ಆಟೋಮೊಬೈಲ್ ಕ್ಷೇತ್ರದ ಅತ್ಯದ್ಭುತ ಆವಿಷ್ಕಾರ- ದುರ್ಗಮ ಪ್ರದೇಶಗಳಲ್ಲಿ ಚಲಿಸಬಲ್ಲ ಸ್ಪೈಡರ್ ಕಾರ್
ವಿಶ್ವಾಸ್ ಭಾರಾಧ್ವಾಜ್
ರಸ್ತೆಯಲ್ಲಿ ಮಾತ್ರ ಚಲಿಸುವ ಕಾರ್ ಬಗ್ಗೆ ನೀವು ಕೇಳಿದ್ದೀರಾ, ನೋಡಿದ್ದೀರಾ ಆದ್ರೆ ಕಾಡುಮೇಡುಗಳಲ್ಲಿ, ಬೆಟ್ಟಗುಡ್ಡಗಳಲ್ಲಿ ಸರಾಗವಾಗಿ ಚಲಾಯಿಸಬಲ್ಲ ಕಾರ್ ಅನ್ನು ಎಲ್ಲಾದ್ರೂ ನೋಡಿದ್ದೀರಾ? ಅಂತದ್ದೊಂದು ಅದ್ಭುತ ಆವಿಷ್ಕಾರ ನಡೆದಿದೆ. ಆಟೋಮೊಬೈಲ್ ಕ್ಷೇತ್ರಕ್ಕೆ ಹೊಸದಾಗಿ ಸೇರ್ಪಡೆಯಾಗಿದೆ ಸ್ಪೈಡರ್ ಕಾರ್. ಗುಡ್ಡವಿರಲಿ ಹೊಂಡವಿರಲಿ, ಹಳ್ಳ ದಿಣ್ಣೆಗಳಿರಲಿ, ಉಬ್ಬು-ತಗ್ಗುಗಳಿರಲಿ, ಕೊನೆಗೆ ನೀರಿನ ಹರಿವಿನ ಕೊರಕಲೇ ಇರಲಿ ಈ ಕಾರು ಎಲ್ಲೆಡೆ ಚಲಿಸುತ್ತದೆ. ಜಾಗತಿಕ ಆಟೋಮೊಬೈಲ್ ಎಂಜಿನಿಯರ್ಗಳ ಸೃಜನಾತ್ಮಕ ಸಂಶೋಧನೆಗೆ ಮತ್ತೊಂದು ಕೊಂಡಿ ಸೇರಿಕೊಂಡಂತಾಗಿದೆ. ಈಗ ಆಟೋಮೊಬೈಲ್ ಕ್ಷೇತ್ರಕ್ಕೆ ಹೊಸದಾಗಿ ಸೇರ್ಪಡೆಯಾಗಿದೆ ವಿಶೇಷಗಳಿಂದಲೇ ಆವೃತವಾದ ಸ್ಪೈಡರ್ ಕಾರ್. ಅತ್ಯಂತ ವಿನೂತನವಾಗಿ ಸಿದ್ಧಪಡಿಸಲಾಗಿರುವ ಈ ಸ್ವಿನ್ಕಾರ್ ಅನ್ನುವ ಅದ್ವಿತೀಯ ಸಂಶೋಧನೆಯನ್ನು ಮಾಡಿರುವ ಫ್ರೆಂಚ್ ಸಂಸ್ಥೆಯೇ ಮೆಕಾನ್ರಾಕ್
ಜೇಡದ ಕೈಗಳಂತೆ ಪ್ರತ್ಯೇಕ ವೀಲ್ಗಳನ್ನು ಹೊಂದಿರುವ ಈ ಕಾರ್ ಗುಡ್ಡಗಾಡು ಪ್ರದೇಶಗಳಲ್ಲಿ ಚಲಾಯಿಸಲು ಅನುಕೂಲವಾಗುವಂತೆ ನಿರ್ಮಿಸಲಾಗಿದೆ. ಗುಡ್ಡ-ಹೊಂಡ, ಹಳ್ಳ-ದಿಣ್ಣೆ, ಉಬ್ಬು-ತಗ್ಗು, ನೀರಿನ ಹರಿವಿನ ಕೊರಕಲು ಹೀಗೆ ಅತೀ ದುರ್ಗಮ ಪ್ರದೇಶಗಳಲ್ಲೂ ಸ್ಪೈಡರ್ ಕಾರು ಸರಾಗವಾಗಿ ಚಲಿಸುತ್ತದೆ. ಸ್ವತಂತ್ರ್ಯವಾಗಿ ಕಾರ್ಯ ನಿರ್ವಹಿಸಬಲ್ಲ ಇದರ ಅಂಗಗಳು ಯಾವುದೇ ಪ್ರದೇಶದಲ್ಲಾದರೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ. ಇದನ್ನು ಆಟೋಮೊಬೈಲ್ ಕ್ಷೇತ್ರ ವಿಶೇಷ ಸ್ಪೈಡರ್ ಮೆಕಾನಿಸಂ ಎಂದೇ ಗುರುತಿಸುತ್ತದೆ.
ಈ ಸ್ವಿನ್ಕಾರ್, ರಸ್ತೆಯಲ್ಲಿ ಹೋದಷ್ಟೇ ಸರಾಗವಾಗಿ ದುರ್ಗಮ ಬೆಟ್ಟಗುಡ್ಡ, ಕಲ್ಲು ಕೊರಕಲು ಹಾಗೂ ಹಳ್ಳ ದಿಣ್ಣೆಗಳಲ್ಲಿಯೂ ಓಡಾಡುತ್ತದೆ. ಪ್ರತಿಯೊಂದು ಚಕ್ರಕ್ಕೂ ಪ್ರತ್ಯೇಕವಾದ ಆರ್ಮ್ ಇದ್ದು, ಪ್ರತ್ಯೇಕ ಮೋಟಾರ್ ಹಾಗೂ ಸಸ್ಪೆನ್ಷನ್ ಹೊಂದಿದೆ. ಈ ಕಾರ್ನ ಬಾಡಿ ಮಾಮೂಲಿ ಕಾರ್ನಂತೆ ಇರದೆ ಹೊರನೋಟಕ್ಕೆ ಟೂ ವ್ಹೀಲರ್ನಂತೆ ಕಾಣಿಸುತ್ತದೆ. ಇದನ್ನು ಚಲಾಯಿಸವವರಿಗೆ ದ್ವಿಚಕ್ರವಾಹನ ಚಲಾಯಿಸಿದ ಅನುಭವವಾಗುತ್ತದೆ.
ಇಕೋಫ್ರೆಂಡ್ಲಿ ಸ್ವಿನ್ಕಾರ್
ಈ ಸ್ವಿನ್ಕಾರ್ ಸಂಪೂರ್ಣ ಎಮಿಷನ್ ಫ್ರೀಯಾಗಿದ್ದು ಇಕೋ ಫ್ರೆಂಡ್ಲಿ ಎನಿಸಿದೆ. ಗುಡ್ಡಗಾಡು, ಕಣಿವೆ ಪ್ರದೇಶ, ದಟ್ಟಾರಣ್ಯ, ವಿಶಾಲ ಬಯಲುಗಳು, ಸಮುದ್ರ ತೀರ ಹೀಗೆ ಎಲ್ಲೆಂದರಲ್ಲಿ ಸುಲಭವಾಗಿ, ಸರಾಗವಾಗಿ, ಸರಳವಾಗಿ ವಾತಾವರಣ ಕಲುಷಿತಗೊಳ್ಳದಂತೆ ಈ ಕಾರ್ ಸಿದ್ಧಪಡಿಸಲಾಗಿದೆ. ಇದು ಎಮಿಷನ್ ಫ್ರೀಯಾಗಿರುವ ಜೊತೆ ಶಬ್ಧಮಾಲಿನ್ಯವನ್ನೂ ತಡಗಟ್ಟುತ್ತದೆ.
ಇದರ ಇನ್ನೊಂದು ವಿಶೇಷತೆ ಎಂದರೆ ಇದರ ಬ್ಯಾಟರಿ. ಡ್ರೈವ್ ಮಾಡುತ್ತಿದ್ದ ಅವಧಿಯಲ್ಲಿ ನಾಲ್ಕು ಗಂಟೆಗಳ ಬ್ಯಾಟರಿ ಬ್ಯಾಕ್ಅಪ್ ಸಮಯಾವಕಾಶವನ್ನು ಇದು ಹೊಂದಿದೆ. ಇದರ ನಾಲ್ಕು ವೀಲ್ಗಳೂ ಪ್ರತ್ಯೇಕವಾಗಿ ಮಡಚಿ ವಿಸ್ತಾರಗೊಳ್ಳಬಲ್ಲ, ಜೇಡದ ಅಂಗದಂತೆ ರೂಪಿಸಲಾಗಿದೆ. ಒಂದೇ ಸಮಯದಲ್ಲಿ ನಾಲ್ಕು ಚಕ್ರಗಳೂ ಏಕಕಾಲದಲ್ಲಿಯೇ ಕಾರ್ಯ ನಿರ್ವಹಿಸುತ್ತವೆ. ಪ್ರತೀ ಆರ್ಮ್ ಹಾಗೂ ಚಕ್ರಗಳು ಸ್ವತಂತ್ರವಾಗಿ ಮೂವ್ ಆಗುವ ಸಾಮರ್ಥ್ಯ ಇದಕ್ಕಿದೆ. ಪ್ರತೀ ಆರ್ಮ್ ವೀಲ್ಗಳೂ 1ರಿಂದ 1.5 ಕಿಲೋ ವ್ಯಾಟ್ ಎಲೆಕ್ಟ್ರಿಕ್ ಮೋಟಾರ್ ಹೊಂದಿವೆ. 2ರಿಂದ 6 ಕಿಲೋ ವ್ಯಾಟ್ ಎಲೆಕ್ಟ್ರಿಕ್ ಬ್ಯಾಟರಿಗಳನ್ನೂ ಹೊಂದಿದೆ. ಸದ್ಯಕ್ಕೆ ಡ್ರೈವಿಂಗ್ ಸೀಟ್ ಒಂದನ್ನು ಹೊಂದಿರುವ ಇದರಲ್ಲಿ ಡ್ರೈವ್ ಮಾಡಲು ಸ್ಟೈರಿಂಗ್ ಇದೆ. ಮುಂಬರುವ ದಿನಗಳಲ್ಲಿ ಎರಡು ಸೀಟ್ ಹಾಗೂ ಜಾಯ್ಸ್ಟಿಕ್ಗಳನ್ನು ಅಳವಡಿಸಬೇಕು ಅನ್ನೋದು ಇದರ ವಿನ್ಯಾಸಕರ ಯೋಚನೆಯಾಗಿದೆ. ಈಗ ಒಂದು ಸೀಟು ಹೊಂದಿರುವ ಈ ಸ್ಪೈಡರ್ ಕಾರ್ಗೆ ಎರಡು ಸೀಟ್ ಅಳವಡಿಸುವ ಜೊತೆಗೆ ಜಾಯ್ಸ್ಟಿಕ್ ಬಳಸಿ ನಿಯಂತ್ರಿಸುವ ತಂತ್ರಜ್ಞಾನ ನಿಮಿಸಲು ಸಂಶೋಧನೆಗಳು ನಡೆಯುತ್ತಿವೆ.
2015ರಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ ಈ ವಿಶೇಷ ಕಾರ್
ಬಹು ಹಿಂದೆಯೇ ಆರಂಭವಾದ ಈ ಕಾರ್ನ ವಿನ್ಯಾಸ ಹಾಗೂ ಅಭಿವೃದ್ಧಿ 2014ರಲ್ಲಿ ಪರಿಪೂರ್ಣ ಆಕಾರ ತಳೆದಿತ್ತು. 2015ರ ಅಂತ್ಯದಲ್ಲಿ ಮಾರುಕಟ್ಟೆಯಲ್ಲಿ ಸ್ಪೈಡರ್ ಕಾರ್ ಲಭ್ಯವಿರುತ್ತದೆ ಅನ್ನುವ ಮಾಹಿತಿಯನ್ನೂ ನೀಡಲಾಗಿತ್ತು. ಕಗ್ಗಾಡು ಹಾಗೂ ದುರ್ಗಮ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಬಲ್ಲ ಮಿಲಿಟರಿ ನೆಲೆಗಳಿಗೆ ನೆರವಾಗುವಂತೆ ಈ ಸ್ಪೈಡರ್ ಕಾರ್ನ್ನು ವಿನ್ಯಾಸಗೊಳಿಸಲಾಗಿದೆ. ಜೊತೆಗೆ ಅಂಗವೈಕಲ್ಯ ಹೊಂದಿರುವ ವಿಶೇಷ ಪರಿಣಿತರೂ ಇದನ್ನು ಬಳಸಬಹುದಾಗಿದೆ ಅನ್ನುವುದು ಇದರ ನಿರ್ಮಾತೃರ ವಿಶ್ವಾಸ. ಕಳೆದ ಏಪ್ರಿಲ್ನಲ್ಲಿ ನಡೆದ ಜಿನೇವಾ ಇನ್ನೋವೇಶನ್ ಫೇರ್ನಲ್ಲಿ ಈ ಸ್ಪೈಡರ್ ಕಾರ್ ಪ್ರಶಸ್ತಿಯನ್ನೂ ಗಳಿಸಿಕೊಂಡಿತ್ತು. ಅತೀ ಕಠಿಣ ಪ್ರದೇಶಗಳಲ್ಲೂ ಚಲಿಸುವ ಈ ಸ್ಪೈಡರ್ ಕಾರ್ ಅನ್ನು ದುರ್ಗಮ ಪ್ರದೇಶಗಳಲ್ಲಿ ದೇಶಕಾಯುವ ಮಿಲಿಟರಿಗೆ ನೀಡಬೇಕು ಅನ್ನೋದು ಇದರ ವಿನ್ಯಾಸಕರ ಆಶಯವಾಗಿದೆ. 2015ರ ಅಂತ್ಯದ ವೇಳೆಗೆ ಈ ಕಾರ್ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದೆ ಅನ್ನುವುದು ಇದನ್ನು ವಿನ್ಯಾಸಗೊಳಿಸಿರುವ ಎಂಜಿನಿಯರ್ಗಳ ಭರವಸೆ.