ಕೊಳಗೇರಿ ಮಕ್ಕಳ ಭವಿಷ್ಯ ರೂಪಿಸುತ್ತಿರುವ ಜನಾಗ್ರಹ ಸಂಸ್ಥೆ
ಟೀಮ್ ವೈ.ಎಸ್.ಕನ್ನಡ
ಬೆಂಗಳೂರಿನಂತಹ ಮಹಾನಗರಗಳಲ್ಲಿ ದಿನಬೆಳಗಾದ್ರೆ ಸಾಕು, ಚೈನ್ ಸ್ನ್ಯಾಚಿಂಗ್, ಕಳ್ಳತನ, ದರೋಡೆಯಂತಹ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಇತ್ತೀಚೆಗಂತೂ ಇವುಗಳ ಸಂಖ್ಯೆ ಹೆಚ್ಚಾಗಿ ಬಿಟ್ಟಿದೆ. ಇನ್ನು, ಇಂತಹ ಅಪಾಯಕಾರಿ ಕೃತ್ಯಗಳಿಗೆ ಕೆಲವರು ಮಕ್ಕಳನ್ನೂ ದೂಡುತ್ತಿದ್ದಾರೆ. ಮಕ್ಕಳು ಇಂತಹ ಜಾಲಕ್ಕೆ ಸಿಲುಕುವುದನ್ನ ತಪ್ಪಿಸಲು ಜನಾಗ್ರಹ ಸಂಸ್ಥೆ ಶ್ರಮಿಸುತ್ತಿದೆ. ಮಕ್ಕಳನ್ನು ಇಂತಹ ಅಪರಾಧ ಕೃತ್ಯಗಳಲ್ಲಿ ತೊಡಗದಂತೆ ಜಾಗೃತಿ ವಹಿಸುತ್ತಿದೆ. ಮತ್ತೊಂದೆಡೆ ಹೀಗೆ ತೊಡಗಿದವರು ಕಂಡು ಬಂದರೆ ಅವರನ್ನು, ಅಂತಹ ಪಾಪ ಕೃತ್ಯದಿಂದ ಹೊರತೆಗೆಯುವಂತಹ ಕೆಲಸದಲ್ಲಿ ಜನಾಗ್ರಹ ಸಂಸ್ಥೆ ತೊಡಗಿದ್ದು. ಭರ್ಜರಿ ಯಶಸ್ಸು ಕಂಡಿದೆ.
ಮಕ್ಕಳ ಮೂಲಕ ಮನೆ-ಮನೆಗೆ, ಟ್ರಾಫಿಕ್ ಸಿಗ್ನಲ್ನಲ್ಲಿ ಪಾಂಪ್ಲೆಂಟ್ ವಿತರಿಸುವ ಮೂಲಕ, ಸಾರ್ವಜನಿಕರಿಗೆ ನಿಮ್ಮ ಮಕ್ಕಳನ್ನು ಸಮಾಜ ಘಾತುಕ ಶಕ್ತಿಗಳಿಂದ ಜೋಪಾನ ಎಂಬ ಸಂದೇಶ ಸಾರುತ್ತಿದೆ. ಜನರನ್ನು ಎಚ್ಚರಿಸುವಲ್ಲಿ ಶ್ರಮಿಸುತ್ತಿದೆ. ಇವರ ಕಾರ್ಯಕ್ರೇತ್ರವು ಕೂಡ ತುಂಬಾ ಅದ್ಭುತವಾಗಿದೆ. ಹೆಚ್ಚಾಗಿ ಸ್ಲಂಗಳನ್ನೆ ಇವರು ಆಯ್ದುಕೊಳ್ಳುತ್ತಾರೆ. ಉದಾಹರಣೆಗೆ ಯಲಹಂಕದ ಕೋಗಿಲು ಕ್ರಾಸ್ ಸಮೀಪದ ಟಿಪ್ಪು ನಗರದ ಸ್ಲಂನಲ್ಲಿ ಬಹುತೇಕ ಕಡುಬಡವರೇ ವಾಸವಿದ್ದಾರೆ. ತುತ್ತಿನ ಚೀಲ ತುಂಬಿಸಿಕೊಳ್ಳಲು ಕೆಲವರು ತಮ್ಮ ಮಕ್ಕಳನ್ನ ಭಿಕ್ಷಾಟನೆಗೆ ದೂಡ್ತಿದ್ದಾರೆ. ಅಲ್ದೇ, ಕೆಲ ದುಷ್ಟರು ಮುಗ್ಧ ಮಕ್ಕಳನ್ನ ಕಾನೂನು ಬಾಹಿರ ಕೃತ್ಯಗಳಿಗೆ ಬಳಿಸಿಕೊಳ್ತಾರೆ ಎಂಬ ಆರೋಪ ಕೇಳಿ ಬಂದಿತ್ತು. ಇದ್ರಿಂದ ಎಚ್ಚೆತ್ತುಕೊಂಡ ಜನಾಗ್ರಹ ಎಂಬ ಸ್ವಯಂ ಸೇವಾ ಸಂಸ್ಥೆ ಪೊಲೀಸರ ಸಹಕಾರದೊಂದಿಗೆ ಕೋಗಿಲು ಕ್ರಾಸ್ ಸೇರಿದಂತೆ 18 ಠಾಣೆಗಳ ವ್ಯಾಪ್ತಿಯಲ್ಲಿ ಜನಜಾಗೃತಿ ಮೂಡಿಸ್ತಿದ್ದಾರೆ.
"ಮಕ್ಕಳು ಸಮಾಜ ಘಾತುಕ ಕೃತ್ಯಗಳಲ್ಲಿ ತೊಡಗುವುದರಿಂದ ಸಮಾಜದ ಮೇಲೆ ಆಗುವ ಪರಿಣಾಮ ಹಾಗೂ ಅವರ ಭವಿಷ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಪೋಷಕರಿಗೆ ಅರಿವು ಮೂಡಿಸುವುದು ಸಂಸ್ಥೆಯ ಪ್ರಮುಖ ಕೆಲಸ ಮಕ್ಕಳನ್ನು ಶಾಲೆಗೆ ಸೇರಿಸುವಂತಹ ಕೆಲಸ ನಾವು ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದ್ದು, ಬಾಲಾಪರಾಧಗಳನ್ನು ತಡೆಯುವುದು, ಬಾಲಪರಾಧಿಗಳ ಸಂಖ್ಯೆ ಕಡಿಮೆ ಮಾಡುವುದು ಸಂಸ್ಥೆಯ ಗುರಿ."
-ಲೋಕೇಶ್,ಜನಾಗ್ರಹ ಸಂಸ್ಥೆ ಮುಖ್ಯಸ್ಥ
ಸದ್ಯ ಜನಾಗ್ರಹ ಸಂಸ್ಥೆಯ ಪರಿಶ್ರಮದಿಂದಾಗಿ ಈ ಬಡಾವಣೆಗಳಲ್ಲಿ ಸಾಕಷ್ಟು ಅಪರಾಧ ಕೃತ್ಯಗಳು ಕಡಿಮೆಯಾಗಿದ್ದು, ಭಿಕ್ಷಾಟನೆಯೂ ನಿಂತಿದೆ. ಪೋಷಕರು, ಕೆಲಸ ಕಾರ್ಯಗಳಿಗೆ ತೆರಳಿದ್ರೆ, ಮಕ್ಕಳು ಶಾಲೆಗೆ ಮುಖಮಾಡ್ತಿದ್ದಾರೆ. ಇದ್ರಿಂದಾಗಿ 10 ಮಕ್ಕಳಿದ್ದ ಟಿಪ್ಪು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಇದೀಗ 80ಕ್ಕೇರಿದೆ. ಒಟ್ಟಿನಲ್ಲಿ ಮುಂದಿನ ದಿನದಲ್ಲಿ ಪೊಲೀಸರೊಂದಿಗೆ ಇನ್ನಷ್ಟು ಎನ್ಜಿಓಗಳು ಕೈಜೋಡಿಸಿದ್ರೆ ಸಿಲಿಕಾನ್ ಸಿಟಿಯಲ್ಲಿ ಭಿಕ್ಷಾಟನೆಯಂತಹ ಸಾಮಾಜಿಕ ಸಮಸ್ಯೆಗಳಿಗೆ ಬ್ರೇಕ್ ಬೀಳಲಿದೆ. ಜೊತೆಗೆ ಹಲವು ಬಾಲಾಪರಾಧಿಗಳಾಗಬೇಕಿದ್ದ ಮಕ್ಕಳು, ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿದ್ದಾರೆ.