ಕಲೆಗಾಗಿಯೇ ತನ್ನ ಬದುಕನ್ನು ಸವೆಸಿದ: ಮಾಯಾ ಸುರಂಗದ ಕೇವ್ ಡಿಗ್ಗರ್ ಕಥೆ..!
ವಿಶ್ವಾಸ್ ಭಾರಾಧ್ವಾಜ್
ಬೃಹತ್ ಗುಡ್ಡವನ್ನು ಕೊರೆದು ಗುಹೆ ತೋಡುವ ಕೆಲಸವನ್ನು ಸಾಮಾನ್ಯರು ಊಹೆ ಕೂಡಾ ಮಾಡಿಕೊಳ್ಳಲಾಗದು. ಆದರೆ ಒಂದು ನಿರ್ದಿಷ್ಟ ಸಂಕಲ್ಪ ಮಾಡಿಕೊಂಡರೇ, ಯಾವ ಕೆಲಸವೂ ಅಸಾಧ್ಯವಲ್ಲ. ಹೀಗಂತ ಸಾಬೀತು ಮಾಡಿದ್ದಾನೆ ಇಲ್ಲೊಬ್ಬ ವ್ಯಕ್ತಿ. ಸತತ 25 ವರ್ಷಗಳಿಂದ ತನ್ನ ಅಮೂಲ್ಯ ಕಾಲವನ್ನು ಇದಕ್ಕಾಗಿ ವಿನಿಯೋಗಿಸಿದ ಆ ವ್ಯಕ್ತಿ ಕೊನೆಗೆ ನಿರ್ಮಿಸಿದ್ದು ಒಂದು ಅತ್ಯದ್ಭುತ ಕಲಾ ಸುರಂಗವನ್ನು. ಸುರಂಗದ ಕೋವೆ ಕೋವೆಯಲ್ಲಿ ಕಲಾತ್ಮಕ ಚಿತ್ರಗಳ ಕಲಾ ಕೆತ್ತನೆಯನ್ನು ಹೊಂದಿದೆ ಈ ಮಾಯಾ ಸುರಂಗ. ಇಂತದ್ದೊಂದು ಅಪ್ರತಿಮ ಮಾಂತ್ರಿಕ ಗುಹೆಯ ಸೃಷ್ಟಿಕರ್ತ ಕೇವ್ ಡಿಗ್ಗರ್ ಎಂದೇ ಪ್ರಸಿದ್ಧಿಯಾದ ಮೆಕ್ಸಿಕನ್ನ ಸಾಧಾರಣ ವ್ಯಕ್ತಿ, ರಾ ಪೌಲೆಟ್.
ಮಾಯಾ ಕಂದರದ ಮಾಯ ಶಿಲ್ಪಿ..!
ತನ್ನ ಕಾರ್ಯ ಕ್ಷಮತೆ, ದಕ್ಷತೆ ಹಾಗೂ ದೃಢ ಸಂಕಲ್ಪದೊಂದಿಗೆ ಪ್ರೀತಿ ಬೆರೆತ ಆಸ್ಥೆ ವಿನಿಯೋಗಿಸಿ ಕೆತ್ತಿದ ಭವ್ಯ ಸುರಂಗವದು. ಇದಕ್ಕಾಗಿ ಆತ ತನ್ನ ಜೀವನದ ಕಾಲು ಭಾಗವನ್ನು ಸಂಪೂರ್ಣವಾಗಿ ಇದಕ್ಕಾಗಿ ವ್ಯಯಿಸಿದ್ದಾನೆ. ಪ್ರತಿ ನಿತ್ಯವೂ ಆತ ಸುರಂಗದ ಒಳ ಹೊಕ್ಕರೇ ಆತನ ಪ್ರಪಂಚದಲ್ಲಿ ಇರುತ್ತಿದ್ದಿದ್ದು ಮನಸಿನಲ್ಲಿದ್ದ ಸೃಜನಾತ್ಮಕ ಗುಹೆಯ ವಿನ್ಯಾಸ ಹಾಗೂ ಅಚ್ಚು ಮೆಚ್ಚಿನ ಸಂಗಾತಿ ಆತನ ನಾಯಿ ಮಾತ್ರ. ನಾಗರೀಕ ಪ್ರಪಂಚದಿಂದ ದೂರ ಉಳಿದು ಆತ ನಿರ್ಮಿಸಿದ್ದು ಮಾತ್ರ ಅತ್ಯದ್ಭುತ ಮಾಯಾ ಕಂದರ.
ಅಲ್ಲಿ ಎಲ್ಲವೂ ರಮ್ಯ ಆಕರ್ಷಕ ನಯನ ಮನೋಹರ. ಸುರಂಗದ ಒಳಕೋವೆಯ ಗೋಡೆಗಳಲ್ಲಿ ವಿವಿಧ ವಿನ್ಯಾಸದ ಚಿತ್ರಗಳ ಕೆತ್ತನೆಯಿದೆ. ಗುಹೆಯ ಆಳಕ್ಕಿಳಿಯಲು ಮೆಟ್ಟಿಲುಗಳಿವೆ. ಒಳಗೆ ಸಾಗುತ್ತಾ ಹೋದಂತೆ ಹೊಸತೊಂದು ಭವ್ಯ ಜಗತ್ತು ಅನಾವರಣಗೊಳ್ಳುತ್ತದೆ. ಸುರಂಗದ ಶಿಲಾ ಗೋಡೆಗಳಲ್ಲಿ ವೃಕ್ಷ, ಬೇರು, ಎಲೆ ಬಳ್ಳಿಗಳ ಕಲಾತ್ಮಕ ಕೆತ್ತನೆಯಿದೆ. ಗುಹೆಯ ಗೋಡೆಯಲ್ಲಿ ಅಸಂಖ್ಯ ಸಣ್ಣ ಸಣ್ಣ ನವಿರಾದ ಕೆತ್ತನೆಗಳ ಕಲಾ ವೈಭವ ನೋಡುಗರನ್ನು ಇನ್ನಿಲ್ಲದಂತೆ ಸೆಳೆಯುತ್ತದೆ. ಕೆಲವು ಕಡೆ 30-40 ಅಡಿ ಎತ್ತರದಲ್ಲಿ ಏಣಿಗಳ ಮೇಲೆ ನಿಂತು ಕೆತ್ತನೆ ಕೆಲಸ ಮುಗಿಸಿದ್ದಾನೆ ಪೌಲೆಟ್. ಮುಖ್ಯವಾಗಿ ಸುರಂಗದ ಮಧ್ಯ ಭಾಗದಲ್ಲಿ ಕೆತ್ತಿದ ವೃಕ್ಷದ ಮಾದರಿಯಂತೂ ಸೌಂದರ್ಯದ ಔನ್ನತ್ಯವೇ ಸರಿ.
ಈ ನವಿರಾದ ಕುಸುರಿ ಕೆತ್ತನೆಗಾಗಿಯೇ ಪೌಲೆಟ್ 900 ಗಂಟೆಗಳನ್ನು ತೆಗೆದುಕೊಂಡಿದ್ದಾಗಿ ಸ್ವತಃ ಪೌಲೆಟ್ ಹೇಳಿಕೊಳ್ಳುತ್ತಾನೆ. ಕುತೂಹಲದ ವಿಷಯವೆಂದರೆ ಇವಿಷ್ಟಿನ್ನೂ ಪೌಲೆಟ್ ಒಬ್ಬನೇ ಯಾರ ನೆರವಿಲ್ಲದೇ, ಯಾವ ತಂತ್ರಜ್ಞಾನದ ಸಹಾಯವಿಲ್ಲದೇ, ಯಾವುದೇ ಫಲಾಪೇಕ್ಷೆಯಿಲ್ಲದೇ ನಿರ್ಮಾಣ ಮಾಡಿದ್ದಾನೆ. ಇಲ್ಲಿ ಕಲೆ ಮಾತ್ರ ಪೌಲೆಟ್ನ ಸುದೀರ್ಘ ತಪಸ್ಸಿನ ಗುರಿಯಾಗಿತ್ತು. ತನ್ನ ಜೀವನವನ್ನೇ ಮುಡಿಪಿಟ್ಟು ಆತ ಅದಮ್ಯ, ಅಪೂರ್ವ ಹಾಗೂ ಅಪರೂಪದ ಕಲಾವಂತಿಕೆಯನ್ನು ಅಭಿವ್ಯಕ್ತಗೊಳಿಸಿದ್ದಾನೆ.
ಈತನ ಕಲಾ ಸುರಂಗದ ನಿರ್ಮಾಣಕ್ಕೆ ಈತನೇ ಮೇಸ್ತ್ರಿ, ಕಲಾವಿದ, ವಿನ್ಯಾಸಕ ಕೊನೆಗೆ ಕೂಲಿಯೂ ಹೌದು. ಸತತ 25 ವರ್ಷಗಳಿಂದ ಈತನ ಬದುಕು ಈ ಕತ್ತಲ ಗವಿಯಲ್ಲಿ ಕಲಾತ್ಮಕ ಕುಸುರಿ ಕೆತ್ತನೆಯಲ್ಲಿ ಸವೆದಿದೆ. ಸುರಂಗದ ಒಳ ಕೋವೆಯ ಪ್ರತಿ ಅಂಗುಲವೂ ಈತನ ಕಲ್ಪನಾ ವಿಹಾರದಲ್ಲಿ, ಶ್ರೀಮಂತಿಕೆಯೊಂದಿಗೆ ಮೂಡಿಬಂದಿದೆ.
ಆಸ್ಕರ್ ಅಂಗಳದಲ್ಲಿ ಸದ್ದು ಮಾಡಿದ ಕೇವ್ ಡಿಗ್ಗರ್:
ಈ ಕೇವ್ ಡಿಗ್ಗರ್ನ ಮಹೋನ್ನತ ಸಾಧನೆ ಚಿತ್ರವಾಗಿ ಡಾಕ್ಯುಮೆಂಟರಿಯಾಗಿ ವಿಶ್ವದಾದ್ಯಂತ ಶಹಬ್ಬಾಸ್ಗಿರಿ ಪಡೆದುಕೊಂಡಿದೆ. ಆಸ್ಕರ್ ಅಂಗಳದಲ್ಲಿ ಪ್ರದರ್ಶಿತಗೊಂಡು ವಿಶ್ವದ ಅಸಂಖ್ಯಾತ ಕಲಾರಸಿಕರ ಮನ ಗೆದ್ದಿದೆ. ಪ್ರಪಂಚದಾದ್ಯಂತ ಸಿನಿ ಪ್ರದರ್ಶನಗಳಲ್ಲಿ ಕೇವ್ ಡಿಗ್ಗರ್ ಪ್ರದರ್ಶನಗೊಳ್ಳಲೇಬೇಕು ಅನ್ನುವ ಸ್ಥಿತಿ ನಿರ್ಮಾಣವಾಗಿದೆ. ದಣಿವರಿಯದೆ ನಿರಂತರವಾಗಿ ಕಲಾತ್ಮಕ ಸುರಂಗ ತೋಡಿದ ಮೆಕ್ಸಿಕನ್ ಶ್ರಮಜೀವಿ ರಾ ಪೌಲೆಟ್ನ ಕಾರ್ಯವನ್ನು ಗುರುತಿಸಿದ ನಿರ್ದೇಶಕ ಜೆಫ್ರಿ ಕೆರಾಫ್, 40 ನಿಮಿಷಗಳ ಕೇವ್ ಡಿಗ್ಗರ್ ಅನ್ನುವ ಡಾಕ್ಯುಮೆಂಟರಿ ನಿರ್ಮಿಸಿದ್ದರು. ಈ ಕಿರು ಚಿತ್ರದಲ್ಲಿ ಸ್ವತಃ ರಾ ಪೌಲೆಟ್ ತನ್ನದೇ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾನೆ. 2013ರಲ್ಲಿ ಸಾಲಿನಲ್ಲಿ ಅದು ಆಸ್ಕರ್ ಪ್ರಶಸ್ತಿಗೆ ನಾಮಾಂಕಿತವಾಗಿತ್ತು. ಸುಮಾರು 900 ಗಂಟೆಗಳ ಈತನ ಶ್ರಮದ ಫಲವಾಗಿ ಸೃಷ್ಟಿಯಾದ ಆ ಮಾಯಾ ಸುರಂಗ ಈಗ ಮೆಕ್ಸಿಕನ್ನ ಪ್ರವಾಸೋದ್ಯಮ ಸ್ಥಳವಾಗಿ ಮಾರ್ಪಟ್ಟಿದೆ.
ರಾ ಪೌಲೆಟ್ ತನ್ನ ಕಾಲದ ನಂತರವೂ ಸಾವಿರಾರು ವರ್ಷಗಳ ಕಾಲ ಈ ಗುಹಾ ಕೆತ್ತನೆಯ ಮೂಲಕ ಜೀವಂತಿಕೆ ಉಳಿಸಿಕೊಳ್ಳುತ್ತಾನೆ. ಒಬ್ಬ ಅಪ್ರತಿಮ ಕಲಾವಿದನ ಮೇರು ಸಾಧನೆಗೆ ಇದಕ್ಕಿಂತ ದೊಡ್ಡ ಹೆಗ್ಗಳಿಕೆ ಇನ್ನೇನು ಬೇಕು.