ಮಾನವ ತ್ಯಾಜ್ಯಕ್ಕೂ ಡಿಮ್ಯಾಂಡ್ ಇದೆ- ಇಂಗ್ಲೆಂಡ್ನಲ್ಲಿ ಹ್ಯೂಮನ್ ವೇಸ್ಟ್ನಿಂದ ಚಲಿಸುತ್ತದೆ ಬಯೋ ಬಸ್
ವಿಶ್ವಾಸ್ ಭಾರಾಧ್ವಾಜ್
ಕಾಲ ಬದಲಾಗುತ್ತಿದೆ, ತಂತ್ರಜ್ಞಾನ ಮುಂದುವರೆಯುತ್ತಿದೆ. ಇದರ ಪರಿಣಾಮ ಮರುಬಳಕೆಯ ಇಂಧನಗಳತ್ತ ಹಾಗೂ ಪರ್ಯಾಯ ಶಕ್ತಿ ಮೂಲಗಳತ್ತ ಗಮನಹರಿಸಲಾಗುತ್ತಿದೆ. ಪೆಟ್ರೋಲ್, ಡಿಸೇಲ್, ಗ್ಯಾಸ್, ಎಲೆಕ್ಟ್ರಿಸಿಟಿ ಹಾಗೂ ಸೋಲಾರ್ ಪವರ್ನಿಂದ ಓಡುವ ವಾಹನಗಳ ಪ್ರಯೋಗ ಆಯ್ತು. ಸೋಲಾರ್ ಬಿಟ್ಟು ಉಳಿದೆಲ್ಲವೂ ಮುಗಿದು ಹೋಗಬಲ್ಲ ಶಕ್ತಿ ಸಂಪನ್ಮೂಲಗಳು. ಹಾಗಾಗಿ ಮತ್ತೆ ಮರು ಬಳಸಬಹುದಾದ ಶಕ್ತಿ ಸಂಪನ್ಮೂಲದ ಪ್ರಯೋಗಗಳು ನಡೆಯುತ್ತಲೇ ಇವೆ. ಅದರ ಪರಿಣಾಮವೆಂಬಂತೆ ಈಗ ಹ್ಯೂಮನ್ ವೇಸ್ಟ್ ಸಹಾಯದಿಂದ ಚಲಿಸಬಲ್ಲ ಬಸ್ ಕಂಡುಹಿಡಿಯಲಾಗಿದೆ. ಈ ಪ್ರಯೋಗ ಭಾಗಶಃ ಯಶಸ್ವಿಯಾಗಿದ್ದು ಪ್ರಯೋಗಾರ್ಥ ಸಂಚಾರ ಕೂಡಾ ಸಕ್ಸಸ್ಫುಲ್ ಆಗಿದೆ.
ಬಯೋಬಸ್ನ ಯಶಸ್ವಿ ಪ್ರಯೋಗಾರ್ಥ ಸಂಚಾರ
ಹಲವು ರೀತಿಯ ಸಂಶೋಧನೆ ಹಾಗೂ ಪ್ರಯೋಗಗಳ ಬಳಿಕ ಈ ಹೊಸ ಇಂಧನವೊಂದರಿಂದ ವಾಹನಗಳನ್ನು ಚಲಾಯಿಸಬಹುದು ಎಂದು ಕಂಡುಹಿಡಿಯಲಾಗಿದೆ. ಈ ಹೊಸ ಆವಿಷ್ಕೃತ ಇಂಧನವೇ ಮಾನವ ತ್ಯಾಜ್ಯ ಅಥವಾ ಮನುಷ್ಯನ ಮಲ. ಅನುಪಯುಕ್ತ ತ್ಯಾಜ್ಯಗಳಲ್ಲಿ ಕಟ್ಟಕಡೆಯ ಸ್ಥಾನ ನೀಡಲ್ಪಡುವ ಮನುಷ್ಯನ ವೇಸ್ಟ್ನಿಂದ ಬಯೋ ಮಿಥೇನ್ ಅನಿಲ ತಯಾರಿಸಿ ಇಂಧನವಾಗಿ ಉಪಯೋಗಿಸಬಹುದು ಅನ್ನುವ ಪ್ರಯೋಗ ಇಂಗ್ಲೆಂಡ್ನಲ್ಲಿ ಯಶಸ್ವಿಯಾಗಿದೆ. ಕೆಲವು ತಿಂಗಳ ಹಿಂದೆ ಮಾನವ ತ್ಯಾಜ್ಯ ಹಾಗೂ ಗೃಹ ತ್ಯಾಜ್ಯಗಳನ್ನು ಸಂಸ್ಕರಿಸಿ ಪಡೆದ ಬಯೋ ಮಿಥೇನ್ ಗ್ಯಾಸ್ನಿಂದ ಬಸ್ ಓಡಿಸಿ ಪ್ರಾಯೋಗಿಕವಾಗಿ ಇದನ್ನು ಯಶಸ್ವಿಗೊಳಿಸಲಾಗಿದೆ.
ಸುಮಾರು 32 ಸಾವಿರ ಮನೆಗಳ ಬಯೋ ತ್ಯಾಜ್ಯವನ್ನು ಸಂಗ್ರಹಿಸಿ ಪಡೆದಿದ್ದ ಬಯೋಮಿಥೇನ್ ಗ್ಯಾಸ್ನ ಸಹಾಯದಿಂದ ಬಸ್ ಸುಮಾರು 15 ಮೈಲಿ ದೂರ ಕ್ರಮಿಸಿದೆ. 40 ಸೀಟ್ಗಳಿರುವ ಬಯೋಬಸ್ ನಿರಾತಂಕವಾಗಿ ಚಲಿಸಲು ಸಾಧ್ಯವಾಗಿದ್ದು, ಮನುಷ್ಯನ ವಿಸರ್ಜಿತ ಮಲತ್ಯಾಜ್ಯ ಹಾಗೂ ಆಹಾರ ಪದಾರ್ಥಗಳ ಅನುಪಯುಕ್ತ ಪದಾರ್ಥಗಳಿಂದ ನವೀಕರಿಸಲ್ಪಟ್ಟು ಹೊರಬಂದ ಮಿಥೇನ್ ಅನಿಲದಿಂದ. ಪ್ರತಿ ನಿತ್ಯ ಮನುಷ್ಯ ವಾತಾವರಣಕ್ಕೆ ಹೊರಬಿಡುತ್ತಿರುವ ತ್ಯಾಜ್ಯಗಳು ಪರಿಸರದ ಪಾವಿತ್ರ್ಯತೆ ಹಾಗೂ ನೈರ್ಮಲ್ಯಕ್ಕೆ ಧಕ್ಕೆ ಉಂಟು ಮಾಡುತ್ತಲೇ ಇವೆ. ಇದಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ ಬಯೋ ವೇಸ್ಟ್ ಹಾಗೂ ಹ್ಯೂಮನ್ ವೇಸ್ಟ್ಗಳನ್ನು ಸಕಾರಾತ್ಮಕವಾಗಿ ಬದಲಾಯಿಸುವ ಈ ಯೋಜನೆ ಯಶಸ್ವಿಯಾಗಿದೆ. ಬ್ರಿಟನ್ನಲ್ಲಿ ಯಶಸ್ವಿಯಾಗಿರುವ ವಿನೂತನ ಪ್ರಯೋಗ ಬಯೋ ಬಸ್ ಮುಂಬರುವ ದಿನಗಳಲ್ಲಿ ಪರ್ಯಾಯ ಇಂಧನ ಮೂಲವಾಗುವ ಭರವಸೆ ಮೂಡಿಸಿದೆ.
ಪರ್ಯಾಯ ಇಂಧನ ಬಯೋಮಿಥೇನ್ ಗ್ಯಾಸ್
ಪಶ್ಚಿಮ ಇಂಗ್ಲೆಂಡ್ನ ಬ್ರಿಸ್ಟೋಲ್ ನಗರದ ಅವೋನ್ಮೌತ್ನಲ್ಲಿ ಸ್ಥಾಪಿಸಲಾಗಿರುವ ಬೃಹತ್ ತ್ಯಾಜ್ಯ ಮರುಬಳಕೆಯ ಘಟಕದಲ್ಲಿ ಸಂಸ್ಕರಿತಗೊಂಡ ಅನುಪಯುಕ್ತ ತ್ಯಾಜ್ಯ, ಬಯೋ ಮಿಥೇನ್ ಅನಿಲವಾಗಿ ಇಂಧನದ ರೂಪ ತಾಳುತ್ತಿದೆ. ಆಹಾರ ತ್ಯಾಜ್ಯ ಹಾಗೂ ಹೊಲಸು ವೇಸ್ಟೇಜ್ ಪದಾರ್ಥಗಳನ್ನು ದೊಡ್ಡ ದೊಡ್ಡ ಮೆಟಲ್ ಕಂಟೇನೈರ್ಗಳಲ್ಲಿ ತುಂಬಿ ಸಂಸ್ಕರಿಸಿ ಮಿಥೇನ್ ಗ್ಯಾಸ್ ಪ್ರೊಡ್ಯೂಸ್ ಮಾಡಲಾಗುತ್ತದೆ. ಈ ಮಿಥೇನ್ ಗ್ಯಾಸ್ ಪೆಟ್ರೋಲ್, ಡಿಸೇಲ್ಗಿಂತ ಉತ್ಕ್ರಷ್ಟಕಾರಿ ಇಂಧನ ಅನ್ನೋದು ತಜ್ಞರ ಅಭಿಪ್ರಾಯ. ಬ್ರಿಸ್ಟಲ್ನ ನೈರುತ್ಯ ಭಾಗದಲ್ಲಿ ಮಾನವ ತ್ಯಾಜ್ಯ ಹಾಗೂ ಮನೆಗಳ ಅನುಪಯುಕ್ತ ಕಸಗಳಿಂದ ಬಯೋ ಮಿಥೇನ್ ಅನಿಲ ಉತ್ಪಾಧಿಸುವ ಬೃಹತ್ ಶಕ್ತಿ ಸ್ಥಾವರವಿದೆ. ಈ ಪ್ಲಾಂಟ್ನ ವಾರ್ಷಿಕ ಸಾಮರ್ಥ್ಯ ಸುಮಾರು 75 ಮಿಲಿಯನ್ ಕ್ಯುಬಿಕ್ ಮೀಟರ್ ಚರಂಡಿ ತ್ಯಾಜ್ಯ ಹಾಗೂ 35 ಸಾವಿರ ಟನ್ ಆಹಾರ ತ್ಯಾಜ್ಯವಸ್ತುಗಳು. ಇದು ಸಂಸ್ಕರಿತಗೊಂಡು ಲಭ್ಯವಾಗುವ ಇಂಧನ ವರ್ಷಕ್ಕೆ ಬರೋಬ್ಬರಿ 17 ಮಿಲಿಯನ್ ಟನ್ನಷ್ಟು ಬಯೋಮಿಥೇನ್. ಸಿಂಗಲ್ ಟ್ಯಾಂಕ್ ಕಂಟೇನರ್ನಲ್ಲಿ ಒಂದೆಡೆ ತ್ಯಾಜ್ಯ ಸಂಸ್ಕರಿತಗೊಂಡು ಇನ್ನೊಂದು ಗ್ಯಾಸ್ಟ್ಯಾಂಕ್ನಲ್ಲಿ ಬಯೋ ಮಿಥೇನ್ ಗ್ಯಾಸ್ ಸಂಗ್ರಹಗೊಳ್ಳುತ್ತದೆ.
ಹ್ಯೂಮನ್ ವೇಸ್ಟ್ಗಳನ್ನು ಬಳಸಿ ಸಂಸ್ಕರಿಸಿ ಉತ್ಪಾದನೆಯಾದ ಬಯೋ ಮಿಥೇನ್ ಗ್ಯಾಸ್ನಿಂದ ಚಾಲನೆಗೊಂಡ ಬಯೋ ಬಸ್ ಇತ್ತೀಚೆಗೆ ಬಾತ್ನಿಂದ ಬ್ರಿಸ್ಟೇಲ್ ವಿಮಾನ ನಿಲ್ದಾಣದವರೆಗೆ ಯಶಸ್ವಿಯಾಗಿ ಸಂಚರಿಸಿದೆ. ಇದು ವಿಶ್ವದ ಮೊದಲ ಹ್ಯೂಮನ್ ವೇಸ್ಟ್ ಮೂಲಕ ಸಿದ್ಧವಾದ ಅನಿಲ ಇಂಧನದ ಸಹಾಯದಿಂದ ಚಲಿಸಬಲ್ಲ ಬಸ್. ಮನುಷ್ಯ ಪ್ರತಿ ನಿತ್ಯ ಹೊರ ಚೆಲ್ಲುವ ಹಳಸಲು ಆಹಾರ ಪದಾರ್ಥಗಳು, ಇನ್ನಿತರೆ ಫುಡ್ ವೇಸ್ಟ್, ಕೊಳಕು ತ್ಯಾಜ್ಯ ಪದಾರ್ಥ ಹಾಗೂ ಟಾಯ್ಲೆಟ್ ತ್ಯಾಜ್ಯಗಳಿಂದ ತಯಾರಾದ ಮಿಥೇನ್ ಗ್ಯಾಸ್ನಿಂದ ವಾಹನ ಚಲಾವಣೆ ಸಾಧ್ಯ ಅಂತ ಇದೀಗ ಸಾಬೀತಾಗಿದೆ. ಕೇವಲ 5 ಜನರ ವಾರ್ಷಿಕ ಮಲ ಸಂಗ್ರಹಣೆ ಹಾಗೂ ಆಹಾರ ಪದಾರ್ಥಗಳ ವೇಸ್ಟೇಜ್ನಿಂದ, 305 ಕಿಮೀ ಚಲಿಸಬಲ್ಲ ಪ್ರಮಾಣದ ಬಯೋಬಸ್ನ ಇಂಧನ ಉತ್ಫಾದನೆಯಾಗುತ್ತದೆ.
ಈಗಾಗಲೆ ಯಶಸ್ವೀ ಪರೀಕ್ಷಾರ್ಥ ಸಂಚಾರ ಮುಗಿಸಿರುವ ಬಯೋ ಬಸ್ ಮುಂಬರುವ ದಿನಗಳಲ್ಲಿ ನಿರಂತರವಾಗಿ ರಸ್ತೆಗಳ ಮೇಲೆ ಸಂಚರಿಸುವ ಉದ್ದೇಶ ಹೊಂದಿದೆ. ಸದ್ಯ ವಾರದಲ್ಲಿ 4 ದಿನಗಳು, ಬ್ರಿಸ್ಟಲ್ನ ಕ್ರಿಬ್ಸ್ ಕಾಸ್ವೇನಿಂದ ಸ್ಟಾಕ್ವುಡ್ವರೆಗೆ ಸಂಚರಿಸುತ್ತಿದೆ. ಕೆಲವು ತಿಂಗಳ ಹಿಂದಷ್ಟೇ ಒಂದು ಬಯೋ ಬಸ್ಅನ್ನು ಬಾಥ್ನಿಂದ ಬ್ರಿಸ್ಟಲ್ ಏರ್ಪೋರ್ಟ್ವರೆಗೆ ಸಂಚರಿಸಲು ಬಿಡಲಾಗಿತ್ತು.
ಮಾನವ ಮಲವೂ ಮೌಲ್ಯಯುತ ಶಕ್ತಿ ಸಂಪನ್ಮೂಲವಾಗಬಲ್ಲದು
ಅಷ್ಟೇ ಅಲ್ಲ ಹೀಗೆ ತಯಾರಾಗುವ ಮಿಥೇನ್ ಗ್ಯಾಸ್ನ ವಿದ್ಯುತ್ ಶಕ್ತಿ ಹಾಗೂ ಹೀಟ್ ಎನರ್ಜಿ ಕೂಡಾ ಸಾಧ್ಯವಿದೆ ಅನ್ನುವ ಸಂಗತಿ ಪ್ರಯೋಗಗಳಿಂದ ದೃಢವಾಗಿದೆ. ಹಾಗಾಗಿ ಇನ್ನು ಮುಂದೆ ಅನುಪಯುಕ್ತ ತ್ಯಾಜ್ಯಗಳೂ ನವೀಕರಿಸಬಹುದಾದ ರಿಸೋರ್ಸ್ ಆಗಿ ಮಾರ್ಪಡಿಸಲು ಸಾಧ್ಯವಿದೆ ಅಂತ ಬಯೋ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಹೇಸಿಗೆಯಿಂದ ಮುಖ ಸಿಂಡರಿಸಿಕೊಳ್ಳುವ ಕೊಳಕು ಪದಾರ್ಥಗಳೂ ಸಹ ಎನರ್ಜಿ ಪ್ರಾಡಕ್ಟ್ಗಳಾಗುವುದರಲ್ಲಿ ಸಂದೇಹವಿಲ್ಲ ಅನ್ನುವುದು ಪರಿಣಿತರ ಅಭಿಪ್ರಾಯ.
ಬಯೋ ಬಸ್ ತಂತ್ರಜ್ಞಾನ ಪರಿಚಯಿಸಿದ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಜೇಮ್ಸ್ ಫ್ರೀಮನ್ ಹೇಳುವಂತೆ, ಈ ಬಯೋ ಬಸ್ ನೀಲನಕ್ಷೆ ಜಗತ್ತಿಗೆ ಪರಿಚಯಿಸುತ್ತಿದ್ದಂತೆ, ಇದರ ಕುರಿತಾದ ಕುತೂಹಲಗಳು ಗರಿಗೆದರಿದ್ದವು. ಇದೀಗ ಯೋಜನೆ ಹಾಗೂ ಆವಿಷ್ಕಾರ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಸದ್ಯದಲ್ಲಿಯೇ ಇದರ ಮೂಲ ತಂತ್ರಜ್ಞಾನವನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಸೇವೆಗೆ ಇಳಿಸುವ ಗುರಿಯಿದೆ.
ಅನ್ ಏರೋಬಿಕ್ ಡೈಜೇಷನ್ ಹಾಗೂ ಬಯೋ ರಿಸೋರ್ಸ್ ಅಸೋಸಿಯೇಷನ್ಗೆ ಸಂಬಂಧಿಸಿದ ಎಕೋ ಫ್ರೆಂಡ್ಲೀ ಆರ್ಗನೈಸೇಷನ್ನ ಮುಖ್ಯ ಕಾರ್ಯನಿರ್ವಾಹಕ ಕ್ರೋಲೆಟ್ ಮಾರ್ಟಿನ್ ಹೇಳುವ ಪ್ರಕಾರ, ಈ ಸಂಶೋಧನೆಯಿಂದ, ಮನುಷ್ಯನ ತ್ಯಾಜ್ಯ ಹಾಗೂ ಅನುಪಯುಕ್ತ ಆಹಾರ ತ್ಯಾಜ್ಯಗಳೂ ಅಮೂಲ್ಯ ಶಕ್ತಿ ಸಂಪನ್ಮೂಲಗಳು ಅನ್ನುವು ಸಾಬೀತಾಗಿದೆ. ಮನುಷ್ಯನಿಗೆ ಜೀರ್ಣಿಸಿಕೊಳ್ಳಲಾಗದ ಆಹಾರ ಪದಾರ್ಥಗಳನ್ನು ವ್ಯಥಾ ಎಸೆಯುವ ಬದಲು ನೈಸರ್ಗಿಕ ಗೊಬ್ಬರವನ್ನಾಗಿ ಮಾರ್ಪಡಿಸಬಹುದು. ಅದರ ಮುಂದಿನ ಹಂತವೇ ಈ ಬಯೋ ಮಿಥೇನ್ ಅನಿಲ ಉತ್ಪಾದನೆ. ಜೊತೆಗೆ ಜಿಈ ನೆಕೋ ಸಂಸ್ಥೆ ಮಾನವ ತ್ಯಾಜ್ಯ ಹಾಗೂ ಅನುಪಯುಕ್ತ ಆಹಾರ ಪದಾರ್ಥಗಳನ್ನು ಬಳಸಿ ಉತ್ಪಾದಿಸಲಾದ ಇಂಧನವನ್ನು ಗೃಹಬಳಕೆಗೂ ನೀಡಲು ಮುಂದಾಗಿದೆ. ಇತ್ತೀಚೆಗಷ್ಟೇ ರಾಷ್ಟ್ರೀಯ ಪವರ್ ಪ್ಲಾನ್ ಅಡಿಯಲ್ಲಿ ಸುಮಾರು 8300 ಮನೆಗಳಿಗೆ ಈ ಗ್ಯಾಸ್ ಪೂರೈಕೆಯೂ ಆಗಿದೆ.
ಒಟ್ಟಿನಲ್ಲಿ ಅನುಪಯುಕ್ತ ತ್ಯಾಜ್ಯದ ಸಂಸ್ಕರಣಾ ಘಟಕಗಳಲ್ಲಿ ಈ ರೀತಿಯ ಮರು ನವೀಕರಿಸುವ ವ್ಯವಸ್ಥೆ ಸಮರ್ಪಕವಾಗಿ ಜಾರಿಯಾದರೆ, ಒಂದೆಡೆ ಪರಿಸರ ನೈರ್ಮಲ್ಯ ಕಾಪಾಡಬಹದು ಮತ್ತೊಂದೆಡೆ ಮರು ನವೀಕರಿಸುವ ಶಾಶ್ವತ ಪರ್ಯಾಯ ಶಕ್ತಿಮೂಲದ ಸಂಶೋಧನೆಯೂ ಆದಂತಾಗುತ್ತದೆ.