ಸಾವಾಧಾನವಾಗಿ ಊಟ ಮಾಡಿ...ಹೊಟ್ಟೆ ತುಂಬಿಸಿಕೊಂಡ ಸಂತೋಷವಾಗಿರಿ...!
ಆರಾಧ್ಯ
ಇತ್ತೀಚಿನ ದಿನಗಳಲ್ಲಿ ಸಿಲಿಕಾನ್ ಸಿಟಿ ಮಂದಿ ಹೋಟೆಲ್ ಉದ್ಯಮಕ್ಕೆ ಹೆಚ್ಚು ಉತ್ಸಾಹ ತೋರುತ್ತಿದ್ದಾರೆ. ಅದ್ರಲ್ಲೂ ವಿದ್ಯಾವಂತರು ಈ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳಬೇಕು ಎಂದು, ತಾವು ಮಾಡುತ್ತಿರುವ ಕೆಲಸವನ್ನು ಬಿಟ್ಟು, ಹೋಟೆಲ್ ಉದ್ಯಮಕ್ಕೆ ಕೈಹಾಕುತ್ತಿದ್ದಾರೆ. ಅದಕ್ಕೆ ಒಂದು ಉದಾಹರಣೆ ಇಲ್ಲಿದೆ ನೋಡಿ.
ಇಂಜಿನಿಯರ್ ವಿದ್ಯಾಭ್ಯಾಸವನ್ನ ಮುಗಿಸಿ ವಿಪ್ರೋದಲ್ಲಿ ಕೆಲಸಕ್ಕೆ ಸೇರಿದ ಬೆಂಗಳೂರಿನ ಮೂಲದ ಅಭಿಲಾಷೆಗೆ ಹೋಟೆಲ್ ಉದ್ಯಮದಲ್ಲಿ ಹೆಚ್ಚಿನ ಆಸಕ್ತಿ. ವಿಪ್ರೋದಲ್ಲಿ ಕೆಲಸ ಸಿಕ್ಕರು ಕೂಡ, ಅಭಿಲಾಷ್ ಗೆ ಆ ಕೆಲಸದಲ್ಲಿ ತೃಪ್ತಿ ಇರಲ್ಲಿಲ್ಲ. ಈ ಬಗ್ಗೆ ಹೆಂಡತಿ ದರ್ಶನ್ ಬಾವಾ ಜೊತೆ ಚರ್ಚೆ ಮಾಡಿದಾಗ ಅವರು ಕೂಡ, ಹೋಟೆಲ್ ಉದ್ಯಮ ಪ್ರಾರಂಭ ಮಾಡೋಣ ಎಂದು ಸಲಹೆ ನೀಡಿದ್ದರು. ಆದ್ರೆ ನಾವು ಮಾಡುವ ಹೋಟೆಲ್ ಸಾಮಾನ್ಯವಾಗಿ ಬೇರೆ ಹೋಟೆಲ್ ಮಾದರಿಯಲ್ಲಿ ಇರಬಾರದು ಎಂದು ಯೋಚಿಸಿದ್ದರು. ವಿಪ್ರೋದಲ್ಲಿ ಕೆಲಸ ಮಾಡುತ್ತಿದ ಅಭಿಲಾಷೆ, ದರ್ಶನ್ ಎಚ್ಡಿಎಫ್ಸಿ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರು ವೃತ್ತಿ ಬದಲಾಯಿಸಿ ಅನಿಮಾ ಮಧ್ವ ಭವನ ಹೋಟೆಲ್ ಆರಂಭಮಾಡಿದ್ರು. ಅದು ಮೈಸೂರಿನಲ್ಲಿ .
ಹೌದು ಮೈಸೂರಿನ ಕಾಳಿದಾಸ ರಸ್ತೆಯಲ್ಲಿ ಮಧ್ವಭವನ ಹೋಟೆಲ್ ತಲೆಯೆತ್ತಿತ್ತು. ವಿದೇಶಿ ಪ್ರವಾಸಿಗರಿಂದ ಹಿಡಿದು ಮೈಸೂರಿನ ತಿಂಡಿ ಪ್ರಿಯರವರೆಗೂ ಎಲ್ಲರ ಮೆಚ್ಚುಗೆಯನ್ನ ಪಡೆದ ಹೋಟೆಲ್, ಇದೀಗ ಬೆಂಗಳೂರಿನ ಜಯನಗರದಲ್ಲಿ ಹೊಸ ಶಾಖೆಯನ್ನ ಪ್ರಾರಂಭ ಮಾಡಿದೆ. ಅಂತಹ ವಿಶೇಷತೆ ಏನಿದೇ ಈ ಹೋಟೆಲ್ ನಲ್ಲಿ ಅಂತೀರಾ... ಖಂಡಿತಾ ವಿಶೇಷತೆ ಇದೆ ಕಣ್ರೀ..
ಚಪ್ಪಲಿ ಬಿಟ್ಟು ಒಳಗೆ ಬನ್ನಿ, ಇದು ಮಧ್ವ ಭವನ. ಹಾಗಂತ ಹೇಳಿದ ತಕ್ಷಣ, ನಾವು ಯಾವುದೋ ದೇವಾಲಯದ ಕುರಿತು ಹೇಳುತ್ತಿದ್ದೇವೆ ಅಂದುಕೊಳ್ಳಬೇಕಾಗಿಲ್ಲ. ಮಧ್ವ ಭವನ ಬೆಂಗಳೂರಿನಲ್ಲಿ ಇತೀಚೆಗೆ ಶುರುವಾದ ಊಟದ ಹೋಟೆಲ್. ನಾಲ್ಕು ವರುಷಗಳ ಹಿಂದೆ ಮೈಸೂರಿನ ಕಾಳಿದಾಸ ರಸ್ತೆಯಲ್ಲಿ ಆರಂಭವಾದ ಮಧ್ವ ಭವನ, ಇದೀಗ ಬೆಂಗಳೂರಿಗೂ ಬಂದಿದೆ. ಬಾಳೆ ಎಲೆಯಲ್ಲಿ ಪಾಯಸದೂಟ, ಹೋಳಿಗೆಯೂಟ ಹಬ್ಬದೂಟವನ್ನು ನೀಡುತ್ತಿದೆ. ನೀವು ಏಕಾಂಗಿಯಾಗಿದ್ದರೆ, ಮನೆಯೂಟದ ಸವಿಗೋಸ್ಕರ ಮಧ್ವ ಭವನಕ್ಕೆ ಹೋಗಬಹುದು. ಸಂಸಾರ ಸಮೇತ ಸೇರಿ ಹಬ್ಬದೂಟ ಸವಿದು ಸಂಭ್ರಮ ಪಡಬಹುದು.
ಅನಿಮಾ ಮಧ್ವ ಭವನ ಹೋಟೆಲ್ ಬೇರೆ ಹೋಟೆಲ್ ಗಳಿಗಿಂತ ಬಹಳ ಸ್ಪೆಷಲ್ ಹೋಟೆಲ್ . ಬೇರೆ ಹೋಟೆಲ್ ಗಳಿಗೆ ಸ್ಟೈಲ್ ಆಗಿ ಚಪ್ಪಲಿಯನ್ನು ಹಾಕಿಕೊಂಡು ಚೇರ್ ಮೇಲೆ ಕುಳಿತು ನಮಗೆ ಬೇಕಾದ ಊಟವನ್ನ ಆರ್ಡರ್ ಮಾಡುತ್ತೇವೆ. ಆದ್ರೆ ಮಧ್ವ ಭವನ ಹೋಟೆಲ್ ಬಹಳ ಸಂಪ್ರಾದಾಯಿಕ ಹೋಟೆಲ್, ಈ ಹೋಟೆಲ್ ಹೋಗಿ ನೀವು ಊಟ ಮಾಡಬೇಕು ಅಂದ್ರೆ, ತಮ್ಮ ಚಪ್ಪಲಿಯನ್ನು ಹೊರಗೆ ಬಿಡಬೇಕು, ಜೊತೆಗೆ ಕೆಳಗೆ ಚಾಪೆ ಮೇಲೆ ಕುಳಿತು ಊಟ ಮಾಡಬೇಕು.. ಅದು ಮೈಸೂರು ಶೈಲಿಯ ಬ್ರಾಹ್ಮಣರ ಊಟ. ಇನ್ನು ಸಂಪೂರ್ಣ ಹೋಟೆಲ್ ನನ್ನು ಗ್ರಾಮೀಣ ಸೊಗಡನಲ್ಲಿ ಅಲಂಕಾರವನ್ನ ಮಾಡಿದ್ದಾರೆ.. ಹೋಟೆಲ್ ಪೂರ್ತಿ ಚಾಪೆ ಹಾಸಿ, ಗೋಡೆಯ ಮೇಲೆ ರಂಗೋಲಿ ಬಿಡಿಸಿ ಹೀಗೆ ಪ್ರತಿಯೊಂದು ಗ್ರಾಮೀಣ ಸೊಗಡನ್ನು ಬಿಂಬಿಸುತ್ತದೆ ಈ ಹೋಟೆಲ್.
ಈ ಮಧ್ವ ಭವನ ಹೋಟೆಲ್ ನಲ್ಲಿ ಸಂಪೂರ್ಣ ಮೈಸೂರು ಶೈಲಿಯ ಬ್ರಾಹ್ಮಣರ ಊಟ ಸಿಗುತ್ತದೆ.. ಬಾಳೆಎಲೆಯ ಮೇಲೆ ಬಡಿಸುವ ಊಟ, ಅತ್ಯಂತ ಶುದ್ಧವಾಗಿರುತ್ತದೆ. ಮನೆಯಲ್ಲೇ ತಯಾರಿಸುವ ಊಟದಂತೆ ಇರುತ್ತದೆ. ಅದೇ ರುಚಿ, ಅದೇ ಶುಚಿ, ಅದೇ ಗುಣಮಟ್ಟ, ಹಬ್ಬದೂಟ ಬಯಸುವವರಿಗೆ ಈ ಮಧ್ವ ಭವನ ಊಟ ಖಂಡಿತಾ ರುಚಿಸುತ್ತದೆ. ಇನ್ನು ಕಡ್ಡಾಯವಾಗಿ ಎಸೆನ್ಸ್, ಸೋಡಾ, ಡಾಲ್ಡಾ, ಪಾಮಾಯಿಲ್ ಬಳಸೋದಿಲ್ಲ.. ಸಾಂಪ್ರದಾಯಿಕವಾಗಿ ಕೆಳಗೆ ಕೂತು ಊಟ ಮಾಡಬಹುದು. ವಯಸ್ಸಾದವರಿಗೆ ಮೇಲೆ ಕೂತು ಊಟ ಮಾಡುವುದಕ್ಕೂ ವ್ಯವಸ್ಥೆ ಇದೆ. ದಿನದೂಟಕ್ಕೆ 160 ರುಪಾಯಿ, ವಾರಾಂತ್ಯದ ಊಟಕ್ಕೆ 190 ರುಪಾಯಿ. ದಿನವೂ ಪಾಯಸದೂಟ ಇರುತ್ತದೆ. ವಾರಾಂತ್ಯದ ಊಟದಲ್ಲಿ ಹೋಳಿಗೆ ಇರುತ್ತದೆ. ಬಿಸಿಬಿಸಿ ಊಟಕ್ಕೆ ಮಿತಿಯಿಲ್ಲ. ನಿಧಾನವಾಗಿ ಬಡಿಸುತ್ತಾರೆ, ಸಾವಧಾನವಾಗಿ ಊಟ ಮಾಡಿ ಬರಬಹುದು.
ಜಯನಗರ ಎಂಟನೇ ಬ್ಲಾಕ್, ಮೊದಲನೇ ಮುಖ್ಯರಸ್ತೆಯಲ್ಲಿರುವ ಜೆಎಸ್ಎಸ್ ಆಡಿಟೋರಿಯಮ್ ಎದುರಲ್ಲೇ ಅನಿಮಾ ಮಧ್ವ ಭವನ ಇದೆ. ಮಧ್ಯಾಹ್ನ 12ಗಂಟೆ ಯಿಂದ ಒಂದೂವರೆ ತನಕ ಊಟ. ಸಂಜೆ ಐದು ಗಂಟೆಯಿಂದ ರಾತ್ರಿಯ ವರೆಗೂ ಹೋಟೆಲ್ ತೆರೆದಿರುತ್ತದೆ.. ಬರೀ ಊಟ ಮಾತ್ರವಲ್ಲದೇ ಹಯಗ್ರೀವ, ಗೊಜ್ಜವಲಕ್ಕಿ, ರವಾ ಬಾತ್- ಹೀಗೆ ರುಚಿಕಟ್ಟಾದ ತಿಂಡಿ. ಅವೆಲ್ಲವನ್ನು ಮೀರಿಸುವಂತೆ ಫಿಲ್ಟರ್ ಕಾಫಿ ಕೂಡ ಲಭ್ಯವಿದೆ..
ಮೈಸೂರು ಶೈಲಿಯ ಬ್ರಾಹ್ಮಣರ ಊಟ ಕೊಡುತ್ತೇವೆ, ಬಾಳೆಯೆಲೆಯಲ್ಲೇ ಬಡಿಸುತ್ತೇವೆ, ಅತ್ಯಂತ ಶುದ್ಧವಾದ ಪರಿಸರದಲ್ಲಿ ಊಟ ಮಾಡಬಹುದು. ಶುದ್ಧತೆ, ಆರೋಗ್ಯಪೂರ್ಣ ಆಹಾರ ಮತ್ತು ಮನೆಯೂಟದ ರುಚಿಗೆ ಇಲ್ಲಿ ಪ್ರಾಧಾನ್ಯ ಅಂತಾರೆ ದರ್ಶನ್ ದಂಪತಿ. ನಾವು ಉಪಯೋಗಿಸುವ ತರಕಾರಿಯನ್ನು ಎಲ್ಲರೂ ಕಾಣುವಂತೆಯೇ ಇಡುತ್ತೇವೆ. ಅದನ್ನೇ ಅಡುಗೆಗೂ ಬಳಸುತ್ತೇವೆ. ಆ ತರಕಾರಿ ಮಾರಾಟಕ್ಕೂ ಲಭ್ಯ ಅಂತಾರೆ ಅಭಿಲಾಷ್.