ಆಮೆಗಳನ್ನು ರಕ್ಷಿಸಲು ಒಡಿಷಾದ ಅಸ್ತರಂಗಾ ಬೀಚ್‌ ಸ್ವಚ್ಛಗೊಳಿಸಿದ ಪರಿಸರ ಪ್ರೇಮಿಗಳು

ಸೌಮ್ಯಾ ರಂಜನ್‌ ಬಿಸ್ವಾಲ್‌ ಅವರ ನೇತೃತ್ವದಲ್ಲಿ 6 ಯುವಕರು ಅಸ್ತರಂಗಾ ಬೀಚ್‌ನ 18 ಕಿಮೀ ಪ್ರದೇಶದಲ್ಲಿನ 5,000 ಕೆಜಿ ತೂಕದ ತ್ಯಾಜ್ಯ ಸಂಗ್ರಹಿಸಿ ಆಲಿವ್‌ ರಿಡ್ಲಿ ಆಮೆಗಳಿಗೆ ಗೂಡುಕಟ್ಟಿಕೊಳ್ಳಲು ನೆರವಾಗಿದ್ದಾರೆ.

ಆಮೆಗಳನ್ನು ರಕ್ಷಿಸಲು ಒಡಿಷಾದ ಅಸ್ತರಂಗಾ ಬೀಚ್‌ ಸ್ವಚ್ಛಗೊಳಿಸಿದ ಪರಿಸರ ಪ್ರೇಮಿಗಳು

Tuesday November 03, 2020,

2 min Read

ಕಡಲಿನ ಅಲೆಗಳು ಒಡಿಷಾದ ಪುರಿ ಜಿಲ್ಲೆಯ ಅಸ್ತರಂಗಾ ಬೀಚ್‌ನ ಬಿಳಿ ಮರಳಿಗೆ ತಾಗುತ್ತಿದ್ದ ದೃಷ್ಯ ಒಂದು ಬಗೆಯ ಶಾಂತಿಯನ್ನು ಸಾರುತ್ತಿತ್ತು. ಆದರೆ ಕಳೆದ ತಿಂಗಳು ಅಲ್ಲಿ ಹೀಗಿರಲಿಲ್ಲ.


ಬೀಚ್‌ ಪ್ಲಾಸ್ಟಿಕ್‌ ಬ್ಯಾಗ್‌, ಮೀನಿನ ಬಲೆ, ಒಡೆದ ಗಾಜಿನ ಬಾಟಲಿಗಳಂತಹ ಕಸದಿಂದ ತುಂಬಿ ಹೋಗಿತ್ತು.


ಈ ಕಸ ಕಡಲ ದಂಡೆಯ ಸೌಂದರ್ಯವನ್ನು ಹಾಳುಮಾಡಿದ್ದಲ್ಲದೆ ಅಲ್ಲಿ ವಾಸವಿದ್ದ ಅಳಿವಿನಂಚಿನಲ್ಲಿರುವ ಆಲಿವ್‌ ರಿಡ್ಲಿ ಆಮೆಗಳಿಗು ಕಂಟಕವಾಗಿತ್ತು. ಇದು ಅವುಗಳು ಗೂಡುಕಟ್ಟುವ ಸಮಯ.

ಅಸ್ತರಂಗಾ ಬೀಚ್‌ ಸ್ವಚ್ಛಗೊಳಿಸುತ್ತಿರುವ 6 ಯುವಕರು. (ಚಿತ್ರಕೃಪೆ: ಇಪಿಎಸ್‌)


ಆದರೆ 6 ಯುವಕರು ಬೀಚ್ ಮತ್ತು ಪಕ್ಕದ ಎಸ್ಚುರಿಯನ್ನು ಸ್ವಚ್ಛಗೊಳಿಸಲು ನಿರ್ಧರಿಸಿದಾಗ ಎಲ್ಲ ಬದಲಾಯಿತು. ಸೆಪ್ಟೆಂಬರ್‌ 27 2020 ರಂದು ಅವರು ಪರ್ಯಾವರನ್‌ ಸಂರಕ್ಷಣ ಅಭಿಯಾನದ ಅಡಿಯಲ್ಲಿ ‘ದೇವಿ ಕಚ್ಚಪ್‌ ಕಲ್ಯಾಣಂ’ ಎಂಬ ಉಪಕ್ರಮವನ್ನು ಪ್ರಾರಂಭಿಸಿದರು.


ಕೇವಲ ಒಂದೆ ತಿಂಗಳಲ್ಲಿ ಯುವಕರು 18 ಕಿ.ಮೀ. ಉದ್ದದ ಬೀಚ್‌ನಲ್ಲಿ 5,000 ಕೆಜಿಯ ತ್ಯಾಜ್ಯ ಸಂಗ್ರಹಿಸಿದ್ದಾರೆ. ದಂಡೆಗೆ ಹತ್ತಿರದ ಮ್ಯಾಂಗ್ರೋವ್ ಕಾಡಿನಲ್ಲಿ ತಾತ್ಕಾಲಿಕ ಕ್ಯಾಂಪ್‌ ಮಾಡಿ ಪ್ರತಿದಿನ ಎಂಟು ಗಂಟೆ ವ್ಯಯಿಸಿ ಈ ಕೆಲಸ ಮಾಡಿದ್ದಾರೆ.


ಒಡಿಷಾದ ಮೂರು ಆಲಿವ್ ರಿಡ್ಲೆ ಗೂಡುಕಟ್ಟುವ ತಾಣಗಳಲ್ಲಿ, ಹೆಚ್ಚುತ್ತಿರುವ ಮಾಲಿನ್ಯ, ಮ್ಯಾಂಗ್ರೋವ್ ಅರಣ್ಯನಾಶ ಮತ್ತು ಅಕ್ರಮ ಯಾಂತ್ರಿಕೃತ ಮೀನುಗಾರಿಕೆಯಿಂದಾಗಿ ದೇವಿ ಎಸ್ಚುರಿಗೆ ತೊಂದರೆಯಿದೆ ಎಂದರು ಉಪಕ್ರಮದ ಮುಖಂಡರಾದ ಸೌಮ್ಯಾ ರಂಜನ್ ಬಿಸ್ವಾಲ್.


ಅವರು ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ಜತೆ ಮಾತನಾಡುತ್ತಾ, “ಯಾಂತ್ರಿಕೃತ ಮೀನುಗಾರಿಕೆಯನ್ನು ತಡೆಯುವುದು ನಮ್ಮ ಕೈಯಲ್ಲಿಲ್ಲ, ಆದರೆ ಬೀಚ್‌ನ್ನಾದರೂ ಸ್ವಚ್ಛಗೊಳಿಸಿ ಅಳಿವಿನಂಚಿಲ್ಲಿರುವ ಆಮೆಗಳು ಗೂಡು ಕಟ್ಟಲು ಓಡಾಡಲು ಸುಲಭವಾಗುವಂತೆ ಮಾಡಬಹುದಲ್ಲ ಎಂದು ಯೋಚಿಸಿದೆವು,” ಎಂದರು.


ಸೌಮ್ಯಾ ಅವರ ಜತೆಗೆ, ಸಂತೋಷ್ ಬೆಹೆರಾ, ಸುಮನ್ ಪ್ರಧಾನ್, ಸುಸಾಂತ್ ಪರಿಡಾ, ಪ್ರಭಾಕರ್ ಬಿಸ್ವಾಲ್, ಮತ್ತು ದಿಲ್ಲಿಪ್ ಕುಮಾರ್ ಬಿಸ್ವಾಲ್ ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಯುವ ಪರಿಸರ ವಾದಿಗಳಿಗೆ ವನ್ಯಜೀವಿ ಸಂರಕ್ಷಣಾ ತಜ್ಞ ಬಿಚಿತ್ರಾನಂದ ಬಿಸ್ವಾಲ್ ಅವರ ಮಾರ್ಗದರ್ಶನವಿದೆ.


ಸಂಗ್ರಹಿಸಿದ ತ್ಯಾಜ್ಯವನ್ನು ವಿಲೇವಾರಿ ಮಾಡಲು ಪುರಿಯ ಜಿಲ್ಲಾಡಳಿತ ಮತ್ತು ಸ್ಥಳೀಯ ಕಂಪನಿಯೊಂದು ಸಹಾಯಮಾಡಿದೆ ಎಂದು ಇಂಡಿಯಾ ಟೈಮ್ಸ್‌ ವರದಿ ಮಾಡಿದೆ. ಮುಂದಿನ ದಿನಗಳಲ್ಲಿ ಈ ತಂಡ ಮ್ಯಾಂಗ್ರೋವ್‌ ಕಾಡುಗಳ ಸಂರಕ್ಷಣೆಯ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಬಯಸುತ್ತಿದೆ.