ಮೂವರು ಟೆಕ್ಕಿಗಳ ಕನ್ನಡ ಟಿ ಶರ್ಟ್ ಉದ್ಯಮ..!

ಟೀಮ್​ ವೈ.ಎಸ್​. ಕನ್ನಡ

ಮೂವರು ಟೆಕ್ಕಿಗಳ ಕನ್ನಡ ಟಿ ಶರ್ಟ್ ಉದ್ಯಮ..!

Friday November 04, 2016,

3 min Read

ನವೆಂಬರ್ ತಿಂಗಳು ಬಂದರೆ ಸಾಕು ಕರ್ನಾಟಕದದ್ಯಾಂತ ಕನ್ನಡ ರಾಜ್ಯೋತ್ಸವದ ಸಂಭ್ರಮ. ಗಲ್ಲಿ ಗಲ್ಲಿಗಳಲ್ಲಿ ಕನ್ನಡದ ಹಳದಿ ಮತ್ತು ಕೆಂಪು ಧ್ವಜ. ಸಾಕಷ್ಟು ಕನ್ನಡ ಹಾಡುಗಳು ಎಲ್ಲೆಡೆಯೂ ಕೇಳುತ್ತಿರುತ್ತವೆ. ಇತ್ತೀಚಿನ ದಿನಗಳಲ್ಲಿ ಈ ಕನ್ನಡಾಭಿಮಾನಕ್ಕೆ ಫ್ಯಾಷನ್ ಟಚ್ ಸಹ ಸಿಕ್ಕಿದೆ. ಅದು ಟಿ-ಶರ್ಟ್​ಗಳ ಮೂಲಕ ಎನ್ನವುದು ವಿಶೇಷ.

image


ಹೌದು ಇತ್ತೀಚಿನ ದಿನಗಳಲ್ಲಿ ಶರ್ಟ್​ಗಳಿಗಿಂತ ಟಿ- ಶರ್ಟ್​ಗಳಿಗೆ ಹೆಚ್ಚಿನ ಬೇಡಿಕೆ. ಸಾಮಾನ್ಯವಾಗಿ ಟಿ ಶರ್ಟ್​ಗಳಲ್ಲಿ ಇಂಗ್ಲೀಷ್ ಪದ ಬಳಕೆ ಹೆಚ್ಚಾಗಿರುತ್ತದೆ. ಆದರೆ ನಮ್ಮ ಕನ್ನಡ ಪದಗಳು ಇದ್ದರೆ ಹೇಗೆ ಎಂದು ಯೋಚಿಸಿದವರೇ ಮೂವರು ಟೆಕ್ಕಿಗಳಾದ ಸುಧೀಂದ್ರ, ಗೋಕುಲ್, ಮತ್ತು ಕಾರ್ತಿಕ್ ಭಟ್. ಇವರ ಯೋಚನೆ ಕಳೆದ ವರ್ಷ ಜಾರಿಗೆ ಬಂದಿದ್ದು ಇವರು ಈಗ www.aziteez.com ಎಂಬ ವೆಬ್​ಸೈಟ್ ಮೂಲಕ ಆನ್​ಲೈನ್​ನಲ್ಲಿ ಕನ್ನಡ ಟಿ ಶರ್ಟ್​ಗಳನ್ನು ಮಾರಾಟ ಮಾಡುತ್ತಿದ್ದಾರೆ. ಕನ್ನಡಾಭಿಮಾನಿ ಟೆಕ್ಕಿಗಳು ಎಲ್ಲ ಸಂದರ್ಭಗಳಲ್ಲೂ ಬಳಸುವಂಥ ಕನ್ನಡ ಟಿ-ಶರ್ಟ್​ಗಳನ್ನು ಸಿದ್ಧಪಡಿಸಿದ್ದಾರೆ.

ಕಾಲೇಜಿನಲ್ಲೇ ಕನ್ನಡ ಪ್ರೀತಿ

ಸುಧೀಂದ್ರ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನವರು. ಗೋಕುಲ್ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣೆಯವರು. ಈ ಇಬ್ಬರು ಗಡಿನಾಡ ಕನ್ನಡಿಗರು ಒಂದಾದದ್ದು ಬೆಂಗಳೂರಿನ ಎಂ. ಎಸ್. ರಾಮಯ್ಯ ಕಾಲೇಜಿನಲ್ಲಿ ಎಂಜಿನಿಯರಿಂಗ್ ಕಲಿಯಲು ಬಂದಾಗ. ಇವರು ಹಾಸ್ಟೆಲ್​ನಲ್ಲೂ ಒಟ್ಟಿಗೆ ಇದ್ದರು. ಆಗ ಇವರಿಗೆ ಜೊತೆಯಾಗಿದ್ದು ಕಾರ್ತಿಕ್ ಭಟ್. ಒಮ್ಮೆ ನವೆಂಬರ್ ತಿಂಗಳಿನಲ್ಲಿ ರಾಮಯ್ಯ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿತ್ತು. ಆಗ ಎಲ್ಲಾ ವಿದ್ಯಾರ್ಥಿಗಳು ಟಿ ಶರ್ಟ್ ಧರಿಸಿದ್ದರು. ಆದರೆ ಅವರ ಟಿ ಶರ್ಟ್ ಮೇಲೆ ಇಂಗ್ಲೀಷ್ ಪದಗಳು ರಾರಾಜಿಸುತ್ತಿದ್ದವು ಇದನ್ನು ಕಂಡ ಈ ಮೂವರಿಗೂ ಯಾಕೆ ಕನ್ನಡದ ಪದಗಳು ಟಿ ಶರ್ಟ್ ಮೇಲೆ ಬರಬಾರದು ಎನಿಸಿ ಈ ಐಡಿಯಾ ಹೊಳೆದಿದೆ. ಅಷ್ಟೇ ಅಲ್ಲದೆ ಈ ಕನ್ನಡಾಭಿಮಾನ ನವೆಂಬರ್​ಗೆ ಮಾತ್ರ ಸೀಮಿತವಾಗಬಾರದು ಎಂದುಕೊಂಡು 2011ರ ನವೆಂಬರ್ 1ರಂದು , www.aziteez.com ರೂಪಿಸಿದರು. ಇದೇ ಕನ್ನಡ ಟಿ-ಶರ್ಟ್​ಗಳ ಮಾರಾಟದ ಅಂಗಡಿಯಾಯಿತು. ಆಗ ಫೇಸ್​ಬುಕ್​ಗೆ ಕನ್ನಡ ಪದಗಳಿರುವ ಟಿ ಶರ್ಟ್​ಗಳನ್ನು ಡಿಸೈನ್ ಮಾಡಿ ಫೇಸ್​ಬುಕ್​ಗೆ ಹಾಕಿದಾಗ ಸಾಕಷ್ಟು ಜನ ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ತಕ್ಷಣ ಅದಕ್ಕೆ ಸಣ್ಣ ಮಟ್ಟದ ಮಾರುಕಟ್ಟೆಯೂ ಸೃಷ್ಟಿಯಾಯಿತು. ನಂತರದ ದಿನಗಳಲ್ಲಿ ಆನ್​ಲೈನ್ ಮಾರುಕಟ್ಟೆ ಆರಂಭಮಾಡಿದರು.

" ಕನ್ನಡದ ಬಗ್ಗೆ ಎಲ್ಲರಲ್ಲೂ ಗೌರವ ಮತ್ತು ಪ್ರೀತಿ ಮೂಡಿಸುವುದು ನಮ್ಮ ಉದ್ದೇಶ. ಕರ್ನಾಟಕದಲ್ಲೇ ಹುಟ್ಟಿ, ಕರ್ನಾಟಕದಲ್ಲೇ ಜೀವಿಸಿದ್ರೂ ಕನ್ನಡ ಗೊತ್ತಿಲ್ಲದವರನ್ನು ನೋಡಿದಾಗ ಸಿಟ್ಟು ನೆತ್ತಿಗೇರುತ್ತದೆ. ಆದ್ರೆ ನಾವು ಅವರನ್ನು ಬದಲಿಸುವ ಪ್ರಯತ್ನ ಮಾಡುತ್ತೇವೆ. ಮನಸ್ಥಿತಿ ಬದಲಾದರೆ ವ್ಯಕ್ತಿ ಕೂಡ ಬದಲಾಗುತ್ತಾನೆ ಅನ್ನೋ ದೃಷ್ಟಿಯಿಂದ ಈ ಉದ್ಯಮ ಆರಂಭಿಸಿದ್ದೇವೆ."

ಸಾಮಾನ್ಯವಾಗಿ ಕನ್ನಡ ಟಿ-ಶರ್ಟ್​ಗಳಿಗೆ ನವೆಂಬರ್​ನಲ್ಲಿ ಮಾತ್ರ ಮಾರುಕಟ್ಟೆ ಇರುತ್ತದೆ. ಇದನ್ನು ದಾಟುವ ಬಗೆಯಲ್ಲಿ ಇವರಿಗೆ ಕಂಡಿದ್ದು ಹೊಸ ಹೊಸ ವಿನ್ಯಾಸಗಳು. ಪ್ರತಿ ತಿಂಗಳು ಬಗೆ ಬಗೆಯ ವಿನ್ಯಾಸದ ಟಿ-ಶರ್ಟ್​ಗಳನ್ನು ರೂಪಿಸಿ ಫೇಸ್​ಬುಕ್​ಗೆ ಅಪ್ಲೋಡ್ ಮಾಡಿದರು.

ಇದನ್ನು ಓದಿ: ಕೊನೆಗೂ ಹಸನಾಯ್ತು ಗೋಲ್ಗಪ್ಪಾ ಮಾರುತ್ತಿದ್ದ ಒಲಿಂಪಿಯನ್ ಬದುಕು..!

ನಾನು ಕನ್ನಡಿಗ’ ಸೇರಿದಂತೆ ಸದ್ಯ 20ಕ್ಕೂ ಹೆಚ್ಚು ಬಗೆಯ ವಿನ್ಯಾಸದ ಅಂಗಿಗಳು ಇಲ್ಲಿವೆ. ಕುವೆಂಪು, ಬೇಂದ್ರೆ, ಕಾರಂತರು, ಅನಂತಮೂರ್ತಿ, ಅಡಿಗರು ಸೇರಿದಂತೆ ಕನ್ನಡದ ಹಿರಿಯ ಸಾಹಿತಿಗಳ ಪದ್ಯಗಳು, ಹೇಳಿಕೆಗಳನ್ನು ಇಲ್ಲಿನ ಟಿ-ಶರ್ಟ್​ಗಳಲ್ಲಿ ಬಳಸಿಕೊಳ್ಳಲಾಗಿದೆ.

image


ಸುಮಾರು 250 ರೂಪಾಯಿಯಿಂದ ಈ ಟಿ ಶರ್ಟ್ ಬೆಲೆ ಆರಂಭವಾಗುತ್ತದೆ ನಿಮಗೆ ಒಳ್ಳೆ ಟಿ ಶರ್ಟ್ ಬೇಕಿದ್ದರೆ ಬೆಲೆಯೂ ಹೆಚ್ಚಾಗುತ್ತಾ ಹೋಗುತ್ತದೆ. ಆನ್​ಲೈನ್​ನಲ್ಲಿ ನೋಂದಾಯಿಸಿಕೊಂಡು ನೇರವಾಗಿ ಮನೆಬಾಗಿಲಿಗೂ ಈ ಶರ್ಟ್​ಗಳನ್ನು ತರಿಸಿಕೊಳ್ಳಬಹುದು. ರಾಜ್ಯದ ಬಹುತೇಕ ಭಾಗಗಳಲ್ಲಿ ಬೇಡಿಕೆ ಬಂದಿದ್ದು ಆಸ್ಟ್ರೇಲಿಯಾ, ದುಬೈ, ಯು.ಕೆ., ಜರ್ಮನಿ ಸೇರಿದಂತೆ ಸಾಕಷ್ಟು ಕಡೆಗಳಿಗೆ ಈ ಟೀ ಶರ್ಟ್​ಗಳನ್ನು ರಫ್ತು ಮಾಡುತ್ತಿದ್ದಾರೆ. ಸಾಕಷ್ಟು ಮಂದಿ ಎಂಜಿನಿಯರ್​ಗಳು ಈ ಮೂವರು ಗೆಳೆಯರ ಜೊತೆ ಕೈಜೋಡಿಸಿದ್ದಾರೆ. ಮಾರುಕಟ್ಟೆ, ಎಂಬ್ರಾಯಿಡರಿ ಸೇರಿದಂತೆ ಹಲವು ಕಾರ್ಯಗಳನ್ನು ನಿರ್ವಹಿಸಲು ನಾಲ್ಕು ಮಂದಿಗೆ ಕೆಲಸ ಕೊಟ್ಟಿದ್ದಾರೆ.

image


"ಕನ್ನಡ ಪದಗಳಿರುವ ಟಿ-ಶರ್ಟ್​ಗಳನ್ನು ಧರಿಸಲು ಖುಷಿಯಾಗುತ್ತದೆ. ಇಂಗ್ಲೀಷ್​ ಟಿ-ಶರ್ಟ್​ಗಳ ಮಧ್ಯೆ ನಮ್ಮ ಟೀ-ಶರ್ಟ್​ ಮತ್ತು ಅದರಲ್ಲಿ ಪದಗಳು ವಿಭಿನ್ನವಾಗಿ ಕಾಣುತ್ತದೆ. ಅಷ್ಟೇ ಅಲ್ಲ ನಾವು ಕನ್ನಡಿಗರು ಅನ್ನುವುದನ್ನು ಹೇಳೋದಿಕ್ಕೆ ಸಂಭ್ರಮ ಮತ್ತು ಖುಷಿ ಆಗುತ್ತದೆ. "
- ಮುರಳಿ, ಟಿ-ಶರ್ಟ್​ ಕೊಂಡವರು

ಈಗಾಗಲೇ ನೂರಾರು ಟಿ ಶರ್ಟ್​ಗಳನ್ನು ಮಾರಾಟ ಮಾಡಿರುವ ಈ ಮೂವರು ಮುಂದಿನ ದಿನಗಳಲ್ಲಿ ಮಕ್ಕಳಿಗೂ ಟಿ ಶರ್ಟ್ ರೂಪಿಸುವ ಉದ್ದೇಶ ಹೊಂದಿದ್ದಾರೆ. ಒಟ್ಟಿನಲ್ಲಿ ಕನ್ನಡ ಪದಗಳಿರುವ ಟಿ ಶರ್ಟ್​ಗಳು ಈಗ ಎಲ್ಲಡೆಯೂ ರಾರಾಜಿಸುತ್ತಿವೆ. 

ಇದನ್ನು ಓದಿ:

1. ಅಂದು ಓದಿಗಾಗಿ ಸಾಲ- ಇಂದು ಓದುವವರಿಗೆ ಸಹಾಯ- ಇದು ಗೌರೀಶ್​ ಸಾಹಸದ ಕಥೆ..!

2. ಐಟಿ-ಬಿಟಿಗೆ ಮಾತ್ರವಲ್ಲ- ಸ್ಟಾರ್ಟ್​ಅಪ್​ಗೂ ಇಲ್ಲಿದೆ ಪ್ಲೇಸ್​

3. ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಹೊಸ ಕನಸು- ಬಜೆಟ್​ನಲ್ಲಿ ನಿಮ್ಮ ಐಡಿಯಾಗಳಿಗೂ ಇದೆ ಬೆಲೆ