ಫುಡ್​​ವೇಸ್ಟ್​​ ಎಲ್ಲಿ ಹಾಕೋದು ಅಂತಾ ತಿಳಿತಾ ಇಲ್ವಾ? ಬೀದಿ ಬದಿಗೆ ಕಸ ಎಸೆದ್ರೆ ಮತ್ತದೇ ಕೊಳೆತು ನಾರೋದು ತೊಂದರೆ ನಿಮಗೇ ಅಂತ ಭಯವಾ? 50-60 ಕೆಜಿ ಹಸಿ ಕಸ ಉತ್ಪಾನದನೆಯಾಗ್ತಿದೆ, ಆದರೆ ಅದಷ್ಟೂ ಕಸ ವಿಲೆವಾರಿ ಮಾಡೋಕಾಗ್ದೆ ಪರದಾಡ್ತಿದ್ದೀರಾ..? ಡೋಂಟ್ ವರಿ. ನಿಮ್ಮ ಹಸಿ ಕಸದ ಪರಿಹಾರ ನಿಮ್ಮ ಬಳಿಯೇ ಇದೆ ಇದರ ಬಗ್ಗೆ ಗೊತ್ತಾಗ್ಬೇಕು ಅಂದ್ರೆ ಒಮ್ಮೆ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನತ್ತ ಮುಖ ಮಾಡಿ.

ಯೆಸ್, ಮೌಂಟ್ ಕಾರ್ಮೆಲ್ ಕಾಲೇಜ್ ಇಡೀ ಬೆಂಗಳೂರಿಗೆ ಮಾದರಿಯಾಗುವಂತ ಕೆಲಸ ಮಾಡಿದೆ. ಮೌಂಟ್ ಕಾರ್ಮೆಲ್ ಕಾಲೇಜಿನ ಪರಿಸರ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರು, ಪ್ರೊಫೆಸರ್ ಗಳು ಮತ್ತು ಆಡಳಿತ ಮಂಡಳಿ ಕಸವನ್ನು ರಸವನ್ನಾಗಿಸೋ ಅತ್ಯಾಧುನಿಕ ತಂತ್ರಜ್ಞಾನಕ್ಕೆ ಕಾಲೇಜನ್ನೇ ಬಳಸಿಕೊಂಡಿದ್ದಾರೆ.

ಮನೆಯೇ ಮೊದಲ ಪಾಠಶಾಲೆಯಾಗ್ಬೆಕು ಅನ್ನೋದು ಅಕ್ಷರದ ವಿಚಾರದಲ್ಲಿ ಸತ್ಯ. ಈಗ ತ್ಯಾಜ್ಯ ವಿಲೇವಾರಿಯ ವಿಷಯದಲ್ಲೂ ಶಾಲಾ ಕಾಲೇಜುಗಳೇ ಮೊದಲ ಮೆಟ್ಟಿಲಾಗಬೇಕಾದ ಅನಿವಾರ್ಯತೆ ಇದೆ. ಸಿಲಿಕಾನ್ ಸಿಟಿಯಲ್ಲಿ ಕಸದ ಸಮಸ್ಯೆ ಹೆಚ್ಚಾಗಿ ಕಸವನ್ನು ವಿಲೇವಾರಿ ಮಾಡೋದು ಹೇಗೆ ಎನ್ನೋದು ಅಧಿಕಾರಿಗಳಿಗೇ ದೊಡ್ಡ ತಲೆನೋವು. ಹಸಿ ಕಸವನ್ನು ಕಂಪೋಸ್ಟ್ ಮಾಡೋದು ಹಳೆ ಟೆಕ್ನಾಲಜಿ. ಆದರೆ ಹಸಿ ತ್ಯಾಜ್ಯವನ್ನು ಗೊಬ್ಬರ ಮಾಡೋಕೆ ಅಧಿಕಾರಿಗಳು ತೆಗೆದುಕೊಳ್ಳೋ ಟೈಮು ಮೂರ್ನಾಲ್ಕು ತಿಂಗಳು. ಆದರೆ ಮೌಂಟ್ ಕಾರ್ಮೆಲ್ ಕಾಲೇಜು ವಿದ್ಯಾರ್ಥಿನಿಯರು ಒಂದು ನಿದ್ದೆ ಮಾಡಿ ಏಳೋದ್ರೊಳಗೆ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಮಾಡೋ ಟೆಕ್ನಾಲಜಿಯನ್ನು ಕಾಲೇಜು ಆವರಣದೊಳಗೇ ತಂದಿದ್ದಾರೆ. ಯೆಸ್, ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ರೆಡ್ಡೋನ್ಯಾಚುರಾ ಎಂಬ ಯುನಿಟ್ ಅಳವಡಿಸಲಾಗಿದ್ದು 24 ಗಂಟೆಯಿಂದ 72 ಗಂಟೆಯೊಳಗೆ ಹಸಿ ಕಸ ಗೊಬ್ಬರವಾಗಿ ಬಿಡತ್ತೆ.

image


ಏನಿದು ಟೆಕ್ನಾಲಜಿ..?

ಮೌಂಟ್ ಕಾಲೇಜು ಆವರಣದೊಳಗೆ ಸಾಕಷ್ಟು ಮರಗಳಿಂದಾಗಿ ಎಲೆಗಳು ಉದುರಿ ಅಲ್ಲೆಲ್ಲ ಹರಡಿಕೊಳ್ತಿತ್ತು. ಕಾಲೇಜ್ ಕ್ಯಾಂಟಿನ್ ನಲ್ಲಿ ಕೆಜಿಗಟ್ಟಲೆ ಫುಡ್ ವೇಸ್ಟ್ ವೇಸ್ಟ್ ಆಗ್ತಿತ್ತು. ಈ ವೇಸ್ಟ್ ಫುಡ್ ಗಳನ್ನು ವೇಸ್ಟ್ ಮಾಡದೇ ಗಿಡಿಗಳಿಗೆಲ್ಲ ಬೂಸ್ಟ್ ಕೊಡುವಂತ ಕಂಪೋಸ್ಟ್ ಯಾಕೆ ಮಾಡಬಾರದು ಅಂತ ವಿದ್ಯಾರ್ಥಿನಿಯರು ಙಂಡ್ ಆಡಳಿತ ಮಂಡಳಿ ಕೈ ಹಾಕಿದ್ದೇ ತಡ ಕಂಪೋಸ್ಟ್ ಘಟಕವೊಂದು ತಲೆ ಎತ್ತಿದೆ.

ಈ ಯುನಿಟ್ ಸ್ಪೆಷಾಲಿಟಿ ಅಂದ್ರೆ 24 ರಿಂದ 72 ಗಂಟೆಯೊಳಗೆ ಹಸಿಕಸ ಕಂಪೋಸ್ಟ್ ಆಗತ್ತೆ. ಸುಮಾರು 250 ಕೆಜಿ ಸಾಮರ್ಥ್ಯದ ಯುನಿಟ್ ನಲ್ಲಿ ಥರ್ಮೋಫಿಲಕ್ ಬ್ಯಾಕ್ಟಿರಿಯಾಗಳಿರುತ್ವೆ. ಸಾ ಡಸ್ಟ್ ಜೊತೆಗೆ ಹಸಿ ತ್ಯಾಜ್ಯವನ್ನು ಈ ಮಷಿನ್ ನಲ್ಲಿ ಹಾಕಿದ್ರೆ ಸಾಕು, ಈ ಬ್ಯಾಕ್ಟಿರಿಯಾಗಳು ಫುಡ್ ವೇಸ್ಟ್ ಅನ್ನು ತಮ್ಮ ಫುಡ್ ಆಗಿ ತಿಂದು ಅದನ್ನೆಲ್ಲ ಗೊಬ್ಬರವನ್ನಾಗಿ ಮಾಡುತ್ವೆ, ಈ ಥರ್ಮೋಫಿಲಿಕ್ ಬ್ಯಾಕ್ಟರಿಯಾಗಳಿಗೆ ತುಂಬ ಇಷ್ಟವಾದದ್ದು ಹೆಸರೇ ಹೇಳುವಂತೆ ಉಷ್ಣತೆ. ಸುಮಾರು 250 ಡಿಗ್ರಿ ಸೆಲ್ಸಿಯಸ್ ಉಷ್ಣತೆಯನ್ನು ನೀಡಿದ್ರೆ ಸಾಕು, ಬ್ಯಾಕ್ಟರಿಯಾಗಳೆಲ್ಲ ಡಬಲ್ ಆಗಿ, ಒಂದಕ್ಕೊಂದು ಹುಟ್ಟುತ್ತಾ ಕಸವನ್ನೆಲ್ಲ ಗೊಬ್ಬರವನ್ನಾಗಿ ಪರಿವರ್ತಸುತ್ತವೆ.

ಶೇ.100 ರಷ್ಟು ಹಸಿ ತ್ಯಾಜ್ಯ ಯುನಿಟ್ ನಲ್ಲಿ ಹಾಕಿದರೆ ಅದು ಶೇ 10 ಕ್ಕೆ ಇಳಿಕೆಯಾಗತ್ತೆ. ಅಂದ್ರೆ ಕಂಡ ಕಂಡಲ್ಲಿ ಎಸೆಯುವ 100 ರಷ್ಟು ಹಸಿ ಕಸ ನೀವು ಒಂದು ನಿದ್ದೆ ಮಾಡಿ ಮುಗಿಸುವಷ್ಟರಲ್ಲಿ 10 ರಷ್ಟಕ್ಕೆ ಇಳಿಕೆಯಾಗಿ ಅತ್ಯುಪಯುಕ್ತ ಗೊಬ್ಬರವೂ ಆಗತ್ತೆ ಎನ್ನೋದೇ ಇದರ ಸ್ಪೆಷಾಲಿಟಿ.

ವಿದ್ಯಾರ್ಥಿನಿಯರು ಏನ್ ಮಾಡಿದ್ರು ಗೊತ್ತಾ..?

ಸದ್ಯ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ 30 ರಿಂದ 40 ಕೆಜಿಯಷ್ಟು ಹಸಿ ಕಸ ಉತ್ಪಾದನೆಯಾಗತ್ತೆ. ಕಾಲೇಜು ಆವರಣದೊಳಗೆ ಪ್ಲಾಸ್ಟಿಕ್ ಬಾಟಲ್ ಗಳನ್ನು ಬಳಸಲೇಬಾರ್ದು ಅಂತ ಖಡಕ್ ರೂಲ್ಸ್ ಆಗಿದೆ. ಇನ್ನು ವೆಟ್ ವೇಸ್ಟ್, ಡ್ರೈ ವೇಸ್ಟ್ ಮತ್ತು ಅನಿವಾರ್ಯವಾಗಿ ಉತ್ಪಾದೆನೆಯಾಗೋ ವೇಸ್ಟ್ ಎಲ್ಲವನ್ನೂ ಪ್ರತ್ಯೇಕ ಡಬ್ಬಗಳಲ್ಲೇ ಹಾಕ್ಬೇಕು. ಅಂಥ ಫುಡ್ ವೇಸ್ಟ್ ಗಳನ್ನೆಲ್ಲ ತಂದು ವಿದ್ಯಾರ್ಥಿನಿಯರೇ ಈ ಮಷಿನ್ ನಲ್ಲಿ ಹಾಕ್ತಾರೆ. ಅದನ್ನು ನಿರ್ವಹಣೆ ನೋಡಿಕೊಳ್ಳೋದಕ್ಕೆ ನಾಗರಾಜ್ ಎಂಬ ಅನುಭವಿ ವರ್ಕ್ ಮಾಡ್ತಿದ್ದಾರೆ. ಕಾಲೇಜ್ ವೇಸ್ಟ್ ಮಾತ್ರವಲ್ಲ ತಮ್ಮ ತಮ್ಮ ಮನೆಯಿಂದಲೂ ಕೂಡ ಹಸಿ ಕಸಾನ ತಂದು ವಿದ್ಯಾರ್ಥಿನಿಯರು ಮಷಿನ್ ಒಳಗೆ ತುರುಕಿ ಕಂಪೋಸ್ಟ್ ಮಾಡ್ತಾರೆ. ಹೀಗೆ ವಿದ್ಯಾರ್ಥಿನಿಯರೇ ಸೇರಿ ಇಲ್ಲಿ ತನಕ 40 ಕೆಜಿಗೂ ಹೆಚ್ಚು ಫುಡ್ ವೇಸ್ಟ್ ಅನ್ನು ಕಂಪೋಸ್ಟ್ ಮಾಡಿ ಮಾರಾಟವನ್ನೂ ಮಾಡಿದ್ದಾರೆ.

ಇಷ್ಟೇ ಅಲ್ಲ ಕಣ್ರಿ...?

ಮೌಂಟ್ ಕಾರ್ಮೆಲ್ ಕಾಲೇಜ್ ಈಗ ಕಂಪೋಸ್ಟ್ ಮೇನಿಯಾದಲ್ಲಿ ಮುಳುಗಿ ಹೋಗಿದೆ. ಒಂದೇ ಒಂದು ಚೂರು ವೆಟ್ ವೇಸ್ಟ್ ಕೂಡ ಇಲ್ಲಿ ವೇಸ್ಟ್ ಆಗೋದಿಲ್ಲ. ವೇಸ್ಟ್ ನಿಂದಲೂ ಬೂಸ್ಟ್ ಮಾಡಬಹುದು ಎನ್ನೋದನ್ನು ವಿದ್ಯಾರ್ಥಿನಿಯರೇ ಕಂಡುಕೊಂಡಿದ್ದಾರೆ.

“ನಮ್ಮ ಎಲ್ಲ ಫ್ರೆಂಡ್ಸ್ ಗಳಿಗೆ , ವಿದ್ಯಾರ್ಥಿನಿಯರಿಗೆ ಕಸವನ್ನು ವೇಸ್ಟ್ ಮಾಡಬಾರದು ಅಂತ ಮೂಲದಿಂದಲೇ ತಿಳಿ ಹೇಳಿದ್ದೇವೆ. ಇಂಥ ಘಟಕಗಳನ್ನು ಬೆಂಗಳೂರಿನಲ್ಲಿ ಎಲ್ಲರೂ ಅಳವಡಿಸಿಕೊಂಡರೆ ಕಸದ ಸಮಸ್ಯೆಯೇ ಇರೋದಿಲ್ಲ. ಎಲ್ಲೆಲ್ಲೋ ಫುಡ್ ವೇಸ್ಟ್ ಗಳನ್ನು ಎಸೆಯೋ ಬದಲು ಅದನ್ನೇ ಕಂಪೋಸ್ಟ್ ಮಾಡಿಕೊಂಡರೆ ನಮಗೂ ಲಾಭ. ನಮ್ಮ ಕಸದ ಸಮಸ್ಯೆಯೂ ಪರಿಹಾರ ಆಗತ್ತೆ” ಅಂತಾರೆ ವಿದ್ಯಾರ್ಥಿನಿ ರಿನಿ.